ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗೆ ನುಗ್ಗಿದ ಬಸ್‌: ಯುವಕ ಸಾವು

ಬಸ್‌ ಚಾಲಕನಿಗೆ ಗಂಭೀರ ಗಾಯ: ಪರಿಹಾರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ
Last Updated 2 ಜೂನ್ 2018, 10:17 IST
ಅಕ್ಷರ ಗಾತ್ರ

ಕುಶಾಲನಗರ: ಖಾಸಗಿ ಬಸ್‌ ಬ್ರೇಕ್‌ ವಿಫಲಗೊಂಡು ಅಂಗಡಿ ಮಳಿಗೆಗೆ ನುಗ್ಗಿದ ಪರಿಣಾಮ ಯುವಕ ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ಬೈಚನಹಳ್ಳಿ ಗುಂಡೂರಾವ್ ಬಡಾವಣೆಯ ನಿವಾಸಿ ಗೋಪಾಲ್ ಅವರ ಪುತ್ರ ರಾಜೇಶ್ (17) ಮೃತಪಟ್ಟವರು. ಬಸ್‌ ಚಾಲಕ ಮೋಹನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿ ಬಳಿಯಿಂದ ಐಬಿ ರಸ್ತೆಯ ಮೂಲಕ ಕೆಎಸ್ಆರ್‌ಟಿಸಿ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಬರುತ್ತಿದ್ದ  ಬಸ್‌ನ ಬ್ರೇಕ್‌ ವಿಫಲಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ಜಮೀಯಾ ಮಸೀದಿ ಮುಂಭಾಗದ ರಂಗನಾಥ್ ಎಂಟರ್ ಪ್ರೈಸಸ್ ಅಂಗಡಿಗೆ ನುಗ್ಗಿದೆ. ಅದೇ ವೇಳೆ, ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ರಾಜೇಶ್, ರಮೇಶ್ ಮತ್ತು ವಿಜಯ್ ಅವರು ಊಟಕ್ಕೆಂದು ಆ ಅಂಗಡಿಯ ಮುಂದೆ ಹೋಗುತ್ತಿದ್ದರು.  ಬಸ್‌ ಏಕಾಏಕಿ ನುಗ್ಗುತ್ತಿರುವುದನ್ನು ನೋಡಿ ತಕ್ಷಣ ರಮೇಶ್‌, ವಿಜಯ್‌ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ರಾಜೇಶ್‌ ಬಸ್‌ನ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಟೊ ಚಾಲಕರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆಗೂ ಮುನ್ನವೇ ಅವರು ಮೃತಪಟ್ಟಿದ್ದಾರೆ.

ಬಸ್‌ ಚಾಲಕ ಮೋಹನ್ ಕುಮಾರ್ ಕೂಡ ಗಾಯಗೊಂಡು ಪ್ರಜ್ಞಾಹೀನರಾಗಿದ್ದರು. ಅವರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಅಲ್ಲದೆ, ಮುಖ್ಯರಸ್ತೆಯಲ್ಲಿ  ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.  ನಂತರ ಪೊಲೀಸರು ಕ್ರೇನ್‌ ಮೂಲಕ ಬಸ್‌ ಅನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಿಪಿಐ ಕ್ಯಾತೇಗೌಡ, ಪಿಎಸ್‌ಐ ನವೀನ್ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಪ್ರತಿಭಟನೆ:   ಬಸ್‌ ಮಾಲೀಕರು ಕೂಡಲೇ ಸ್ಥಳಕ್ಕೆ ಬಂದು ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜೇಶ್ ಕುಟುಂಬದವರು ಹಾಗೂ ಗ್ರಾಮಸ್ಥರು  ಶವಾಗಾರದ ಮುಂಭಾಗ ಪ್ರತಿಭಟನೆ ನಡೆಸಿದರು.

ಅಲ್ಲದೇ, ಖಾಸಗಿ ಬಸ್‌ಗಳ ಸಂಚಾರವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಅವರು ಬಸ್‌ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT