ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಬೇರೆ ಅಲ್ಲ, ಪ್ರಕೃತಿ ಬೇರೆ ಅಲ್ಲ!

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

‘Sleep, that sometimes shuts up sorrow’s eye’ ಎಂಬ ಶೇಕ್ಸ್‌ಪಿಯರ್‌ನ ಈ ಮಾತು ನಮ್ಮ ಕಾಲದ ದುಃಖ–ದುಮ್ಮಾನಗಳಿಗಿರುವ ಸರಳ ಸೂತ್ರವೆನ್ನಬಹುದು. ‘ದುಃಖದ ದೃಷ್ಟಿಗೆ ಪರದೆ ಎಳೆವ ನಿದ್ರಾದೇವತೆಯೇ’ ಎನ್ನಬಹುದೇನೋ! ಜೆನ್ ಗುರುಗಳು ಸಂಕೀರ್ಣ ಸಮಸ್ಯೆಗಳಿಗೆ ಸರಳ ಸೂತ್ರವನ್ನು ಹೇಳಿ ನಮ್ಮ ಆಪತ್ತಿನ ಅವತಾರಗಳನ್ನು ಭಗ್ನಗೊಳಿಸುವುದುಂಟು. ಸೂಯೋಕೈ ಮಟ್ಸುಮೊಟೋ ಎನ್ನುವ ಜೆನ್‌ ಗುರು ‘ಎ ಮಾಂಕ್ಸ್‌ ಗೈಡ್ ಟು ಎ ಕ್ಲೀನ್ ಹೌಸ್ ಅಂಡ್ ಮೈನ್ಡ್’ ಎನ್ನುವ ಚಿಕ್ಕ ಪುಸ್ತಕದಲ್ಲಿ ಕಸ ಗುಡಿಸುತ್ತ ನಮ್ಮ ಮನಸ್ಸಿನ ಜೇಡರ ಬಲೆಯನ್ನು ಸ್ವಚ್ಛ ಮಾಡಿ ಸಂತೃಪ್ತಿಯ ಬದುಕಿಗೆ ನಾಂದಿಯಾಗುವ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಆತನ ಪ್ರಕಾರ ಧ್ಯಾನ ಮಾಡಿ ಅಲ್ಲ, ಕಸಿ ಗುಡಿಸಿ ಜ್ಞಾನೋದಯವಾದ ಅನೇಕ ಜೆನ್ ಶಿಷ್ಯರ ಬಗ್ಗೆ ಹೇಳುತ್ತಾನೆ. ಮಾರ್ಕ್ ಟ್ವೈನ್ ಹಣ ದ್ವಿಗುಣ ಮಾಡುವ ಬಗ್ಗೆ ಹೀಗೆ ಹೇಳುತ್ತಾನೆ: ‘ಎರಡು ಬಾರಿ ಮಡಿಚಿ ಜೇಬಿನಲ್ಲಿ ಇಟ್ಟುಕೊಳ್ಳಿ!’

ಇತ್ತೀಚಿಗೆ ನಮ್ಮ ಆನೇಕ ಆರೋಗ್ಯ ಸಮಸ್ಯೆಗಳಿಗೆ, ಸದಾ ಬೆಳಕಿಂದ ಕಣ್ಣು ಕುಕ್ಕುವ, ಎಚ್ಚರದಿಂದಿರುವ, ನಿದ್ರೆಯಿಂದ ಮುಕ್ತಿ ಪಡೆದ ಮಹಾನಗರಗಳ ಈ ವಾತಾವರಣವೇ ಕಾರಣ ಎನ್ನುತ್ತಾರೆ. ಬೆಳಕಿನ ಮಾಲಿನ್ಯ ಇತರೇ ಮಾಲಿನ್ಯದಷ್ಟೇ ಅಥವಾ ಇನ್ನೂ ಹೆಚ್ಚು ದುಷ್ಪರಿಣಾಮ ಬೀರುವ ವಿಷಯ ಎನ್ನಲಾಗುತ್ತಿದೆ. ತಾತ್ವಿಕವಾಗಿ ಒಬ್ಬ ಹೀಗೆ ಹೇಳುತ್ತಾನೆ: ‘ನನಗೆ ಕತ್ತಲಿನ ಭಯವಿಲ್ಲ, ಕಣ್ಣು ಕುರುಡಾಗಿಸುವ ಬೆಳಕಿನ ಭಯ’ ಎಂದು. ನಮ್ಮ ದೇಹದ ಒಂದೊಂದು ಜೀವಕೋಶವೂ ಜೈವಿಕ ಗಡಿಯಾರದಂತೆ ಕೆಲಸ ಮಾಡುತ್ತದೆ. ಇದನ್ನು ‘ಸಿರ್ಕೇಡಿಯನ್ ರಿಥಮ್’ ಎನ್ನುತ್ತಾರೆ. ಈ ಜೈವಿಕ ಗಡಿಯಾರ ಸೂರ್ಯನೊಂದಿಗೆ ಸಾವಯುವ ಸಂಬಂಧ ಹೊಂದಿದೆ. ಸೂರ್ಯನ ಉದಯ ಮತ್ತು ಅಸ್ತಮದೊಂದಿಗೆ ಅದು ತನ್ನ ಕಾರ್ಯವೈಖರಿಯನ್ನು ಹೆಣೆದುಕೊಂಡಿದೆ. ದೇಹದ ಉಷ್ಣಾಂಶ, ಪಚನಕ್ರಿಯೆ – ಎಲ್ಲವೂ ರಾತ್ರಿ–ಹಗಲಿಗೆ ಬೇರೆಯೇ ರೀತಿಯಲ್ಲಿ ಬೆರೆತುಕೊಂಡಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನಗಳು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಇಂದು ನಡೆಯುತ್ತಿವೆ. ನಮ್ಮ ಆಹಾರಕ್ರಮವನ್ನು ಇದಕ್ಕೆ ಹೊಂದಿಸಿಕೊಳ್ಳುವುದರಿಂದ ಮಧುಮೇಹ, ರಕ್ತದ ಒತ್ತಡ ಮತ್ತು ಬೊಜ್ಜಿನ ರೋಗನ್ನು ತಡೆಗಟ್ಟಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ‘ನಿವ್ ಸೈನ್ಟಿಸ್ಟ್’ ನಿಯತಕಾಲಿಕ ಇದರ ಬಗ್ಗೆ ಒಂದು ಚಿಕ್ಕ ವೀಡಿಯೊ ಬಿಡುಗಡೆ ಮಾಡಿದೆ.

ವೈಜ್ಞಾನಿಕ ಅಧ್ಯಯನಗಳಿಂದ ತಿಳಿದು ಬಂದಿರುವಂತೆ ಬೆಳಗ್ಗೆ ಮತ್ತು ಮಧ್ಯಾಹ್ನ ನಾವು ಆಹಾರವನ್ನು ಪಚನಮಾಡುವ ರೀತಿಯೇ ಸಮರ್ಥವಾಗಿ ಬೇರೆಯಾಗಿರುತ್ತದೆ. ರಕ್ತದಲ್ಲಿ ಸಕ್ಕರೆ ಶೇಕರಣೆ ಕಡಿಮೆಯಾಗಿರುತ್ತದೆ. ರಾತ್ರಿಯಾಗುತ್ತಾ ಹೋದಂತೆ ನಮ್ಮ ಪಚನಕ್ರಿಯೆ ವ್ಯತ್ಯಾಸವಾಗುತ್ತ ರೋಗ, ರುಜಿನಗಳಿಗೆ ಕದ ತೆರೆಯುವಂತಾಗುತ್ತದೆ. ನಮ್ಮ ಪೂರ್ವಜರಾದ ಚಿಂಪಾಂಜಿ, ಗೊರಿಲ್ಲಾಗಳು ಬೆಳಿಗ್ಗೆಯಿಂದ ಮಧ್ಯಾಹ್ನದೊಳಗೆ ತಮ್ಮ ಉಟೋಪಚಾರಗಳನ್ನು ಮುಗಿಸುತ್ತವೆಯಂತೆ. ಹಿರಿಯರ ಪಾಲನೆ ಒಳ್ಳೆಯದೆ. ಅಲಬಾಮ ವಿಶ್ವವಿದ್ಯಾಲಯದಲ್ಲಿ ಬೊಜ್ಜು ಮತ್ತು ಮಧುಮೇಹ ಇರುವವರಿಗೆ ಬೆಳಗ್ಗೆ 8.30ಯಿಂದ ಮೂರು ಗಂಟೆಯೊಳಗೆ ಊಟ ಮುಗಿಸಿದವರಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುವುದನ್ನು ಕಂಡಿದ್ದಾರೆ. ಇದು ‘8ಗಂಟೆ ಪಥ್ಯ’ (8 hour diet) ಎಂದು ಹೆಸರುವಾಸಿಯಾಗಿದೆ. ಎಂಟು ಗಂಟೆಯೊಳಗೆ ಏನೇನೋ ತಿನ್ನುವುದಲ್ಲ; ಆರೋಗ್ಯಕರ ಆಹಾರವನ್ನೇ ಸೇವಿಸಬೇಕಾಗುತ್ತದೆ. ಹ್ಯೂ ಜಾಕ್‍ಮನ್, ನಿಕೋಲ್ ಕಿಡ್‍ಮನ್‍ರಂತ ಹೆಸರಾಂತ ಸಿನಿಮಾ ತಾರೆಯರು ಈ ಪದ್ದತಿ ಅಳವಡಿಸಿಕೊಂಡಿರುವುದು ಇದಕ್ಕೆ ಹೆಚ್ಚು ಪ್ರಚಾರ ಕೂಡ ಆಗಿದೆ. ನಾವುಗಳು ನಡುರಾತ್ರಿಯವರೆಗೆ ಪಾರ್ಟಿಮಾಡಿ ಮಲಗುವುದು ನವನಾಗರಿಕತೆ ಎಂದುಕೊಂಡಿದ್ದೇವೆ. ನಮ್ಮ ದೇಹ ಮತ್ತು ಪ್ರಕೃತಿ ಪ್ರತ್ಯೇಕ ಘಟಕವಲ್ಲ; ಆಕಾಶಕಾಯದೊಂದಿಗೂ ಹೆಣೆದುಕೊಂಡಿರುವ ಬಲೆಯೇ ನಮ್ಮ ದೇಹ. ಬೇಂದ್ರೆಯವರ ಕವಿತೆಯೊಂದರಲ್ಲಿ ಬಳ್ಳಿ ಎಳೆಯಲು ಹೋದಾಗ ಜಗತ್ತೇ ಜಾರುವ ರೂಪಕ ಕಂಡುಬರುತ್ತದೆ. ಕ್ರೈಸ್ತ ಧರ್ಮದ ಹೆಸರಾಂತ ಸಂತ ಎಕಾರ್ಟ್‍ಗೆ ’ನೀನು ಆತ್ಮಕತೆ ಏಕೆ ಬರೆಯಬಾರದು’? ಎಂದು ಕೇಳಿದ್ದಕ್ಕೆ ಆತ ‘ನನ್ನ ಕತೆಯನ್ನು ಬರೆಯಲು ಹೋದರೆ ಇಡೀ ವಿಶ್ವದ ಕಥೆ ಬರೆಯಬೇಕಾಗುತ್ತದೆ’ ಎನ್ನುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT