ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೆರವಣಿಗೆ

16ನೇ ದಿನಕ್ಕೆ ಮುಂದುವರಿದ ಗ್ರಾಮೀಣ ಅಂಚೆ ಸೇವಕರ ಮುಷ್ಕರ
Last Updated 6 ಜೂನ್ 2018, 6:22 IST
ಅಕ್ಷರ ಗಾತ್ರ

ಬೆಳಗಾವಿ: ವೇತನ ತಾರತಮ್ಯ ವಿರೋಧಿಸಿ ಮತ್ತು ಕಮಲೇಶ್‌ಚಂದ್ರ ಸಮಿತಿ ನೀಡಿರುವ ವರದಿಯಲ್ಲಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಬೆಳಗಾವಿ ವಿಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಲ್ಲಿನ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ನೌಕರರು, 16ನೇ ದಿನವಾದ ಮಂಗಳವಾರ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.‌

‘ಗ್ರಾಮೀಣ ಪ್ರದೇಶಗಳಲ್ಲಿನ ಜನರ ಸೇವೆ ಮಾಡುತ್ತಿರುವ ಅಂಚೆ ಸೇವಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲಾಖೆ ನೌಕರರಿಗಿಂತ ಹೆಚ್ಚಿನ ಕೆಲಸ ಮಾಡಿದರೂ ಕಡಿಮೆ ಸೌಲಭ್ಯಗಳು ದೊರೆಯುತ್ತಿವೆ. ಕಚೇರಿ ಆರಂಭಿಸಲು ಅನುದಾನ, ಯಾವುದೇ ಭತ್ಯೆ ನೀಡುತ್ತಿಲ್ಲ’ ಎಂದು ದೂರಿದರು.

‘ವೇತನ ತಾರತಮ್ಯ ಕುರಿತು ಅಧ್ಯಯನ ನಡೆಸಲು 2015ರಲ್ಲಿ ಕಮಲೇಶ್‌ಚಂದ್ರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 2017ರ ಏಪ್ರಿಲ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹೋದ ವರ್ಷ ಆಗಸ್ಟ್‌ನಲ್ಲಿ ಮುಷ್ಕರ ನಡೆಸಿದಾಗ ನೀಡಿದ್ದ ಭರವಸೆಯನ್ನೂ ಸರ್ಕಾರ ಈಡೇರಿಸಿಲ್ಲ. ಇದರಿಂದಾಗಿ ಮತ್ತೊಮ್ಮೆ ಮುಷ್ಕರದ ಹಾದಿ ಹಿಡಿಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ವಾಪಸ್‌ ಪಡೆಯುವುದಿಲ್ಲ’ ಎಂದು ಅವರು ತಿಳಿಸಿದರು. ಸಂಘದ ಬೆಳಗಾವಿ ವಿಭಾಗದ ಅಧ್ಯಕ್ಷ ಅಶೋಕ ಸುತಾರ, ಸಹಾಯಕ ವಿಭಾಗೀಯ ಕಾರ್ಯದರ್ಶಿ ಬಿ.ಆರ್. ಮಹಾಜಿಕ್‌, ಪಿ.ಆರ್‌. ಪಾಟೀಲ,  ಎನ್‌.ಐ. ನಿಂಗನವರ, ಎ.ವಿ. ಚಿಟ್ನಿಸ್‌ ನೇತೃತ್ವ ವಹಿಸಿದ್ದರು.

ದೇಶದಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಜಿಲ್ಲೆಯ ಮೂರು ವಿಭಾಗಗಳಲ್ಲೂ (ಬೆಳಗಾವಿ, ಗೋಕಾಕ ಹಾಗೂ ಚಿಕ್ಕೋಡಿ) ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅಂಚೆ ಸೇವೆಗಳು ಸ್ಥಗಿತಗೊಂಡಿವೆ. ಫಲಾನುಭವಿಗಳು ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT