ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಜೀವದ ಜತೆ ಶಿಕ್ಷಣ ಸಂಸ್ಥೆಗಳ ಚೆಲ್ಲಾಟ

ಶಾಲಾ ವಾಹನ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ; ಮಕ್ಕಳನ್ನು ಕುರಿಯಂತೆ ತುಂಬುವ ಆಟೊ ಚಾಲಕರು
Last Updated 4 ಜೂನ್ 2018, 12:54 IST
ಅಕ್ಷರ ಗಾತ್ರ

ಕೋಲಾರ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳಿಗೆ ರೂಪಿಸಿರುವ ಸುರಕ್ಷತಾ ಮಾರ್ಗಸೂಚಿಯು ನಗರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆನೆ ನಡೆದದ್ದೆ ದಾರಿ ಎಂಬಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಗ್ಧ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿವೆ.

ಶಾಲಾ ವಾಹನ ಶುಲ್ಕದ ಸೋಗಿನಲ್ಲಿ ಪೋಷಕರಿಂದ ಸಾವಿರಗಟ್ಟಲೇ ಹಣ ವಸೂಲು ಮಾಡುವ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸಿವೆ. ಹಣ ಉಳಿಸಲು ಕಳ್ಳ ದಾರಿ ಹಿಡಿದಿರುವ ಶಿಕ್ಷಣ ಸಂಸ್ಥೆಗಳು ಸುರಕ್ಷತಾ ಮಾರ್ಗಸೂಚಿ ನಿಯಮಗಳನ್ನು ಗಾಳಿಗೆ ತೂರಿವೆ.

ಮಕ್ಕಳನ್ನು ಕುರಿಗಳಂತೆ ವಾಹನದಲ್ಲಿ ತುಂಬಿಸಿ ಕರೆದೊಯ್ಯುವುದು, ಅತಿ ವೇಗದ ಚಾಲನೆ, ವಾಹನದ ಒಳಾಂಗಣ ವಿನ್ಯಾಸ ಬದಲು, ಅನಾನುಭವಿ ಚಾಲಕರ ನೇಮಕ, ಸುಸ್ಥಿತಿಯಲ್ಲಿರದ ವಾಹನಗಳ ಬಳಕೆ ಸಾಮಾನ್ಯವಾಗಿದೆ.

ನಗರದಲ್ಲಿ ಸದ್ಯ 58 ಖಾಸಗಿ ಹಾಗೂ 12 ಅನುದಾನಿತ ಪ್ರಾಥಮಿಕ ಶಾಲೆಗಳಿವೆ. ಅಲ್ಲದೇ, 28 ಖಾಸಗಿ ಮತ್ತು 6 ಅನುದಾನಿತ ಪ್ರೌಢ ಶಾಲೆಗಳಿವೆ. ಈ ಶಾಲೆಗಳಲ್ಲಿನ ಬಹುಪಾಲು ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹೋಗಿ ಬರಲು ಶಾಲಾ ವಾಹನಗಳನ್ನು ಅವಲಂಬಿಸಿದ್ದಾರೆ. ಬೆರಳೆಣಿಕೆ ಮಕ್ಕಳು ಪೋಷಕರ ಜತೆ ಬೈಕ್‌ ಅಥವಾ ಕಾರುಗಳಲ್ಲಿ ಶಾಲೆಗೆ ಬಂದು ಹೋಗುತ್ತಿದ್ದಾರೆ.

ಶಾಲಾ ವಾಹನ ಶುಲ್ಕ ಹೆಚ್ಚಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಆಟೊಗಳ ಮೊರೆ ಹೋಗಿದ್ದಾರೆ. ಆಟೊಗಳಲ್ಲಿ ಶುಲ್ಕ ಕಡಿಮೆ ಎಂಬುದು ಇದಕ್ಕೆ ಮುಖ್ಯ ಕಾರಣ. ಆದರೆ, ಸುರಕ್ಷತಾ ಮಾರ್ಗಸೂಚಿ ಪ್ರಕಾರ ಆಟೊಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ.

ಜೀವ ಭಯ: ಶಿಕ್ಷಣ ಸಂಸ್ಥೆಗಳು ಸ್ವಂತ ವಾಹನ ಹೊಂದಿದ್ದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು. ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ವಾಹನಗಳನ್ನು ಬಳಕೆ ಮಾಡುತ್ತಿರುವವರು ರಾಜ್ಯ ಸರ್ಕಾರದ ಸುರಕ್ಷತಾ ನಿಯಮಾವಳಿ ಪಾಲಿಸಬೇಕು.

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಶಾಲೆಗಳಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡಿಇಆರ್‌ಎ) ರಚಿಸಲಾಗಿದೆ. ಈ ಸಮಿತಿಯಲ್ಲಿ ಶಿಕ್ಷಣ, ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳಿದ್ದಾರೆ.

ಶಾಲಾ ವಾಹನ ಹಾಗೂ ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದ ವಿಚಾರವು ಸಾರಿಗೆ ಇಲಾಖೆಗೆ ಸಂಬಂಧಿಸಿದ್ದು ಎಂಬುದು ಶಿಕ್ಷಣ ಇಲಾಖೆಯ ನಿಲುವು. ಶಿಕ್ಷಣ ಇಲಾಖೆ ಅಧಿಕಾರಿಗಳು ಸುರಕ್ಷತಾ ಮಾರ್ಗಸೂಚಿ ವಿಚಾರವಾಗಿ ಶಾಲಾ ವಾಹನಗಳ ಮೇಲೆ ಕಣ್ಣಿಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಪೊಲೀಸರು ಶಿಕ್ಷಣ ಹಾಗೂ ಸಾರಿಗೆ ಇಲಾಖೆಯತ್ತ ಬೆಟ್ಟು ತೋರುತ್ತಾರೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸುರಕ್ಷತೆ ಮರೀಚಿಕೆಯಾಗಿದೆ. ಮಕ್ಕಳು ಪ್ರತಿನಿತ್ಯ ಜೀವ ಭಯದ ನಡುವೆ ಶಾಲಾ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

₹ 78 ಸಾವಿರ ದಂಡ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) 2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ಅಂತ್ಯದವರೆಗೆ 73 ಶಾಲಾ ವಾಹನಗಳನ್ನು ತಪಾಸಣೆ ಮಾಡಿ ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ ಸಂಬಂಧ 20 ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, 9 ವಾಹನಗಳನ್ನು ಜಪ್ತಿ ಮಾಡಿ ₹ 78 ಸಾವಿರ ದಂಡ ವಿಧಿಸಿದ್ದಾರೆ. ಆದರೆ, ‘ದಂಡದ ಅಸ್ತ್ರ’ಕ್ಕೂ ಬಗ್ಗದ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಾಣಕುರುಡು ಮುಂದುವರಿಸಿವೆ.

ಸುರಕ್ಷತಾ ಮಾರ್ಗಸೂಚಿ ನಿಯಮಗಳು

*ಶಾಲಾ ವಾಹನಗಳು ಹಳದಿ ಬಣ್ಣದಲ್ಲಿರಬೇಕು. ಹೊರ ಕವಚದ ಮಧ್ಯೆ 150 ಮಿ.ಮೀ ಅಳತೆಯ ಹಸಿರು ಪಟ್ಟಿ ಹಾಕಬೇಕು. ನಾಲ್ಕೂ ಭಾಗದಲ್ಲಿ ಶಾಲಾ ವಾಹನವೆಂದು ಮತ್ತು ಎರಡು ಬದಿಯಲ್ಲಿ ಶಾಲೆಯ ಹೆಸರು ಬರೆಸಿರಬೇಕು.
*ವಾಹನಗಳ ಕಿಟಕಿಗಳಿಗೆ ಅಡ್ಡಲಾಗಿ ಕಬ್ಬಿಣದ ಸಲಾಕೆ (ಗ್ರಿಲ್‌) ಅಳವಡಿಸಿರಬೇಕು ಮತ್ತು ತುರ್ತು ನಿರ್ಗಮನ ಬಾಗಿಲು ಇರಬೇಕು.
*ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಅಗ್ನಿ ನಂದಕ ಸಲಕರಣೆಗಳು ಇರಬೇಕು.
*ವಾಹನಗಳಿಗೆ ಸಿಲಿಂಡರ್‌ ಅಳವಡಿಸಿದ್ದರೆ ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಎಲ್‌ಪಿಜಿ ಸಿಲಿಂಡರ್‌ ಇಟ್ಟಿರುವ ಜಾಗದಲ್ಲಿ ಸೀಟು ಅಳವಡಿಸಬಾರದು.
*ವೇಗ ನಿಯಂತ್ರಕ ಉಪಕರಣ (ಸ್ಪೀಡ್‌ ಗವರ್ನರ್‌) ಅಳವಡಿಸಿರಬೇಕು. 40 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ವಾಹನ ಓಡಿಸಬಾರದು.
*ಸಿ.ಸಿ ಟಿ.ವಿ ಕ್ಯಾಮೆರಾ, ಜಿಪಿಎಸ್‌ ವ್ಯವಸ್ಥೆ ಮತ್ತು ಬಾಗಿಲಿಗೆ ಉತ್ತಮ ಚಿಲಕದ ವ್ಯವಸ್ಥೆ ಇರಬೇಕು.
*ಬ್ಯಾಗ್‌ಗಳನ್ನು ವಾಹನದ ಹೊರಗೆ ನೇತು ಹಾಕಬಾರದು. ಅದಕ್ಕೆ ವಾಹನದಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರಬೇಕು.
* ವಾಹನ ಚಾಲಕರ ಪೂರ್ವಾಪರವನ್ನು ಪೊಲೀಸ್‌ ಇಲಾಖೆ ಮೂಲಕ ಪರಿಶೀಲನೆ ಮಾಡಿಸಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಚಾಲಕರು ಚಾಲನಾ ಪರವಾನಗಿ ಪಡೆದು ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು.
*ವಾಹನಗಳಲ್ಲಿ ಮಹಿಳಾ ಸಿಬ್ಬಂದಿ ಇದ್ದು, ಮಕ್ಕಳನ್ನು ಹತ್ತಿಸಿಕೊಳ್ಳುವಾಗ ಮತ್ತು ಇಳಿಸುವಾಗ ಎಚ್ಚರಿಕೆ ವಹಿಸಬೇಕು. ವಾಹನದ ಮೆಟ್ಟಿಲುಗಳ ಎತ್ತರ ಮಕ್ಕಳಿಗೆ ಎಟುಕುವಂತಿರಬೇಕು.
*15 ವರ್ಷ ಮೀರಿದ ವಾಹನ ಬಳಸುವಂತಿಲ್ಲ.
*ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದು.
* ಮೋಟಾರು ವಾಹನ ಕಾಯಿದೆ 1988ರ ಕಲಂ 74ರ ಪ್ರಕಾರ ವಾಹನ ರಹದಾರಿ ಪತ್ರ ಹೊಂದಿರಬೇಕು.
* ಪ್ರತಿ ಶಾಲೆಯಲ್ಲಿ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸಬೇಕು.
* ಗುರುತಿನ ಚೀಟಿ ತರುವ ಪೋಷಕರ ಕೈಗೆ ಮಾತ್ರ ಮಕ್ಕಳನ್ನು ಒಪ್ಪಿಸಬೇಕು.

ವಂಚನೆ: ಆರೋಪ

ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಾಹನ ಶುಲ್ಕ ರೂಪದಲ್ಲಿ ಸಾವಿರಗಟ್ಟಲೇ ಹಣ ಪಡೆಯುತ್ತವೆ. ಆದರೆ, ಗುಣಮಟ್ಟದ ವಾಹನ ಸೇವೆ ನೀಡದೆ ವಂಚಿಸುತ್ತವೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಮಕ್ಕಳ ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಂಡು ಬೇರೆ ಶಾಲೆಗೆ ಹೋಗುವಂತೆ ಬೆದರಿಸುತ್ತವೆ
– ಸುಬ್ರಮಣಿ, ಪೋಷಕರು
**
ಸುರಕ್ಷತಾ ಮಾರ್ಗಸೂಚಿ ಅನುಷ್ಠಾನದ ಪರಿಶೀಲನೆಗಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತೇವೆ. ಮಾರ್ಗಸೂಚಿ ಉಲ್ಲಂಘಿಸುವ ಶಾಲೆಗಳ ವಿರುದ್ಧ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡುತ್ತೇವೆ
ವಿನಯಾ ಕಾಟೋಕರ್‌,ಪ್ರಾದೇಶಿಕ ಸಾರಿಗೆ ಅಧಿಕಾರಿ
**

ಶಾಲೆಗಳು ಕಾರ್ಖಾನೆಗಳಲ್ಲ. ಪ್ರತಿ ಮಗುವಿನ ಸುರಕ್ಷತೆಯು ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ
ಸ್ವಾಮಿ, ಸಾರ್ವಜನಿಕರ ಶಿಕ್ಷಣ ಇಲಾಖೆ ಉಪ ನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT