ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಬೀಸಿ ಕರೆದನಾ ಮದನಿಂಗ...

Last Updated 5 ಜೂನ್ 2018, 9:46 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮದನಿಂಗನ ಕಣಿವೆ, ಗಿಣಿ ವಜ್ರ ಹಾಗೂ ಅಬ್ಬಿಗೆ ಗುಡ್ಡಸಾಲುಗಳ ಅಪರೂಪದ ಸಸ್ಯರಾಶಿಗಳಾದ ಕಾಡು ಬಿಕ್ಕೆ, ಕಮರ ಕೇದಿಗೆ, ಜಾಲಗಿರಿ ವನದ ಮೂಲಕ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಕಳೆದ 2 ದಿನಗಳಿಂದ ತಾಲ್ಲೂಕಿನ ಅಲ್ಲಲ್ಲಿ ಮಳೆಯಾಗುತ್ತಿದೆ. ದಿನವಿಡೀ ಮದನಿಂಗನ ಕಣಿವೆ, ಅಬ್ಬಿಗೆ ಗುಡ್ಡಗಳ ಸಾಲು, ಗಿಣಿ ವಜ್ರ ಹಾಗೂ ಕುದುರೆ ಕಣಿವೆ ಭಾಗಗಳಲ್ಲಿ ದಟ್ಟ ಮಳೆ ಮೋಡಗಳು ಕವಿದಿರುತ್ತವೆ. ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿವೆ. ಹಸಿರು ಕಾನನದ ಹಿಮ ಲಾಸ್ಯವನ್ನು ಕಣ್ಣು ತುಂಬಿಕೊಳ್ಳಲು ಯುವಕರು ತಂಡೋಪ ತಂಡಗಳಲ್ಲಿ ಚಾರಣಕ್ಕೆ ಬರುತ್ತಿದ್ದಾರೆ. ಮದನಿಂಗನ ಕಣಿವೆಯಿಂದ ಮೊದಲುಗೊಂಡು ಅಕ್ನಾರ ಹಳ್ಳದ ವರೆಗೆ ಹಾಗೂ ಬುಳ್ಳೇನಹಳ್ಳಿ ಬೆಟ್ಟದ ಬುಡದಿಂದ ಹಬ್ಬಿಗೆ ಬೆಟ್ಟಗಳನ್ನು ದಾಟಿ ಯರೆಕಟ್ಟೆ ವಜ್ರದ ವರೆಗೆ ಚಾರಣಿಗರು ಸಾಗುವ ದೃಶ್ಯ ಸಾಮಾನ್ಯವಾಗಿದೆ.

ಮದನಿಂಗನ ಕಣಿವೆ ಸಾಲುಗುಡ್ಡಗಳಲ್ಲಿ ಹಸಿರು ಬೆಟ್ಟಗಳಿಗೆ ಹಿಮದ ಛಾದರ ಹೊದ್ದಿದೆ. ಪರಿಸರ ದಿನದ ಆಚರಣೆಗೆ ಪ್ರಕೃತಿಯೇ ಸಿದ್ಧವಾಗಿದೆ. ಮಳೆ ಸುರಿಯುತ್ತಿರುವುದರಿಂದ 2,400 ಎಕರೆ ವ್ಯಾಪ್ತಿಯಲ್ಲಿ ಚಾಚಿಕೊಂಡಿರುವ ತೀರ್ಥಪುರ ಮೀಸಲು ಅರಣ್ಯ ಪ್ರದೇಶ ಸಹ ಹಸಿರು ಮುಕ್ಕಳಿಸುತ್ತಿದೆ.

ಹಾಗಲವಾಡಿ ರಸ್ತೆ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಯಿಂದ ಗಬ್ಬಿ ಕಡೆ ಹಾಗೂ ಕಾತ್ರಿಕೆ ಹಾಳ್ ನಿಂದ ಕೊಂಡ್ಲಿ ಕ್ರಾಸ್ ಕಡೆ ಸಂಚರಿಸುವ ಪ್ರಯಾಣಿಕರಿಗೆ ಮಲೆನಾಡಿನಲ್ಲಿ ಸಂಚರಿಸಿದ ಅನುಭವ ಆಗುತ್ತಿದೆ. ಬೆಂಗಳೂರಿನಿಂದ ಹೊಸದುರ್ಗ, ಹಿರಿಯೂರು, ಬಳ್ಳಾರಿ ಹಾಗೂ ಚಿತ್ರದುರ್ಗದ ಕಡೆ ಪ್ರಯಾಣಿಸುವ ಖಾಸಗಿ ವಾಹನ ಸವಾರರು ಕೆ.ಬಿ.ಕ್ರಾಸ್ ಮಾರ್ಗವಾಗಿ ಸಂಚರಿಸದೆ ಮದನಿಂಗನ ಕಣಿವೆ ಮಾರ್ಗ ಹಿಡಿಯುತ್ತಿದ್ದಾರೆ. ವಾರಾಂತ್ಯದಲ್ಲಿ ಬೈಕ್‌ಗಳಲ್ಲಿ ವಿಹಾರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.
ಅಪರೂಪದ ವನ್ಯ ಜೀವಿ ಸಂಪತ್ತು ಕಾಡಿನ ಮೆರುಗನ್ನು ಹೆಚ್ಚಿಸಿವೆ. ನವಿಲುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಪ್ರತಿ ಸಂಜೆ ಹಾಗೂ ಮುಂಜಾವು ಗುಡ್ಡಕ್ಕೆ ಹೋಗುವ ಜನರಿಗೆ ನವಿಲ ನರ್ತನದ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದೆ. ಕಾಡುಕುರಿ, ಕಾಡು ಹಂದಿ, ಕರಡಿ ಹಾಗೂ ಚಿರತೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಕಾಡಿನ ಅಂಚಿನ ಜಮೀನುಗಳ ರೈತರು ಮಾಹಿತಿ ನೀಡುವರು.

ಕಣಿವೆಯ ಐತಿಹ್ಯ: ರಮಣೀಯ ಕಣಿವೆಯ ಹೆಸರ ಹಿಂದೆ ರಮಣೀಯ ಐತಿಹ್ಯ ಇದೆ. ಕುಸ್ತಿಪಟು ಮದನಿಂಗ ಚಿಕ್ಕನಾಯಕನಹಳ್ಳಿ ಅಳಿಯ. ಮದುವೆಯಾದ ಮೊದಲ ವರ್ಷ ಏಕಾದಶಿ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುತ್ತಾನೆ. ವಾರಪೂರ್ತಿ ನಡೆಯುವ ಹಳೆಯೂರು ಆಂಜನೇಯ ಜಾತ್ರೆಯಲ್ಲಿ ಪಾಲ್ಗೊಂಡು ಮಡದಿ ಹಾಗೂ ನಾದಿನಿ ಜತೆ ಸಂಭ್ರಮಿಸುತ್ತಾನೆ.

ಅಭ್ಯಂಜನದ ಸಮಯದಲ್ಲಿ ತಮಾಷೆಗೆ ಎಂದು ಮದನಿಂಗ ನಾದಿನಿಯನ್ನೂ ಕೊಡುವಂತೆ ಅತ್ತೆಯನ್ನು ಕೇಳಿಕೊಳ್ಳುತ್ತಾನೆ. ಊರ ಎದುರು ಮೈಚಾಚಿಕೊಂಡಿರುವ ಬೆಟ್ಟವನ್ನು ಹಿಮ್ಮುಖವಾಗಿ ಹತ್ತಿ ಇಳಿದರೆ ಎರಡನೇ ಮಗಳನ್ನೂ ಕೊಡುವುದಾಗಿ ಅತ್ತೆ ಹೇಳುತ್ತಾಳೆ. ಸವಾಲು ಸ್ವೀಕರಿಸಿದ ಮದನಿಂಗ ಹಿಮ್ಮುಖವಾಗಿ ನಡೆಯಲು ಮುಂದಾಗುತ್ತಾನೆ. ಆ ವೇಳೆ ಮದನಿಂಗ ನೀರು ತುಂಬಿದ ಮಡುವಿನಲ್ಲಿ ಬಿದ್ದು ಸಾಯುತ್ತಾನೆ. ಮದನಿಂಗ ಸತ್ತ ಸುದ್ದಿ ಕೇಳಿ ಅತ್ತೆ ಎದೆ ಹೊಡೆದು ಸಾಯುತ್ತಾಳೆ. ಗಂಡ ಹಾಗೂ ತಾಯಿಯ ಸಾವು ಕಂಡು ಮಡದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಕತೆ ತಾಲ್ಲೂಕಿನಲ್ಲಿ ಜನ ಜನಿತವಾಗಿದೆ.
ಕಥೆಗೆ ಪೂರಕ ಎಂಬಂತೆ ಸುತ್ತು ಕಣಿವೆಯಲ್ಲಿ ಮದನ ಮಡು, ಅಜ್ಜಿಗುಡ್ಡೆ ಹಾಗೂ ಜಾಣೆಹಾರು ಎಂಬ ಊರುಗಳು ಇವೆ. 

ಚಾರಣಿಗರಿಗೆ ಎಚ್ಚರಿಕೆ: ಸತತ ಮಳೆಯಿಂದ ಮದನಿಂಗನ ಕಣಿವೆಗೆ ಚಾರಣ ಹೊರಡುವರ ಸಂಖ್ಯೆ ಹೆಚ್ಚಾಗಿದೆ. ಅರಣ್ಯದಲ್ಲಿ ಚಿರತೆ ದಾಳಿ ಪದೇ ಪದೇ ನಡೆಯುತ್ತಿದೆ. ಆದ್ದರಿಂದ ಚಾರಣಕ್ಕೆ ಹೋಗುವವರು ಎರಡು ದಿನ ಮುಂಚಿತವಾಗಿ ಅರಣ್ಯ ಇಲಾಖೆಗೆ ಲಿಖಿತ ಮಾಹಿತಿ ನೀಡಬೇಕು. ಅರಣ್ಯದ ಅರಿವುಳ್ಳ ಫಾರೆಸ್ಟ್ ಗಾರ್ಡ್‌ಗಳನ್ನು ಚಾರಣಿಗರ ಜತೆ ಕಳಿಸಿಕೊಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮಿ ನಾರಾಯಣ್ ತಿಳಿಸಿದರು.

ಮಾಸ್ತಿ ಅವರ ಖಂಡ ಕಾವ್ಯ

ಮದನಿಂಗನ ಕಣಿವೆ ಕುರಿತು ಹಲವು ಸಾಹಿತ್ಯ ಕೃತಿಗಳು ಬಂದಿವೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಮಧುಗಿರಿ ಕಲೆಕ್ಟರ್ ಆಗಿದ್ದಾಗ ಮದನಿಂಗನ ಕಣಿವೆಗೆ ಬೇಟಿ ನೀಡಿದ್ದರು. ಇಲ್ಲಿನ ಪ್ರಕೃತಿಗೆ ಮನ ಸೋತು ‘ಮದನಿಂಗನ ಕಣಿವೆ’ ಎಂಬ ಹೆಸರಿನಲ್ಲಿ ಖಂಡ ಕಾವ್ಯ ರಚಿಸಿದ್ದಾರೆ. ಇದೇ ಹೆಸರಿನಲ್ಲಿ ಸಾಹಿತಿ ಆರ್.ಬಸವರಾಜ್ ಕಾದಂಬರಿ ರಚಿಸಿದ್ದಾರೆ. ಅಲ್ಲದೆ ಎ.ಆರ್.ಮೂರ್ತಿರಾಯರು ಮದನಿಂಗನ ಕಣಿವೆಯಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ‘ವ್ಯಾಘ್ರ ಗೀತೆ’ ಎಂಬ ಪ್ರಬಂಧ ರಚಿಸಿದ್ದಾರೆ.ಆ ಪ್ರಬಂಧ ಪ್ರಸ್ತುತ 9ನೇ ತರಗತಿಯ ಕನ್ನಡ ಪಠ್ಯದಲ್ಲಿ ಇದೆ.

-ದೇವರಹಳ್ಳಿ ಧನಂಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT