ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನೆಲ್ಲ ವೇದಾಂತ, ಧನಬಲದ್ದೇ ಧಾವಂತ

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಭಾರತದ ಔದ್ಯಮಿಕ ಚರಿತ್ರೆಯ ಒಂದು ವಿಷ-ಣ್ಣ ಅಧ್ಯಾಯದಲ್ಲಿ ಎಷ್ಟೊಂದು ಅಸಂಬದ್ಧ ಸಂಗತಿಗಳು ತೂರಿಕೊಂಡಿವೆ ಗೊತ್ತೆ? ಅಂಥ ಹತ್ತು ಅಸಂಗತಗಳ ಪಟ್ಟಿ ಇಲ್ಲಿದೆ:

1. ತಮಿಳುನಾಡಿನ ತೂತ್ತುಕುಡಿಯ ಬಳಿ ‘ತಾಮ್ರಪರ್ಣಿ’ ಹೆಸರಿನ ನದಿಯೊಂದು ಸಮುದ್ರ ಸೇರುತ್ತದೆ. ಅದರ ಸಮೀಪವೇ ತಾಮ್ರವನ್ನು ಉತ್ಪಾದಿಸುವ ‘ಸ್ಟರ್ಲೈಟ್’ ಫ್ಯಾಕ್ಟರಿ ಇದೆ. ಅದು ಹೊಮ್ಮಿಸುತ್ತಿದ್ದ ಮಾಲಿನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಕಳೆದ ವಾರ ಪೊಲೀಸರು ಗುಂಡಿಟ್ಟು 13 ಜನರನ್ನು ಕೊಂದು, ಎಪ್ಪತ್ತು ಜನರನ್ನು ಗಾಯಗೊಳಿಸಿ ದಾಖಲೆ ಮೂಡಿಸಿದ್ದಾರೆ. ತಾಮ್ರಪರ್ಣಿ ನದಿಗೂ ಈ ಕುಪ್ರಸಿದ್ಧ ತಾಮ್ರದ ಫ್ಯಾಕ್ಟರಿಗೂ ಸಂಬಂಧವೇ ಇಲ್ಲ. ತಮಿಳುನಾಡಿನಲ್ಲಿ ತಾಮ್ರದ ಅದಿರೂ ಸಿಗುವುದಿಲ್ಲ.

2. ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ದಿನಾ ಕುಡಿಯುತ್ತಿದ್ದರೆ ವಾತ, ಪಿತ್ತ, ಕಫದಂಥ ತ್ರಿದೋಷಗಳು ದೂರವಾಗಿ ಚರ್ಮಕ್ಕೆ, ಕಣ್ಣಿಗೆ ಹೊಳಪು ಬಂದು, ಮಿದುಳು ಚುರುಕಾಗಿರುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಆಧುನಿಕ ವಿಜ್ಞಾನ ಅದನ್ನು ಪುಷ್ಟೀಕರಿಸುವುದಿಲ್ಲ. ಈಗಿನ ವಿಜ್ಞಾನದ ಪ್ರಕಾರ, ನಮ್ಮ ದೇಹಕ್ಕೆ ಬೇಕಾದಷ್ಟು ತಾಮ್ರ ನಮ್ಮ ಆಹಾರದಲ್ಲೇ ಸಿಗುತ್ತದೆ. ತಾಮ್ರದ ಪಾತ್ರೆಯ ತೀರ್ಥ, ತಾಮ್ರದ ಉಂಗುರ, ತಾಮ್ರದ ಕಡಗವೇ ಮುಂತಾದ ತಾಮ್ರದ ಅತಿಮೋಹವೇ ಅಪಾಯ ತರಬಹುದು. ಅಗತ್ಯಕ್ಕಿಂತ ಜಾಸ್ತಿ ತಾಮ್ರದ ಅಂಶ ದೇಹಕ್ಕೆ ಹೋಗುತ್ತಿದ್ದರೆ ಅದು ವಿಷವಾಗುತ್ತದೆ. ಇಳಿವಯಸ್ಸಿನಲ್ಲಿ ಮರೆಗುಳಿ (ಆಲ್ಝೈಮರ್ಸ್) ಕಾಯಿಲೆ ಬರುತ್ತದೆ. ಆದರೆ ನಮ್ಮಲ್ಲಿನ ಹಳೇ ನಂಬಿಕೆಗೇ ಹೊಳಪು ಕೊಡುವಂತೆ ಮಾರುಕಟ್ಟೆಯಲ್ಲಿ ನಾನಾ ಬಗೆಯ ತಾಮ್ರದ ಚೊಂಬುಗಳು, ಫ್ಲಾಸ್ಕುಗಳು, ಗಿಂಡಿಗಳು, ಜಾಹೀರಾತುಗಳು ಥಳಥಳಿಸುತ್ತಿವೆ. ಇತ್ತ ತಾಮ್ರವನ್ನು ಉತ್ಪಾದಿಸುವ ಕೊಳಕು ಫ್ಯಾಕ್ಟರಿಯ ಸುತ್ತ ಕ್ಯಾನ್ಸರ್, ಲಿವರ್ ಕಾಯಿಲೆ, ತಂತಾನೆ ಬಸಿರಿಳಿತ, ಮಕ್ಕಳಲ್ಲಿ ಅಸ್ತಮಾದಂಥ ಕಾಯಿಲೆಗಳು ಉಲ್ಬಣಿಸಿವೆ ಎಂದು ಸಮೀಕ್ಷೆಗಳು ಹೇಳುತ್ತವೆ. ಈ ವಾಸ್ತವಕ್ಕೂ ತಾಮ್ರದ ತಥಾಕಥಿತ ಸದ್ಗುಣಕ್ಕೂ ಸಂಬಂಧವಿಲ್ಲ.

3. ಜಾಗತಿಕ ಮಟ್ಟದಲ್ಲಿ ನೋಡಿದರೆ ನಮ್ಮ ದೇಶದಲ್ಲಿ ತಾಮ್ರದ ಕಚ್ಚಾ ಅದುರಿನ ಪ್ರಮಾಣ ತೀರಾ ಕಡಿಮೆ; ಕೇವಲ ಶೇಕಡಾ 0.2ರಷ್ಟಿದೆ. ಆದರೆ ತಾಮ್ರವನ್ನು ಲೋಹವನ್ನಾಗಿ ಪರಿವರ್ತಿಸುವಲ್ಲಿ ನಮ್ಮ ದೇಶದ ಕೊಡುಗೆ ಇಪ್ಪತ್ತು ಪಟ್ಟು ಜಾಸ್ತಿ ಇದೆ. ಇದರರ್ಥ ಏನೆಂದರೆ, ಇಲ್ಲಿನ ಫ್ಯಾಕ್ಟರಿಗಳು ಆಸ್ಟ್ರೇಲಿಯಾ, ಕೆನಡಾ, ಇಂಡೊನೇಶ್ಯ, ಚಿಲಿಗಳಿಂದ ತಾಮ್ರದ ಕಚ್ಚಾ ಅದುರನ್ನು ತಂದು, ಇಲ್ಲಿ ಅದನ್ನು ಸ್ವಚ್ಛಗೊಳಿಸಿ ಲೋಹವನ್ನಾಗಿ ಪರಿವರ್ತಿಸಿ ವಿದೇಶಕ್ಕೂ ರವಾನಿಸುತ್ತವೆ. ಸ್ಟರ್ಲೈಟ್ ಪ್ರತಿದಿನ ಅಂದಾಜು 54 ಕೋಟಿ ರೂಪಾಯಿ ಮೌಲ್ಯದ 1200 ಟನ್ ತಾಮ್ರವನ್ನು ಉತ್ಪಾದಿಸುತ್ತಿದೆ. ಲಾಭವೆಲ್ಲ ಕಂಪನಿಯ ಪಾಲಾಗುತ್ತದೆ. ಇತ್ತ ದೇಶದ ಪಾಲಿಗೆ ಮಾಲಿನ್ಯ, ಶಕ್ತಿವೆಚ್ಚ, ಸಾಗರ ಜೀವಿಗಳ ಮಾರಣಹೋಮ; ಕಾರ್ಮಿಕರಿಗೆ ಮತ್ತು ಸ್ಥಳೀಯರಿಗೆ ಕಾಯಿಲೆ, ವೈದ್ಯಕೀಯ ವೆಚ್ಚ, ದುಡಿತದ ಕಡಿತ, ಪೊಲೀಸ್ ಧಮ್ಕಿ, ಖಟ್ಲೆ ಮತ್ತು ಈಗ ಬುಲ್ಲೆಟ್. ಲಾಭಕ್ಕೂ ವೆಚ್ಚಕ್ಕೂ ಸಂಬಂಧವಿಲ್ಲ.

4. ತಾಮ್ರದ ಉತ್ಪಾದನೆ ತೀರಾ ಕೊಳಕು ಉದ್ಯಮವೆಂಬ ಕಾರಣದಿಂದ ಗುಜರಾತ್, ಗೋವಾ, ಮಹಾರಾಷ್ಟ್ರಗಳು ಸ್ಟರ್ಲೈಟ್ ಕಂಪನಿಗೆ ನೆಲೆ ಕೊಡದಿದ್ದಾಗ ತಮಿಳು ನಾಡು ಅದಕ್ಕೆ 1996ರಲ್ಲಿ ಆಸರೆ ನೀಡಿತು. ಹತ್ತಾರು ಸುರಕ್ಷಾ ನಿಯಮಗಳನ್ನು ಹೇರಿತು. ಪಕ್ಕದ ಮನ್ನಾರ್ ಜಲಜೀವಧಾಮದಿಂದ ಫ್ಯಾಕ್ಟರಿ ದೂರ ಇರಬೇಕು. ಸುತ್ತ ಅರಣ್ಯ ಬೆಳೆಸಬೇಕು. ಗಾಳಿಗೆ, ಮಣ್ಣಿಗೆ, ನೀರಿಗೆ ವಿಷ ಸೇರಿಸಬಾರದು. ಅನಧಿಕೃತ ಏನನ್ನೂ ಉತ್ಪಾದಿಸಬಾ
ರದು ಇತ್ಯಾದಿ. ಫ್ಯಾಕ್ಟರಿ ಆರಂಭವಾದ ಎರಡೇ ವರ್ಷಗಳಲ್ಲಿ ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂಬ ನಾಗಪುರದ ‘ನೀರಿ’ ಸಂಸ್ಥೆಯ ವರದಿಯನ್ನು ಆಧರಿಸಿ ಮದ್ರಾಸ್ ನ್ಯಾಯಾಲಯ ಕಾರ್ಖಾನೆಯನ್ನು ಬಂದ್ ಮಾಡಿಸಿತು. ಮುಂದಿನ ಹತ್ತೇ ದಿನಗಳಲ್ಲಿ ಎಂಥದೊ ಮ್ಯಾಜಿಕ್ ನಡೆಯಿತು. ‘ನೀರಿ’ ತನ್ನ ವರದಿಯನ್ನು ಬದಲಾಯಿಸಿತು. ಹೈಕೋರ್ಟ್ ತನ್ನದೇ ಆಜ್ಞೆಯನ್ನು ಮಾರ್ಪಡಿಸಿತು. ಫ್ಯಾಕ್ಟರಿ ಮೊದಲಿಗಿಂತ ಜೋರಾಗಿ ಕೆಲಸ ಆರಂಭಿಸಿತು. ಈ 20 ವರ್ಷಗಳಲ್ಲಿ ಇಂಥ ಬಂದ್–ಚಾಲೂ, ಬಂದ್– ಚಾಲೂ ಪ್ರಕ್ರಿಯೆ ಐದು ಬಾರಿ ನಡೆದಿದೆ. ಎಂಟು ಬಾರಿ ಲೈಸೆನ್ಸ್ ನವೀಕರಣಕ್ಕೆ ತೊಡಕಾಗಿದೆ. ಒಮ್ಮೆಯಂತೂ ನೂರು ಕೋಟಿ ರೂಪಾಯಿ ದಂಡ ಬಿದ್ದಿದೆ. ಪ್ರತಿ ಬಾರಿಯೂ ಕಂಪನಿ ಗೆದ್ದು ಬೀಗಿದ್ದೂ ಅಲ್ಲದೆ ಕಳೆದ ವರ್ಷ ತಾಮ್ರದ ಉತ್ಪಾದನೆಯನ್ನು ಇಮ್ಮಡಿ ಮಾಡಲೆಂದು (ಲೈಸೆನ್ಸ್ ಇಲ್ಲದೆ, ಜನಾಭಿಪ್ರಾಯ ಕೇಳದೇ) ಹೊಸ ಫ್ಯಾಕ್ಟರಿ ಕಟ್ಟತೊಡಗಿದಾಗ ಜನಾಕ್ರೋಶ ಸಿಡಿಯಿತು. ಕೇಂದ್ರ ಸರ್ಕಾರವೂ ಕಂಪನಿಯ ಬೆಂಬಲಕ್ಕೇ ನಿಂತಿದ್ದರಿಂದ ‘ಪ್ರತಿಭಟನೆ ಮಾಡು ಇಲ್ಲವೆ ಮಡಿ’ ಹಂತಕ್ಕೆ ಜನ ಬಂದರು. ಜನರಿಂದ ಆಯ್ಕೆಯಾದ ಸರ್ಕಾರಕ್ಕೂ ಜನಾಭಿಪ್ರಾಯಕ್ಕೂ ಸಂಬಂಧವೇ ಇಲ್ಲ.

5. ಗೋಲೀಬಾರ್ ನಡೆದ ಮೇಲೆ ತಮಿಳುನಾಡಿನ ವಿಪಕ್ಷಗಳ ಮುಖಂಡರೆಲ್ಲ ಫ್ಯಾಕ್ಟರಿ ವಿರುದ್ಧ ಗುಡುಗಿದ್ದಾರೆ. ಅದಕ್ಕೆ ಮುಂಚೆ 20 ವರ್ಷಗಳಿಂದ ನಡೆದ ಪ್ರತಿಭಟನೆಗಳಲ್ಲಿ ಅವರ ದನಿಯಿರಲಿಲ್ಲ. ಈಚಿನ ನೂರು ದಿನಗಳ ಸತತ ರ‍್ಯಾಲಿಗಳಲ್ಲಿ ಕಮಲಹಾಸನ್ ಮತ್ತು ರಜನಿಯವರು ಮಾಧ್ಯಮಗಳನ್ನು ಸೆಳೆದರೇ ವಿನಾ ಗುಂಡಿನ ಸುರಿಮಳೆಗೆ ಮುನ್ನ ಅವರೂ ಗುಡುಗಿರಲಿಲ್ಲ. ಜನರಂಜನೆಗಷ್ಟೇ ಮೀಸಲಾದ ‘ರಾಕ್ರೀಸಿ’ (ರಾಜಕೀಯ, ಕ್ರೀಡೆ, ಸಿನಿಮಾ) ಕ್ಯಾಮರಾಗಳು ಈಗಿನ ಗೋಲೀಬಾರಿಗೆ ಕೆರಳಿ ಕುಣಿದಷ್ಟು ಭೀಕರವಾಗಿ ಹಿಂದೆಂದೂ ಮಾಲಿನ್ಯದ ವಿರುದ್ಧ ಕುಣಿದಿರಲಿಲ್ಲ. ಸಂತ್ರಸ್ತರ ಹೋರಾಟಕ್ಕೂ ಮುತ್ಸದ್ದಿ– ಮಾಧ್ಯಮಗಳ ಚೀರಾಟಕ್ಕೂ ಸಂಬಂಧವೇ ಇಲ್ಲ.

6. ಸ್ಟರ್ಲೈಟ್ ಚರಿತ್ರೆ ಕರಾಳವಾಗಿದೆ. ಅದು ಲಂಡನ್ನಿನಲ್ಲಿ ಮುಖ್ಯಕಚೇರಿಯುಳ್ಳ ‘ವೇದಾಂತ ರಿಸೋರ್ಸಿಸ್ ಪಿಎಲ್‌ಸಿ’ ಎಂಬ ಬಹುರಾಷ್ಟ್ರೀಯ ಕಂಪನಿಯ ಅಂಗವಾಗಿದ್ದು ಅದರ ಯಜಮಾನನ ಹೆಸರು ಅನಿಲ್ ಅಗರ್ವಾಲ್. ಬಿಹಾರದಲ್ಲಿ ಗುಜರಿ ಲೋಹಗಳ ಲೇವಾದೇವಿ ಮಾಡುತ್ತಿದ್ದ ಆತ ಮುಂಬೈಯಲ್ಲಿ 1996ರಲ್ಲಿ ವೇದಾಂತ ಕಂಪನಿ ಆರಂಭಿಸಿ, ಸರ್ಕಾರ ಮಾರಾಟಕ್ಕಿಟ್ಟ ಅಲ್ಯೂಮಿನಿಯಂ ಕಂಪನಿಯನ್ನು ಖರೀದಿಸಿ, ಅದರ ಬೆನ್ನಹಿಂದೇ ಸೀಸ, ಕಬ್ಬಿಣ, ಸತು, ಬೆಳ್ಳಿ, ತಾಮ್ರ, ಚಿನ್ನದಂಥ ಬಣ್ಣದ ಲೋಹಗಳ ಗಣಿಗಳನ್ನೂ ತೈಲಬಾವಿಗಳನ್ನೂ ತನ್ನದಾಗಿಸಿಕೊಂಡು, ಲಂಡನ್ ಷೇರು ಮಾರುಕಟ್ಟೆಗೆ ಪ್ರವೇಶ ಪಡೆದು ಅಲ್ಲೇ ನೆಲೆಸಿದವ. ಐರೋಪ್ಯ ದೇಶಗಳ ಬಂಡವಾಳವನ್ನು ಆಕರ್ಷಿಸುತ್ತ, ಆಫ್ರಿಕಾ ಮತ್ತು ಇಂಡಿಯಾದಲ್ಲಿ ಗಣಿಗಾರಿಕೆ ನಡೆಸುತ್ತ ಬಹುಕೋಟ್ಯಧೀಶನಾದ. ತೀರ ಹಿಂದುಳಿದ ಪ್ರದೇಶದಲ್ಲೇ ತನ್ನ ಸಾಮ್ರಾಜ್ಯ ವಿಸ್ತರಿಸಲೆಂದು ಭಾರತದಲ್ಲಿ ವೇದಾಂತ ಕಂಪನಿ ನಡೆಸಿದ ಭಾನಗಡಿ ಒಂದೆರಡಲ್ಲ. ಅಲ್ಯೂಮಿನಿಯಂ ಲೋಹಕ್ಕಾಗಿ ನಿಯಮಗಿರಿ ಪರ್ವತ ಶ್ರೇಣಿಯಲ್ಲಿ 2009ರಲ್ಲಿ ಬಾಕ್ಸೈಟ್ ಅದುರಿನ ಗಣಿಗಾರಿಕೆಗೆ ಕೈಹಾಕಿ, ಅರಣ್ಯನಾಶ, ವನ್ಯಜೀವಿ ನಾಶಕ್ಕೆ ಕಾರಣವಾಗಿ ಅಲ್ಲಿನ ಡೋಂಗ್ರಿಯಾ ಖೊಂಡ್ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಹೋಗಿ ಭಾರೀ ಪ್ರತಿಭಟನೆ ಎದುರಿಸಿತು. ಆದಿವಾಸಿಗಳ ಪರ ಜಾಗತಿಕ ಆಕ್ರೋಶ ಅದೆಷ್ಟಿತ್ತೆಂದರೆ, ರಾಹುಲ್ ಗಾಂಧಿ ಖುದ್ದಾಗಿ ಆದಿವಾಸಿಗಳಿದ್ದಲ್ಲಿಗೆ ಧಾವಿಸಿ ‘ನಾನು ನಿಮ್ಮ ಸಿಪಾಯಿಯಾಗಿ ದಿಲ್ಲಿಯಲ್ಲಿ ಹೋರಾಡುತ್ತೇನೆ’ ಎಂದು ಹೇಳಬೇಕಾಯಿತು. ಹೋರಾಟಕ್ಕೆ ಅವರು ತೋಳೇರಿಸುವ ಮೊದಲೇ ಕೇಂದ್ರ ಸರ್ಕಾರ ವೇದಾಂತದ ಗಣಿ ಲೈಸೆನ್ಸ್ ರದ್ದು ಮಾಡಿತು. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಮಾತ್ರ ತನ್ನ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕಿತೆಂದು ಗುರ‍್ರೆಂದರು. ಅಭಿವೃದ್ಧಿಗೂ, ಹಿಂದುಳಿದವರ ಕಲ್ಯಾಣಕ್ಕೂ ಸಂಬಂಧವೇ ಇಲ್ಲ.

7. ಅದಾದ ಮರುವರ್ಷವೇ ವೇದಾಂತದ ಮತ್ತೊಂದು ಅಕ್ರಮ ಬಯಲಾಯಿತು. ತಾಮ್ರದ ತ್ಯಾಜ್ಯದಲ್ಲಿ ಪ್ಲಾಟಿನಂ ಮತ್ತು ಪೆಲ್ಲಾಡಿಯಂ ಕೂಡ ಇದೆಯೆಂಬುದನ್ನು ಬಚ್ಚಿಟ್ಟು ಸಾಗಿಸಲು ಹೋಗಿ ₹ 324 ಕೋಟಿ ತೆರಿಗೆ ದಂಡ ಹಾಕಿಸಿಕೊಂಡಿತು. ಕಂಪನಿಯ ಚರಿತ್ರೆಗೆ ಕೊಳಕು ಪುಟಗಳು ಸೇರಿದಂತೆಲ್ಲ ಅತ್ತ ಲಂಡನ್ನಿನ ವೇದಾಂತ ಹೆಡ್ಡಾಫೀಸ್ ಎದುರು ಆಮ್ನೆಸ್ಟಿ ಇಂಟರ್‌ನ್ಯಾಶನಲ್ ನೇತೃತ್ವದಲ್ಲಿ ಗಣ್ಯರನೇಕರು 2010ರಲ್ಲಿ ಪ್ರತಿಭಟನೆ ನಡೆಸಿದರು. ನಾರ್ವೆ ಮತ್ತು ನೆದರ್ಲೆಂಡ್ಸ್ ಸರ್ಕಾರಗಳು ತಾವು ಹೂಡಿದ್ದ ಬಂಡವಾಳವನ್ನು ಹಿಂಪಡೆದವು. ಜನಕಲ್ಯಾಣದ ಉದ್ದೇಶವಿರುವ ಇನ್ನಷ್ಟು ಸಂಸ್ಥೆಗಳು ಹಾಗೇ ಮಾಡಿದವು. ವೇದಾಂತ ‘ಜಗತ್ತಿನ ಅತ್ಯಂತ ಹೇಸಿಗೆ ಕಂಪನಿ?’ ಎಂದು ಲಂಡನ್‌ನ ‘ಇಂಡಿಪೆಂಡೆಂಟ್’ ದಿನಪತ್ರಿಕೆ ಹೆಡ್‌ಲೈನ್ ಬರೆಯಿತು. ವೇದಾಂತ ಜಪ್ಪೆನ್ನಲಿಲ್ಲ. ಬದಲಿಗೆ ಭಾರತೀಯ ರಾಜಕೀಯ ಪಕ್ಷಗಳಿಗೆ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಸದುದ್ದೇಶದ ಸಂಘಟನೆಗಳಿಗೆ ದೇಣಿಗೆ ನೀಡುತ್ತ, ಲಂಡನ್ನಿನಲ್ಲಿ ಜಯಪುರ್ ಸಾಹಿತ್ಯೋತ್ಸವವನ್ನು ನಡೆಸಿ ಬುದ್ಧಿಜೀವಿಗಳನ್ನೂ ಮೆಚ್ಚಿಸುತ್ತ ತನ್ನ ಬಿಂಬ ಮಸಕಾಗದಂತೆ ನೋಡಿಕೊಳ್ಳತೊಡಗಿತು. ಕಂಪನಿಯ ಒಳಗಿನ ಕೊಳಕಿಗೂ ಹೊರಗಿನ ಹೊಳಪಿಗೂ ಸಂಬಂಧವೇ ಇಲ್ಲ.

8. ಆ ಹೊಳಪು ಎಷ್ಟೆಂದರೆ, ಪ್ರಧಾನಿ ಮೋದಿಯವರು ಲಂಡನ್ನಿಗೆ ಹೋದಾಗಲೆಲ್ಲ ಅವರಿಗೆ ಸ್ವಾಗತ ಕೋರಿ ಅಲ್ಲಿನ ಪತ್ರಿಕೆಗಳಲ್ಲಿ ವೇದಾಂತದ್ದೇ ಭರ್ಜರಿ ಜಾಹೀರಾತು. ತೂತ್ತುಕುಡಿಯ 100 ದಿನಗಳ ಜನಾಂದೋಲನವನ್ನು ಬೆಂಬಲಿಸಿ ಲಂಡನ್ನಿನಲ್ಲಿರುವ ತಮಿಳು ಬಾಂಧವರು ಅಗರ್ವಾಲ್ ಮನೆಯ ಎದುರಿಗೆ ಕಳೆದ ಮಾರ್ಚ್‌ನಲ್ಲಿ ತಾಮ್ರದ ಮಾಲಿನ್ಯದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಅದು ತನಗೆ ಲೆಕ್ಕಕ್ಕೇ ಇಲ್ಲವೆಂಬಂತೆ ಈ ವ್ಯಕ್ತಿ ಈಚೆಗೆ, ಏಪ್ರಿಲ್ 15ರಂದು ಪ್ರಧಾನಿ ಮತ್ತೆ ಲಂಡನ್ನಿಗೆ ಹೋದಾಗ ಸ್ವಾಗತ ಕೋರಿ ಅಲ್ಲಿನ ಪತ್ರಿಕೆಗಳಲ್ಲಿ ಪೂರ್ಣಪುಟದ ಜಾಹೀರಾತು ಹಾಕಿಸಿದ್ದೂ ಆಯಿತು. ಅದರಲ್ಲಿ, ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಕರೆಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ಕಂಪನಿ ಬದ್ಧವಾಗಿದೆ ಎಂಬ ಸಂದೇಶವಿತ್ತು. ಆಶಯಕ್ಕೂ ಆತನ ಕೃತಿಗೂ ಸಂಬಂಧವೇ ಇಲ್ಲ.

9. ಈಗ ನಮ್ಮ ನಾಡಿನ ವಾಸ್ತವಕ್ಕೆ ಬರೋಣ. ತೂತ್ತುಕುಡಿಯಲ್ಲಿ ತಾಮ್ರದ ಫ್ಯಾಕ್ಟರಿ ಒಮ್ಮೆ ಬಂದ್, ಒಮ್ಮೆ ಚಾಲೂ ಆಗುತ್ತ ಬಂದ ಹಾಗೆಯೇ ನಮ್ಮ ನಾಡಿನ ಪ್ಲಾಸ್ಟಿಕ್ ದಂಧೆಗಳಲ್ಲೂ ಅದೇ ಆಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಳಹೆಸರಿಲ್ಲದಂತೆ ಮಾಡಬಲ್ಲ ಬಿಗಿ ಕಾನೂನು ನಮ್ಮಲ್ಲಿದೆ. ಮಾಲಿನ್ಯ ಹೊಮ್ಮಿಸುವ ಕೃತ್ಯಗಳಿಗೆ ಎಲ್ಲೆಡೆಯಲ್ಲೂ ಕ್ಷಮಾಪಣೆ ಸಿಗುತ್ತಿದೆಯಾದರೂ ಪ್ಲಾಸ್ಟಿಕ್ಕನ್ನೇ ಈಗ ಎತ್ತಿ ಹೇಳಲು ಕಾರಣವಿಷ್ಟೆ: ಇಡೀ ಜಗತ್ತಿನಲ್ಲಿ ಪ್ಲಾಸ್ಟಿಕ್ ಹಾವಳಿ ಅತಿಯಾಗಿ, ಜೀವಲೋಕಕ್ಕೆ ಕಂಟಕಪ್ರಾಯ ಆಗುತ್ತಿದೆ ಎಂದು ವಿಶ್ವಸಂಸ್ಥೆ ಜೂನ್ 5ರ ವಿಶ್ವ ಪರಿಸರ ದಿನಕ್ಕೆಂದು ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ ಎಂಬ ಘೋಷಣೆಯನ್ನು ಜಗತ್ತಿಗೆ ನೀಡಿದೆ. ಅಷ್ಟೇ ಅಲ್ಲ, ಭಾರತವನ್ನೇ ಆತಿಥೇಯ ರಾಷ್ಟ್ರವೆಂದು ನಿಯೋಜಿಸಿದೆ. ‘ಸ್ವಚ್ಛ ಭಾರತ’ ಸ್ಲೋಗನ್ನನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಿದ್ದಕ್ಕೆ ಸಿಕ್ಕ ಮನ್ನಣೆ ಇದು. ಕೇಂದ್ರ ಸರ್ಕಾರ ಹಿಂದೆಯೇ ಸಪೂರ ಪ್ಲಾಸ್ಟಿಕ್ಕನ್ನು ನಿಷೇಧಿಸಿದೆ. ಕರ್ನಾಟಕ ಸರ್ಕಾರವೂ 2016ರಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಖಡಕ್ಕಾಗಿ ನಿಷೇಧಿಸಿ ಹೊರಡಿಸಿದ 373ನೇ ರಾಜ್ಯಪತ್ರದ ಒಕ್ಕಣೆ ನೋಡಿ: ಯಾವುದೇ ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಹಾಳೆ, ಥರ್ಮೊಕೊಲ್, ಮೈಕ್ರೊಬೀಡ್ಸ್ ವಸ್ತುಗಳ ಬಳಕೆಯನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಡೇರಿ ಉತ್ಪನ್ನ ಮತ್ತು ರಫ್ತು ಉದ್ದೇಶ ಬಿಟ್ಟರೆ ಇನ್ನುಳಿದೆಲ್ಲ ಪ್ಲಾಸ್ಟಿಕ್ ತಯಾರಿಕೆ, ಸಾಗಾಟ, ವಿತರಣೆಯನ್ನು ನಿಷೇಧಿಸಲಾಗಿದೆ. ಅದನ್ನು ಜಾರಿಗೊಳಿಸಿ, ತಪ್ಪಿತಸ್ಥರ ಮೇಲೆ ಖಟ್ಲೆ ಹಾಕಲು ರಾಜ್ಯದ ಎಲ್ಲ ತಾಲ್ಲೂಕುಗಳ 500ಕ್ಕೂ ಹೆಚ್ಚು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಯಾರೂ ಏನೂ ಕ್ರಮ ಕೈಗೊಂಡಿಲ್ಲ. ಕಾನೂನಿಗೂ ಅದರ ಜಾರಿಗೂ ಸಂಬಂಧವೇ ಇಲ್ಲ.

10. ನೋಡುತ್ತಿರಿ, ಪರಿಸರ ದಿನಾಚರಣೆಯಂದು ರಾಜಕೀಯ ಮುತ್ಸದ್ದಿಗಳ ಭಾಷಣ ಮುಗಿಯುತ್ತಲೇ ಪ್ಲಾಸ್ಟಿಕ್ ಫ್ಯಾಕ್ಟರಿಗಳ ಮೇಲೆ ರಾಜ್ಯಾದ್ಯಂತ ಮತ್ತೊಮ್ಮೆ ತೋರಿಕೆಯ ದಾಳಿ ಆರಂಭವಾಗಲಿದೆ. ಅಂಥ ದಾಳಿಗೂ ನಮ್ಮ ನೀರು, ಮಣ್ಣು, ಗಾಳಿಗೂ ಸಂಬಂಧವೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT