ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಟ್ಟಡಕ್ಕೆ ಪದಾರ್ಪಣೆ ಯಾವಾಗ?

ಕಡೂರಿನ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
Last Updated 2 ಜೂನ್ 2018, 9:10 IST
ಅಕ್ಷರ ಗಾತ್ರ

ಕಡೂರು: ಶತಮಾನದ ಇತಿಹಾಸವನ್ನು ಹೊಂದಿರುವ ಕನ್ನಡ ಶಾಲೆಯೊಂದು ಹೊಸ ಕಟ್ಟಡದಿಂದ ಕಂಗೊಳಿಸಬೇಕಾಗಿತ್ತು. ಆದರೆ, ಅಪೂರ್ಣ ಕಾಮಗಾರಿಯಿಂದಾಗಿ ಕಳೆಗುಂದಿದೆ!

ಕಡೂರಿನ ಹೃದಯಭಾಗದಲ್ಲಿರುವ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿಯಿದು. ಪಟ್ಟಣದ ಬಿಇಒ ಕಚೇರಿ ಬಳಿಯಿರುವ ಈ ಶಾಲೆ ಸ್ಥಾಪನೆಯಾಗಿದ್ದು 125 ವರ್ಷಗಳ ಹಿಂದೆ 1893 ರಲ್ಲಿ. ಈ ಶಾಲೆಯಲ್ಲಿ ಮೊದಲಿದ್ದುದು 5 ರಿಂದ 7 ತರಗತಿ ಮಾತ್ರ. ನಂತರ 1ನೇ ತರಗತಿಯೂ ಆರಂಭವಾಗಿದೆ. ಕೇವಲ ಬಾಲಕರಿದ್ದ ಈ ಶಾಲೆಯಲ್ಲಿ ಈಗ ಹೆಣ್ಣುಮಕ್ಕಳೂ ಓದುತ್ತಿದ್ದಾರೆ. ನಂತರದಲ್ಲಿ ಈ ಶಾಲೆ ಶಾಸಕರ ಮಾದರಿ ಪಾಠಶಾಲೆಯಾಯಿತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಕಡೂರು ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಮುಂತಾದವರು ಇಲ್ಲೇ ವಿದ್ಯಾವ್ಯಾಸ ಮಾಡಿದ್ದರು. ಇಲ್ಲಿ ಓದಿದ ಅನೇಕರು ಇಂದು ದೇಶದಾದ್ಯಂತ ಉನ್ನತ ಹುದ್ದೆಗಳಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಶಾಲೆಯ ಪುನರುತ್ಥಾನಕ್ಕೆ ಹಿಂದಿನ ಶಾಸಕ ವೈ.ಎಸ್.ವಿ ದತ್ತ ಆಸಕ್ತಿ ತೋರಿದ ಫಲವಾಗಿ ಆಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರು ಈ ಶಾಲೆಗೆ ಭೇಟಿ ನೀಡಿ ₹ 75 ಲಕ್ಷ ಸ್ಥಳದಲ್ಲಿಯೇ ಮಂಜೂರು ಮಾಡಿದ್ದರು. 2014-15ರಲ್ಲಿ ಈ ಶಾಲೆಗೆ ಹೊಸ ಸುಸಜ್ಜಿತ ಕಟ್ಟಡ ಮಾಡಲು ನೀಲನಕ್ಷೆ ತಯಾರಾಯಿತು. ಮೊದಲ ಕಂತು ₹ 25 ಲಕ್ಷ ಬಿಡುಗಡೆಯಾಗಿ ಅದರಲ್ಲಿ ನೂತನ ಕಟ್ಟಡದ ತಳಪಾಯ ನಿರ್ಮಾಣವಾಯಿತು. ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರ ಈ ಕಟ್ಟಡದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ನಂತರ 10 ಕೊಠಡಿಗಳ ಎರಡು ಅಂತಸ್ತಿನ ಕಟ್ಟಡ ತಲೆಯೆತ್ತಿತು. ಆ ನಂತರ ಕಾಮಗಾರಿ ಸಂಪೂರ್ಣ ಸ್ಥಗಿತವಾಯಿತು.

ಪೂರ್ಣಗೊಂಡ ಕಟ್ಟಡಕ್ಕೆ ಗಿಲಾವು ಮಾಡಲಿಲ್ಲ. ಕಿಟಕಿ, ಬಾಗಿಲುಗಳು ಅಳವಡಿಕೆಯಾಗಲಿಲ್ಲ. ಕಾರ್ಯ ಸ್ಥಗಿತಗೊಂಡು 10 ತಿಂಗಳೇ ಕಳೆದಿದೆ. ಶಾಲೆಯ ಮುಖ್ಯೋಪಾಧ್ಯಾಯರು ಈ ವಿಚಾರವಾಗಿ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಯ ಗಮನಕ್ಕೂ ತಂದಿದ್ದಾರೆ. ಆದರೂ ಕಟ್ಟಡದ ಕಾಮಗಾರಿಯ ಕಾರ್ಯವನ್ನು ಪುನರಾರಂಭ ಮಾಡಿಲ್ಲ. ಸರಿಯಾದ ಸಮಯದಲ್ಲಿ ಕಾಮಗಾರಿ ಮುಗಿದಿದ್ದರೆ ಇಷ್ಟು ಹೊತ್ತಿಗೆ ಹೊಸ ಕಟ್ಟಡದಲ್ಲಿ ಶಾಲೆ ಕಂಗೊಳಿಸಬೇಕಿತ್ತು. ಆದರೆ, ಹೊಸ ಕಟ್ಟಡ ಎದ್ದು ನಿಂತಿದ್ದರೂ ಅದನ್ನು ಬಳಸಲಾಗದೆ ಹಳೆ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತಿದೆ. ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ಅಪಾಯದ ಪರಿಸ್ಥಿತಿಯಿದೆ. ಇದರ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜಿಲ್ಲೆಯಲ್ಲಿಯೇ ಅತ್ಯಂತ ಹೆಮ್ಮೆಯ ಶಾಲೆಯಿದು. ಇದರ ಪುನರುತ್ಥಾನಕ್ಕಾಗಿ ಹಲವಾರು ಪ್ರಯತ್ನಗಳು ನಡೆದು ಕಡೆಗೆ ₹  75 ಲಕ್ಷ ಮಂಜೂರಾಗಿ ಈ ಹಂತಕ್ಕೆ ಬಂದು ಸ್ಥಗಿತಗೊಂಡಿರುವುದು ಹಳೆಯ ವಿದ್ಯಾರ್ಥಿಗಳಾದ ನಮಗೆ ನೋವು ತಂದಿದೆ. ಕೂಡಲೇ ಈ ಕಟ್ಟಡದ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದವರು ಮುಂದಾಗಬೇಕು. ಕಾಮಗಾರಿ ವಿಳಂಬದಿಂದ ಶಾಲಾ ದಾಖಲಾತಿಯೂ ಕಡಿಮೆಯಾಗುವ ಸಂಭವವಿದೆ. ಇದಕ್ಕೆ ಅವಕಾಶ ನೀಡದಂತೆ ಕಾಮಗಾರಿ ಪೂರ್ಣಗೊಳ್ಳಬೇಕು. ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಬೇಕು. ಈ ಕುರಿತು ನೂತನ ಶಾಸಕರು ಆಸಕ್ತಿ ವಹಿಸಬೇಕು’ ಎನ್ನುತ್ತಾರೆ ಈ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಉದ್ಯಮಿ ಜಿ.ವಿ.ಮಂಜುನಾಥ ಸ್ವಾಮಿ.

ಶಿಕ್ಷಣ ಸಚಿವರ ವಿಶೇಷ ಅನುದಾನದಿಂದ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಪೂರ್ಣಗೊಂಡ ನಂತರ ಶಾಲೆಯ ಶತಮಾನೋತ್ಸವವನ್ನು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಶಾಸಕರ ಮುಂದಾಳತ್ವದಲ್ಲಿ ಆಚರಿಸುವ ಉದ್ದೇಶವಿದೆ ಎನ್ನುತ್ತಾರೆ ಈ ಶಾಲೆಯಲ್ಲಿಯೇ ಓದಿ ಇಲ್ಲಿಯೇ ಮುಖ್ಯೋಪಾದ್ಯಾಯರಾಗಿರುವ ಚಂದ್ರಶೇಖರ್.

ಒಟ್ಟಾರೆಯಾಗಿ ತಾಲ್ಲೂಕಿಗೆ ಒಂದೇ ಶಾಸಕರ ಮಾದರಿ ಶಾಲೆಯಾಗಿರುವ ಈ ಶಾಕೆಯ ಕಟ್ಟಡ ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆವರಣದಲ್ಲಿ ಹಲವು ಕಟ್ಟಡ

ಶಾಲೆಯ ನಿವೇಶನದ ವಿಸ್ತೀರ್ಣ 180 ಮೀಟರ್ ಉದ್ದ ಮತ್ತು 90 ಮೀಟರ್ ಅಗಲವಿದೆ. ಇದೇ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ಸಮೂಹ ಸಂಪನ್ಮೂಲ ಕೇಂದ್ರ, ನಿವೃತ್ತ ನೌಕರರ ಸಂಘದ ಕಟ್ಟಡಗಳಿವೆ. ಇದೇ ಆವರಣದಲ್ಲಿ ಸಾರ್ವಜನಿಕ ಗಣಪತಿ ಪೆಂಡಾಲ್ ಕಟ್ಟಡವೂ ಇದೆ.

**
ಹೊಸ ಕಟ್ಟಡದ ಕಾಮಗಾರಿ ಸ್ವಲ್ಪ ಬಾಕಿ ಉಳಿದಿದೆ. ಅನುದಾನದ ಕೊರತೆಯಿಂದ ನಿಂತಿತ್ತಾದರೂಇದೀಗ ಅನುದಾನ ಬಂದಿರುವುದರಿಂದ 2 ತಿಂಗಳಲ್ಲಿ ಮುಗಿಯಲಿದೆ
ಗಂಗಾಧರ್‌, ನಿರ್ಮಿತಿ ಕೇಂದ್ರದ ಎಂಜಿನಿಯರ್

ಬಾಲು ಮಚ್ಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT