ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನೊಳು ಬೆಳಕೋ...

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಆ ಆವರಣ ಪ್ರವೇಶಿಸಿದರೆ ಅದೊಂದು ಗಿಡ- ಮರಗಳನ್ನು ಸಮೃದ್ಧವಾಗಿ ಬೆಳೆಸಿರುವ ತೋಟವೆಂದೇ ಭಾಸವಾಗುತ್ತದೆ. ನಳನಳಿಸುವ ರಂಗು ರಂಗಿನ ಹೂವು, ತೊನೆದಾಡುವ ಕಾಯಿ, ಹಣ್ಣುಗಳ ಗೊಂಚಲುಗಳು, ಹಬ್ಬಿಸಿದ ಬಳ್ಳಿಗಳು. ಪೂರಕವಾಗಿ ಗಿರಿ- ಕಂದರಗಳು. ತೊರೆ, ಜಲಪಾತ. ಕೊಳಗಳಲ್ಲಿ ಹಂಸ ಮುಂತಾದ ಪಕ್ಷಿಗಳ ವಿಹಾರ. ಆಗಷ್ಟೇ ಕಾಳು ಕಂಡು ಮರದಲ್ಲಿದ್ದ ಪಾರಿವಾಳ, ಅಳಿಲುಗಳು ಕೆಳಗೆ ಧುಮುಕಿವೆ. ಆದರೆ ಇವು ಯಾವುವೂ ಅಸಲಿಯಲ್ಲ. ಗಾಜಿನ ಕಲಾಕೃತಿಗಳು. ಒಮ್ಮಿಂದೊಮ್ಮೆಗೆ ಕುತೂಹಲ, ಅಚ್ಚರಿಯಲ್ಲಿ ನಾವು ಮಿಂದು ಹೋಗುವಂತೆ ಮಾಡಿರುತ್ತವೆ. ಅಬ್ಬ! ಹೇಳಿಕೇಳಿ ಗಾಜಿನ ಚೂರು ಅಥವಾ ಸೀಳೆಂದರೆ ಗಾಬರಿ. ಗಾಜೆಲ್ಲಿ? ಕಲಾಕೃತಿ ಎಲ್ಲಿ? ಹುಬ್ಬೇರಿಸುವವರು ಅಮೆರಿಕದ ವಾಷಿಂಗ್‌ಟನ್ ರಾಜ್ಯದ ಸಿಯಾಟಲ್ ನಗರದ ಪ್ರಮುಖ ಪ್ರೇಕ್ಷಣೀಯ ತಾಣಗಳ ಪೈಕಿ ’ಚಿಹೂಲಿ ಗ್ಲಾಸ್ ಮ್ಯೂಸಿಯಂ’ ನೋಡಬೇಕು.

ಒಂದೂವರೆ ಎಕರೆ ವಿಸ್ತೀರ್ಣದ ಈ ಕಲಾಸಂಕೀರ್ಣ ಎರಡು ಗ್ಯಾಲರಿಗಳು ಹಾಗೂ ಅದಕ್ಕೆ ಸಂಬಂಧಿಸಿದ ರೇಖಾಚಿತ್ರಗಳ ಪ್ರದರ್ಶನದ ವಿಶಾಲ ಪಡಸಾಲೆಗಳನ್ನು ಹೊಂದಿದೆ. ಹೊಂದಿಕೊಂಡಂತೆ ಒಂದು ಥಿಯೇಟರ್. ಅಲ್ಲಿ ನಿರಂತರ ತಯಾರಿಕಾ ವಿಧಾನಗಳ ಬಗೆಗಿನ ಚಲನಚಿತ್ರ ಪ್ರದರ್ಶನಗಳು. ಆಗಾಗ ಅಂತರರಾಷ್ಟ್ರೀಯ ಮಟ್ಟದ ಉಪನ್ಯಾಸ, ಸಂವಾದಗಳು. ಗಾಜಿನಿಂದ ಕಲೆ ಶತಮಾನಗಳಿಂದಲೂ ಅರಳಿದೆ. ಗಾಜಿನ ಪಾರದರ್ಶಕತೆ, ಹರಳಿನಂತಹ ಗುಣಗಳು ವಿವಿಧ ಆಕಾರಗಳನ್ನು ರೂಪಿಸಲು ಪೂರಕವಾಗಿವೆ. ಗಾಜು ಸುಂದರ, ಸರಳ ಮತ್ತು ಅಷ್ಟೇ ಸಂಕೀರ್ಣ. ಗಾಳಿಗೂ ಗಾಜಿಗೂ ಅವಿನಾಭಾವ ಸಂಬಂಧ. ಹೌದು, ಗಾಜನ್ನು ಒಂದು ಕೋಲಿನ ತುದಿಗೆ ಲಗತ್ತಿಸಿ ಕುಲುಮೆಯಲ್ಲಿ ಕಾಯಿಸುತ್ತಾರೆ. ಒಂದು ನಿರ್ದಿಷ್ಟ ತಾಪಮಾನದಲ್ಲಿ ಅದು ಬೆಲೂನಿನಂತೆ ಹಿಗ್ಗುತ್ತದೆ, ಬೇಕಾದಂತೆ ಮಣಿಯುತ್ತದೆ. ಹದಕ್ಕೆ ಊದಿ ವಿವಿಧ ಆಕೃತಿಗಳನ್ನು ಸೃಷ್ಟಿಸುತ್ತಾರೆ. ಬಾತುಕೋಳಿ, ಗರಿಬಿಚ್ಚಿದ ನವಿಲು, ಹೆಡೆ ಬಿಚ್ಚಿದ ನಾಗ, ಗಿಣಿ, ಗಿಡುಗ, ಆಮೆ, ಡೈನೋಸಾರ್... ಒಂದೇ? ಎರಡೇ? ಅಂದಹಾಗೆ ನೆಲಹಾಸೂ ಗಾಜಿನದೇ. ಒಪ್ಪವಾಗಿರಿಸಿದ ಥರಾವರಿ ಕಲಾಕೃತಿಗಳ ಪ್ರತಿಬಿಂಬ ಮೂಡಿ ನೀರೇ ಇದೆ ಎನ್ನಿಸುತ್ತದೆ. ಮ್ಯೂಸಿಯಂನ ಸ್ಥಾಪಕ ರೂವಾರಿ ಡೇಲ್ ಚಿಹೂಲಿ. ಸ್ವತಃ ಹುಟ್ಟು ಕಲಾಕಾರ. ಈತ ಅಮೆರಿಕದ ವಾಷಿಂಗ್‌ಟನ್ ರಾಜ್ಯದ ಹೆಸರಾಂತ ಗಾಜಿನ ಶಿಲ್ಪಿ ಹಾಗೂ ದಕ್ಷ ಉದ್ಯಮಿ. ಅವರು 2012ರಲ್ಲಿ ಸಿಯಾಟಲ್ಲಿನಲ್ಲಿ ಈ ಮ್ಯೂಸಿಯಂ ಸ್ಥಾಪಿಸಿದರು. ಇದಕ್ಕೂ ಮೊದಲು ವೆನಿಸ್, ಸ್ಯಾನ್‌ಫ್ರಾನ್ಸಿಸ್ಕೊ, ಜೆರುಸಲೇಮ್‌ಗಳಲ್ಲೂ ಚಿಹೂಲಿ ವಸ್ತುಪ್ರದರ್ಶನಗಳ ಘಟಕಗಳಿವೆ. ಸಿಂಗಾಪುರ, ಜರ್ಮನಿ, ಜಪಾನ್ ದೇಶಗಳಲ್ಲಿ ನಿಯಮಿತವಾಗಿ ಅವರು ಪ್ರದರ್ಶನ, ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ.

ಡೇಲ್ ಚಿಹೂಲಿಯವರದ್ದೇ ಒಂದು ಸಾಹಸಮಯ ರೋಚಕ ಕಥೆ. ಬಾಲ್ಯದಲ್ಲಿ ಎಲ್ಲ ಹುಡುಗರಂತೆ ಸಾಬೂನು ನೀರಿಗೆ ಕೊಳವೆ ಅದ್ದಿ ಊದಿ ಇನ್ನೊಂದು ತುದಿಯಲ್ಲಿ ಗುಳ್ಳೆಗಳು ಏಳುವುದನ್ನು ಕಂಡು ಕುಣಿಯುತ್ತಿದ್ದ. ಸಾಬೂನು ನೀರಿನ ಬದಲು ಕಾವೇರಿ ಕರಗುವ ಗಾಜನ್ನು ಊದಿದರೆ ಹೇಗೆ? ಅಂದಿನಿಂದ ಅಂಟಿದ ಗೀಳು ಚಿಗುರೊಡೆಯಿತು. ಚಿಹೂಲಿ ತಮ್ಮ 24 ನೇ ವಯಸ್ಸಿಗಾಗಲೇ ಗಾಜು ಕಾಯಿಸಿ ಥರಾವರಿ ರೂಪಗಳನ್ನು ಮೂಡಿಸುವ ಹವ್ಯಾಸವನ್ನು ಮೌಲಿಕ ಚಿಂತನೆಗಳ ಮಾಧ್ಯಮವಾಗಿಸಿಕೊಂಡಿದ್ದರು. ಆ ನಿಟ್ಟಿನ ಸತತ ಪ್ರಯೋಗಗಳೇ ಅವರಿಗೆ ಜನ ಮೆಚ್ಚುಗೆ, ಮನ್ನಣೆ ದೊರಕಿಸಿಕೊಟ್ಟವು. ವಿಸ್‌ಕಾನ್ಸಿನ್ ವಿಶ್ವವಿದ್ಯಾನಿಲಯದ ವತಿಯಿಂದ ಚಿಹೂಲಿಗೆ ವಿದ್ಯಾರ್ಥಿ ವೇತನ ದೊರೆಯಿತು. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಯಶಸ್ಸಿನ ಮಜಲುಗಳೇ ಮುಂದೆ. ವೆನಿಸ್‌ಗೆ ಹೋಗಿ ವಿಶೇಷ ಪರಿಣತಿ ಪಡೆದರು. ಲೋಕಸಂಚಾರ ಚಿಹೂಲಿಯ ಬದುಕಿನ ಭಾಗವೇ ಆಯಿತು. ಅರೆ! ಹೀಗೂ ಒಂದು ಕೌಶಲ ಉಂಟೆ ಎಂದು ಜಗತ್ತಿನಾದ್ಯಂತ ಶಿಲ್ಪಕಲಾಲೋಕ ಬೆರಗಾಯಿತು. ಪದವಿ, ಪ್ರಶಸ್ತಿ, ಪುರಸ್ಕಾರಗಳನ್ನಿತ್ತು ಅವರನ್ನು ಗೌರವಿಸಿದ ವಿಶ್ವವಿದ್ಯಾನಿಲಯಗಳಿಗೆ, ಸಂಘ ಸಂಸ್ಥೆಗಳಿಗೆ ಲೆಕ್ಕವಿಲ್ಲ. ಏತನ್ಮಧ್ಯೆ ಆಗಬಾರದ ಅವಘಡ ಆಯಿತು. ಅವರು ಬ್ರಿಟನ್ನಿನ ಪ್ರವಾಸದಲ್ಲಿದ್ದಾಗ ಕಾರು ಅಪಘಾತವಾಗಿ ಅವರ ಎಡಗಣ್ಣು ದೃಷ್ಟಿ ಕಳೆದುಕೊಂಡಿತು. ಆದರೂ ಚಿಹೂಲಿ ಮೂರೇ ವರ್ಷಗಳಲ್ಲಿ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಚೇತರಿಸಿಕೊಂಡು ತಮ್ಮ ಕಲಾತಪಸ್ಸನ್ನು ಮುಂದುವರಿಸಿದರು. ತಮ್ಮ ಕನಸುಗಳಿಂದ ಹಿಂದೆ ಸರಿಯಲಿಲ್ಲ. ಅವರ ಆಪ್ತರು, ಶಿಷ್ಯರು ಅವರಿಗೆ ನೆರವಾದರು. ತಮ್ಮ 77ರ ಇಳಿವಯಸ್ಸಿನಲ್ಲೂ ಚಿಹೂಲಿ ಕ್ರಿಯಾಶೀಲರಾಗಿದ್ದಾರೆ. ಮ್ಯೂಸಿಯಂ ವೀಕ್ಷಿಸಲು ಪ್ರವೇಶ ಶುಲ್ಕವಿದೆ. ಆದರೆ ಭದ್ರತಾದೃಷ್ಟಿಯಿಂದ ಕುಲುಮೆ ಘಟಕಕ್ಕೆ ಪ್ರವೇಶ ನಿಷಿದ್ಧ. ಅದೊಂದು ಯಕ್ಷಲೋಕ. ವಿಸ್ಮಯದ ಎರಕ. ಕಣ್ಣು ಕೋರೈಸುವ ಕಲಾಕೃತಿಗಳು ಕವಿತೆ ಹುಟ್ಟಿಸುತ್ತವೆ.

‘ಗಾಜಿನೊಳು ಬೆಳಕೋ
ಬೆಳಕಿನೊಳು ಗಾಜೋ
ಗಾಜು, ಬೆಳಕು ಎರಡೂ
ನಯನದೊಳಗೋ’

ಗ್ಲಾಸ್ ಮ್ಯೂಸಿಯಂ ಆನಂದಿಸಿ ಹೊರಬಂದಾಗ ‘ಪಗ ಪಗ’ ಸದ್ದು ಕೇಳಿಸುವುದು. ಹಾಗೆ ತಮಾಷೆ ಮಾಡಿಯೇ ‘ಬಸ್ ಕಂ ಬೋಟ್’ ಸಾರಥಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು! ನಿಮ್ಮ ಅಂದಾಜು ಸರಿ. ಅದು ರಸ್ತೆಯಲ್ಲೂ ನೀರಿನಲ್ಲೂ ಸಾಗುವ ವಾಹನ. ನೀವು ನಿಮ್ಮ ಕಾರನ್ನು ಹೀಗೆ ಪ್ರಯೋಗಿಸೀರಿ ಜೋಕೆ ಅಂತ ಆತ ಎಚ್ಚರಿಸಿಯೇ ನಮ್ಮನ್ನು ನೀರಿಗಿಳಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT