ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ನಿಷೇಧಿಸಿ ಕೆಆರ್‌ಎಸ್‌ ಸಂರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

ಶಾಶ್ವತವಾಗಿ ನಿಷೇಧ ಹೇರಲು ಕರವೇ ಒತ್ತಾಯ
Last Updated 29 ಸೆಪ್ಟೆಂಬರ್ 2018, 13:19 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಗಾಂಧಿ ಭವನದಿಂದ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಸರ್‌.ಎಂ.ವಿ ಪ್ರತಿಮೆ ಎದುರು ಸೇರಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅರಮನೆಯ ಆಭರಣ ಮಾರಾಟ ಮಾಡಿ, ಖಜಾನೆಯನ್ನು ಖಾಲಿ ಮಾಡಿ ಕನ್ನಂಬಾಡಿ ಕಟ್ಟೆ ಕಟ್ಟಿಸಿದ್ದಾರೆ. ಆದರೆ ಇಂದು ಸ್ವಾರ್ಥಿಗಳು ಐತಿಹಾಸಿಕ ಜಲಾಶಯಕ್ಕೆ ಅಪಾಯ ತಂದೊಡ್ಡಿದ್ದಾರೆ. ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನೆಲ್ಲೆಡೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಧಕ್ಕೆಯಾಗುತ್ತಿದೆ ಎಂದು ವರದಿ ಬಂದಿದ್ದರೂ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೇಬಿಬೆಟ್ಟ ಕಾವಲು, ಬನ್ನಂಗಾಡಿ, ಹೊನಗಾನಹಳ್ಳಿ ಮುಂತಾದೆಡೆ ಅಕ್ರಮವಾಗಿ ಕಲ್ಲು ಗಣಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಗಣಿ ಮಾಲೀಕರು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಅತ್ಯಾಧುನಿಕ ಬೋರ್‌ ಕುಳಿ ತೋಡಿ ಕಲ್ಲು ಸ್ಫೋಟ ಮಾಡುತ್ತಿದ್ದಾರೆ. ಇದರಿಂದ ಸಮೀಪದ ಹಳ್ಳಿಗಳಲ್ಲಿ ವಾಸಿಸುವ ಜನರ ಜೀವನ ಆತಂಕದ ಸ್ಥಿತಿಯಲ್ಲಿದೆ. ಭೂಮಿ ನಡುಗಿಸುವಂತಹ ಸ್ಫೋಟ ಮಾಡುತ್ತಿದ್ದಾರೆ. ಇಂತಹ ಸ್ಫೋಟದಿಂದ ಭೂಕಂಪ ಉಂಟಾಗುವ ಸಾಧ್ಯತೆ ಇದೆ ಎಂಬ ವರದಿಯೂ ಬಂದಿದೆ. ಇಷ್ಟಾದರೂ ಗಣಗಾಗಿಕೆ ನಡೆಯುತ್ತಿರುವುದು ದುರದೃಷ್ಟಕರ ಎಂದು ದೂರಿದರು.

ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಶ್ರೀರಂಗಪಟ್ಟಣ ಡಿವೈಎಸ್‌ಪಿ ಅವರು ನೀಡಿರುವ ವರದಿಯಲ್ಲಿ ಕೆಆರ್‌ಎಸ್‌ಗೆ ಉಂಟಾಗುತ್ತಿರುವ ಅಪಾಯದ ಬಗ್ಗೆ ಗಮನ ಸೆಳೆದಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕುಡಿಯುವ ನೀರು ಮಲಿನಗೊಳ್ಳುತ್ತಿದೆ. ಅಕ್ಕಪಕ್ಕದ ಕೃಷಿ ಭೂಮಿ ಬಂಜರಾಗುತ್ತಿದೆ. ರಾತ್ರಿ ವೇಳೆ ಕಲ್ಲು ಸ್ಫೋಟ ನಡೆಸುತ್ತಿರುವ ಕಾರಣ ಜನರು ನಿದ್ದೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಜಾನುವಾರು ಕೂಡ ಬೆದರಿ ಓಡುತ್ತಿವೆ. ಗಣಿ ದೂಳಿನಿಂದ ಹಳ್ಳಿ ಜನರು ಜೀವನ ಮಾಡಲು ಕಷ್ಟವಾಗಿದೆ. ಇಷ್ಟಾದರೂ ಗಣಿ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಕೆಆರ್‌ಎಸ್‌ಗೆ ಧಕ್ಕೆಯಾಗುತ್ತಿರುವ ಬಗ್ಗೆ ವಿಜ್ಞಾನಿಗಳು ವರದಿ ನೀಡಿರುವ ಹಿನ್ನೆಲೆಯಲ್ಲಿ ಈಗ ಜಿಲ್ಲಾಧಿಕಾರಿಗಳು ಗಣಿಗಾರಿಕೆ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಿದ್ದಾರೆ. ನಿಷೇಧದ ನಡೆವೆಯೂ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಕೂಡಲೇ ಪೊಲೀಸರು ಗಣಿ ಸ್ಥಗಿತಗೊಳಿಸಬೇಕು. ಜಲಾಶಯವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಡಿ.ಜಯರಾಮು, ಕಾರ್ಯಕರ್ತರಾದ ಪ್ರಕಾಶ್‌, ಟಿ.ಕೆ.ಸೋಮಶೇಖರ್‌, ಪಿ.ಎ.ಜೋಸೆಫ್‌, ಎಸ್‌.ವೆಂಕಟೇಶ್‌, ಎಸ್‌.ಪುಟ್ಟಸ್ವಾಮಿ, ಕಾಳೇಗೌಡ, ನಿಂಗೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT