ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಪ್ರವಾಸಿಗರಿಂದ ತೋಟದಲ್ಲಿ ಮಾವು ಖರೀದಿ

Last Updated 4 ಜೂನ್ 2018, 12:56 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಕೂತ್ಸಂದ್ರ ಗ್ರಾಮದ ಸಮೀಪ ಮಾವಿನ ತೋಟಕ್ಕೆ ಭಾನುವಾರ ಪ್ರವಾಸ ಬಂದಿದ್ದ ಬೆಂಗಳೂರಿನ ಗ್ರಾಹಕರು ತಾವೇ ಮಾವಿನ ಕಾಯಿ ಕಿತ್ತು ಖರೀದಿಸಿ ಸಂಭ್ರಮಿಸಿದರು.

ತೋಟಗಾರಿಕಾ ಇಲಾಖೆಯ ಮಾವು ಕೀಳುವ ಪ್ರವಾಸ ಕಾರ್ಯಕ್ರಮದಡಿ ಬೆಂಗಳೂರಿನ ನಾಗರಿಕರು ಗ್ರಾಮದ ಬೆಲ್ಲಂ ಶ್ರೀನಿವಾಸರೆಡ್ಡಿ ಅವರ ತೋಟಕ್ಕೆ ಭೇಟಿ ನೀಡಿ, ತೋಟವೆಲ್ಲ ಸುತ್ತಾಡಿ, ತಮಗೆ ಇಷ್ಟವಾದ ವಿವಿಧ ಜಾತಿಯ ಮಾವಿನ ಕಾಯಿ ಕಿತ್ತು ಖರೀದಿಸಿದರು. ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕಾಯಿ ಖರೀದಿಸಿದ ತೃಪ್ತಿ ಅವರಲ್ಲಿ ಕಾಣುತ್ತಿತ್ತು.

ತೋಟಕ್ಕೆ ಬಂದ ಅಪರೂಪದ ಅತಿಥಿಗಳನ್ನು ಮಾಲೀಕ ಬೆಲ್ಲಂ ಶ್ರೀನಿವಾಸರೆಡ್ಡಿ ಸ್ವಾಗತಿಸಿದರು. ಹೊಗಳಗೆರೆ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ಎನ್‌.ಗೋಪಾಲ್‌ ಮಾವಿನ ತಳಿಗಳ ಪರಿಚಯ ಮಾಡಿಕೊಟ್ಟರು. 55 ಪ್ರವಾಸಿಗರು 1,000 ಕೆ.ಜಿ ಮಾವು ಖರೀದಿಸಿದರು.

ಬೆಳೆಗಾರನಿಗೆ ಲಾಭದಾಯಕ ಬೆಲೆಯನ್ನೂ ಕೊಟ್ಟರು. ಬಾದಾಮಿ, ಮಲ್ಲಿಕಾ ತಳಿಯ ಮಾವಿನ ಕಾಯಿ ಕೆ.ಜಿಯೊಂದಕ್ಕೆ ₹ 70, ಬೈಗಾನ್‌ಪಲ್ಲಿ ₹ 56, ತೋತಾಪುರಿ ₹ 26, ರಸಪೂರಿ ₹ 60, ರಾಜಗೀರ ₹ 50, ಅಂಲೇಟ ₹ 50, ಸಕ್ಕರೆ ಗುಟ್ಲ ₹ 100 ರಂತೆ ಖರೀದಿಸಿದರು.

ಬೆಂಗಳೂರಿನ ಮಾರುಕಟ್ಟೆಗೆ ಹೋಲಿಸಿದರೆ ಬೆಲೆ ಹೆಚ್ಚೆನಿಸಲಿಲ್ಲ. ರಾಸಾಯನಿಕ ಪದಾರ್ಥ ಬಳಸಿ ಹಣ್ಣು ಮಾಡಿದ ಕಾಯಿ ಖರೀದಿಸಿ ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ರೈತರಿಂದ ನೇರ ಖರೀದಿ ತೃಪ್ತಿ ತಂದಿದೆ ಎಂದು ಗ್ರಾಹಕ ಚಂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಹಕರು ದೂರದ ಬೆಂಗಳೂರಿನಿಂದ ಬಂದು ತಮಗೆ ಇಷ್ಟವಾದ ಕಾಯಿ ಕಿತ್ತು ಕೊಂಡೊಯ್ಯುವುದು ನಿಜಕ್ಕೂ ಸಂತೋಷ ತಂದಿದೆ. ಇದೊಂದು ಗೌರವಯುತವಾದ ವ್ಯವಹಾರವಾಗಿದ್ದು, ಈ ಯೋಜನೆ ಜಾರಿಗೆ ತಂದಿರುವ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬೆಲ್ಲಂ ಶ್ರೀನಿವಾಸರೆಡ್ಡಿ ಹೇಳಿದರು.

ವಿಶೇಷ ಬಸ್‌ನಲ್ಲಿ ತೋಟಕ್ಕೆ ಬಂದಿದ್ದ ಬೆಂಗಳೂರಿನ ಗ್ರಾಹಕರು ತಾವು ಖರೀದಿಸಿದ ಕಾಯಿಯನ್ನು ಚೀಲಗಳಿಗೆ ತುಂಬಿ ಬಸ್ಸಿನಲ್ಲಿ ಹೇರಿಕೊಂಡು ಹೊರಟರು. ಮುಂದಿನ ವಾರ ಇನ್ನಷ್ಟು ಗ್ರಾಹಕರು ಬರಲಿದ್ದಾರೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT