ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಈರುಳ್ಳಿ ಬಿತ್ತನೆಗೆ ಚಾಲನೆ

ಹೊಸದುರ್ಗ: ಉತ್ತಮ ಬೆಳೆ, ದರ ನಿರೀಕ್ಷೆಯಲ್ಲಿ ಬೆಳೆಗಾರರು ಹದ ಮಳೆ
Last Updated 30 ಮೇ 2018, 13:22 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಈರುಳ್ಳಿ ಬಿತ್ತನೆಗೆ ಬೆಳೆಗಾರರು ಚಾಲನೆ ನೀಡಿದ್ದಾರೆ. ಒಂದು ತಿಂಗಳಿನಿಂದ ಬಿಡುವು ಕೊಟ್ಟು ಬರುತ್ತಿರುವ ಮಳೆಯಿಂದ ಕಳೆದ ಹಿಂಗಾರು ಹಂಗಾಮಿನ ಅಂತ್ಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಕಬ್ಬಿಣದ ನೇಗಿಲು ಹೊಡೆದಿದ್ದ ಎರೆ ಜಮೀನು ಹದವಾಗಿವೆ. ಇದರಿಂದಾಗಿ ಬಾಗೂರು, ಅರಳಿಹಳ್ಳಿ, ಎಂ.ಜಿ.ದಿಬ್ಬ, ಕಂಗುವಳ್ಳಿ, ಹೊನ್ನೇಕೆರೆ, ನಾಗೇನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ಎರೆ ಹಾಗೂ ಕೆಂಪುಮಿಶ್ರಿತ ಜಮೀನಿಗೆ ಈರುಳ್ಳಿ ಬಿತ್ತನೆ ಮಾಡುತ್ತಿದ್ದಾರೆ.

ಒಂದು ಎಕರೆ ಜಮೀನು ಕಬ್ಬಿಣದ ನೇಗಿಲು ಹೊಡೆಸಿದ್ದು ₹ 2,500, ಕಂಟ್ರಿ ಹೊಡೆಸಿದ್ದು ₹ 500, ಕುಂಟೆ ಹೊಡೆಸಿದ್ದು ₹ 600, 4 ಸೇರು ಈರುಳ್ಳಿ ಬಿತ್ತನೆ ಬೀಜ ಖರೀದಿಗೆ ₹ 2,000, 2 ಚೀಲ ಡಿಎಪಿ ಹಾಗೂ ಒಂದು ಚೀಲ 16–20 ಗೊಬ್ಬರ ಖರೀದಿಸಿದ್ದು ₹ 3,430 ಸೇರಿದಂತೆ ಒಂದು ಎಕರೆ ಈರುಳ್ಳಿ ಬಿತ್ತನೆ ಮಾಡಲು ₹ 10 ಸಾವಿರಕ್ಕೂ ಅಧಿಕ ಹಣ ಖರ್ಚುಗುತ್ತದೆ. ನಂತರ ಎರಡ್ಮೂರು ಸಾರಿ ಬೆಳೆಯ ಕಳೆ ತೆಗೆಸಲು ಹಾಗೂ ಮೇಲು ಗೊಬ್ಬರ ಹಾಕಲು ₹ 5 ಸಾವಿರಕ್ಕಿಂತ ಅಧಿಕ ಖರ್ಚು ಬರುತ್ತದೆ. ಬೆಳೆ ಕೈಸೇರುವ ಹೊತ್ತಿಗೆ ಒಂದು ಎಕರೆಗೆ ₹ 15 ಸಾವಿರಕ್ಕೂ ಅಧಿಕ ಖರ್ಚು ಬರುತ್ತದೆ ಎನ್ನುತ್ತಾರೆ ರೈತ ವೆಂಕಟೇಶ್‌.

ಕಳೆದ ಬಾರಿ ಬಿತ್ತನೆ ಮಾಡಿದ್ದ ಬೆಳೆ ಮಳೆ ಕೈಕೊಟ್ಟಿದ್ದರಿಂದ ತಾಲ್ಲೂಕಿನ ಬಹುತೇಕ ರೈತರ ಬೆಳೆ ಒಣಗಿ ಹೋಗಿತ್ತು. ಆದರೂ ಹೆಚ್ಚಿನ ಬೆಳೆ ಬಂದಿದ್ದರಿಂದ ದರ ಕುಸಿತವಾಗಿತ್ತು. ಈ ಬಾರಿ 2016ರಲ್ಲಿ ಸಿಕ್ಕಿದ ದರ ಸಿಗಬಹುದು ಎಂಬ ನಿರೀಕ್ಷೆಯಿಂದ ಈರುಳ್ಳಿ ಬಿತ್ತನೆ ಮಾಡುತ್ತಿದ್ದೇವೆ ಎನ್ನುತ್ತಾರೆ ರೈತ ಲೋಕೇಶ್‌, ಜಗದೀಶ್‌.

**
ಈರುಳ್ಳಿ ಬಿತ್ತನೆಗೆ ಮೊದಲು ಒಂದು ಎಕರೆಗೆ ಕನಿಷ್ಠ 2 ಟ್ರ್ಯಾಕ್ಟರ್‌ ಲೋಡ್‌ ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಚೆಲ್ಲಬೇಕು. ನಂತರ ಬಿತ್ತನೆ ಮಾಡುವುದರಿಂದ ಇಳುವರಿ ಉತ್ತಮವಾಗಿ ಬರುತ್ತದೆ. ಒಂದು ಎಕರೆಗೆ ಕನಿಷ್ಠ 50ಕೆ.ಜಿ ತೂಕದ 120ರಿಂದ 140 ಪಾಕೇಟ್‌ ವರೆಗೆ ಈರುಳ್ಳಿ ಬೆಳೆಯಬಹುದು. 1 ಪಾಕೇಟ್‌ ಈರುಳ್ಳಿಗೆ ₹ 2,000 ಬೆಲೆ ಸಿಕ್ಕರೂ ಸುಮಾರು ₹ 2.5 ಲಕ್ಷಕ್ಕೂ ಅಧಿಕ ಆದಾಯವಾಗುತ್ತದೆ ಎನ್ನುತ್ತಾರೆ ಬೆಳೆಗಾರ ಮರಿಯಪ್ಪ.

ಈ ಬಾರಿ ಮುಂಗಾರು ಮಳೆ ತಾಲ್ಲೂಕಿನ ಕೆಲವೆಡೆ ತಡವಾಗಿ ಬಂದಿದ್ದು ಎಳ್ಳು, ಹೆಸರು ಬಿತ್ತನೆ ಕ್ಷೇತ್ರ ಕುಂಠಿತವಾಗಿದೆ. ಈಗ ಈರುಳ್ಳಿ ಬಿಟ್ಟರೆ ಹೆಚ್ಚು ಆದಾಯ ಬರುವ ಮುಂಗಾರು ಬೆಳೆ ಬೇರಿಲ್ಲ. ಹದವಾದ ಮಳೆ ಬಂದಿರುವುದರಿಂದ ಜಮೀನು ಹಸನು ಮಾಡಿದ್ದು, ಈ ಬಾರಿ ವಾಡಿಕೆಗಿಂತ ಅಧಿಕ ಈರುಳ್ಳಿ ಬಿತ್ತನೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

**
15 ದಿನದೊಳಗೆ ಈರುಳ್ಳಿ ಬಿತ್ತನೆ ಮಾಡಿದಲ್ಲಿ ಸಕಾಲಕ್ಕೆ ಮಳೆ ಬಂದರೆ ಉತ್ತಮ ಇಳುವರಿ ಬರುತ್ತದೆ. ಬಿತ್ತನೆ ತಡವಾದರೆ ಬೆಳೆ ಕವಳಕ್ಕೆ(ಮಂಜು) ಸಿಕ್ಕಿ ರೋಗಕ್ಕೆ ತುತ್ತಾಗಬಹುದು
ಲೋಕೇಶ್‌, ಈರುಳ್ಳಿ ಬೆಳೆಗಾರ ಅರಳಿಹಳ್ಳಿ

–ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT