ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ‌ಪಬ್ಲಿಕ್ ಸ್ಕೂಲ್ ಯೋಗ

ಎನ್‌.ಆರ್‌.ಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ
Last Updated 3 ಜೂನ್ 2018, 11:59 IST
ಅಕ್ಷರ ಗಾತ್ರ

ನರಸಿಂಹರಾಜಪುರ ತಾಲ್ಲೂಕು ಕೇಂದ್ರದಲ್ಲಿ ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೆರಿಸಲ್ಪಟ್ಟಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನೋತ್ಸವ ಕಂಡ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯು 1889ರಲ್ಲಿ ಪ್ರಾರಂಭವಾಗಿತ್ತು. 2005ರಲ್ಲಿ ಶಾಲೆಯು 115 ವಸಂತಗಳನ್ನು ಪೂರೈಸಿದ ಪ್ರಯುಕ್ತ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ವಿಂಗ್ ಕಮಾಂಡರ್ ಜಿ.ಟಿ.ವರ್ಗೀಸ್ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಜಿ.ಎಸ್.ದೇವದಾಸ್ ಕಾರ್ಯದರ್ಶಿಯಾಗಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ ಶಾಲೆಗೆ ಹೈಟೆಕ್ ಸ್ಪರ್ಶನೀಡಿ ಶತಮಾನೋತ್ಸವ ಆಚರಿಸಲಾಗಿತ್ತು.

ಸಾಕಷ್ಟು ವಿದ್ಯಾರ್ಥಿಗಳ ಉನ್ನತ ಭವಿಷ್ಯ ರೂಪಿಸಲು ಪ್ರೇರಣೆಯಾಗಿದ್ದ ಶಾಲೆ ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಪ್ರತಿ ಹೋಬಳಿಗೆ ಒಂದರಂತೆ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಆಯ್ಕೆಯಾಗಿದೆ. ಪಟ್ಟಣದ ಒಂದೇ ಕ್ಯಾಂಪಸ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು 1ರಿಂದ 12ನೇ ರವರೆಗಿನ ತರಗತಿಗಳನ್ನು ವಿಲೀನಗೊಳಿಸಿ ಪಬ್ಲಿಕ್ ಸ್ಕೂಲ್ ಎಂದು ಪರಿವರ್ತಿಸಲಾಗಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜನ್ನು ಸಮನ್ವಯ ಗೊಳಿಸುವುದು. ಬೋಧನಾ ಸಂಪನ್ಮೂಲವನ್ನು ಮರುಹಂಚಿಕೆ ಮಾಡಿಕೊಳ್ಳುವುದು, ಎಲ್ಲ ಮೂಲ ಸೌಲಭ್ಯಗಳೊಂದಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕಲಿಕಾ ವಾತಾವರಣ ನಿರ್ಮಿಸಿ ಗುಣ ಮಟ್ಟದ ಶಿಕ್ಷಣವನ್ನು ನೀಡುವುದು ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ ಉದ್ದೇಶವಾಗಿದೆ. ‌

ಈ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರು 6 ರಿಂದ 8ನೇ ತರಗತಿವರೆಗೆ, ಪದವಿ ಪೂರ್ವ ಕಾಲೇಜು ಉಪನ್ಯಾಸಕರು 9 ಮತ್ತು 10ನೇ ತರಗತಿಗೂ ಬೋಧಿಸಬಹುದು. ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರು ಪ್ರಾಥಮಿಕ ಶಾಲೆಗೂ ದೈಹಿಕ ಶಿಕ್ಷಣವನ್ನು ಬೋಧಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಶಾಲಾ ಕೊಠಡಿ, ವಿಜ್ಞಾನ ಪ್ರಯೋಗಶಾಲೆ, ಕಂಪ್ಯೂಟರ್ ಪ್ರಯೋಗ ಶಾಲೆ, ಗ್ರಂಥಾಲಯ, ಪ್ರತ್ಯೇಕ ಪ್ರಾಂಶುಪಾಲರ ಕೊಠಡಿ, ಶಿಕ್ಷಕರ ಕೊಠಡಿ, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ಯತೇಕ ಶೌಚಾಲಯ, ಆಟದ ಮೈದಾನ ಶುದ್ಧ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣ, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಪೂರ್ಣ ಪ್ರಮಾಣದಲ್ಲಿ ಕಚೇರಿ ಸಿಬ್ಬಂದಿ ಸೌಲಭ್ಯ ಒದಗಿಸುವುದು ಈ ಯೋಜನೆ ಒಳಗೊಂಡಿದೆ.

ಶೌಚಾಲಯ ನಿರ್ವಹಣೆ ಮತ್ತು ಕುಡಿಯುವ ನೀರಿನ ನಿರ್ವಹಣೆ, ಪ್ರಯೋಗಾಲಯ ನಿರ್ವಹಣೆಗೆ ಈಗಾಗಲೇ ನಿಗದಿಪಡಿಸಿರುವ ಅನುದಾನದೊಂದಿಗೆ ₹5ಲಕ್ಷ ಅನುದಾನವನ್ನು ಹೆಚ್ಚುವರಿಯಾಗಿ ಪಬ್ಲಿಕ್ ಸ್ಕೂಲ್ ಗೆ ಸರ್ಕಾರ ನೀಡಲಿದೆ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯಸ್ಥರಾಗಿರುತ್ತಾರೆ. ವೇತನದ ಡ್ರಾಯಿಂಗ್ ಅಧಿಕಾರಿಯೂ ಸಹ ಇವರಾಗಿರುತ್ತಾರೆ. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಉಪಪ್ರಾಂಶುಪಾಲರು ಮುಖ್ಯಸ್ಥರಿಗೆ ಆಡಳಿತ ವಿಚಾರದಲ್ಲಿ ಸಹಾಯ ಮಾಡುವುದರ ಜತೆಗೆ ಅಕ್ಷರ ದಾಸೋಹದ ನಿರ್ವಣೆಯನ್ನು ಮಾಡಬೇಕಾಗುತ್ತದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರದ ನೂತನ ಯೋಜನೆಯಾಗಿದೆ.

1ರಿಂದ 12ತರಗತಿವರೆಗೆ ಶಿಕ್ಷಕ ಸಂಪನ್ಮೂಲವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ದೇಶವಾಗಿದೆ. ಸರ್ಕಾರ ಕಳೆದ ಜನವರಿ 5ರಂದು ಈ ಶಾಲೆ ಪ್ರಾರಂಭಕ್ಕೆ ಆದೇಶ ಹೊರಡಿಸಿ ₹5ಲಕ್ಷ ಅನುದಾನವನ್ನು ನೀಡಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಇದರು ಕಾರ್ಯಾರಂಭ ಮಾಡಲಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್.

‘ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 1ರಿಂದ 12ತರಗತಿಯನ್ನು ಒಂದೇ ಸೂರಿನಡಿಗೆ ತಂದು ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಉದ್ದೇಶವಾಗಿದೆ. ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ.

ಕರ್ನಾಟಕ ಪಬ್ಬಿಕ್ ಸ್ಕೂಲ್ ಇದೇ ತಿಂಗಳ 15ರಿಂದ ಕಾರ್ಯಾರಂಭ ಮಾಡಲಿದ್ದು, ಒಂದೇ ಶಾಲಾ, ಕಾಲೇಜು ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು ಇದರ ರೂಪು ರೇಷೆ ಯಾವರೀತಿ ಇರಬೇಕು ಎಂದು ಸರ್ಕಾರ ಮಾರ್ಗದರ್ಶನ ನೀಡಲಿದೆ. ಸದರಿ ಕರ್ನಾಟಕ ಸ್ಕೂಲ್ ವ್ಯಾಪ್ತಿಗೆ ಪ್ರಾಥಮಿಕ ಶಾಲೆಯ 13 ಶಿಕ್ಷಕರು, ಸರ್ಕಾರಿ ಪ್ರೌಢಶಾಲೆಯ 15 ಶಿಕ್ಷಕರು, ಪದವಿಪೂರ್ವ ಕಾಲೇಜಿನ 12 ಉಪನ್ಯಾಸಕರು ಇರುತ್ತಾರೆ. ಪ್ರಾಥಮಿಕ ಶಾಲೆಯ 310, ಪ್ರೌಢಶಾಲೆಯ 400 ಹಾಗೂ ಪದವಿಪೂರ್ವ ಕಾಲೇಜಿನ 300ಕ್ಕೂ ಹೆಚ್ಚು ಮಕ್ಕಳು ಒಳಪಡಲಿದ್ದು ಖಾಸಗಿ ಶಾಲಾ, ಕಾಲೇಜು ರೀತಿಯಲ್ಲಿಯೇ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಗುಣಮಟ್ಟದ ಶಿಕ್ಷಣದ ಸೌಲಭ್ಯ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT