ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ತಿಂಗಳ ರಾಜಕೀಯ ಸಂದೇಶ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಇದೀಗ ಸಂದುಹೋದ ಮೇ ತಿಂಗಳು, ಮೂರು ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಯಾವುದೇ ಒಂದು ಪಕ್ಷ ಬಹುಮತ ಪಡೆಯದ ವಿಧಾನಸಭಾ ಚುನಾವಣೆ ಕರ್ನಾಟಕದಲ್ಲಿ ನಡೆಯಿತು. ಚುನಾವಣಾ ಫಲಿತಾಂಶ ಬಂದ ನಂತರದ ‘ತೀಕ್ಷ್ಣವಾದ ಒಂದು ವಾರ’ದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರಮಾಣವಚನ ಸ್ವೀಕರಿಸಿ ಕೇವಲ ಎರಡೂವರೆ ದಿನಗಳ ಕಾಲ ಅಧಿಕಾರದಲ್ಲಿದ್ದು, ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಎಡೆಮಾಡಿಕೊಟ್ಟರು. ಕುಮಾರಸ್ವಾಮಿ ಅವರ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವು ಪ್ರಾದೇಶಿಕ ಪಕ್ಷಗಳ ನಾಯಕರು ಕಾಂಗ್ರೆಸ್ ಜೊತೆ ಕೈಜೋಡಿಸುವಂತೆ ಮಾಡಿ ರಾಷ್ಟ್ರದಲ್ಲಿ ಬಿಜೆಪಿ ವಿರೋಧಿ ಶಕ್ತಿಗಳ ಒಗ್ಗಟ್ಟಿಗೆ ವೇದಿಕೆಯಾಗಿ ಪರಿಣಮಿಸಿತು. ಇದರಿಂದ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಯ ಸಂದೇಶ ರವಾನೆಯಾಯಿತು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‍ಡಿಎ ಸರ್ಕಾರವು ಮೇ 26ರಂದು ನಾಲ್ಕು ವರ್ಷಗಳ ಅಧಿಕಾರಾವಧಿ ಪೂರೈಸಿತು. ಈ ಸಂಭ್ರಮಾಚರಣೆಯ ಅಂಗವಾಗಿ ಮೋದಿ ಅವರು ಮಾಡಿದ ಭಾಷಣ ವಾಸ್ತವವಾಗಿ 2019ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ನೀಡಿದ ಚಾಲನೆಯೇ ಆಗಿದೆ. ಇನ್ನು, ಇದೇ ತಿಂಗಳ ಕಡೆಯ ದಿನ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿತು. ತಾನು ಹೊಂದಿದ್ದ ನಾಲ್ಕು ಲೋಕಸಭಾ ಸ್ಥಾನಗಳ ಪೈಕಿ ಎರಡು ಸ್ಥಾನಗಳಲ್ಲಿ ಬಿಜೆಪಿ ಸೋಲುಂಡಿದ್ದು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಆ ಪಕ್ಷದ ತೀವ್ರ ಹಿನ್ನಡೆಯು ವಿರೋಧಿ ಮೈತ್ರಿಕೂಟದ ಒಗ್ಗಟ್ಟಿನ ಶಕ್ತಿಯನ್ನು ನಿಚ್ಚಳವಾಗಿ ಎತ್ತಿತೋರಿಸಿತು. ಈ ಎಲ್ಲಾ ಬೆಳವಣಿಗೆಗಳು ಮುಂದಿನ ರಾಷ್ಟ್ರ ರಾಜಕಾರಣದ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುವ ಜೊತೆಗೆ, ಮುಂದಿನ ಲೋಕಸಭಾ ಚುನಾವಣಾ ಪೈಪೋಟಿಯ ಲಕ್ಷಣ ಹಾಗೂ ಸ್ವರೂಪವನ್ನು ನಿರ್ಧರಿಸಲಿವೆ.

ಮೋದಿ ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಮತದಾರರು ಹೇಗೆ ಮೌಲ್ಯಮಾಪನ ಮಾಡಿದ್ದಾರೆ? ಸಿಎಸ್‍ಡಿಎಸ್- ಲೋಕನೀತಿ ನಡೆಸಿದ ‘ಮೂಡ್ ಆಫ್ ದ ನೇಷನ್’ (ಎಂಒಟಿಎನ್) ಮತ ಸಮೀಕ್ಷೆಯ ಪ್ರಕಾರ, ರಾಷ್ಟ್ರದಲ್ಲಿ ಆಡಳಿತ ವಿರೋಧಿ ಭಾವನೆ ನೆಲೆಯೂರಿರುವುದು ಸ್ಪಷ್ಟವಾಗಿದೆ. ಬಿಜೆಪಿಯು 2014ರಲ್ಲಿ ಇದ್ದ ಸ್ಥಿತಿಗೇ ಮರಳಿದ್ದು, ಈ ಸಮೀಕ್ಷೆ ನಡೆಸಲಾದ ಮೇ ತಿಂಗಳ ಎರಡನೇ ವಾರದ ಆಜುಬಾಜು ಚುನಾವಣೆ ನಡೆಸಿದ್ದಿದ್ದೇ ಆದರೆ, ಶೇ 32ರಷ್ಟು ಮತಗಳನ್ನು ಪಡೆಯುತ್ತದೆಂಬುದು ಲೆಕ್ಕಾಚಾರಗಳಿಂದ ವ್ಯಕ್ತವಾಯಿತು. ಪ್ರತಿ ನಾಲ್ವರಲ್ಲಿ ಒಬ್ಬರು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದರೆ, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಲಾಭವಾಗಿರುವುದು ಕಂಡುಬಂದಿದೆ. ಮೈತ್ರಿಕೂಟದ ಆಧಾರದಲ್ಲಿ ನೋಡಿದರೆ, ಎನ್‍ಡಿಎ ಜನಬೆಂಬಲದ ಪ್ರಮಾಣವು ಒಂದು ವರ್ಷದ ಅವಧಿಯಲ್ಲಿ ಶೇ 45ರಿಂದ ಶೇ 37ಕ್ಕೆ, ಅಂದರೆ ಶೇ 8ರಷ್ಟು ಇಳಿಕೆಯಾಗಿದೆ (2017ರ ಎಂಒಟಿಎನ್ ಸಮೀಕ್ಷೆಯಿಂದ ಈ ವರ್ಷದ ಸಮೀಕ್ಷೆವರೆಗಿನ ಅವಧಿ). ಪ್ರತಿ ಹತ್ತರಲ್ಲಿ ಮೂವರು ಯುಪಿಎ ಅನ್ನು ಬೆಂಬಲಿಸಿದ್ದರೆ, ಮೂರನೇ ಒಂದಕ್ಕಿಂತ ಕೊಂಚ ಕಡಿಮೆ ಮತದಾರರು ಯುಪಿಎಯೇತರ ಮತ್ತು ಎನ್‍ಡಿಎಯೇತರ ಪಕ್ಷಗಳನ್ನು ಬೆಂಬಲಿಸಿದ್ದಾರೆ. ಬಿಜೆಪಿಯು ಗಣನೀಯ ಪ್ರಮಾಣದಲ್ಲಿ ಕೆಳವರ್ಗಗಳ ಮತ್ತು ಮಧ್ಯಮ ವರ್ಗದ ಬೆಂಬಲ ಕಳೆದುಕೊಂಡಿರುವುದು ಆ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಯುಪಿಎಯೇತರ ಮತ್ತು ಎನ್‍ಡಿಎಯೇತರ ಪಕ್ಷಗಳು ರೈತಾಪಿ ವರ್ಗದ ಗಮನಾರ್ಹ ಬೆಂಬಲ ಗಳಿಸಿಕೊಂಡಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ.

ಚುನಾವಣೆಗೆ ಒಂದು ವರ್ಷವಿರುವ ಈ ಸಂದರ್ಭದಲ್ಲಿ, ಸಮೀಕ್ಷೆಗೆ ಒಳಪಟ್ಟ ಹತ್ತಿರ ಹತ್ತಿರ ಶೇ 50ರಷ್ಟು ಮತದಾರರು ಮೋದಿ ನೇತೃತ್ವದ ಸರ್ಕಾರಕ್ಕೆ ಎರಡನೇ ಅವಧಿಗೆ ಅವಕಾಶ ಸಿಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಇಂತಹ ಅಭಿಪ್ರಾಯ ಅತ್ಯಧಿಕವಾಗಿದ್ದರೆ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಕೂಡ ಇದು ಸಾಕಷ್ಟು ಪ್ರಮಾಣದಲ್ಲಿ ವ್ಯಕ್ತವಾಗಿದೆ. ಎನ್‍ಡಿಎ ಕೂಟದಲ್ಲಿರುವ ಬಿಜೆಪಿ ಮಿತ್ರಪಕ್ಷಗಳ ಬೆಂಬಲಿಗರ ಪೈಕಿ ಪ್ರತಿ ಐವರಲ್ಲಿ ಸುಮಾರು ಇಬ್ಬರು ಮೋದಿ ನೇತೃತ್ವದ ಸರ್ಕಾರಕ್ಕೆ ಎರಡನೇ ಸಲ ಅಧಿಕಾರದ ಅವಕಾಶ ಸಿಗಬಾರದು ಎಂದು ಹೇಳಿರುವುದು ಗಮನ ಸೆಳೆಯುವ ಸಂಗತಿಯಾಗಿದೆ. ಪ್ರತಿ ನಾಲ್ವರಲ್ಲಿ ಮೂವರು ಮುಸ್ಲಿಮರು, ಐವರಲ್ಲಿ ಮೂವರು ಕ್ರೈಸ್ತರು, ಶೇ 50ಕ್ಕೂ ಹೆಚ್ಚು ಸಿಖ್ಖರು ಮತ್ತು ದಲಿತರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬಗ್ಗೆ ಹೆಚ್ಚೂಕಡಿಮೆ ಸಮ ಪ್ರಮಾಣದ ಮತದಾರರು ತೃಪ್ತಿ ಮತ್ತು ಅತೃಪ್ತಿ ವ್ಯಕ್ತಪಡಿಸಿದ್ದರೆ, ಸುಮಾರು ಮೂರನೇ ಒಂದರಷ್ಟು ಮತದಾರರು ಸರ್ಕಾರದ ಬಗ್ಗೆ ಸಂಪೂರ್ಣ ಅತೃಪ್ತಿ ಪ್ರಕಟಿಸಿದ್ದಾರೆ. ಈಗಿನ ಕೇಂದ್ರ ಸರ್ಕಾರಕ್ಕೆ ಎರಡನೇ ಸಲ ಅಧಿಕಾರದ ಅವಕಾಶ ಸಿಗಬಾರದು ಎಂದವರಲ್ಲಿ ಅರ್ಧದಷ್ಟು ಜನ ಯುಪಿಎ ಪಕ್ಷಗಳಿಗೆ ಮತ ಹಾಕುವ ಒಲವು ತೋರಿದರೆ, ಪ್ರತಿ ಐವರಲ್ಲಿ ಸುಮಾರು ಇಬ್ಬರು ಎನ್‍ಡಿಎಯೇತರ ಮತ್ತು ಯುಪಿಎಯೇತರ ಪಕ್ಷಗಳೆಡೆಗೆ ಒಲವು ಹೊಂದಿದ್ದಾರೆ. ಸರ್ಕಾರವು ತಾನು ನೀಡಿದ್ದ ಭರವಸೆಯಂತೆ ‘ಒಳ್ಳೆಯ ದಿನ’ಗಳನ್ನು ತರುವಲ್ಲಿ ವಿಫಲವಾಗಿದೆ ಎಂದು ಸಮೀಕ್ಷೆಯಲ್ಲಿ ಶೇ 50ಕ್ಕೂ ಹೆಚ್ಚು ಜನ ಹೇಳಿದ್ದಾರೆ. ‘ನಮ್ಮ ಉದ್ದೇಶಗಳು ಪರಿಶುದ್ಧವಾಗಿವೆ; ಒಳ್ಳೆಯ ದಿನಗಳು ಮುಂದೆ ಬರಲಿವೆ’ ಎಂದು ಬಿಜೆಪಿಯು ತನ್ನ ಘೋಷವಾಕ್ಯ ಬದಲಿಸಿಕೊಂಡಿರುವುದಕ್ಕೂ ಬಹುಶಃ ಇದೇ ಕಾರಣವಿರಬೇಕು!

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಬಗೆಗಿನ ಈ ಅಂಕಿಅಂಶಗಳು ಬಿಜೆಪಿ ಮತ್ತು ಅದರ ನಾಯಕತ್ವಕ್ಕೆ ಗಂಭೀರ ಚಿಂತೆಗೆ ಕಾರಣವಾಗಬಹುದು. 2014ರ ಚುನಾವಣೆಯ ಗೆಲುವಿನ ನಂತರ ಅದು ಹುಟ್ಟುಹಾಕಿದ್ದ ಸಂಚಲನವು ಕ್ಷಿಪ್ರವಾಗಿ ಕರಗುತ್ತಿರುವಂತೆ ತೋರುತ್ತಿದೆ.

ಬಿಜೆಪಿಯು ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿದ್ದು ಹಾಗೂ ಇಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಮತಾಭಿಪ್ರಾಯಕ್ಕೆ ಪೂರಕವಾಗಿಯೇ ಇದೆ. ಕಾಂಗ್ರೆಸ್ ಪಕ್ಷವು ತನ್ನ ದೋಸ್ತಿ ಪಕ್ಷಕ್ಕಿಂತ ದುಪ್ಪಟ್ಟು ಶಾಸಕರನ್ನು ಹೊಂದಿದ್ದರೂ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದು, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ಅದರ ಹಪಾಹಪಿಯ ತೀವ್ರತೆಗೆ ಕೈಗನ್ನಡಿಯಾಗಿದೆ. ಮತ್ತೊಂದೆಡೆ, ಬಿಜೆಪಿ ವಿರೋಧಿ ಶಕ್ತಿಗಳು ಒಂದೆಡೆ ಸೇರಲು ಇದು ವೇದಿಕೆ ಒದಗಿಸಿದೆ. ಒಂದೆಡೆ ಸೇರುವುದು ಆರಂಭ ಮಾತ್ರ. ಈ ಎಲ್ಲಾ ಶಕ್ತಿಗಳು ಒಟ್ಟಿಗೆ ಇರಲು ಸಾಧ್ಯವೇ? ಒಟ್ಟಿಗೆ ಕೆಲಸ ಮಾಡಲು ಸಾಧ್ಯವೇ ಮತ್ತು ಇದು ದೀರ್ಘಾವಧಿಗೆ ಬಾಳಿಕೆ ಬರಬಲ್ಲದೇ ಎಂಬುದೇ ನಿಜವಾದ ಅಗ್ನಿಪರೀಕ್ಷೆ. ಬಿಜೆಪಿ ಬಗೆಗಿನ ಅಸಮಾಧಾನದಿಂದಾಗಿ ಇವುಗಳು ಕೈಜೋಡಿಸಿರುವುದು ‘ಋಣಾತ್ಮಕ ನಂಟೇ’ ಸರಿ. ಆದರೆ ದೀರ್ಘಕಾಲ ಇವರೆಲ್ಲಾ ಒಟ್ಟಾಗಿ ಇರಬೇಕೆಂದರೆ ‘ಸಕಾರಾತ್ಮಕ ನಂಟು’ ಬೇಕೇ ಬೇಕು. ‘ಒಂದೆಡೆ ಸೇರಿದಾಗ ವಿಘಟನೆ, ವಿಘಟಿತರಾದಾಗ ಒಗ್ಗಟ್ಟಿಗಾಗಿ ಹಾತೊರೆಯುವಿಕೆ’ಯು ಈ ಕೂಟದ ಗುಣವೇ ಆಗಿರುವುದು ಹಿಂದಿನ ಅನುಭವಗಳಿಂದ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಬಲವು ಕ್ಷೀಣವಾಗಿರುವ ರಾಜ್ಯಗಳಲ್ಲಿ, ಅದು ಇತರ ಪಕ್ಷಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆಯೇ? ಬಿಜೆಪಿಯ ಪ್ರಮುಖ ವಿರೋಧ ಪಕ್ಷವಾಗಿರುವ ರಾಜ್ಯಗಳಲ್ಲಿ ಅದು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಬಯಸಲಿದೆಯೇ? ಈ ಪಕ್ಷಗಳು ಬಿಜೆಪಿಗೆ ಸಮರ್ಥ ಎದುರಾಳಿಯಾದ ಪರ್ಯಾಯ ನೀತಿ ರೂಪಿಸಲಿವೆಯೇ? ನಾಯಕತ್ವದ ಚುಕ್ಕಾಣಿ ಹಿಡಿಯುವ ಪ್ರಲೋಭನೆಯನ್ನು, ಕಚ್ಚಾಟ ಬದಿಗಿಟ್ಟು ಪ್ರತಿರೋಧಿಸಲಿವೆಯೇ? ಈ ವಿರೋಧಿ ಕೂಟದಲ್ಲಿ ನಾಯಕತ್ವದ ಚುಕ್ಕಾಣಿಗಾಗಿ ಕಚ್ಚಾಟ ಆರಂಭವಾಗುತ್ತಿದ್ದಂತೆಯೇ ಅದು ಬಿಜೆಪಿಗೆ ಸಾಂದರ್ಭಿಕ ಲಾಭ ಒದಗಿಸಲು ಅನುವು ಮಾಡಿಕೊಡುವುದರಲ್ಲಿ ಅನುಮಾನವಿಲ್ಲ.

ಬಿಜೆಪಿಯು ಈಗಿರುವ ಮಿತ್ರ ಪಕ್ಷಗಳೊಂದಿಗಿನ ಬಾಂಧವ್ಯವನ್ನು ಹೇಗೆ ಕಾಪಾಡಿಕೊಳ್ಳಲಿದೆ ಹಾಗೂ ಹೊಸ ಮಿತ್ರ ಪಕ್ಷಗಳನ್ನು ಕೂಟಕ್ಕೆ ಸೇರಿಸಿಕೊಳ್ಳಲಿದೆ ಎಂಬುದು ಕೂಡ ಅಷ್ಟೇ ಮುಖ್ಯವಾದುದು. ಮಹಾರಾಷ್ಟ್ರ ಉಪಚುನಾವಣೆಯು ಶಿವಸೇನಾದೊಂದಿಗಿನ ಆ ಪಕ್ಷದ ಸಂಬಂಧವನ್ನು ಮತ್ತಷ್ಟು ಗಾಸಿಗೊಳಿಸಿದೆ. ಬಿಹಾರದಲ್ಲಿನ ಸರಣಿ ಸೋಲು ನಿತೀಶ್ ಕುಮಾರ್ ಹಾಗೂ ಅವರ ಜೆಡಿಯು ಪಕ್ಷವನ್ನು ರಕ್ಷಣಾತ್ಮಕ ತಂತ್ರದ ಮೊರೆ ಹೋಗುವಂತೆ ಮಾಡಿದೆ. ಪಂಜಾಬಿನಲ್ಲಿ ಅಕಾಲಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತ್ರ ಪಕ್ಷವನ್ನು ಸಂಭಾಳಿಸುವುದು ಕಷ್ಟವಾಗಿ ಪರಿಣಮಿಸಿದೆ. ಬಿಜೆಪಿಯು ಸ್ವತಂತ್ರವಾಗಿ ಬಹುಮತ ಪಡೆಯಲು ಶತಪ್ರಯತ್ನ ನಡೆಸಲಿದೆಯೇನೋ ಹೌದು. ಆದರೆ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಆ ಪಕ್ಷವು ಮಿತ್ರ ಪಕ್ಷಗಳ ಭಾವನೆಗಳಿಗೆ ಸ್ಪಂದಿಸುವುದು ಅತ್ಯಗತ್ಯ ಎನ್ನಿಸುತ್ತಿದೆ. ಬಿಜೆಪಿಯು ತನ್ನ ಪರವಾಗಿ ಮತದಾರರ ಒಲವು ಗಳಿಸಿಕೊಳ್ಳಲು ‘ದುಬಾರಿ ಘೋಷಣೆ’ಯ ಮೊರೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಒಟ್ಟಾರೆ, ಭಾರತದ ರಾಜಕೀಯದಲ್ಲಿ ಇದು ಆಸಕ್ತಿಕರ ಕಾಲಘಟ್ಟವೆಂಬುದಂತೂ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT