ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಗಣಿಗಾರಿಕೆ: ಜೀವನದಿಗಳಿಗೆ ಕುತ್ತು

ತುಂಗಾ, ಮಾಲತಿ, ಗೋಪಿನಾಥಹಳ್ಳ, ಕುಂಟೆಹಳ್ಳದಲ್ಲಿ ಮರಳು ಸಾಗಣೆ lಜಲಚರಗಳಿಗೆ ಮಾರಕ
Last Updated 2 ಜೂನ್ 2018, 6:23 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮರಳು ಅಕ್ರಮ ಗಣಿಗಾರಿಕೆಯಿಂದಾಗಿ ಜೀವನದಿಗಳು ಬರಡಾಗುತ್ತಿವೆ. ತಾಲ್ಲೂಕಿನ ತುಂಗಾ, ಮಾಲತಿ ನದಿಯಲ್ಲಿ ಅಮೂಲ್ಯ ಜಲಚರಗಳ ಜೀವಕ್ಕೆ ಕುತ್ತುಂಟಾಗಿದೆ.

ಮಂಡಗದ್ದೆ ತುಂಗಾ ನದಿ ಪ್ರದೇಶದ ಹಿನ್ನೀರಿನ ನದಿ ದಡದಲ್ಲಿ ಸಂಗ್ರಹವಾದ ಮರಳನ್ನು ಯಾವುದೇ ಅಡ್ಡಿ ಆತಂಕ ಇಲ್ಲದೇ ಸಾಗಣೆ ಮಾಡಲಾಗುತ್ತಿದೆ. ಅರಣ್ಯ ವಿಚಕ್ಷಣ ದಳ, ಪೊಲೀಸ್ ಇಲಾಖೆ ವಶಪಡಿಸಿಕೊಂಡ ಮರಳು ಕೂಡ ಸಾಗಣೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

'ಈ ದಂಧೆಯಿಂದ ಬರುತ್ತಿರುವ ಆದಾಯಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಪೈಪೋಟಿ ಆರಂಭವಾದಂತಿದೆ' ಎಂಬುದು ಸಾರ್ವಜನಿಕರ ಆರೋಪ.

ಮಂಡಗದ್ದೆಯ ತುಂಗಾ ನದಿ ಹಿನ್ನೀರು ಪ್ರದೇಶದಲ್ಲಿ 2 ವರ್ಷದ ಹಿಂದೆ ಇದೇ ಪ್ರದೇಶದಲ್ಲಿ ಹೂಳು ತೆಗೆಯುವ ನೆಪದಲ್ಲಿ ಮರಳು ಸಾಗಿಸುತ್ತಿದ್ದಾಗ ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

‘ಮಂಡಗದ್ದೆ ಶಿವಮೊಗ್ಗ ನಗರಕ್ಕೆ ಸಮೀಪ ಇರುವುದರಿಂದ ಮರಳನ್ನು ಸುಲಭವಾಗಿ ಸಾಗಿಸಲು ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ’ ಎಂಬ ದೂರು ಕೇಳಿ ಬಂದಿದ್ದು, ಮಂಡಗದ್ದೆ, ಹೆದ್ದೂರು, ಮುಂಡವಳ್ಳಿ, ಜಂಬವಳ್ಳಿ ಭಾಗದಲ್ಲಿ ಎಕರೆವಾರು ಪ್ರದೇಶದಲ್ಲಿ ಸಂಗ್ರಹವಾಗಿರುವ ಕೋಟ್ಯಂತರ ರೂಪಾಯಿ ಬೆಲೆಯ ಮರಳು ಮುಡುಬ ಟೋಲ್ ಗೇಟ್ ದಾಟಿ ಶಿವಮೊಗ್ಗ, ಚಿಕ್ಕಮಗಳೂರು, ಎನ್ಆರ್ ಪುರ, ಬಾಳೇಹೊನ್ನೂರು, ತರೀಕೆರೆ, ಭದ್ರಾವತಿಗೆ ಪೂರೈಕೆ ಆಗುತ್ತಿದೆ. ಆದರೂ ಪ್ರಕರಣ ಪತ್ತೆ ಆಗದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

‘ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯಿಂದ ಪ್ರಸಿದ್ಧ ಸಿಬ್ಬಲುಗುಡ್ಡೆ ಮತ್ಸ್ಯಧಾಮ ಅಪಾಯಕ್ಕೆ ಸಿಲುಕಿದೆ. 1978ರ ಕೇಂದ್ರ ಅರಣ್ಯ ಪರಿಸರ ಸಂರಕ್ಷಣೆ, 1964 ಕರ್ನಾಟಕ ಅರಣ್ಯ ಕಾಯ್ದೆ ನಿಯಮದ ಅನ್ವಯ ನದಿ ಪಾತ್ರದಲ್ಲಿ ಪರಿಸರ ಹಾನಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ ಅರಣ್ಯ ಇಲಾಖೆ ಮೌನ ವಹಿಸಿದೆ’ ಎಂಬುದು ಸಾರ್ವಜನಿಕರ ಆರೋಪ.

ತುಂಗಾ ನದಿ ಹಿನ್ನೀರಿನ ಮಂಡ ಗದ್ದೆ, ಮುಂಡುವಳ್ಳಿ, ಹೆದ್ದೂರು, ದೂರ್ವಾಸಪುರ, ತುಡಾನ್ಕಲ್, ಬಾಳಗಾರು, ಚಂಗಾರು, ಆರೇಹಳ್ಳಿ ಬುಕ್ಲಾಪುರ ಇನ್ನೂ ಅನೇಕ ಕಡೆಗಳಲ್ಲಿ ಮರಳು ಲೂಟಿಯಾಗಿದೆ. ಅವೈಜ್ಞಾನಿಕವಾಗಿ ಮರಳನ್ನು ತೆಗೆಯುತ್ತಿರುವುದರಿಂದ ನದಿ ಹರಿವಿನ ದಿಕ್ಕಿಗೆ ತೊಡಕುಂಟಾಗಿದೆ. ನದಿ ಪಾತ್ರದಲ್ಲಿ ಬಾಟಲು, ಗುಟ್ಕಾ ಪ್ಯಾಕ್ ಹೀಗೆ ತ್ಯಾಜ್ಯವನ್ನು ಎಸೆ ಯುತ್ತಿರುವುದರಿಂದ ನದಿ ಕಲು ಷಿತಗೊಳ್ಳುವಂತಾಗಿದೆ ಎಂದು ಪರಿಸ ರಾಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರು ನೀಡಲು ಭಯ

‘ಮರಳು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೂ ಸಾರ್ವಜನಿಕರು ದೂರು ನೀಡಲು ಭಯ ಪಡುವಂತಾಗಿದೆ. ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳುತ್ತಾರೆ.

**
ಮರಳು ಅಕ್ರಮ ಸಾಗಣೆಯಾಗುತ್ತಿರುವ ಮಾಹಿತಿ ತಿಳಿದಿದೆ.  ದಂಧೆಯಲ್ಲಿ ಶಾಮೀಲಾಗಿರುವ ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳ ಹೆಸರನ್ನು ಬಯಲಿಗೆಳೆಯುತ್ತೇನೆ
- ಆರಗ ಜ್ಞಾನೇಂದ್ರ,ಶಾಸಕ

- ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT