ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದವಾದ ಮಳೆ: ಬಿತ್ತನೆ ಬಿರುಸು

ಮುಂಗಾರಿಗೂ ಮೊದಲೇ ಕೂರಿಗೆ ಬಿತ್ತನೆ: ಭತ್ತ, ಗೋವಿನಜೋಳದತ್ತ ಚಿತ್ತ
Last Updated 4 ಜೂನ್ 2018, 12:40 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಸಾಂಪ್ರದಾಯಿಕ ಹಾಗೂ ಯಂತ್ರೋಪಕರಣಗಳ ಬಳಕೆಯಿಂದ ರೈತರು ಹೊಲ ಹದಗೊಳಿಸುತ್ತಿದ್ದಾರೆ.

ಅರೆಮಲೆನಾಡಿನ ಪ್ರಮುಖ ಬೆಳೆಯಾದ ಭತ್ತ ಹಾಗೂ ವರುಣನ ಮುನಿಸಿನಲ್ಲಿ ಅನ್ನದಾತನ ಕೈಹಿಡಿಯುವ ಮೆಕ್ಕೆಜೋಳ(ಗೋವಿನಜೋಳ)ದ ಬಿತ್ತನೆ ಕಾರ್ಯ ಮುಂದುವರಿದಿದೆ. ಕೆಲ ದಿನಗಳಿಂದ ಬಿಡುವು ನೀಡಿ ಬರುತ್ತಿರುವ ಮಳೆಯಿಂದ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ.

ಹದಗೊಂಡಿರುವ ಗದ್ದೆಗಳಲ್ಲಿ ನೀರು ಹರಿಯುವ ಮಳೆಗಿಂತ, ಭೂಮಿಯನ್ನು ತಂಪು ಇಡುವ ಮಳೆಯಾದರೆ ಬಿತ್ತನೆಗೆ ಪೂರಕವಾಗಲಿದೆ ಎನ್ನುತ್ತಾರೆ ರೈತರು.

ಮುಂಗಾರಿಗೂ ಮೊದಲೇ ಒಣಕೂರಿಗೆ ಬಿತ್ತನೆ ಮಾಡುವ ರೈತರ ಸಂಖ್ಯೆ ಹೆಚ್ಚಾಗಿದೆ. ಸಾಂಪ್ರದಾಯಿಕ ಬೆಳೆಯಾದ ಭತ್ತವನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ. ಆದರೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ಭತ್ತ ಬೆಳೆಗಾರರು ಕೈಸುಟ್ಟುಕೊಂಡ ನಿದರ್ಶನಗಳಿವೆ. ಕೆಲ ರೈತರು ಮುಂಗಾರು ಆಗಮನ, ಮುಂದೆ ಮಳೆಯ ಸಾಧ್ಯತೆ ಎಲ್ಲವನ್ನು ಲೆಕ್ಕಾಚಾರ ಹಾಕಿ ಬಿತ್ತನೆ ಮಾಡುವ ಆಲೋಚನೆಯಲ್ಲಿದ್ದಾರೆ.

ಪೂಜೆ ಸಲ್ಲಿಕೆ: ಬಿತ್ತನೆ ಪೂರ್ವದಲ್ಲಿ ರೈತ ಕುಟುಂಬಗಳು ಬಿತ್ತನೆ ಬೀಜಗಳನ್ನು ದೇವರಿಗೆ ಅರ್ಪಿಸಿ ಈ ವರ್ಷ ಉತ್ತಮ ಮಳೆಯಾಗಿ, ಸಮೃದ್ಧಿ ಬೆಳೆ ಬರಲಿ ಎಂದು ಪೂಜೆ ಸಲ್ಲಿಸಿ ಬಿತ್ತನೆಗೆ ಅಣಿಯಾಗುತ್ತಾರೆ. ಭೂತಾಯಿಗೆ ನಮಿಸುವ ಅನ್ನದಾತ ಹಸಿರಿನಿಂದ ಕಂಗೊಳಿಸಿ, ಗಟ್ಟಿ ಕಾಳುಗಳಿಂದ ಕಣಜ ತುಂಬಿಸುವಂತೆ ಪ್ರಾರ್ಥಿಸುತ್ತಾನೆ. ವರುಣ ದೇವನಿಗೂ ರೈತ ಕೈ ಮುಗಿದು, ಬಿತ್ತನೆಯಾದ ಗದ್ದೆ ಬಿರಿಯದಂತೆ ಕಾಪಾಡು ಎಂದು ಪ್ರಾರ್ಥಿಸುತ್ತಿದ್ದಾನೆ.

‘ಮೃಗಶಿರ ಮಳೆ ಸೇರುವ ಮುನ್ನ ಬಿತ್ತನೆಯಾದರೆ ಅನುಕೂಲವಾಗುತ್ತದೆ. ಈವರೆಗೆ ಬಿತ್ತನೆ ಕಾರ್ಯ ಉತ್ತಮವಾಗಿ ನಡೆದಿದೆ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.

ತಾಲ್ಲೂಕಿನ ಮುಂಡಗೋಡ ಹಾಗೂ ಪಾಳಾ ಹೋಬಳಿಯಲ್ಲಿ ಇಲ್ಲಿಯವರೆಗೆ ಶೇ15ರಿಂದ 20ರಷ್ಟು ಭತ್ತ, ಶೇ25ರಷ್ಟು ಗೋವಿನಜೋಳ ಬಿತ್ತನೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಗೋವಿನಜೋಳಕ್ಕೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ.

**
ಹದವಾಗಿ ಮಳೆಯಾಗಿದೆ. ಬಿತ್ತನೆಗೆ ವಾತಾವರಣ ಪೂರಕವಾಗಿದೆ. ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. – ಎಂ.ಎಸ್.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ 

ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT