ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಮತ ನೋಡದೆ ಬೆಂಬಲಿಸಿ

ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣಾ‌ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮನವಿ
Last Updated 4 ಜೂನ್ 2018, 9:17 IST
ಅಕ್ಷರ ಗಾತ್ರ

ತುಮಕೂರು: ‘ಶಿಕ್ಷಕರ ಸಮಸ್ಯೆ ಪರಿಹಾರ ಮತ್ತು ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಅವರು ಹಿಂದಿನ ಎರಡು ಅವಧಿಯಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. ಶಿಕ್ಷಕ ಸಮುದಾಯದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು, ಮೂರನೇ ಬಾರಿಯೂ ಅವರನ್ನು ಆಯ್ಕೆ ಮಾಡಿ ಸೇವೆಗೆ ಅವಕಾಶ ಮಾಡಿಕೊಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ನಗರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಇದು ಪ್ರಜ್ಞಾವಂತರ ಚುನಾವಣೆ. ಹೀಗಾಗಿ, ಯಾವುದೇ ಜಾತಿ, ಮತ, ಕುಲ, ಗೋತ್ರ ನೋಡದೆ ನಾರಾಯಣಸ್ವಾಮಿ ಬೆಂಬಲಿಸಬೇಕು. ಕ್ಷೇತ್ರದಲ್ಲಿ 19,400 ಮತದಾರರಿದ್ದು, ಕನಿಷ್ಠ 13 ಸಾವಿರ ಮೊದಲ ಪ್ರಾಶಸ್ತ್ಯದ ಮತಗಳು ನಮ್ಮ ಅಭ್ಯರ್ಥಿಗೆ‌‌ ನೀಡಬೇಕು’ ಎಂದು ಹೇಳಿದರು.

‘ನಾರಾಯಣಸ್ವಾಮಿ ಅವರು ಗೆಲುವು ಸಾಧಿಸಿದರೆ ಇಡೀ ಬಿಜೆಪಿಯೇ ಗೆದ್ದಂತೆ. ಶಿಕ್ಷಕರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅವರನ್ನು ಬೆಂಬಲಿಸಬೇಕು’ ಎಂದು ಕೋರಿದರು.

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 6 ವೈದ್ಯಕೀಯ, 11 ಎಂಜಿನಿಯರಿಂಗ್ ಕಾಲೇಜು ಆರಂಭವಾಗಿವೆ. 45 ಸಾವಿರ ಶಿಕ್ಷಕರ ನೇಮಕಾತಿ, 18 ಸಾವಿರ ಶಿಕ್ಷಕರನ್ನು ಅನುದಾನಕ್ಕೊಳಪಡಿಸಿದ್ದು ಸೇರಿದಂತೆ ಅನೇಕ ಮಹತ್ವ ಕಾರ್ಯಗಳನ್ನು ಮಾಡಿದೆ. ಇದೆಲ್ಲವನ್ನೂ ಗಮನಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಹಿರಿಯ ಮುಖಂಡ ಜಿ.ಎಸ್.ಬಸವರಾಜ್ ಮಾತನಾಡಿ, ‘ಈ ಚುನಾವಣೆಯ ಅಭ್ಯರ್ಥಿ ನಾರಾಯಣಸ್ವಾಮಿ ಅಲ್ಲ. ಯಡಿಯೂರಪ್ಪ ಅವರೇ ಅಭ್ಯರ್ಥಿ ಎಂದು ಭಾವಿಸಿ ಬೆಂಬಲಿಸಬೇಕು. ಶಿಕ್ಷಕರು ಯಡಿಯೂರಪ್ಪ ಅವರ ಮುಖ ನೋಡಿ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ‘ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಜೆಪಿ ಅಭ್ಯರ್ಥಿಗಳ ಕ್ಷೇತ್ರ. ನಾರಾಯಣಸ್ವಾಮಿ ಸತತ ಗೆಲುವು ಕಂಡ ಕ್ಷೇತ್ರ. ಅವರ ಕೆಲಸ ಕಾರ್ಯಗಳನ್ನು ಕಂಡಿರುವ ಶಿಕ್ಷಕರು ಈ ಬಾರಿಯೂ ಅವರಿಗೆ ಬೆಂಬಲ ನೀಡಿ’ ಎಂದು ಕೋರಿದರು.

‘ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಗಿದೆ. ಅವರು ಮುಖ್ಯಮಂತ್ರಿ ಆದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ವಾಗುತ್ತದೆ’ ಎಂದು ತಿಳಿಸಿದರು.

ಮುಖಂಡ ಪೆಪ್ಸಿ ಬಸವರಾಜ್ ಮಾತನಾಡಿ, ‘ಕಳೆದ ಬಾರಿ ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ದುರದೃಷ್ಟವಶಾತ್ ಸೋಲಾಯಿತು. ಈ ಬಾರಿ ಅಂತಹ ಫಲಿತಾಂಶ ಮರುಕಳಿಸುವುದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ‘ಜಿಲ್ಲೆಯಲ್ಲಿ 6,500 ಮತದಾರರಿದ್ದಾರೆ. ತುಮಕೂರು ನಗರದಲ್ಲಿಯೇ 2,700 ಮತದಾರರಿದ್ದಾರೆ.  ಹೀಗಾಗಿ, ಗರಿಷ್ಠ ಮತಗಳು ಈ ಜಿಲ್ಲೆಯಿಂದಲೇ ಲಭಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿದರು. ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಡಿ.ಕೃಷ್ಣಕುಮಾರ್, ಎಸ್.ಆರ್.ಗೌಡ, ಬಾವಿಕಟ್ಟೆ ನಾಗಣ್ಣ, ಸಂದೀಪ್, ವೃಷಭೇಂದ್ರಸ್ವಾಮಿ, ಕೊಪ್ಪಲ್ ನಾಗರಾಜ್, ಹೆಬ್ಬಾಕ ರವಿಶಂಕರ್ ಇದ್ದರು.

ಬಿಜೆಪಿ ಸರ್ಕಾರದಲ್ಲಿ ಹಲವು ಕೊಡುಗೆ

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವಿಶೇಷವಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 4 ಮತ್ತು 5ನೇ ವೇತನ ಆಯೋಗ ವರದಿ ಜಾರಿ ಮಾಡಿ ಶಿಕ್ಷಕರಿಗೆ ನೆರವಾಗಿದ್ದಾರೆ’ ಎಂದು ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ವಿವರಿಸಿದರು.

‘ಶಿಕ್ಷಕರ ಹುದ್ದೆ ಸೃಷ್ಟಿ, ಖಾಲಿ ಹುದ್ದೆಗಳ ಶೀಘ್ರ ನೇಮಕ, ಹೊಸದಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಇದ್ದ ಎಡರು ತೊಡರುಗಳ ನಿವಾರಣೆ, ಭ್ರಷ್ಟಾಚಾರ ತಡೆಗೆ ನೇರ ನೇಮಕಾತಿ ಪದ್ಧತಿ ಜಾರಿ ಮುಂತಾದವು ಬಿಜೆಪಿ ಸರ್ಕಾರದ ಕೊಡುಗೆಗಳು' ಎಂದು ಹೇಳಿದರು.

‘ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ಈ ಸಭೆಗೆ ಶಿಕ್ಷಕರು ಬರುವುದನ್ನು ತಡೆಯಲು ಪ್ರಯತ್ನಿಸಿದ್ದರು. ಆದರೂ ಶಿಕ್ಷಕರು ಬಂದಿರುವುದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ನುಡಿದರು.

ನಾರಾಯಣಸ್ವಾಮಿ ಗೆದ್ದರೆ ಲೇಪಾಕ್ಷಿ ಗೆದ್ದಂತೆ

‘ಕ್ಷೇತ್ರಕ್ಕೆ ಮೊದಲು ನಮ್ಮ ಪಕ್ಷದಿಂದ ಹಾಲನೂರು ಲೇಪಾಕ್ಷಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಕಾರಣಾಂತರಗಳಿಂದ ನಾರಾಯಣಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಲೇಪಾಕ್ಷಿ ಅವರೊಂದಿಗೆ ಒಂದೆರಡು ಬಾರಿ ಚರ್ಚಿಸಿಯೇ ಈ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ’ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

‘ಲೇಪಾಕ್ಷಿ ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮತದಾರರನ್ನು ಭೇಟಿ ಮಾಡಿ ಹಣ, ಸಮಯ ವ್ಯಯ ಮಾಡಿದ್ದಾರೆ. ನಾರಾಯಣಸ್ವಾಮಿ ಗೆದ್ದರೆ ಅದು ಲೇಪಾಕ್ಷಿ ಅವರದ್ದೇ ಗೆಲುವು ಎಂದು ನಾನು ಭಾವಿಸುತ್ತೇನೆ’ ಎಂದರು ತಿಳಿಸಿದರು.

ಲೇಪಾಕ್ಷಿ ಗೈರು

ಹಾಲನೂರು ಲೇಪಾಕ್ಷಿ ಪ್ರಚಾರ ಸಭೆಗೆ ಗೈರಾಗಿದ್ದರು. ಬಹುತೇಕ ಮುಖಂಡರು ಲೇಪಾಕ್ಷಿ ಅವರ ಹೆಸರನ್ನು ಪ್ರಸ್ತಾಪಿಸಿದರು. ‘ಅನಾರೋಗ್ಯ ನಿಮಿತ್ತ ಅವರು ಸಭೆಗೆ ಬಂದಿಲ್ಲ’ ಎಂದು ಮುಖಂಡರೊಬ್ಬರು ಸಭೆ ಬಳಿಕ ತಿಳಿಸಿದರು. ಆದರೆ ನಾಲ್ಕೈದು ತಿಂಗಳು ಪ್ರಚಾರ ಸಹ ನಡೆಸಿ ಹುಮ್ಮಸ್ಸಿನಲ್ಲಿದ್ದ ಲೇಪಾಕ್ಷಿ ಅವರಿಂದ ಟಿಕೆಟ್ ವಾಪಸ್ ಪಡೆದಿರುವುದೇ ಅವರ ಗೈರಿಗೆ ಕಾರಣ ಎನ್ನುವುದು ಪಕ್ಷದ ಆಂತರಿಕ ವಲಯದ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT