ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವರಿ ನೋಡಿ ಹಲಸಿನ ಗೆಲ್ಲು

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಹಲಸಿನ ವಾಣಿಜ್ಯ ಕೃಷಿ ದೇಶಕ್ಕೇ ಹೊಸದು. ರಾಜ್ಯದ ಸಾವಿರಗಟ್ಟಲೆ ಹೆಕ್ಟೇರ್ ನಲ್ಲಿ ಈಗ ಹಲಸಿನ ಕ್ರಮಬದ್ಧ ತೋಟಗಳು (ಪ್ಲಾಂಟೇಶನ್) ಏಳುತ್ತಿವೆ. ಅಲ್ಲಿಲ್ಲಿ ಬಿಡಿ ಬಿಡಿಯಾಗಿ ನೆಡುವ ಮತ್ತು ಜಮೀನಿನ ಗಡಿ ಭಾಗದ ಬೆಳೆಯಾಗಿ ಬೆಳೆಸುವ ರೀತಿಗಳಿಗಿಂತ ಇದು ವಿಭಿನ್ನ. ಹಲಸು ಕೃಷಿ ವೈಜ್ಞಾನಿಕ ಪ್ಲಾಂಟೇಶನ್ ರೀತಿಗೆ ಬಡ್ತಿ ಪಡೆದದ್ದು ಇದೇ ಮೊದಲು. ಭಾರತದ ಹಲಸು ಕೃಷಿ ಪ್ಲಾಂಟೇಶನ್ ರೂಪಕ್ಕೆ ತಿರುಗುವುದಕ್ಕೆ ಕನ್ನಡನಾಡೇ ಹರಿಕಾರ!

ಆದರೆ ವಾಣಿಜ್ಯಮಟ್ಟದ ಹಲಸು ಕೃಷಿಗೆ ಅತ್ಯವಶ್ಯವಾದ ಕೆಲವು ಕೃಷಿಕ್ರಮಗಳ ಬಗ್ಗೆ ನಾವಿನ್ನೂ ಗಂಭೀರವಾಗಿ ಚಿಂತಿಸಿಯೇ ಇಲ್ಲ. ಅದರಲ್ಲೊಂದು ಗೆಲ್ಲು (ರೆಂಬೆ ಅಥವಾ ಕೊಂಬೆ) ಸವರುವುದು ಅಥವಾ ಪ್ರೂನಿಂಗ್. ಈವರೆಗೆ ನಮ್ಮ ಯಾವ ಕೃಷಿ ವಿಶ್ವವಿದ್ಯಾಲಯವೂ ಹಲಸು ಕೃಷಿಯಲ್ಲಿ ಪ್ರೂನಿಂಗ್ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ಹೊರತಂದಿಲ್ಲ. ಇದು ಅತಿ ತುರ್ತಾಗಿ ಆಗಬೇಕಾದ ಕೆಲಸ. ವಾಣಿಜ್ಯ ಕೃಷಿ ಮಾತ್ರವಲ್ಲ, ಮುಂದೆ ಮನೆ ಮಟ್ಟಿಗೆ ಒಂದೆರಡು ಹಲಸಿನ ಗಿಡ ನೆಟ್ಟವರೂ ಪ್ರೂನಿಂಗ್ ಮಾಡಲೇಬೇಕು ಎನ್ನುವ ಸ್ಥಿತಿ ಬರಲಿದೆ.

‘ಕೃಷಿಕ ಹಲಸಿನ ವುಡ್ ಮತ್ತು ಫುಡ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕು’ ಎನ್ನುವ ಅರ್ಥಗರ್ಭಿತ ಮಾತೊಂದಿದೆ. ಹಲಸಿನ ವಾಣಿಜ್ಯ ಕೃಷಿ ಯಶಸ್ವಿ ಆಗಬೇಕಾದರೆ ಗೆಲ್ಲು ಸವರುವುದು ಅನಿವಾರ್ಯ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಲಸಿನ ಹೊಸ ತೋಪುಗಳಲ್ಲಿ ಈಚೆಗೆ ಈ ಕ್ರಮವನ್ನು ಅನುಸರಿಸತೊಡಗಿದ್ದಾರೆ. ದಾಪೋಲಿ ಕೃಷಿ ವಿಶ್ವವಿದ್ಯಾಲಯವೂ ಈ ವಿಚಾರಕ್ಕೆ ಗಮನ ಕೊಡಲಾರಂಭಿಸಿದೆ.

‘ಗಿಡ ನೆಟ್ಟು ಆರು ತಿಂಗಳಿಂದಲೇ ಅದನ್ನು ಗಮನಿಸುತ್ತಿರಬೇಕು. ಕಣ್ಣುಕಸಿ (ಬಡ್ಡಿಂಗ್) ಮಾಡಿದ ಗಿಡಗಳಲ್ಲಿ ನೆಲಮಟ್ಟದಲ್ಲೇ ಎರಡು – ಮೂರು ಗೆಲ್ಲು ಮೂಡುತ್ತದೆ. ಇದರಲ್ಲಿ ದೃಢವಾದ ಒಂದು ಗೆಲ್ಲನ್ನು ಉಳಿಸಿ ಉಳಿದದ್ದನ್ನು ಕತ್ತರಿಸಿ ಬಿಡಿ. ಕಸಿ ಗಿಡಗಳಲ್ಲಿ ಈ ಥರ ಆಗೋದು ಕಮ್ಮಿ’, ಪ್ರೂನಿಂಗ್ ವಿಧಾನಗಳ ಬಗ್ಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಲಸು ಬೆಳೆ ತಜ್ಞೆ ಡಾ.ಶ್ಯಾಮಲಮ್ಮ ಮಾತು ಶುರು ಮಾಡುವುದು ಹೀಗೆ.

ಮಾತು ಮುಂದುವರಿಸುವ ಶ್ಯಾಮಲಮ್ಮ ‘ಮುಂದಿನ ದಿನಗಳಲ್ಲಿ, ನೆಲಮಟ್ಟದಿಂದ ಮೂರಡಿ ಮೇಲಿನವರೆಗೆ ಬಂದ ಗೆಲ್ಲುಗಳಿಗೆ ಕತ್ತರಿ ಆಡಿಸಿ. ಇಲ್ಲದೆ ಹೋದರೆ ಮುಂದೆ ಬೆಳೆಯುವ ಹಲಸು ನೆಲ ಸ್ಪರ್ಶಿಸಿ ಹಾಳಾಗುತ್ತದೆ. ಗೆಲ್ಲು ಕತ್ತರಿಸುವಾಗ ಬುಡದಿಂದಲೇ ಕತ್ತರಿಸಬಾರದು. ಅರ್ಧ ಅಡಿ ಬಿಟ್ಟು ಕತ್ತರಿಸಬೇಕು. ಇಲ್ಲದಿದ್ದರೆ ಶಿಲೀಂಧ್ರದ ಆಕ್ರಮಣದಿಂದ ಗಿಡಕ್ಕೆ ಹಾನಿ ಆಗಬಹುದು. ಕತ್ತರಿಸಿದ ಜಾಗಕ್ಕೆ ಕೀಟ-ಶಿಲೀಂಧ್ರ ಹಾವಳಿ ಆಗದಂತೆ ಅದಕ್ಕೆ ಪೇಸ್ಟ್ ಲೇಪಿಸುವುದೂ ಅತ್ಯಗತ್ಯ’ ಎನ್ನುತ್ತಾರೆ.

(ಮಲೇಶ್ಯಾದ ಹಮ್ ದಾನ್ ಮೊಹಮ್ಮದ್ ಅವರ ಗೆಲ್ಲು ಸವರಿದ ಹಲಸಿನ ಗಿಡ (ಚಿತ್ರ : ಹೆಲ್ಯಾಂಟಿ ಹಮ್ ದಾನ್))

ಶ್ಯಾಮಲಮ್ಮ ಅವರ ತಾಂತ್ರಿಕ ಸಲಹೆಗಳು ಹೀಗಿವೆ;

* 40 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 10 ಮಿ.ಲೀ. ಕ್ಲೋರೋಫೈರಿಫಾಸ್, 5 ಮಿ.ಲೀ. ಹೆಕ್ಸಾಕೊನಾಝೋಲ್, 100 ಮಿ.ಲೀ. ನೀರಲ್ಲಿ ಕರಗುವ ಬಿಳಿ ಡಿಸ್ಟೆಂಪರ್ – ಇವನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಗೆಲ್ಲು ಕತ್ತರಿಸಿದ ಭಾಗ ಮತ್ತು ಸ್ವಲ್ಪ ಪಕ್ಕದಲ್ಲಿ ಬ್ರಶ್ ಮೂಲಕ ಲೇಪಿಸಬೇಕು’.

* ನೆಲದಿಂದ ಮೂರಡಿಯ ಮೇಲೆ ಗಿಡದ ಗೆಲ್ಲುಗಳನ್ನು ಬೆಳೆಯಲು ಬಿಡುವಾಗ ಗೆಲ್ಲುಗಳ ನಡುವೆ ಕನಿಷ್ಠ ಒಂದಡಿ ಅಂತರ ಇರುವ ಹಾಗೆ ನೋಡಿಕೊಳ್ಳಬೇಕು. ಕೆಲವರು ಕೆಳಭಾಗದ ಗೆಲ್ಲುಗಳನ್ನೆಲ್ಲಾ ಕತ್ತರಿಸುತ್ತಾ ಹೋಗಿ ಕೊನೆಗೆ ಆರಡಿಯ ನಂತರ ಗೆಲ್ಲು ಬೆಳೆಯಲು ಬಿಟ್ಟುಬಿಡುತ್ತಾರೆ. ಹಾಗೆ ಮಾಡಿದರೆ ಬೆಳೆ ಬರುವ ಹೊತ್ತಿಗೆ ಈ ಗೆಲ್ಲುಗಳು ಕಾಯಿಯ ಭಾರಕ್ಕೆ ಮುರಿದು ಬೀಳುವ ಸಾಧ್ಯತೆಯಿದೆ’. ಇದಕ್ಕೆ ಬದಲು ಎಡೆ (ಅಂತರ) ಬಿಟ್ಟು ಗೆಲ್ಲುಗಳನ್ನು ಬೆಳೆಯಬಿಟ್ಟರೆ ಆ ಗಿಡಕ್ಕೆ ಸ್ಥಿರತೆ ಇರುತ್ತದೆ. ಫಕ್ಕನೆ ಕಾಯಿಯ ಭಾರಕ್ಕೆ ಮುರಿಯುವುದಿಲ್ಲ’.

* ಇನ್ನೊಂದು ಮುಖ್ಯ ಕೆಲಸ ಎತ್ತರಕ್ಕೆ ಬೆಳೆಯುವ ಚಿಗುರ ತುದಿಯನ್ನು ಎಳೆಯದಿದ್ದಾಗಲೇ (ಹಸಿರಾಗಿ ಇದ್ದಾಗಲೇ) ನೆಲದಿಂದ 12 ರಿಂದ 15 ಅಡಿಗೆ ಕತ್ತರಿಸಬೇಕು. ಹೀಗೆ ಮಾಡುವುದರಿಂದ ಮರ ತುಂಬ ಎತ್ತರಕ್ಕೆ ಬೆಳೆದು ಮುಂದೆ ಕೊಯ್ಲು ವೇಳೆ ಸಮಸ್ಯೆಯಾಗುವುದು ತಪ್ಪುತ್ತದೆ. ತುದಿಯ ಕುಡಿ ಬೆಳೆದು ಗಟ್ಟಿಯಾದ ಮೇಲೆ ಕತ್ತರಿಸಿ ಪೇಸ್ಟ್ ಬಳಿಯಬಹುದು. ಆದರೂ ಹಾನಿ ನಿಯಂತ್ರಣ ಸವಾಲಾಗುತ್ತದೆ’.

* ಬದಿಗೆ ಹೋಗುವ ಗೆಲ್ಲುಗಳಿಂದ ಮತ್ತೆ ಹೊರಬರುವ ಚಿಗುರುಗಳನ್ನೂ ಕಾಂಡ ಗೆಲ್ಲು ಮೂಡಿಸಿದ ಜಾಗದಿಂದ ಒಂದಷ್ಟು ದೂರದವರೆಗೆ ಕತ್ತರಿಸಬೇಕು. ಇದರಿಂದಾಗಿ ಮುಂದೆ ಕಾಯಿ ಬಿಡುವ ಜಾಗಕ್ಕೆ ಒಳ್ಳೆ ಬಿಸಿಲು ಬಿದ್ದು ಗಾಳಿಯಾಡಲು ಅವಕಾಶ ಸಿಗುತ್ತದೆ. ಇದನ್ನು ಸೆಂಟ್ರಲ್ ಪ್ರೂನಿಂಗ್ ಎಂದು ಕರೆಯುತ್ತಾರೆ. ಹೀಗೆ ಗೆಲ್ಲುಗಳಿಂದ ಮತ್ತೆ ಉಪಗೆಲ್ಲು ಬಿಡುವ ಅಭ್ಯಾಸ ಜಾತಿಗುಣದ ಮೇಲೆ ಅವಲಂಬಿತವಾಗಿದೆ. ಈ ಸಮಸ್ಯೆ ‘ಸ್ವರ್ಣ’ ಜಾತಿಯ ಹಲಸಿನ ತಳಿಯಲ್ಲಿ ಹೆಚ್ಚು. ‘ಭೈರಚಂದ್ರ’, ‘ಸದಾನಂದ’ ಜಾತಿ ಹಲಸಿನ ತಳಿಗಳಲ್ಲಿ ಈ ಸಮಸ್ಯೆ ಇಲ್ಲ’.

* ಸೆಂಟ್ರಲ್ ಪ್ರೂನಿಂಗಿನಿಂದ ಬೇರೆಯ ಪ್ರಯೋಜನಗಳಿವೆ. ಗೆಲ್ಲು ಸವರಿದ ನಂತರ ಬಿಸಿಲು ಬೀಳುವುದರಿಂದ ಶಿಲೀಂಧ್ರ ಹಾವಳಿ ಕಡಿಮೆ. ಹಲಸು ಹಸಿರು ಹಸಿರಾಗಿ ಮೇಲ್ಮೈ ಮೇಲೆ ಅಲ್ಲಲ್ಲಿ ಕಂದು-ಕಪ್ಪು ಛಾಯೆ ಕೂಡ ಮೂಡುವುದಿಲ್ಲ.

* ಸಕಾಲದಲ್ಲಿ ಗೆಲ್ಲು ಸವರದೆ ಗಿಡವನ್ನು ಎತ್ತರಕ್ಕೆ ಬೆಳೆಯಬಿಟ್ಟೆರೆ, ಎಂಟು – ಹತ್ತು ಅಡಿ ನಂತರ ಅದು ಒಂದೇ ಕಡೆ ಒತ್ತಾಗಿ ಗೆಲ್ಲು ಬೆಳೆಸಿದರೆ ಅಲ್ಲಿ ಕಾಂಡಕೊರಕ ಮತ್ತು ಕಾಯಿಕೊರಕ ಹುಳಗಳ ಕಾಟ ಆರಂಭಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ’.

* ಗೆಲ್ಲು ಸವರಲು ಬೇಸಿಗೆ ಒಳ್ಳೆಯ ಕಾಲ. ಆಗ ಶಿಲೀಂಧ್ರದ ಬಾಧೆ ಕಡಿಮೆ. ಅದು ಗಿಡ ಚಿಗುರುವ ಕಾಲ. ನೀರು ಕೊಡುತ್ತಿದ್ದರಂತೂ ಒಳ್ಳೆ ರೀತಿಯಲ್ಲಿ ಚಿಗುರು ಬರುತ್ತದೆ. ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ‘19 ಆಲ್’ ರಸಗೊಬ್ಬರ ಕೊಡುವುದು ಉತ್ತಮ.

(ಬೆಂಗಳೂರು ಕೃಷಿ ವಿವಿಯಲ್ಲಿ ಪ್ರೂನಿಂಗ್ ಮಾಡಿದ ಹಲಸಿನ ಗಿಡ)

**

ಪ್ರೂನಿಂಗ್ ಟಿಪ್ಸ್...

ಮಲೇಶ್ಯಾದ ಹಮ್‍ದಾನ್ ಮೊಹಮ್ಮದ್ ಸಲ್ಲೇಹ್ ಹಲಸಿನ ವಾಣಿಜ್ಯಮಟ್ಟದ ಕೃಷಿ ಆರಂಭಿಸಿದ್ದು ಈಚೆಗೆ. ಹಮ್‍ದಾನ್ ಹೊಸಬರಿಗೆ ತಿಳಿಸುವ ಪ್ರೂನಿಂಗ್ ಬಗೆ ಕೆಲವು ಸಲಹೆಗಳು ಹೀಗಿವೆ;

* ಗೆಲ್ಲು ಸವರುವುದರ ಮುಖ್ಯ ಉದ್ದೇಶ, ಕೆಳಗೆ ನೆಲದಲ್ಲಿ ನಿಂತುಕೊಂಡೇ ಹಣ್ಣಿನ ಕೊಯ್ಲು ಮಾಡಲು ಸಾಧ್ಯವಾಗಬೇಕು ಎನ್ನುವುದಕ್ಕಾಗಿ.

* ಚಿಗುರಿ ಬರುವ ಅಡ್ಡ ಗೆಲ್ಲುಗಳಲ್ಲಿ ನಾಲ್ಕೈದನ್ನು ಮಾತ್ರ ಉಳಿಸಿ ಉಳಿದವನ್ನು ಕತ್ತರಿಸಿ. ಈ ನಾಲ್ಕೈದನ್ನು ಆಯ್ಕೆ ಮಾಡುವಾಗ ಸುತ್ತ ಸಮನಾಗಿ ಮತ್ತು ಅಡ್ಡವಾಗಿ ಬೆಳೆದವನ್ನೇ ಆಯ್ಕೆ ಮಾಡಿ. ಮೇಲ್ಬದಿಗೆ ಬೆಳೆದವು ಬೇಡ.

* ಅಡ್ದ ಗೆಲ್ಲುಗಳಲ್ಲಿ ಮುಂದಕ್ಕೆ ಬೆಳೆಯುವ ಉಪಶಾಖೆ ಮತ್ತು ಚಿಗುರುಗಳ ಪೈಕಿ ತುದಿಯನ್ನು ಮಾತ್ರ ಬಿಟ್ಟು ಕವಲೊಡೆಯುವ ಭಾಗದಲ್ಲಿರುವುದನ್ನೆಲ್ಲಾ ತೆಗೆದುಬಿಡಿ.

* ಉಳಿಸಿರುವ ಬಿಟ್ಟಿರುವ ನಾಲ್ಕೈದು ಗೆಲ್ಲುಗಳಿಗೆ ಅಡ್ಡಲಾಗಿ (horizontal) ಬೆಳೆಯಲು ಅಭ್ಯಾಸವಾಗುವಂತೆ ಹಗ್ಗ ಹಾಕಿ ಕೆಳಗಡೆ ಎಳೆದು ಕಟ್ಟಿ.

* ಈ ಗೆಲ್ಲುಗಳ ಆರಂಭವಾಗುವ ಜಾಗ ಬೋಳಾಗಿರುವಲ್ಲಿ ಮುಂದೆ ಕಾಣಿಸಿಕೊಳ್ಳುವ ಹೊಸ ಚಿಗುರು ಅಥವಾ ಗೆಲ್ಲುಗಳನ್ನು ಎಳವೆಯಲ್ಲೇ ಕತ್ತರಿಸುತ್ತಿರಿ.

* ಒಮ್ಮೆ ನಿಮ್ಮ ಗಿಡ ಆಕಾರಕ್ಕೆ ಬಂದನಂತರ ಎಳೆದು ಕಟ್ಟಿದ ಹಗ್ಗಗಳನ್ನು ತೆಗೆಯಬಹುದು.

* ಕವಲೊಡೆದ ಭಾಗದಲ್ಲಿ ಗೆಲ್ಲುಗಳನ್ನು ನಾವು ಬೋಳಾಗಿರುವಂತೆ ನಿರ್ವಹಣೆ ಮಾಡಿರುವ ಈ ಭಾಗದಲ್ಲೇ ಗಿಡ ಮುಂದೆ ಹಣ್ಣು ಕೊಡುತ್ತದೆ. ಈ ಗೆಲ್ಲುಗಳು ಮುರಿದು ಬೀಳುವ ಸಾಧ್ಯತೆ ತಪ್ಪಿಸಲು ಗೆಲ್ಲಿನ ತುದಿಯಲ್ಲಿ ಮೂಡಿಬಂದ ಗುಜ್ಜೆ(ಹಲಸಿನ ಕಾಯಿ)ಯನ್ನು ಕಿತ್ತುಬಿಡಬೇಕು.

* ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುಗಳನ್ನು ಉಳಿಸಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT