ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ; ಮೇಲುಗೈ ಸಾಧಿಸಿದ ಅಣ್ಣ

ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ, ಗಣೇಶ ಹುಕ್ಕೇರಿಗೆ ನಿರಾಸೆ
Last Updated 7 ಜೂನ್ 2018, 6:04 IST
ಅಕ್ಷರ ಗಾತ್ರ

ಬೆಳಗಾವಿ: ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋದರ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಸೇರಿದಂತೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಚಿಕ್ಕೋಡಿಯ ಗಣೇಶ ಹುಕ್ಕೇರಿ, ಖಾನಾಪುರದ ಅಂಜಲಿ ನಿಂಬಾಳ್ಕರ ಅವರಿಗೆ ನಿರಾಸೆಯಾಗಿದೆ.

ಕಳೆದ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ರಮೇಶ ಅವರಿಗೆ ಈ ಸಲ ಸಮಾಜ ಕಲ್ಯಾಣ ಖಾತೆ ದೊರೆತಿದ್ದು, ಜಿಲ್ಲಾ ಉಸ್ತುವಾರಿಯ ಹೊಣೆಯೂ ಸಿಕ್ಕಿದೆ. ಸೋದರ ಸತೀಶ ವಿರುದ್ಧ ಮೇಲುಗೈ ಸಾಧಿಸಿದಂತಾಗಿದೆ. ಇದಕ್ಕೆ ಪ್ರತೀಕಾರವಾಗಿ ಸತೀಶ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಮುಳುವಾಯಿತೇ ಕಡಿಮೆ ಅಂತರದ ಗೆಲುವು?: ಸತೀಶ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದಾರೆ. ಬಾದಾಮಿಯಿಂದ ಸ್ಪರ್ಧಿಸಿದ್ದ ಅವರನ್ನು ಗೆಲ್ಲಿಸಲು ಸಾಕಷ್ಟು ಶ್ರಮ ವಹಿಸಿದ್ದರು. ತಾವೇ ಸ್ಪರ್ಧಿಸಿದ್ದ ಯಮಕನಮರಡಿ ಕ್ಷೇತ್ರಕ್ಕೂ ಹೋಗದೆ ಬಾದಾಮಿಯಲ್ಲಿ ಪ್ರಚಾರ ಮಾಡಿದ್ದರು. ಆದರೆ, ಈ ಸಲ ಸಚಿವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಿಂದ ಸಿದ್ದರಾಮಯ್ಯ ಅವರನ್ನು ದೂರ ಇಡಲಾಗಿತ್ತು. ಇದು ಸತೀಶ ಅವರ ಪಾಲಿಗೆ ಮುಳುವಾಯಿತು. ಹೈಕಮಾಂಡ್‌ ಮಟ್ಟದಲ್ಲಿ ಸತೀಶ ಪರವಾಗಿ ಬ್ಯಾಟಿಂಗ್‌ ಮಾಡುವವರು ಯಾರೂ ಇಲ್ಲದಂತಾಗಿತ್ತು. ಹೀಗಾಗಿ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಮೂಲಗಳು ಹೇಳಿವೆ.

ಇನ್ನೊಂದು ಮೂಲದ ಪ್ರಕಾರ, ಸತೀಶ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮಾರುತಿ ಅಷ್ಟಗಿ ಅವರಿಗಿಂತ ಕೇವಲ 2,850 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದರೆ ಇಷ್ಟು ಕಡಿಮೆ ಅಂತರದಲ್ಲಿ ಜಯಗಳಿಸುತ್ತಿದ್ದರೆ? ಅವರ ಪ್ರಭಾವ ಜಿಲ್ಲೆಯಲ್ಲಿ ಉಳಿದಿಲ್ಲ ಎನ್ನುವ ಅಂಶವನ್ನು ಅವರ ವಿರೋಧಿ ಬಣದವರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸತೀಶಗೆ ಸಚಿವ ಸ್ಥಾನ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಸತೀಶ ಅವರಿಗೆ ಸ್ಥಾನ ನೀಡದಿದ್ದರೂ ಅವರ ಅಣ್ಣ ರಮೇಶ ಅವರಿಗೆ ನೀಡುವ ಮೂಲಕ ಹೈಕಮಾಂಡ್‌ ಬುದ್ಧಿವಂತಿಕೆ ಪ್ರದರ್ಶಿಸಿದೆ. ರಮೇಶ ಅವರಿಗೆ ಅಲ್ಲದೇ ಬೇರೆ ಯಾರಿಗಾದರೂ ನೀಡಿದ್ದರೆ ಪಕ್ಷ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನು ತಡೆಯುವಷ್ಟರ ಮಟ್ಟಿಗೆ ಹೈಕಮಾಂಡ್‌ ಯಶಸ್ವಿಯಾಗಿದೆ ಎಂದು ಹೇಳಬಹುದು.

ಸಚಿವ ಸ್ಥಾನ ಜಾರಕಿಹೊಳಿ ಕುಟುಂಬಕ್ಕೆ: 2004ರಿಂದ ಯಾವುದೇ ಪಕ್ಷ ಸರ್ಕಾರಕ್ಕೆ ಬರಲಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಿಲ್ಲ ಒಬ್ಬರು ಸಚಿವರಾಗುತ್ತ ಬಂದಿದ್ದಾರೆ. 2004ರಲ್ಲಿ ಧರ್ಮಸಿಂಗ್‌ ಸರ್ಕಾರದಲ್ಲಿ ಸತೀಶ ಜವಳಿ ಸಚಿವರಾಗಿದ್ದರು. 2006ರಲ್ಲಿ ಜೆಡಿಎಸ್‌– ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಬ್ಬ ಸಹೋದರ ಬಾಲಚಂದ್ರ ಸಮಾಜ ಕಲ್ಯಾಣ ಸಚಿವರಾಗಿದ್ದರು. 2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಾಲಚಂದ್ರ ಪೌರಾಡಳಿತ ಸಚಿವರಾಗಿದ್ದರು.

2013ರ ಮೊದಲ ಹಂತದಲ್ಲಿ ಸತೀಶ ಅಬಕಾರಿ ಹಾಗೂ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ಎರಡನೇ ಹಂತದಲ್ಲಿ ರಮೇಶ ಸಣ್ಣ ಕೈಗಾರಿಕೆ ಹಾಗೂ ಸಹಕಾರ ಸಚಿವರಾಗಿದ್ದರು. ಈಗ ಮತ್ತೆ ರಮೇಶ ಅವರಿಗೆ ಸಚಿವ ಸ್ಥಾನ ದೊರೆತಿದೆ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ ಸಚಿವ ಸ್ಥಾನ ಜಾರಕಿಹೊಳಿ ಕುಟುಂಬಕ್ಕೆ ಗ್ಯಾರಂಟಿ ಎನ್ನುವಂತಾಗಿದೆ.

ಲಕ್ಷ್ಮಿ ಪ್ರಯತ್ನಕ್ಕೂ ಸಿಗದ ಯಶಸ್ಸು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ ಕೂಡ ಸಚಿವ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವುದರಿಂದ ಪಕ್ಷದ ಹೈಕಮಾಂಡ್‌ ಪರಿಗಣಿಸಲಿಲ್ಲ ಎಂದು ಮೂಲಗಳು ಹೇಳಿವೆ. ಇದೇ ಕಾರಣಕ್ಕಾಗಿ ಅಂಜಲಿ ನಿಂಬಾಳ್ಕರ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅವು ಹೇಳಿವೆ.

ಸಂಸದ ಪ್ರಕಾಶ ಹುಕ್ಕೇರಿ ಅವರು ತಮ್ಮ ಮಗ ಗಣೇಶ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಚಿಕ್ಕ ವಯಸ್ಸು ಹಾಗೂ ಅನುಭವ ಸಾಲದು ಎನ್ನುವ ಅಂಶ ಅವರಿಗೆ ಅಡ್ಡಿಯಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿಗೆ ಕೇವಲ 22 ಸಚಿವ ಸ್ಥಾನಗಳು ಲಭ್ಯವಾಗಿದ್ದು, 78 ಶಾಸಕರಿದ್ದಾರೆ. ಲಭ್ಯ ಇರುವ ಕೆಲವೇ ಕೆಲವು

ಸ್ಥಾನಗಳಲ್ಲಿ ಹಿರಿತನ, ಜಾತಿ ಲೆಕ್ಕಾಚಾರ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಮೇಲೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT