ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದದ ಪ್ರಯೋಜನ

ಅಕ್ಷರ ಗಾತ್ರ

ವೇದದ ಪ್ರಯೋಜನ ಏನು? ಈ ಪ್ರಶ್ನೆ ನಮಗೆ ಎದುರಾಗುವುದು ಸಹಜ. ಯಾವ ಕಾಲದಲ್ಲೂ – ಪ್ರಯೋಜನವಿಲ್ಲದೆ ಯಾರೂ ಯಾವ ಕೆಲಸವನ್ನೂ ಮಾಡುವುದಿಲ್ಲ; ಇನ್ನು ನಮ್ಮ ಕಾಲದಲ್ಲಿ ಮಾತ್ರ ಪ್ರಯೋಜನವಿರದ ಕೆಲಸದಲ್ಲಿ ನಾವೇಕೆ ತೊಡಗಬೇಕು?

ಕನ್ನಡವಾಙ್ಮಯ ಪ್ರಪಂಚದ ಧೀಮಂತಪ್ರಮುಖರಲ್ಲಿ ಒಬ್ಬರು ಡಿವಿಜಿ. ಅವರು ವೇದ–ಉಪನಿಷತ್ತುಗಳನ್ನು ಕುರಿತಂತೆಯೂ ಬರೆದಿದ್ದಾರೆ. ಅವರ ಹಲವು ಅಪ್ರಕಟಿತ ಕೃತಿಗಳಲ್ಲಿ ಒಂದು ಇತ್ತೀಚೆಗಷ್ಟೇ ಪ್ರಕಟವಾಯಿತು. ‘ವೇದ–ವೇದಾಂತ: ಒಂದು ಕಿರುಪರಿಚಯ’ ಎಂಬ ಈ ಕೃತಿಯನ್ನು ಎನ್‌.ರಂಗನಾಥಶರ್ಮಾ ಸಂಪಾದಿಸಿದ್ದಾರೆ. ‘ವೇದದ ಪ್ರಯೋಜನ ಏನು?’ – ಎಂಬುದನ್ನು ಈ ಕೃತಿಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಅವರ ಕೆಲವೊಂದು ಮಾತುಗಳನ್ನು ನೋಡಬಹುದು:

‘ಜೀವನಕ್ಷೇತ್ರದಲ್ಲಿ ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂಬ ಎರಡು ವಿಭಾಗಗಳು ಉಂಟೆಂದು ಮೇಲೆ ಹೇಳಿದವಷ್ಟೆ? ಈ ವಿಭಾಗಗಳು ಸಂಕೇತಮಾತ್ರದವು. ವಾಸ್ತವದಲ್ಲಿ ಅವೆರಡೂ ಬೇರೆ ಬೇರೆಯಲ್ಲ; ಒಂದೇ ವಸ್ತುವಿನ ಎರಡು ಅವಸ್ಥೆಗಳು ಮಾತ್ರ. ಮರವೂ ಅದರ ಬೀಜವೂ ಬೇರೆ ಬೇರೆ ವಸ್ತುಗಳಲ್ಲ. ಮರದ ಸತ್ತ್ವವೆಲ್ಲ ಬೀಜದಲ್ಲಿ ಅಡಗಿರುತ್ತದೆ. ಬೀಜದಲ್ಲಿಯ ಸಾರವೆಲ್ಲ ಮರವಾಗಿ ರೂಪುಗೊಳ್ಳುತ್ತದೆ. ನಮ್ಮ ಜೀವನದಲ್ಲಿ ಪ್ರತ್ಯಕ್ಷವಾದ ಭಾಗವೂ ಪರೋಕ್ಷವಾದ ಭಾಗವೂ ಪರಸ್ಪರ ಅವಿನಾಭಾವಸಂಬಂಧವುಳ್ಳವು.

ದೃಶ್ಯವಾಗಿರುವುದು ಅದೃಶ್ಯವಾದುದುರ ಒಂದು ವಿಶೇಷ ವಿಕಾಸ; ಕಣ್ಣಿಗೆ ಕಾಣುವ ನೀರು ಕಣ್ಣಿಗೆ ಕಾಣದ ಆವಿಯ ರೂಪಾಂತರವಾಗಿರುವಂತೆ ಅಥವಾ ಮಂಜು ಆವಿಯಾಗಿ ರೂಪ ಬದಲಾಯಿಸುವಂತೆ. ಹೀಗೆ ನಮ್ಮ ದೃಶ್ಯಜೀವನವನ್ನು ಆಳತಕ್ಕದ್ದು ಒಂದು ಅದೃಶ್ಯ ಜೀವನಮೂಲ. ಅದೇ ಅದೃಷ್ಟ. ಹೀಗಿರಲಾಗಿ ನಮ್ಮ ದೃಶ್ಯಜೀವನ ನೆಟ್ಟಗಾಗಬೇಕಾದರೆ ಅದನ್ನು ಅದೃಶ್ಯದ ಪರಿಜ್ಞಾನದಿಂದ ತಿದ್ದುತ್ತಿರಬೇಕು.

ಲೌಕಿಕ ಜೀವನದ ಪ್ರಭುವು ಅಲೌಕಿಕ ಅದೃಷ್ಟಶಕ್ತಿ. ಲೋಕದಲ್ಲಿ ಜಾಣನಾದ ಆಳು ತನ್ನೊಡೆಯನ ಇಂಗಿತವನ್ನರಿತು ನಡೆದುಕೊಳ್ಳುವಂತೆ, ಪಾಚಕನು ಯಜಮಾನನ ಅಭಿರುಚಿಯನ್ನರಿತು ಅಡುಗೆಮಾಡುವಂತೆ, ಮನುಷ್ಯನ ದೃಶ್ಯಜೀವನ ಅವನಿಗೆ ಊಹ್ಯಮಾತ್ರವಾದ ಅದೃಶ್ಯಶಕ್ತಿಯ ಸ್ವಭಾವವನ್ನು ಅನುಸರಿಸಬೇಕು. ಅಂಥ ಅನುಸರಣೆಯೇ ಧರ್ಮ. ಆದ್ದರಿಂದಲೇ ವೇದವಾಕ್ಯದಲ್ಲಿ ವೈದಿಕರಿಗಿದೆ ಪರಮಶ್ರದ್ಧೆ.

‘... ವೇದದ ಕೆಲವು ಭಾಗವು ಪರಮಾರ್ಥವಿಚಾರದ ಪ್ರಾರಂಭದ ಭಾಗ; ಇನ್ನು ಕೆಲವು ಸಿದ್ಧಾಂತದ ಭಾಗ; ಇನ್ನು ಕೆಲವು ಭಾಗ ಉಭಯಕ್ಕೂ ಮಧ್ಯಸ್ಥವಾದ ಅವಾಂತರಭಾಗ. ಈ ಭಾಗವ್ಯವಸ್ಥೆಯನ್ನು ನಾವು ದೃಷ್ಟಿಯಲ್ಲಿರಿಸಿಕೊಂಡು, ವೇದವಾಙ್ಮಯದ ಸಾರಾಂಶವನ್ನು ತಿಳಿದುಕೊಳ್ಳಬೇಕು. ಪೂರ್ವದಿಂದ ಬಂದಿರುವ ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು ಎಂಬ ವಿಭಾಗವ್ಯವಸ್ಥೆ ಅದಕ್ಕನುಗುಣವಾಗಿಯೇ ಇದೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT