ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಜಗತ್ತಿಗೆ ಪಿತೃಪ್ರಧಾನ ವ್ಯವಸ್ಥೆ ಅಪಥ್ಯ

ಸ್ತ್ರೀಪರ ನೀತಿಗಳನ್ನು ಹೊಂದಿರುವ ದೇಶಗಳಲ್ಲಿ ಮಾತ್ರ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚು
Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

-ಮಿಷೆಲ್‍ ಗೋಲ್ಡ್‌ಬರ್ಗ್‌

ಅಮೆರಿಕದಲ್ಲಿ ಜನನ ಪ್ರಮಾಣ ಐತಿಹಾಸಿಕ ಕುಸಿತ ಕಂಡಿದೆ ಎಂದು ಅಲ್ಲಿನ ನ್ಯಾಷನಲ್‍ ಸೆಂಟರ್ ಫಾರ್ ಹೆಲ್ತ್ ಸ್ಟಾಟಿಸ್ಟಿಕ್ಸ್ ಕಳೆದ ವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಮಕ್ಕಳನ್ನು ಹೆರುವ ವಯೋಮಾನದ ಸಾವಿರ ಮಹಿಳೆಯರು ಹೊಂದಿರುವ ಮಕ್ಕಳ ಪ್ರಮಾಣ 60.2 ಮಾತ್ರ ಎಂದು ಈ ವರದಿ ಹೇಳಿದೆ. ಶ್ರೀಮಂತ ದೇಶಗಳಲ್ಲಿ ಅಲ್ಲಿನ ಜನಸಂಖ್ಯೆ ಅದೇ ರೀತಿ ಮುಂದುವರಿಯಬೇಕಾದರೆ ಒಬ್ಬ ಮಹಿಳೆಗೆ 2.1 ಮಕ್ಕಳಿರಬೇಕು. ಆದರೆ, ಅಮೆರಿಕದಲ್ಲಿ, ಕಳೆದ ಒಂದು ದಶಕದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಿದೆ. ಈಗ ಅಲ್ಲಿ ಪ್ರತಿ ಮಹಿಳೆ ಹೊಂದಿರುವ ಮಕ್ಕಳ ಸರಾಸರಿ ಪ್ರಮಾಣ 1.77.

ದೇಶವು ಆರ್ಥಿಕ ಅಭಿವೃದ‍್ಧಿಯ ಯುಗದಲ್ಲಿ ಇರುವುದರಿಂದ ಜನನ ಪ್ರಮಾಣ ಕಡಿಮೆಯಾಗಿರುವುದು ನಿಗೂಢವಾಗಿದೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಜನನ ಪ್ರಮಾಣ ಕುಗ್ಗಲು ಗರ್ಭಪಾತವೇ ಕಾರಣ ಎಂದು ಬಲಪಂಥೀಯ ಒಲವು ಇರುವವರು ಹೇಳುತ್ತಿದ್ದಾರೆ. ಆದರೆ, ಗರ್ಭಪಾತಕ್ಕೆ ನಿರ್ಬಂಧ ಹೇರುವ ಕಾನೂನುಗಳು ಸಂವಿಧಾನ ಪ್ರಕಾರ ಸಿಂಧುವೇ ಆಗಿವೆ ಎಂದು 1973ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಗರ್ಭಪಾತ ಪ್ರಮಾಣವು ಆಗ ಎಷ್ಟಿತ್ತೋ ಈಗಲೂ ಅದೇ ಪ್ರಮಾಣದಲ್ಲಿ ಇದೆ. ಅಮೆರಿಕದಲ್ಲಿ ಜೀವಿತಾವಧಿ ನಿರೀಕ್ಷೆ ಕುಸಿಯುತ್ತಿರುವುದರ ಹಿಂದೆ ಇರುವ ಅದೇ ಹತಾಶೆ ಜನನ ಪ್ರಮಾಣ ಕುಸಿತದಲ್ಲಿಯೂ ಇರಬಹುದು ಎಂದು ಹೆಚ್ಚು ಚಿಂತನಶೀಲರಾದ ಸಂಪ್ರದಾಯವಾದಿಗಳಾದ ಡೇವಿಡ್ ಫ್ರೆಂಚ್‍ ಅವರಂಥವರು ಹೇಳುತ್ತಿದ್ದಾರೆ. ಡೇವಿಡ್‍ ‘ನ್ಯಾಷನಲ್‍ ರಿವ್ಯೂ’ಗಾಗಿ ಕೆಲಸ ಮಾಡುತ್ತಿದ್ದಾರೆ.

ನನ್ನಲ್ಲಿ ಬೇರೊಂದು ಸಿದ್ಧಾಂತ ಇದೆ. ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಕೆಲಸ ಮಾಡುವ ತಾಯಂದಿರಿಗೆ ಸಾಕಷ್ಟು ಅನುಕೂಲಕರ ಪರಿಸ್ಥಿತಿ ಇಲ್ಲದಿರುವುದು ಆ ದೇಶಗಳಲ್ಲಿ ಜನನ ಪ್ರಮಾಣ ಇಳಿಕೆಯಾಗಲು ಕಾರಣ. ಬಹುಶಃ, ಅಮೆರಿಕದಲ್ಲಿ ಕೂಡ ಅದೇ ರೀತಿ ಆಗುತ್ತಿರಬಹುದು.

ಅಮೆರಿಕದಿಂದ ಹೊರಗೆ ಕಂಡು ಬರುವ ಮಾದರಿ ಅತ್ಯಂತ ಸ್ಪಷ್ಟವಾಗಿದೆ. ಶ್ರೀಮಂತ ದೇಶಗಳ ಪೈಕಿ ಲಿಂಗ ಸಮಾನತೆಗೆ ಆದ್ಯತೆ ಕೊಡುತ್ತಿರುವ ಸ್ವೀಡನ್‍, ನಾರ್ವೆ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಜನನ ಪ್ರಮಾಣ ಹೆಚ್ಚಾಗಿದ್ದರೆ, ಲಿಂಗ ಸಮಾನತೆಗೆ ಮಹತ್ವ ಇಲ್ಲದ ದೇಶಗಳಲ್ಲಿ ಜನನ ಪ್ರಮಾಣ ಕುಸಿದಿದೆ. ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದರೂ ಸಾಮಾಜಿಕವಾಗಿ ಸಾಂಪ್ರದಾಯಿಕವಾಗಿರುವ ದೇಶಗಳಲ್ಲಿ ಸಂತಾನೋತ್ಪತ್ತಿ ದರ ಜಗತ್ತಿನಲ್ಲಿಯೇ ಅತ್ಯಂತ ಕನಿಷ್ಠವಾಗಿದೆ. ಇಂತಹ ದೇಶಗಳಲ್ಲಿ ಮಹಿಳೆಯರಿಗೆ ವೃತ್ತಿಪರ ಅವಕಾಶಗಳಿಗೆ ಯಾವ ಕೊರತೆಯೂ ಇಲ್ಲ. ಆದರೆ, ಕುಟುಂಬ ಜೀವನದ ಬಹುತೇಕ ಹೊಣೆಗಾರಿಕೆಗಳು ಅವರ ಮೇಲೆಯೇ ಇರುತ್ತವೆ (ಆದರೆ ಜರ್ಮನಿ ಈ ವಾದಕ್ಕೆ ಅಪವಾದವಾಗಿದೆ. ಈ ದೇಶ ಪ್ರಗತಿಪರ ಧೋರಣೆ ಹೊಂದಿದೆ ಎಂಬ ಹೆಸರು ಗಳಿಸಿದ್ದರೂ ಇಲ್ಲಿ ಜನನ ಪ್ರಮಾಣ ಕಡಿಮೆಯೇ ಇದೆ. ಮನೆಯಿಂದ ಹೊರಗೆ ಕೆಲಸ ಮಾಡುವ ತಾಯಂದಿರನ್ನು ಕಳಂಕದಿಂದ ನೋಡುವ ಪರಂಪರೆ ಈ ದೇಶಕ್ಕೆ ಇದೆ).

ಕೆಲಸ ಮತ್ತು ಮಕ್ಕಳು ಎರಡೂ ಬೇಕು ಎಂದು ಬಹುತೇಕ ಮಹಿಳೆಯರು ಬಯಸುತ್ತಿದ್ದಾರೆ. ಆದರೆ ಅನಿವಾರ್ಯವಾಗಿ ಅವರು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವರು ತಾಯ್ತನವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ ಅಥವಾ ಒಂದೇ ಮಗುವನ್ನು ಹೊಂದುತ್ತಾರೆ. ಆಸ್ಟ್ರೇಲಿಯಾದ ಜನಸಂಖ್ಯಾಶಾಸ್ತ್ರಜ್ಞ ಪೀಟರ್ ಮೆಕ್‍ಡೊನಾಲ್ಡ್ 2000ದಲ್ಲಿ ಇಂತಹುದೊಂದು ಸಿದ್ಧಾಂತವನ್ನು ಮಂಡಿಸಿದ್ದಾರೆ: ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಲ್ಲಿ ಗಂಡಸರಿಗೆ ಬಹುತೇಕ ಸರಿಸಮನಾದ ಅವಕಾಶ ಹೆಂಗಸರಿಗೆ ಸಿಗುವ ಪರಿಸ್ಥಿತಿ ಇದ್ದರೆ, ಮಗುವನ್ನು ಹೊಂದುವುದು ಈ ಅವಕಾಶವನ್ನು ಮೊಟಕುಗೊಳಿಸುತ್ತದೆ. ಹಾಗಾಗಿ, ಮಹಿಳೆಯರು ಮಕ್ಕಳ ಸಂಖ್ಯೆಯನ್ನು ನಿರ್ಬಂಧಿಸುತ್ತಾರೆ. ಇದು ಸ್ವಲ್ಪ ಮಟ್ಟಿಗೆ, ದೀರ್ಘಾವಧಿಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಲು ಕಾರಣವಾಗುತ್ತದೆ.

ಮಕ್ಕಳನ್ನು ಹೊಂದುವ ಬಗ್ಗೆ ಕುಟುಂಬ ಮಟ್ಟದಲ್ಲಿ ನಡೆಯುವ ಆಯ್ಕೆಯಲ್ಲಿ ಲಿಂಗ ಸಮಾನತೆಯು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟಾಕ್‍ಹೋಮ್‍ ವಿಶ್ವವಿದ್ಯಾಲಯದಲ್ಲಿ ಜನಸಂಖ್ಯಾಶಾಸ್ತ್ರಜ್ಞೆಯಾಗಿರುವ ಲಿವಿಯಾ ಒಲಾ ಅಧ್ಯಯನ ಮಾಡಿದ್ದಾರೆ. ಸ್ವೀಡನ್‍ ಬಗ್ಗೆ ಅವರು ಕಂಡುಕೊಂಡ ಅಂಶ ಹೀಗಿದೆ: ಮೊದಲು ಮಗುವನ್ನು ಪಡೆದ ಸಂದರ್ಭದಲ್ಲಿ ಪುರುಷ ಸಂಗಾತಿಯು ಪಿತೃತ್ವ ರಜೆ ಪಡೆದಿದ್ದರೆ, ಮಹಿಳೆಯು ಎರಡನೇ ಮಗುವನ್ನು ಹೊಂದುವ ಸಾಧ್ಯತೆ ಹೆಚ್ಚು. ಮಗುವನ್ನು ಪೋಷಿಸುವ ಕೆಲಸಗಳನ್ನು ಆತ ಹಂಚಿಕೊಳ್ಳಲು ಬಯಸುತ್ತಾನೆ ಎಂಬುದು ಮಹಿಳೆಗೆ ಇದರಿಂದ ಮನವರಿಕೆ ಆಗುತ್ತದೆ. ಹಂಗೆರಿಯಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇದೆ ಎಂದು ಲಿವಿಯಾ ಹೇಳುತ್ತಾರೆ. ಅಲ್ಲಿ, ಮನೆಗೆಲಸವನ್ನು ದಂಪತಿ ಹಂಚಿಕೊಳ್ಳುತ್ತಾರೆ ಎಂದಾದರೆ, ಆ ದಂಪತಿ ಎರಡನೇ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚು. ‘ಕುಟುಂಬ ಜೀವನ, ಮನೆಗೆಲಸ ಮತ್ತು ಮಕ್ಕಳ ಆರೈಕೆಯ ಜತೆಗೆ ವೃತ್ತಿಯನ್ನೂ ಸರಿದೂಗಿಸಿಕೊಂಡು ಹೋಗಲು ಸಾಧ್ಯವಿರುವ ವ್ಯವಸ್ಥೆ ಮತ್ತು ನೀತಿಗಳು ಇರಬೇಕು ಎಂದು ಮಹಿಳೆಯರು ಬಯಸುತ್ತಾರೆ’ ಎಂದು ಲಿವಿಯಾ ಅಭಿಪ್ರಾಯಪಡುತ್ತಾರೆ.

ಸ್ತ್ರೀವಾದಿ ಸಾಮಾಜಿಕ ನೀತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಳದ ನಡುವಣ ಸಂಬಂಧವನ್ನು ಜಗತ್ತಿನಾದ್ಯಂತ ವ್ಯಾಪಕವಾಗಿ ಗುರುತಿಸಲಾಗಿದೆ. ಬ್ರಿಟನ್‌ನ ಮಾಜಿ ಸಚಿವ ಡೇವಿಡ್‌ ವಿಲೆಟ್ಸ್‌ ಒಮ್ಮೆ ‘ಸ್ತ್ರೀವಾದ ಎಂಬುದು ಈಗ ಹೊಸ ಜನನವಾದವಾಗಿದೆ’ ಎಂದು ಈ ವಿದ್ಯಮಾನವನ್ನು ಬಣ್ಣಿಸಿದ್ದರು. ಜಪಾನ್‌ನಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಲ್ಲಿ ಪ್ರತಿ ಮಹಿಳೆಗೆ ಇರುವ ಮಕ್ಕಳ ಪ್ರಮಾಣ 1.4. ಸ್ತ್ರೀವಾದಿ ಸಾಮಾಜಿಕ ನೀತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಳದ ನಡುವಣ ಸಂಬಂಧದ ಕಾರಣಕ್ಕಾಗಿಯೇ ‘ವಿಮೆನಾಮಿಕ್ಸ್‌’ ಎಂಬ ಸ್ಥೂಲ ನೀತಿಯೊಂದನ್ನು ಜಪಾನ್‌ ಅಳವಡಿಸಿಕೊಂಡಿದೆ. ಲಿಂಗ ಸಮಾನತೆಗೆ ಪ್ರೋತ್ಸಾಹ ನೀಡುವ ಈ ನೀತಿ ಅಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಪಡೆದುಕೊಂಡಿದೆ.

ಮಹಿಳಾಪರ ನೀತಿಗಳು ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಳದ ನಡುವೆ ಸಂಬಂಧ ಇದೆ ಎಂಬ ಸಿದ್ಧಾಂತಕ್ಕೆ ಒಂದು ಸಂದರ್ಭದಲ್ಲಿ ಅಮೆರಿಕ ಅಪವಾದವಾಗಿತ್ತು. ಅಪ್ಪ–ಅಮ್ಮ ಇಬ್ಬರೂ ಕೆಲಸ ಮಾಡುತ್ತಿದ್ದರೆ ಅಂಥವರಿಗೆ ಅನುಕೂಲ ಆಗುವಂತಹ ಯಾವ ಕ್ರಮಗಳನ್ನೂ ಆ ದೇಶ ಕೈಗೊಂಡಿರಲಿಲ್ಲ. ಆದರೆ, ಫಲವತ್ತತೆ ಪ್ರಮಾಣ ಸಾವಿರ ಮಹಿಳೆಯರಿಗೆ 1.7ಕ್ಕೆ 1976ರಲ್ಲಿ ಇಳಿದಿತ್ತು. ಮುಂದಿನ 30 ವರ್ಷಗಳಲ್ಲಿ ಈ ಪ್ರಮಾಣ ಏರಿಕೆಯಾಗುತ್ತಲೇ ಹೋಗಿದೆ. ಈ ಸಂದರ್ಭದಲ್ಲಿ ಯುರೋಪ್‌ನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಂಠಿತವಾಗಿತ್ತು. ಅಮೆರಿಕದಲ್ಲಿ ಫಲವತ್ತತೆ ಏರಿಕೆಗೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಲ್ಯಾಟಿನ್‌ ಅಮೆರಿಕ ಪ್ರದೇಶದಿಂದ ಗಣನೀಯ ಪ್ರಮಾಣದ ವಲಸೆ, ಹದಿಹರೆಯದವರು ಮಕ್ಕಳಿಗೆ ಜನ್ಮ ನೀಡುತ್ತಿದ್ದ ಪ್ರಮಾಣದಲ್ಲಿ ಏರಿಕೆ ಮತ್ತು ಕೆಲವರು ಅಂದಾಜಿಸಿದಂತೆ, ಅಮೆರಿಕನ್ನರ ಅತಿಯಾದ ಧಾರ್ಮಿಕತೆ ಈ ಕಾರಣಗಳು ಎನ್ನಲಾಗಿದೆ.

ನಂತರದ ದಿನಗಳಲ್ಲಿ, ಹದಿಹರೆಯದವರಲ್ಲಿನ ಗರ್ಭಧಾರಣೆಯ ಪ್ರಮಾಣ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಯಿತು, ಅಮೆರಿಕನ್ನರ ಧಾರ್ಮಿಕ ನಿಷ್ಠೆ ಕಡಿಮೆಯಾಯಿತು, ಲ್ಯಾಟಿನ್‌ ಅಮೆರಿಕದ ಜನರ ವಲಸೆ ತಗ್ಗಿತು ಮತ್ತು ಈ ಜನರ ಫಲವತ್ತತೆ ಪ್ರಮಾಣವೂ ಇಳಿಯಿತು. ಇದೇ ಹೊತ್ತಿಗೆ, ಕೆಲಸ ಮಾಡುತ್ತಿರುವ ದಂಪತಿ ಮೇಲಿನ ಒತ್ತಡ ಹೆಚ್ಚುತ್ತಲೇ ಹೋಗಿದೆ. ‘ಕಳೆದ ಎರಡು ದಶಕಗಳಲ್ಲಿಯೇ, ಈಗ ಅತಿ ಹೆಚ್ಚಿನ ಸಂಖ್ಯೆಯ ತಾಯಂದಿರು ತಮ್ಮ ಮಕ್ಕಳ ಜತೆ ಮನೆಯಲ್ಲಿಯೇ ಉಳಿದಿದ್ದಾರೆ’ ಎಂದು ಫ್ಯೂ ರಿಸರ್ಚ್‌ ಸೆಂಟರ್‌ ತನ್ನ 2014ರ ವರದಿಯಲ್ಲಿ ಹೇಳಿತ್ತು. ಮಕ್ಕಳನ್ನು ನೋಡಿಕೊಳ್ಳಲು ತೆರಬೇಕಾದ ವೆಚ್ಚ ಏರುತ್ತಲೇ ಇರುವುದು ಇದಕ್ಕೆ ಒಂದು ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಈಗ, ಯುರೋಪ್‌ನ ದೇಶಗಳಿಗೆ ಹೋಲಿಸಿದರೆ ಅಮೆರಿಕದ ಜನರ ಫಲವತ್ತತೆ ಪ್ರಮಾಣ ಹೆಚ್ಚಾಗಿಯೇ ಇದೆ. ಈ ಪ್ರಮಾಣ ಫ್ರಾನ್ಸ್‌ ಅಥವಾ ಸ್ವೀಡನ್‌ಗಿಂತ ಕಡಿಮೆ ಇದ್ದರೂ ಸ್ಕ್ಯಾಂಡಿನೇವಿಯಾದ ದೇಶಗಳಿಗೆ (ಉತ್ತರ ಯುರೋಪ್‌ನ ದೇಶಗಳು) ಸಮಾನವಾಗಿ ಇದೆ. ನನ್ನ ಸಿದ್ಧಾಂತ ಸರಿ ಇದೆ ಎಂದಾದರೆ ಅಮೆರಿಕದ ಜನರ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಲೇ ಹೋಗಲಿದೆ. ಇದನ್ನು ತಡೆಯಲು ಅಮೆರಿಕದ ಸರ್ಕಾರವು ಸಂಬಳಸಹಿತ ಕೌಟುಂಬಿಕ ರಜೆ, ಸಹಾಯಧನಗಳು, ಉನ್ನತ ಗುಣಮಟ್ಟದ ಮಕ್ಕಳ ಆರೈಕೆ ವ್ಯವಸ್ಥೆಗಳನ್ನು ಒದಗಿಸಬೇಕಾಗುತ್ತದೆ. ಆದರೆ, ಫ್ರಾನ್ಸ್‌ ಮತ್ತು ಸ್ಕ್ಯಾಂಡಿನೇವಿಯಾದ ದೇಶಗಳಲ್ಲಿ ಫಲವತ್ತತೆ ಪ್ರಮಾಣ ಸ್ಥಿರವಾಗಿ ಮುಂದುವರಿಯಲಿದೆ.

ಜನನ ಪ್ರಮಾಣದ ಬಗ್ಗೆ ನಾವು ಯಾಕಾದರೂ ಚಿಂತೆ ಮಾಡಬೇಕು ಎಂದು ಉದಾರವಾದಿಗಳಲ್ಲಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಬಹುದು. ಜನಸಂಖ್ಯೆಯ ಇಳಿಕೆಯ ಬಗ್ಗೆ ಆತಂಕಪಡುವುದಕ್ಕೆ ಕಾರಣಗಳಿವೆ. ಲಿಂಗತ್ವ ಪಾತ್ರಗಳು ಬದಲಾಗುತ್ತಿರುವುದರ ಬಗ್ಗೆ ಜನರು ದಿಗಿಲುಗೊಳ್ಳುವುದು ಮತ್ತು ನಿರ್ದಿಷ್ಟ ಜನಾಂಗೀಯ ಗುಂಪುಗಳು ತಮ್ಮ ಜನಾಂಗೀಯ ಅನುಕೂಲಗಳನ್ನು ಕಳೆದುಕೊಳ್ಳುವ ಬಗೆಗಿನ ಚಿಂತೆ ಚಾರಿತ್ರಿಕವಾದುದು. ಈಗ, ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವೃದ್ಧರಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಹೀಗೆಯೇ ಮುಂದುವರಿದರೆ, ಕೆಲಸ ಮಾಡುತ್ತಿರುವ ಕೆಲವೇ ಜನರ ಮೇಲೆ ವೃದ್ಧರನ್ನು ನೋಡಿಕೊಳ್ಳುವ ಹೊರೆ ಬೀಳುತ್ತದೆ. ಹಾಗಾದರೆ ನಮ್ಮಲ್ಲಿ ಈಗ ಇರುವ ಅತ್ಯಂತ ತೆಳುವಾದ ಸಾಮಾಜಿಕ ಸುರಕ್ಷತಾ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ. ವಲಸೆಯ ಹೆಚ್ಚಳ ಇದಕ್ಕೆ ಇರುವ ಅತ್ಯಂತ ಸರಳ ಪರಿಹಾರ. ಆದರೆ, ದೊಡ್ಡ ಪ್ರಮಾಣದಲ್ಲಿ ಅನ್ಯರ ವಲಸೆಗೆ ಸ್ಥಳೀಯರು ನೀಡುವ ಪ್ರತಿಕ್ರಿಯೆ ಭಯಾನಕವಾಗಿರಬಹುದು. ಅನ್ಯದ್ವೇಷದ ಸಂಘರ್ಷಗಳು ಕೈಮೀರಿ ಹೋಗಬಹುದು.

ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ತಾವು ಇಚ್ಛಿಸುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೆರಬೇಕು ಎಂದು ಇದರಲ್ಲಿ ಯಾವ ಅಂಶವೂ ಒತ್ತಡ ಹೇರುವಂತಿಲ್ಲ. ಇದು ಅನೈತಿಕ ಅಲ್ಲ, ಆದರೆ ಪ್ರತಿಕೂಲ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ತಾವು ಹೊಂದಿರುವುದಕ್ಕಿಂತ ಹೆಚ್ಚಿನ ಮಕ್ಕಳನ್ನು ಮಹಿಳೆಯರು ಬಯಸುತ್ತಿದ್ದಾರೆ ಎಂಬುದನ್ನು ಸಮೀಕ್ಷೆಗಳು ಹೇಳಿವೆ. ‘ತಮಗೆ ಎಷ್ಟು ಮಕ್ಕಳು ಬೇಕು ಎಂದು ಮಹಿಳೆಯರು ಹೇಳುತ್ತಾರೆಯೋ  (2.7) ಅದು ಮತ್ತು ಅವರು ವಾಸ್ತವದಲ್ಲಿ ಹೊಂದಿರುವ ಮಕ್ಕಳ ಸಂಖ್ಯೆ (1.7) ನಡುವೆ ಈಗ 40 ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಅಂತರ ಕಾಣಿಸುತ್ತಿದೆ’ ಎಂದು ಲೈಮನ್‌ ಸ್ಟೋನ್‌ ಅವರು ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯಲ್ಲಿ ಬರೆದಿದ್ದಾರೆ.

ಬಯಸುವಷ್ಟು ಜೀವಗಳನ್ನು ಸೃಷ್ಟಿಸಲು ನಮ್ಮ ಸಂಸ್ಕೃತಿಯು ಮಹಿಳೆಗೆ ಬೆಂಬಲ ನೀಡುತ್ತಿಲ್ಲ. ಈ ವೈಫಲ್ಯವು ಭವಿಷ್ಯಕ್ಕೆ ದೊಡ್ಡ ಬೆದರಿಕೆಯಾಗಿದೆ. ಆಧುನಿಕ ಜಗತ್ತಿಗೆ ಪಿತೃಪ್ರಧಾನ ವ್ಯವಸ್ಥೆ ಸಮಂಜಸವಲ್ಲ ಎಂಬ ಪಾಠವನ್ನು ಫಲವತ್ತತೆಯ ಕೊರತೆಯು ನಮಗೆ ಹೇಳಿಕೊಡುತ್ತಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT