ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಭಾನುವಾರವೂ ‘ಹಸಿರು ಸೇವೆ’

ವೃತ್ತಿಪರರನ್ನು ಒಳಗೊಂಡಿರುವ ‘ಗ್ರೀನ್‌ ಸೇವಿಯರ್ಸ್‌’ ಸಂಘಟನೆ
Last Updated 5 ಜೂನ್ 2018, 7:21 IST
ಅಕ್ಷರ ಗಾತ್ರ

ಬೆಳಗಾವಿ: ಹಸಿರನ್ನು ಪ್ರೇಮಿಸುವ ಸಮಾನ ಮನಸ್ಕರು ಕಟ್ಟಿಕೊಂಡಿರುವ ‘ಗ್ರೀನ್‌ ಸೇವಿಯರ್ಸ್‌’ ಸಂಘಟನೆಯು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದೆ.

ವೈದ್ಯರು, ವೃತ್ತಿಪರರು, ಉಪನ್ಯಾಸಕರು ಎಂಜಿನಿಯರ್‌ಗಳು ಸೇರಿದಂತೆ ವಿವಿಧ ವೃತ್ತಿಪರರು, ಸರ್ಕಾರಿ ನೌಕರರು, ನಿವೃತ್ತ ನೌಕರರು, ಗೃಹಿಣಿಯರು, ವಿದ್ಯಾರ್ಥಿಗಳು ಮೊದಲಾದವರನ್ನು ಒಳಗೊಂಡಿರುವ ಸಂಘಟನೆಯಿಂದ 2016ರ ಏಪ್ರಿಲ್‌ನಿಂದ ಈವರೆಗೆ 10,974 ಸಸಿಗಳನ್ನು ನೆಡಲಾಗಿದೆ. ಪ್ರತಿ ಭಾನುವಾರ ಶ್ರಮದಾನದ ಮೂಲಕ ಸಸಿಗಳನ್ನು ನೆಡುವ, ಪೋಷಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಈ ನಡೆಸಿಕೊಂಡು ಬರುತ್ತಿದೆ. ಹಸಿರು ಸೇವೆಯೊಂದಿಗೆ ಖುಷಿ ಕಾಣುತ್ತ ಪರಿಸರ ಪ್ರೇಮ ಮೆರೆಯುತ್ತಿರುವ ಕಾರ್ಯ ಗಮನ ಸೆಳೆಯುತ್ತಿದೆ.

ಈ ಸಂಘಟನೆಯ ಕಾರ್ಯವೈಖರಿ ಗಮನಿಸಿದ ಕೆಲವು ಮಂದಿ, ಸ್ವಯಂ ಸ್ಫೂರ್ತಿಯಿಂದ ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಪರಿಸರ ಪ್ರಜ್ಞೆ, ಜಾಗೃತಿ ಮೂಡಿಸುವ ಕೆಲಸವನ್ನು ‘ಹಸಿರು ಸಂರಕ್ಷಕರು’ ಮಾಡುತ್ತಿದ್ದಾರೆ. ತಮ್ಮ ಕೆಲಸವನ್ನು ವಿಶ್ವ ಪರಿಸರ ದಿನಾಚರಣೆ ಅಥವಾ ಭೂಮಿ ದಿನಾಚರಣೆಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೇ, ಪ್ರತಿ ಭಾನುವಾರವೂ ನಡೆಸುತ್ತಿರುವುದು ವಿಶೇಷ.

ಸ್ವಂತ ಖರ್ಚಿನಲ್ಲಿ: ಪ್ರಸ್ತುತ ನಿಯಮಿತವಾಗಿ ಪಾಲ್ಗೊಳ್ಳುವ 60 ಮಂದಿ ಸದಸ್ಯರನ್ನು ಹೊಂದಿರುವ ಈ ಸಂಘಟನೆಯೊಂದಿಗೆ, ಕೆಲವು ಸಂಘ–ಸಂಸ್ಥೆಗಳವರು ಕೂಡ ಕೈಜೋಡಿಸುತ್ತಿದ್ದಾರೆ. ಸಸಿಗಳನ್ನು ಒದಗಿಸುವ ಅಥವಾ ದೇಣಿಗೆ ನೀಡುತ್ತಿವೆ. ಇಲ್ಲಿ, ಪದಾಧಿಕಾರಿಗಳು ಎನ್ನುವುದು ಇಲ್ಲ. ಎಲ್ಲ ಸದಸ್ಯರೂ ಒಟ್ಟಾಗಿ ಚರ್ಚಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.

ಅರಣ್ಯ ಇಲಾಖೆಯಿಂದ ಸ್ವಂತ ಖರ್ಚಿನಲ್ಲಿ ಸಸಿಗಳನ್ನು ಖರೀದಿಸುವ ತಂಡ ಅವುಗಳನ್ನು ನೆಟ್ಟು ಪೋಷಿಸುತ್ತದೆ. ಭಾಗ್ಯನಗರ, ಅನಗೋಳದಲ್ಲಿರುವ ಸದಸ್ಯರಿಬ್ಬರ ಮನೆಯ ಆವರಣದಲ್ಲಿ ಎರಡು ನರ್ಸರಿಗಳನ್ನೂ ಮಾಡಲಾಗಿದೆ. ಇಲ್ಲಿ ತಲಾ 2,000 ಸಸಿಗಳು ಲಭ್ಯ ಇವೆ. ಹಲಸು, ನೇರಳೆ, ಮಾವು, ನೆಲ್ಲಿಕಾಯಿ, ಕೋಕಂ, ಹುಣಸೆ, ನುಗ್ಗೆ, ಬಿಲ್ವ, ಸಂಪಿಗೆ, ರೇನ್‌ ಟ್ರೀ, ಇಂಡಿಯನ್‌ ರೆಡ್‌ ಸಿಲ್ಕ್‌ ಕಾಟನ್‌, ಬೇವು, ಆಲ ಮೊದಲಾದ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ತಂಡದ ಕಾರ್ಯ, ಸಸಿಗಳನ್ನು ಜತನದಿಂದ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಮಾದರಿಯಾಗಿದೆ.

‘ನಗರ ಹಾಗೂ ಸುತ್ತಮುತ್ತಲಿನ ಶಾಲಾ–ಕಾಲೇಜು ಆವರಣ, ಕೈಗಾರಿಕಾ ಪ್ರದೇಶ, ಖಾಸಗಿ ಸಂಸ್ಥೆಗಳು, ಫೋರ್ಟ್‌ ಸೇರಿದಂತೆ 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಸಸಿ ನೆಡಲಾಗಿದೆ. ಈವರೆಗೆ 111 ಭಾನುವಾರಗಳಲ್ಲಿ (ಒಮ್ಮೆಯೂ ತಪ್ಪಿಸದಂತೆ) ಶ್ರಮದಾನ ಮಾಡಿದ್ದೇವೆ. ನೆಟ್ಟ ನಂತರ ಅವುಗಳ ನಿರ್ವಹಣೆಗೂ ಗಮನ ಹರಿಸುತ್ತೇವೆ. ನೀರುಣಿಸುವುದು, ಗೊಬ್ಬರ ಹಾಕುವುದು, ದನ–ಕರುಗಳಿಂದ ರಕ್ಷಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶೇ 75ಕ್ಕೂ ಹೆಚ್ಚಿನ ಸಸಿಗಳು ಉಳಿದುಕೊಂಡಿವೆ. ಇದು ಸಂತಸದ ವಿಷಯ. ಬೆಳಗಾವಿ ಹಸಿರುಮಯ ಆಗಿರುವಂತೆ ನೋಡಿಕೊಳ್ಳುವುದಕ್ಕೆ ನಮ್ಮ ಕೊಡುಗೆ ಇದು’ ಎನ್ನುತ್ತಾರೆ ಸಂಯೋಜಕ ಸಮೀರ್‌ ಎಂ.

ಸಣ್ಣ ಕಾಡುಗಳ ನಿರ್ಮಾಣ: ‘ಕಿರು ಅರಣ್ಯ ಪ್ರದೇಶ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಹೊಂದಲಾಗಿದೆ. ಒಂದು ಗುಂಟೆಯಷ್ಟು ಜಾಗದಲ್ಲಿ ವಿವಿಧ ರೀತಿಯ ಕನಿಷ್ಠ 300 ಸಸಿಗಳನ್ನು ನೆಟ್ಟು ಸಣ್ಣ ಕಾಡನ್ನಾಗಿಸಲು ಉದ್ದೇಶಿಸಲಾಗಿದೆ. ಸಂತಿಬಸ್ತವಾಡದ ಪ್ರಗತಿ ಎಂಜಿನಿಯರಿಂಗ್, ಫೋರ್ಟ್‌ನಲ್ಲಿರುವ ಪಿಡಬ್ಲ್ಯುಡಿ ಕಚೇರಿ ಆವರಣ, ರಾಜಗೋಳದ ಕ್ವಾಲಿಟಿ ಫುಡ್ಸ್‌, ಸಂತಿ ಬಡ್ತವಾಡದ ಹಂಜಿ ಫಾರಂನಲ್ಲಿ 3300 ಸಸಿಗಳನ್ನು ನೆಡಲಾಗಿದೆ. ಈ ರೀತಿ ವಿವಿಧೆಡೆ ಸಸಿಗಳನ್ನು ನೆಟ್ಟು ಬೆಳೆಸಬೇಕು ಎನ್ನುವ ಉದ್ದೇಶವಿದೆ. ಧಾರವಾಡದ ವೃಕ್ಷಕ್ರಾಂತಿ
ಯಂತಹ ಸಂಸ್ಥೆಗಳು ಸಸಿಗಳನ್ನು ಒದಗಿಸಿವೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈಚೆಗೆ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಭೂತರಾಮನಹಟ್ಟಿಯ ಭಗವಾನ್‌ ಮಹಾವೀರ ಜೈನ್‌ ಇಂಗ್ಲಿಷ್‌ ಮಾಧ್ಯಮ ಶಾಲೆ ಆವರಣದಲ್ಲಿ 111 ಸಸಿಗಳನ್ನು ನೆಡಲಾಗಿತ್ತು. ಆರ್‌ಎಲ್‌ ಕಾನೂನು ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ರೋಟರಿ ಕ್ಲಬ್‌ ಆಫ್‌ ವೇಣು ಗ್ರಾಮದ ಸದಸ್ಯರು, ಶಾಲೆಯವರು ಹಾಗೂ ವೃಕ್ಷ ಕ್ರಾಂತಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT