ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟನೆ: ವಾಹನ ಸವಾರರ ಪರದಾಟ

ನಗರದ ಗಡಿಯಾರ ಕಂಬದಿಂದ ಗವಿಸಿದ್ಧೇಶ್ವರ ಮಠದ ರಸ್ತೆ ನಿರ್ಮಾಣ
Last Updated 4 ಜೂನ್ 2018, 13:03 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಹೃದಯ ಭಾಗವಾದ ಮಾರುಕಟ್ಟೆಯ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಹಾಗೂ ಸುಧಾರಣೆ ಕಾರ್ಯ ವಿಳಂಬದಿಂದ ನಾಗರಿಕರು ಪರದಾಡುವಂತಾಗಿದೆ.

ಗಡಿಯಾರ ಕಂಬದಿಂದ ಗವಿಸಿದ್ಧೇಶ್ವರ ಮಠಕ್ಕೆ ಸಾಗುವ ರಸ್ತೆ ನಿರ್ಮಾಣವಾಗುತ್ತಿದ್ದು, ಕುಂಟುತ್ತಾ ಸಾಗಿದೆ. ಇದರಿಂದ ಬಸ್ ಹಾಗೂ ಲಾರಿಗಳು ಸಂಚರಿಸದೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರ ನಡುವೆ ಜಗಳಕ್ಕೂ ಕಾರಣವಾಗಿವೆ. ರಸ್ತೆ ಅಗೆಯುವ ಪೂರ್ವದಲ್ಲಿಯೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಆಚೆ, ಈಚೆ ಎಂದು ನೆಲವನ್ನು ಅಗೆದು ಬಿಟ್ಟಿದ್ದರಿಂದ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ.

ಒಂದು ಬದಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದರೆ ಅಲ್ಲಿಯೇ ಕೆಲ ಸವಾರರು ವಾಹನಗಳನ್ನು ನಿಲುಗಡೆ ಮಾಡುತ್ತಾರೆ.  ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ. ಸಂಚಾರ ಪೊಲೀಸರೂ ಕೂಡಾ ಈ ಅವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೂ ಹೋಗದೆ ಅಸಹಾಯಕರಾಗಿ ನೋಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಶೀಘ್ರವೇ ಕಾಮಗಾರಿ ಮುಗಿದರೆ ವ್ಯಾಪಾರಸ್ಥರಿಗೂ ಲಾಭ, ಜನರಿಗೂ ಅನುಕೂಲ. ಆದರೆ ರಸ್ತೆ ನಿರ್ಮಾಣವನ್ನೇ ನೆಪ ಮಾಡಿಕೊಂಡು ತಿಂಗಳುಗಟ್ಟಲೆ ಕಾಮಗಾರಿ ನಡೆಯುತ್ತಿದ್ದರೆ, ಅಲ್ಲಿ ವಾಸ ಮಾಡುವ ಜನರ ಕಷ್ಟವಂತೂ ಹೇಳತೀರದು. ನಗರ ಸಾರಿಗೆಯ ಬಸ್‌ಗಳು ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿಯೇ ಇಳಿಸಿ ಮರಳಿ ಬರುತ್ತವೆ. ಪರ ಊರಿನಿಂದ ಬಂದವರಾಗಿದ್ದರೆ ರಸ್ತೆ ತಿಳಿಯದೆ ಪರದಾಡುವ ಪ್ರಸಂಗ ಕೂಡಾ ನಡೆದಿದೆ.

ಮಳೆಯಾದರೆ ಹೊಂಡ: ರಸ್ತೆ ನಿರ್ಮಾಣಕ್ಕೆ ಎಂದು ಅಗೆದ ಪ್ರದೇಶದಲ್ಲಿ ಮಳೆಯಾದರೆ, ಮುಂದೆ ಸಾಗಲು ದಾರಿಯೇ ಕಾಣುವುದಿಲ್ಲ. ಮೂರು ರಿಂದ ನಾಲ್ಕು ಅಡಿ ತೆಗ್ಗು ಇರುವುದರಿಂದ ನೀರು ನಿಲ್ಲುತ್ತದೆ. ಜನರು ಸಂಚರಿಸಲು ಪ್ರಯಾಸ ಪಡುತ್ತಾರೆ.

' ಮೂಲಸೌಕರ್ಯಗಳ ಕೊರತೆ ಕುರಿತು ನಾಗರಿಕರು ನಗರಸಭೆಗೆ ನಿತ್ಯ ದೂರುಗಳ ಪಟ್ಟಿ ನೀಡುತ್ತಾರೆ. ಇದರ ಹೊರತಾಗಿ ರಸ್ತೆ ಗುಣಮಟ್ಟದಿಂದ ಅವಧಿಯೊಳಗೆ ಮುಗಿಸದಿದ್ದರೆ ಹೇಗೆ' ಎಂದು ವ್ಯಾಪಾರಿ ಅರುಣ ಪೂಜಾರಿ ಪ್ರಶ್ನಿಸುತ್ತಾರೆ.

‘ಸ್ಥಳೀಯ ಆಡಳಿತ ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಸಮಸ್ಯೆಗೆ ಧ್ವನಿಯಾದರೆ ಹೆಚ್ಚಿನ ಅನುಕೂಲವಾಗುತ್ತದೆ. ಸಣ್ಣ ವ್ಯಾಪಾರಸ್ಥರಿಗೆ, ಗ್ರಾಮೀಣ ಭಾಗದಿಂದ ಬರುವ ಗ್ರಾಹಕರಿಗೆ, ಸಣ್ಣಪುಟ್ಟ ಬಾಡಿಗೆ ಮೇಲೆ ಜೀವನ ನಡೆಸುವ ಎತ್ತಿನ ಬಂಡಿ, ಹಮಾಲರು, ಟಂಟಂ ಚಾಲಕರಿಗೂ ಉತ್ತಮ ರಸ್ತೆ ನಿರ್ಮಿಸಿದರೆ ಅನುಕೂಲವಾಗುತ್ತದೆ’  ಎಂದು ಕಾರ್ಮಿಕ ಮೈಲಾರಪ್ಪ ಹೇಳುತ್ತಾರೆ.

ಒಳಚರಂಡಿ ನಿರ್ಮಾಣಕ್ಕೆ ಮನವಿ: ಮಾರುಕಟ್ಟೆ ಪ್ರದೇಶವನ್ನಾದರೂ ಸುಸಜ್ಜಿತವಾಗಿ ನಿರ್ಮಿಸಬೇಕಾದ ಕರ್ತವ್ಯ ನಗರಸಭೆಯದ್ದಾಗಿದೆ. ಮಳೆ ನೀರು ಬಂದರೆ ಇಲ್ಲಿನ ಕೆಲವು ವಾಣಿಜ್ಯ ಮಳಿಗೆಗಳು ನೀರಿನಲ್ಲಿ ನಿಂತು ಅಲ್ಲಿರುವ ಅಂಗಡಿಗಳಲ್ಲಿ ಲಕ್ಷಾಂತರ ಸಾಮಗ್ರಿ ಹಾಳಾಗುತ್ತವೆ. ಈ ಕಡೆ ಪರಿಹಾರವಿಲ್ಲದೆ ಪರದಾಡುತ್ತಿರುವ ಅಂಗಡಿ ಮಾಲೀಕರಿಗೆ 'ಅಕ್ರಮವಾಗಿ ಕಟ್ಟಡ ಕಟ್ಟಿದ್ದೀರಿ' ಎಂಬ ಕಾರಣ ನೀಡುತ್ತಾರೆ. ಆದರೆ ಕಟ್ಟಡ ಕಟ್ಟಲು, ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯ ಹೇಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರೆ ನಗರಸಭೆ ಅಧಿಕಾರಿಗಳ ಬಳಿ ಉತ್ತರ ಇಲ್ಲ’ ಎಂದು ವ್ಯಾಪಾರಸ್ಥರು  ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಈ ಎಲ್ಲ ಸಮಸ್ಯೆ ನಿವಾರಣೆಗೆ ಒಳಚರಂಡಿ ನಿರ್ಮಾಣವೊಂದೇ ಪರಿಹಾರ. ಈಗ ಉತ್ತಮ ರಸ್ತೆಯನ್ನು ನಿಧಾನವಾಗಿಯಾದರೂ ನಿರ್ಮಾಣ ಮಾಡುತ್ತಿದ್ದು, ಮತ್ತೆ ಚರಂಡಿಗಾಗಿ ಎಲ್ಲಿ ರಸ್ತೆ ಅಗೆಯುತ್ತಾರೆ ಎಂಬ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಕಾಮಗಾರಿಯನ್ನು ಏಕಕಾಲದಲ್ಲಿ ಗುಣಮಟ್ಟದಿಂದ ಒಮ್ಮೆಲೇ ಮುಗಿಸಿದರೆ ಸ್ವಲ್ಪ ಕಾಲ ನೆನಪಿನಲ್ಲಿಯಾದರೂ ಉಳಿಯುತ್ತದೆ’ ಎಂದು ಹಿರಿಯರಾದ ಗವಿಸಿದ್ದಪ್ಪ ಪಾಟೀಲ ಹೇಳುತ್ತಾರೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಈ ರಸ್ತೆ ನಿರ್ಮಿಸಿ ಎರಡು ವರ್ಷ ನಿರ್ವಹಣೆ ನಂತರ ನಗರಸಭೆಗೆ ಹಸ್ತಾಂತರಿಸಬೇಕಿದೆ. ಉಳಿದಂತೆ ಸ್ವಚ್ಛತೆ ಕಾರ್ಯ ಕೂಡಾ ನಮ್ಮ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಸುನಿಲ್ ಪಾಟೀಲ.

**
ಗವಿಮಠಕ್ಕೆ ಹೋಗಬೇಕೆಂದು ಬಸ್ ಹತ್ತಿ ತೆರಳಿದರೆ ಶಾರದಾ ಟಾಕೀಸ್ ಬಳಿಯೇ ಇಳಿಸಲಾಯಿತು. ಮುಂದೆ ಎಲ್ಲಿಗೆ ಹೋಗಬೇಕು ಎಂಬುವುದೇ ತಿಳಿಯದಾಯಿತು
- ಬಸವರಾಜ, ಸಿಂದಗಿ
**

ನಗರದಲ್ಲಿ ದೂಳು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಕಸ ವಿಲೇವಾರಿ ಸಮಸ್ಯೆ ಸ್ವಲ್ಪ ಕಡಿಮೆಯಾಗಿದ್ದು, ನಾಗರಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ
- ಶಿವಕುಮಾರ ಆಡೂರ, ವಿದ್ಯಾರ್ಥಿ

ಸಿದ್ದನಗೌಡ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT