ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಕ್ಷ ಸಂತತಿ ಹೆಚ್ಚಿಸಲು ಯುವಕರ ಪಣ

ಕಲ್ಪವೃಕ್ಷ ಸೇವಾ ಟ್ರಸ್ಟ್‌ನಿಂದ ನಾನ್ ಟಾರ್ಗೆಟ್ ಅಭಿಯಾನl ಎಲ್ಲ ಬಡಾವಣೆಗಳಲ್ಲೂ ಗಿಡ ನೆಡಲು ತೀರ್ಮಾನ
Last Updated 4 ಜೂನ್ 2018, 12:04 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಒಂದು ಅಪೇ ವಾಹನದ ತುಂಬಾ ಸಸಿಗಳು. ಮತ್ತೊಂದರಲ್ಲಿ ನೀರಿನ ಎರಡು ಡ್ರಮ್‌ಗಳು. ಜತೆಗೆ ಹಾರೆ, ಗುದ್ದಲಿ, ಸಲಾಕೆಯೊಂದಿಗೆ ವಿವಿಧೆಡೆ ಹೊರಡುವ ತಂಡವೊಂದು ಗಿಡಗಳನ್ನು ನೆಡುವ ಕಾಯಕಕ್ಕೆ ಕೈ ಹಾಕಿದೆ’...

‘ನಗರ ವ್ಯಾಪ್ತಿಯಲ್ಲಿ ಪ್ರತಿ ಭಾನುವಾರ ಗಿಡ ನೆಡುವುದಷ್ಟೇ ನಮ್ಮ ಕೆಲಸವಲ್ಲ. ಸ್ವತಃ ನಾವೇ ಅವುಗಳಿಗೆ ನೀರೆರೆಯುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ನೆಟ್ಟ ಗಿಡವೂ ಮರವಾಗಿ, ಹೆಮ್ಮರವಾಗಿ ಬೆಳೆದು ನೆರಳು ನೀಡುವವರೆಗೂ ಪೋಷಿಸುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಕಲ್ಪವೃಕ್ಷ ಸೇವಾ ಟ್ರಸ್ಟ್‌ ತಂಡದವರು.

‘ನಮ್ಮ ಸೇವಾ ಟ್ರಸ್ಟ್ ಈಗಷ್ಟೇ ಉದ್ಘಾಟನೆಗೊಂಡಿದ್ದು, ಇದೇ ಮೊದಲ ಬಾರಿ ಇಲ್ಲಿನ ಎಲ್ಲ ಬಡಾವಣೆಗಳಲ್ಲಿಯೂ ಗಿಡಗಳನ್ನು ನೆಡಲು ತೀರ್ಮಾನಿಸಿದ್ದೇವೆ. ಅವುಗಳಿಗೆ ನೀರುಣಿಸಲು ಕೆಲ ಕೊಳವೆ ಬಾವಿಗಳ ಆಶ್ರಯ ಪಡೆದಿದ್ದೇವೆ. ಸುಮಾರು 20 ಮಂದಿಯ ತಂಡ ಪ್ರತಿ ಭಾನುವಾರ ಮೋಜಿಗಾಗಿ ಸಮಯ ಮೀಸಲಿಡದೆ, ಒಂದು ಉತ್ತಮ ಕಾರ್ಯಕ್ಕಾಗಿ ಒಂದೆಡೆ ಸೇರಿಕೊಂಡು ನಿರಂತರವಾಗಿ ವಾರಕ್ಕೊಮ್ಮೆ ಈ ಕೆಲಸ ಮಾಡುತ್ತೇವೆ’ ಎನ್ನುತ್ತಾರೆ ಟ್ರಸ್ಟ್ ಸದಸ್ಯ ರಂಗನಾಥ್.

‘ಚಿತ್ರದುರ್ಗದಲ್ಲಿ ಕೆಲ ವರ್ಷಗಳಿಂದ ರಸ್ತೆ ವಿಸ್ತರಣೆ ನೆಪದಲ್ಲಿ ನೂರಾರು ಮರಗಳನ್ನು ಕಡಿಯಲಾಯಿತು. ಈ ಕಾರಣದಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ನೆರಳು ನೀಡುತ್ತಿದ್ದ ಮರಗಳು ಇಲ್ಲವಾಗಿವೆ. ಅದಕ್ಕಾಗಿ ಗಿಡಗಳನ್ನು ನೆಟ್ಟು ಒಂದಿಷ್ಟು ಹಸಿರು ವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.

‘ಪರಿಸರ ಉಳಿಯಬೇಕಾದರೆ, ಮರ – ಗಿಡಗಳಿರಬೇಕು. ಇದರಿಂದ ಪ್ರತಿ ಜೀವಿಗೂ ಶುದ್ಧ ಗಾಳಿ ದೊರೆಯುತ್ತದೆ. ಕಾಲಕ್ಕೆ ತಕ್ಕಂತೆ ಮಳೆಯಾಗುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ಗಿಡಗಳನ್ನು ಹಾಕುತ್ತಿದ್ದೇವೆ. ಹಳೆ ಮಾಧ್ಯಮಿಕ ಶಾಲಾ ಆವರಣದ ಸುತ್ತ, ಹೊಳಲ್ಕೆರೆ ರಸ್ತೆ ಹಾಗೂ ಯಾವ ಉದ್ಯಾನಗಳಲ್ಲಿ ಗಿಡಗಳಿಲ್ಲವೋ ಅಲ್ಲಿ ಸಸಿ ನೆಡುತ್ತೇವೆ. ತಂಡದ ಯಾವೊಬ್ಬರೂ ವೈಯಕ್ತಿಕ ಹಿತಾಸಕ್ತಿ ಇಲ್ಲದೆ, ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಸದಸ್ಯ ರುದ್ರೇಶ್.

ಹಳ್ಳಿಗಳಲ್ಲೂ ಗಿಡ ನೆಡುವ ಚಿಂತನೆ: ‘ನಾವು ಅಂದುಕೊಂಡಂತೆ ನಗರ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ಪೂರ್ಣಗೊಂಡ ನಂತರ, ಅರಣ್ಯ ಪ್ರದೇಶದಲ್ಲಿ ಇಲಾಖೆಯ ಅನುಮತಿ ಪಡೆದು ಪ್ರಾಣಿ – ಪಕ್ಷಿಗಳಿಗೆ ಆಹಾರವಾಗುವಂಥ ಹಣ್ಣಿನ ಮರಗಳನ್ನು ಬೆಳೆಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ನಾವು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಗಿಡ ನೆಡುತ್ತೇವೆ. ಹಳ್ಳಿಗಳಲ್ಲಿ ಮನೆ ಮುಂದೆ ಗಿಡ ನೆಟ್ಟರೆ ಮನೆಯವರೆ ಗಿಡಗಳನ್ನು ಪೋಷಣೆ ಮಾಡುತ್ತಾರೆ. ಅವುಗಳ ಮೇಲ್ವಿಚಾರಣೆ ಜವಾಬ್ದಾರಿ ಮಾತ್ರ ನಮ್ಮದು’ ಎನ್ನುತ್ತಾರೆ ಮತ್ತೊಬ್ಬ ಸದಸ್ಯ ಸಿದ್ದೇಶ್.

ಗಿಡ ನೆಡಲು ನರ್ಸರಿ ಪ್ರಾರಂಭ

‘ಟ್ರಸ್ಟ್‌ನ ಸದಸ್ಯರೆಲ್ಲರೂ ಸೇರಿ ಇಂತಿಷ್ಟು ಹಣ ಹಾಕಿ ನಾವೇ ಸ್ವಂತ ನರ್ಸರಿ ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಎರಡು ಸಾವಿರ ಸಸಿಗಳನ್ನು ಹಾಕಿದ್ದೇವೆ. ಹೊಂಗೆ, ಬೇವು, ನೇರಳೆ ಸಸಿಗಳನ್ನು ಹಾಗೂ ಹೆಚ್ಚಾಗಿ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದೇವೆ. ನಮಗೆ ಅರಣ್ಯ ಇಲಾಖೆ, ಜಾನ್ ಮೈನ್ಸ್‌ನ ಸಹಕಾರ ಕೂಡ ಇದೆ’ ಎನ್ನುತ್ತಾರೆ ಟ್ರಸ್ಟ್‌ನ ಸದಸ್ಯರಾದ ಮಂಜುನಾಥ್, ವೇಣುಗೋಪಾಲ್, ಸಿದ್ದೇಶ್, ವಿಜಯಕುಮಾರ್.

**
ಗಿಡ ನೆಟ್ಟು ಬೆಳೆಸುವುದು ನಿಜಕ್ಕೂ ಉತ್ತಮ ಕಾರ್ಯ. ಪ್ರತಿಯೊಬ್ಬರ ಮನೆ ಮುಂದೆ ಗಿಡಗಳಿದ್ದರೆ, ಸುತ್ತಮುತ್ತಲ ಪರಿಸರವೂ ಚೆಂದವಾಗಿರುತ್ತದೆ
- ಸತೀಶ್, ದೈಹಿಕ ಶಿಕ್ಷಕ, ಡಾನ್ ಬಾಸ್ಕೋ ಶಾಲೆ
**

ಯಾವ ಕೆಲಸವೇ ಆಗಲಿ, ಶ್ರದ್ಧೆ ಮತ್ತು ವಿಶ್ವಾಸವಿಟ್ಟು ಮಾಡಿದಾಗ ಅದರಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ
-ರಂಗನಾಥ್, ಟ್ರಸ್ಟ್‌ನ ಸದಸ್ಯ

ಬೋರೇಶ ಎಂ.ಜೆ.ಬಚ್ಚಬೋರನಹಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT