ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದ ಹಂಗೇಕೆ?

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಗೊಂದಲ ನನಗೇಕೆ?
ಫೇಸ್‍ಬುಕ್ ಬಳಸದ ಯುವಜನರೇ ಕಡಿಮೆ. ಆದರೆ ಬಾಲಿವುಡ್ ಯುವನಟ ರಣಬೀರ್ ಕಪೂರ್ ಅದಕ್ಕೆ ತದ್ವಿರುದ್ಧ. ತಂದೆ ರಿಷಿ ಕಪೂರ್ ಸದಾ ಟ್ವಿಟ್ಟರ್‌ನಲ್ಲಿ ಬ್ಯುಸಿಯಾಗಿದ್ದರೂ ಅದಾವುದೂ ರಣಬೀರ್ ಅನ್ನು ಸೆಳೆದಿಲ್ಲ. ‘ಇವೆಲ್ಲ ತಲೆನೋವು’ ಎಂದು ನೇರವಾಗಿಯೇ ಹೇಳುತ್ತಾರೆ. ‘ಏನಾದರೂ ವ್ಯಕ್ತಪಡಿಸಿದರೆ, ಅದಕ್ಕೆ ಹತ್ತು ದೃಷ್ಟಿಕೋನಗಳು ಹುಟ್ಟಿಕೊಳ್ಳುತ್ತವೆ. ಎಲ್ಲದಕ್ಕೂ ಸ್ಪಷ್ಟೀಕರಣ ಕೊಡಲು ಸಾಧ್ಯವೇ? ಆ ಗೊಂದಲಗಳೇ ನನಗೆ ಬೇಡ. ನನ್ನ ಚಿತ್ರಗಳ ಮೂಲಕವೇ ಅಭಿಮಾನಿಗಳೊಂದಿಗೆ ಮಾತಾಡುತ್ತೇನೆ' ಅಂದಿದ್ದಾರೆ ಕಪೂರ್ ಜೂನಿಯರ್. ಕೆಲವೇ ಸಮಯ ಬ್ರ್ಯಾಂಡ್ ಒಂದಕ್ಕೆ ಟ್ವಿಟ್ಟರ್‌ನಲ್ಲಿದ್ದರೂ ಅದು ಮುಗಿಯುತ್ತಿದ್ದಂತೆ ಖಾತೆ ಡಿಲೀಟ್ ಮಾಡಿದರು.

ಏಕಾಂತ ತೋರುವ ವೇದಿಕೆ
ಬೋಲ್ಡ್ ಹಾಗೂ ಪ್ರತಿಭಾವಂತ ನಟಿ ಎನಿಸಿಕೊಂಡಿರುವ ಕಂಗನಾ ರಣೌತ್, ಯಾವ ವಿಷಯವಾದರೂ ಸರಿ, ತನಗನ್ನಿಸಿದ್ದನ್ನು ಮುಚ್ಚುಮರೆಯಿಲ್ಲದೇ ನೇರವಾಗಿ ಹೇಳಿಬಿಡುವವರು. ಹಾಗೆಯೇ ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಕೆಲ ಮಾತನ್ನು ಹೇಳಿದ್ದಾರೆ. ‘ಇವು ಏಕಾಂತತೆಯನ್ನು ಬಿಂಬಿಸಿಕೊಳ್ಳುವ ತಾಣವಾಗುತ್ತಿವೆ. ನನಗೆ ಇದರ ಅಗತ್ಯವಿಲ್ಲ. ನನ್ನ ಖಾಸಗೀತನವನ್ನು ನಾನಷ್ಟೇ ಅನುಭವಿಸಬೇಕಲ್ಲವೇ? ಆದ್ದರಿಂದ ಇವುಗಳ ಗೋಜಿಗೆ ಹೋಗಿಲ್ಲ’ ಎಂದಿದ್ದಾರೆ.

**

ಇದು ನನಗಲ್ಲ
ಸೈಫ್ ಅಲಿ ಖಾನ್ ಸಾಮಾಜಿಕ ತಾಣಗಳ ಪರವಾಗಿ ಇಲ್ಲ. ಹಾಗೆಂದು ವಿರುದ್ಧವೂ ಅಲ್ಲ. ಆದರೆ ‘ಇದು ನನ್ನ ವೇದಿಕೆ ಅಲ್ಲ’ ಎಂದಷ್ಟೇ ಹೇಳುತ್ತಾರೆ. ಟ್ವಿಟ್ವರ್, ಇನ್‍ಸ್ಟಾಗ್ರಾಂ, ಫೇಸ್‍ಬುಕ್, ಸ್ನಾಪ್‍ಚಾಟ್ ಇವೆಲ್ಲದರಿಂದ ಇವರು ದೂರ. ‘ನಾವು ನೀಡುವ ಹೇಳಿಕೆ ಕೆಲವೊಮ್ಮೆ ತಿರುಚಿ ದೊಡ್ಡದು ಎನ್ನಿಸಿಬಿಡುತ್ತದೆ. ಅದು ನನ್ನ ಅಭಿಮಾನಿಗಳಿಗೂ ಇಷ್ಟವಾಗದೇ ಇರಬಹುದು. ಇಂಥ ವಿವಾದಗಳು ನನಗೇಕೆ? ಅನವಶ್ಯಕ ತೊಂದರೆಗೆ ಈಡಾಗುವುದು ಬೇಡ ಎಂದೇ ಇವುಗಳಿಂದ ದೂರವಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

**

ಖಾತೆ ನನ್ನದಲ್ಲ
ಖಾಸಗಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯ ನೀಡುವ ಪೈಕಿ ನಟಿ ರಾಣಿ ಮುಖರ್ಜಿಯೂ ಒಬ್ಬರಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರಾಣಿ ಮುಖರ್ಜಿ ಹೆಸರಿನಲ್ಲಿ ಹತ್ತಾರು ಖಾತೆಗಳಲ್ಲಿ ಅವರ ಮಗುವಿನೊಂದಿಗಿನ ಚಿತ್ರಗಳು ಹರಿದಾಡುತ್ತಿದ್ದವು. ಆದರೆ ‘ಅವ್ಯಾವೂ ನನ್ನದಲ್ಲ; ಫೇಕ್. ನಾನು ಯಾವುದೇ ಸಾಮಾಜಿಕ ಜಾಲತಾಣಗಳ ಖಾತೆ ಹೊಂದಿಲ್ಲ. ನನಗೆ ಅವಶ್ಯಕತೆ ಎನ್ನಿಸಿಲ್ಲ. ಖಾಸಗಿ ಜೀವನ ಖಾಸಗಿಯಾಗಿಯೇ ಇರಬೇಕು’ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

**

ಖಾಸಗಿಯಾಗಿದ್ದರೆ ಚೆನ್ನ
‘ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ನನಗಿಷ್ಟವಿಲ್ಲ' ಎಂದು ಹೇಳಿಕೊಂಡಿರುವ ನಟ, ಬಾಲಿವುಡ್‍ನ ‘ಚಾಕೊಲೇಟ್ ಬಾಯ್’ ಎಂದೇ ಕರೆಸಿಕೊಳ್ಳುವ ಇಮ್ರಾನ್ ಖಾನ್. ಸಾಕಷ್ಟು ಯುವ ಅಭಿಮಾನಿಗಳನ್ನು ಹೊಂದಿರುವ ಇಮ್ರಾನ್‍ಗೆ, ಸಾಮಾಜಿಕ ತಾಣಗಳಿಂದ ಅಭಿಮಾನಿಗಳಿಗೆ ಹತ್ತಿರವಾಗುವ ಅವಶ್ಯಕತೆಯಿಲ್ಲವಂತೆ. ಟ್ವಿಟ್ಟರ್‌ನಲ್ಲಿ ಈ ಹಿಂದೆ ಖಾತೆ ಹೊಂದಿದ್ದು, ಅದರಿಂದ ಕಿರಿಕಿರಿಯೇ ಹೆಚ್ಚಾಗಿ ಡಿಆ್ಯಕ್ಟಿವೇಟ್ ಮಾಡಿದೆ. ಮತ್ತೆ ಹಿಂದಿರುಗಲಿಲ್ಲ ಎನ್ನುತ್ತಾರೆ ಅವರು.

**

ಆಸಕ್ತಿಯಿಲ್ಲವೆಂದ ಐಶ್ವರ್ಯ
ಮಾವ ಅಮಿತಾಭ್ ಬಚ್ಚನ್ ಹಾಗೂ ಪತಿ ಅಭಿಷೇಕ್ ಸದಾ ಸಾಮಾಜಿಕ ತಾಣಗಳಲ್ಲಿ ಚುರುಕಾಗಿರುತ್ತಾರೆ. ತಮ್ಮ ಅನುಭವ, ಅನಿಸಿಕೆಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳಿಗೆ ಪ್ರತಿಕ್ರಿಯಿಸುತ್ತಾರೆ. ಆದರೆ ಐಶ್ವರ್ಯ ರೈ ಮಾತ್ರ ಇವುಗಳಿಂದೆಲ್ಲ ದೂರ. ‘ನನಗೆ ತಂತ್ರಜ್ಞಾನದಲ್ಲಿ ಅಷ್ಟೆಲ್ಲ ಆಸಕ್ತಿಯಿಲ್ಲ. ಆದ್ದರಿಂದ ಇವುಗಳೆಡೆಗೂ ನಾನು ಯೋಚಿಸಿಲ್ಲ’ ಎಂದು ನಗುವಿನಲ್ಲೆ ಉತ್ತರಿಸಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇವರ ಚಿತ್ರಗಳನ್ನು, ಅಪ್‌ಡೇಟ್‌ಗಳನ್ನು ಹರಿಬಿಡುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT