ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಬಾಕು ಸೇವನೆ: ಜಾಗೃತಿ ಅಗತ್ಯ’

ವಿಶ್ವ ತಂಬಾಕು ವಿರೋಧಿ ದಿನದ ನಿಮಿತ್ತ ಉಪನ್ಯಾಸ
Last Updated 1 ಜೂನ್ 2018, 13:44 IST
ಅಕ್ಷರ ಗಾತ್ರ

ಕುಷ್ಟಗಿ: ತಂಬಾಕು ಸೇವನೆ ದುಶ್ಚಟ ಆರೋಗ್ಯವಂತ ಸಮಾಜವನ್ನು ಹಾಳು ಮಾಡುತ್ತಿದೆ ಎಂದು ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶಿವಶಂಕರ ಚನ್ನಿ ಹೇಳಿದರು.

ಗುರುವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ‘ವಿಶ್ವ ತಂಬಾಕು ವಿರೋಧಿ ದಿನ’ದ ನಿಮಿತ್ತ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಅನಕ್ಷರಸ್ಥರಿಗೆ ತಿಳಿಸಿಕೊಡಬೇಕಾಗಿದ್ದ ಅಕ್ಷರಸ್ಥರು ಪ್ರತಿಷ್ಠೆ ಎಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಅದರ ಉತ್ಪನ್ನಗಳನ್ನು ಸೇವಿಸುತ್ತಿರುವುದು ದುರಂತ ಎಂದರು.

ತಂಬಾಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಕೋಟಿನ್ ಇರುತ್ತದೆ. ಅದನ್ನು ಸೇವಿಸುವುದರಿಂದ ವಿಷವಸ್ತುಗಳು ನೇರವಾಗಿ ಮಿದುಳಿಗೆ ಸೇರುತ್ತವೆ. ಇಡೀ ದೇಹದ ನರವ್ಯೂಹವನ್ನು ನಿಯಂತ್ರಿಸುವ ಮಿದುಳು ಅಶಕ್ತವಾದರೆ, ದೈಹಿಕ ನಿಶ್ಯಕ್ತಿ, ನರದೌರ್ಬಲ್ಯ, ದೃಷ್ಟಿಹೀನತೆ, ಕ್ಯಾನ್ಸರ್‌, ಪಾರ್ಶ್ವವಾಯು ಉಂಟಾಗುತ್ತದೆ. ಬೀಡಿ, ಸಿಗರೇಟ್‌, ಗುಟ್ಕಾ, ಅಫೀಮು ಸೇರಿದಂತೆ ತಂಬಾಕು ವಸ್ತುಗಳನ್ನು ಸೇವಿಸುವವರಲ್ಲಿ ಮಧುಮೇಹ ಹೆಚ್ಚಾಗಿ ಮುಂದೆ ಗ್ಯಾಂಗ್ರಿನ್‌ ಉಂಟಾಗುತ್ತದೆ ಎಂದು ಹೇಳಿದರು.

ತಂಬಾಕು ಸೇವನೆ ಚಟ ಅಂಟಿಸಿಕೊಂಡವರಲ್ಲಿ ಸಂತಾನ ಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳಾದರೂ ಅವರಲ್ಲಿ ಅನೇಕ ರೀತಿಯ ನ್ಯೂನ್ಯತೆಗಳಿರುತ್ತವೆ. ಹಾಗಾಗಿ ತಂಬಾಕು ಸೇವನೆಯನ್ನು ಬಿಡಬೇಕು ಮತ್ತು ಇತರರಲ್ಲಿ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯಶ್ರೇಣಿ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶ ಇರುವುದನ್ನು ಗಮನಿಸಿಯೂ ಜನರು ಅದರ ದಾಸರಾಗುತ್ತಿರುವುದು ವಿಚಿತ್ರ. ಮೋಜು, ತಮಾಶೆಗಾಗಿ ಚಟಕ್ಕೆ ಬಿದ್ದರೆ ಅದು ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳು ಸಮಾಜದ ಆಸ್ತಿ ಎಂದು ಹೇಳಿದರು.

ವಕೀಲರಾದ ಪಿ.ಆರ್‌.ಹುನಗುಂದ ಅವರು ಮೂಲ ಕಾನೂನುಗಳು ಕುರಿತು ಉಪನ್ಯಾಸ ನೀಡಿದರು. ಸಿವಿಲ್‌ ನ್ಯಾಯಾಧೀಶ ಬಿ.ಕೇಶವಮೂರ್ತಿ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ರಫಿಕ್‌ ಅಹ್ಮದ್‌ ಇದ್ದರು. ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಸಪ್ಪ ಗುಜಮಾಗಡಿ ಅಧ್ಯಕ್ಷತೆ ವಹಿಸಿದ್ದರು. ನಾಗಪ್ಪ ಸೂಡಿ, ಬಸವರಾಜ ದಂಡಿನ, ರುದ್ರಗೌಡ ಪಾಟೀಲ, ಡಿ.ಗೋಪಾಲರಾವ್‌, ಚಂದ್ರಶೇಖರ ಉಪ್ಪಿನ, ರಾಜಶೇಖರ ಮಾಲಿಪಾಟೀಲ ಇದ್ದರು.

**
‘ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆ ಸಂದೇಶ ನೋಡಿಯೂ ಜನರು ತಂಬಾಕಿನ ದಾಸರಾಗುತ್ತಿರುವುದು ದುರಂತ
- ಎನ್‌.ಎಸ್‌.ಕುಲಕರ್ಣಿ, ಹಿರಿಯಶ್ರೇಣಿ ನ್ಯಾಯಾಧೀಶ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT