ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಸಿಬಿಐ ತನಿಖೆಗೆ ಒತ್ತಾಯ

Last Updated 2 ಜೂನ್ 2018, 8:53 IST
ಅಕ್ಷರ ಗಾತ್ರ

ಕೊಲ್ಕತ್ತಾ: ಇಲ್ಲಿನ ಬಲರಾಮ್‌ಪುರ ಜಿಲ್ಲೆ ಪುರುಲಿಯಾ ನಗರಕ್ಕೆ ಸಮೀಪದಲ್ಲಿರುವ ದಾಭಾ ಹಳ್ಳಿಯಲ್ಲಿ ಹೈ–ಟೆನ್ಷನ್‌ ವಿದ್ಯುತ್‌ ತಂತಿ ಹಾದುಹೋಗಿರುವ ಕಂಬದಲ್ಲಿ ಬಿಜೆಪಿ ಕಾರ್ಯಕರ್ತ ದುಲಾಲ್‌ ಕುಮಾರ್‌(32) ಎನ್ನುವವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂರು ದಿನಗಳ ಹಿಂದಷ್ಟೇ ಪಕ್ಷದ ದಲಿತ ಯುವ ಘಟಕದ ಕಾರ್ಯಕರ್ತ ತ್ರಿಲೋಚನ್‌ ಮಹತೊ ಅವರ ಶವ ಇದೇ ಜಿಲ್ಲೆಯ ಸುಪರ್ದಿ ಹಳ್ಳಿಯ ಮರವೊಂದರಲ್ಲಿ ಪತ್ತೆಯಾಗಿತ್ತು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಸ್ಥಳೀಯರಿಗೆ ಶನಿವಾರ ಮುಂಜಾನೆ 5.45ರ ಸುಮಾರಿಗೆ ಘಟನಾ ಸ್ಥಳದಲ್ಲಿ ದುಲಾಲ್‌ ಅವರ ಮೊಟಾರ್‌ ಸೈಕಲ್‌ ಕಾಣಿಸಿತ್ತು. ಬಳಿಕ ದುಲಾಲ್‌ ಶವವೂ ಪತ್ತೆಯಾಗಿತ್ತು.

‘ದುಲಾಲ್‌ ಕುಮಾರ್‌ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಶವಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬರಲಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡೂ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷದ ಕೈವಾಡ ಇರುವುದಾಗಿ ಶಂಕೆ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ, ‘ತ್ರಿಲೋಚನ್‌ ಮಹತೊ ಕೊಲೆ ಮಾದರಿಯಲ್ಲಿಯೇ ಬಲರಾಮ್‌ಪುರದಲ್ಲಿಯೂ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಪುರುಲಿಯಾದಲ್ಲಿ ಹಿಡಿತ ಕಳೆದುಕೊಳ್ಳುತ್ತಿರುವ ಟಿಎಂಸಿ, ಬಿಜೆಪಿ ಕಾರ್ಯಕರ್ತರ ಹತ್ಯೆಗಾಗಿ ಈಗ ಮಾವೋವಾದಿಗಳ ಜೊತೆ ಕೈ ಜೋಡಿಸಿದೆ’ ಎಂದು ಆರೋಪಿಸಿದ್ದಾರೆ. ‘ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದೂ ಆಗ್ರಹಿಸಿದ್ದಾರೆ.

‘ಎರಡೂ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ(ಎಡಿಜಿ) ಅನುಜ್‌ ಶರ್ಮಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ದುಲಾಲ್‌ ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದರು. ತ್ರಿಲೋಚನ್‌ ಕೊಲೆ ಪ್ರಕರಣವನ್ನು ಖಂಡಿಸಿ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ‌್ಗೊಂಡಿದ್ದ ಕಾರಣ ದುಲಾಲ್‌ರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಿನ್ನೆ ರಾತ್ರಿಯೇ(ಶುಕ್ರವಾರ) ಆರೋಪಿಸಿತ್ತು.

ಕೊಲೆ ಪ್ರಕರಣಗಳನ್ನು ಟಿಎಂಸಿ ಸಂಸದ ಡರೇನ್‌ ಒಬ್ರಿಯಾನ್‌ ಟ್ವೀಟರ್‌ನಲ್ಲಿ ಖಂಡಿಸಿದ್ದಾರೆ.

ತ್ರಿಲೋಚನ್‌ ಮರಣದ ಬಳಿಕ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ‘ಪ್ರಸ್ತುತ ಟಿಎಂಸಿ ಸರ್ಕಾರ ಕಮ್ಯುನಿಸ್ಟ್‌ ಆಡಳಿತದ ಹಿಂಸಾಕೃತ್ಯಗಳನ್ನು ಮೀರಿಸಿದೆ’ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT