ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಸಮಾಧಾನ, ಹಲವೆಡೆ ತೀವ್ರ ಅಸಮಾಧಾನ

ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಲು ಶಾಸಕರ ತೆರೆಮರೆಯ ಪೈಪೋಟಿ, ಮೇಲುಗೈ ಸಾಧಿಸಿದ ಶಿವಶಂಕರರೆಡ್ಡಿ
Last Updated 7 ಜೂನ್ 2018, 6:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಜಿಲ್ಲೆಯ ಶಾಸಕರು ತೆರೆಮರೆಯಲ್ಲಿ ನಡೆಸಿದ್ದ ಪೈಪೋಟಿಗೆ ಸದ್ಯ ತೆರೆ ಬಿದ್ದಿದೆ. ಸ್ಪರ್ಧೆಗಿಳಿದವರ ಪೈಕಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರು ಸಚಿವ ಸ್ಥಾನ ಗೆದ್ದು ಬೀಗಿದರೆ, ಉಳಿದವರು ಆಕಾಂಕ್ಷಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ ಎನ್ನಲಾಗಿದೆ.

ಅನೇಕ ದಿನಗಳಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಮೈತ್ರಿ ಸರ್ಕಾರದಲ್ಲಿ ಯಾರಿಗೆಲ್ಲ ಮಂತ್ರಿ ಭಾಗ್ಯ ದೊರೆಯಲಿದೆ ಎನ್ನುವುದೇ ಚರ್ಚೆಯ ವಸ್ತುವಾಗಿತ್ತು. ಅದರಲ್ಲಿ ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮತ್ತು ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಹೆಸರು ಕೇಳಿ ಬಂದಿದ್ದವು.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ‘ನಕಲಿ’ ಸಚಿವ ಸಂಪುಟದ ಪಟ್ಟಿಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ ಹುಟ್ಟು ಹಾಕಿದ್ದವು. ಪಟ್ಟಿಯನ್ನು ತಮ್ಮ ಶಾಸಕರ ಹೆಸರು ಕಂಡವರ ಮುಖಗಳೆಲ್ಲ ಅರಳುತ್ತಿದ್ದವು. ಇದೀಗ ಗೌರಿಬಿದನೂರು ಕಾಂಗ್ರೆಸ್ ಪಾಳೆಯ ಹೊರತುಪಡಿಸಿದಂತೆ ಉಳಿ ದವರಲ್ಲಿ ಮೌನ ಮನೆ ಮಾಡಿದೆ ಎನ್ನಲಾಗಿದೆ.

ಸತತವಾಗಿ ಐದು ಬಾರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲೆ ಬರೆದಿರುವ ಶಿವಶಂಕರರೆಡ್ಡಿ ಅವರು ಹೆಸರು ತುಸು ಹೆಚ್ಚಾಗಿಯೇ ಕೇಳಿ ಬಂದಿತ್ತು. ಅವರ ಹಿರಿತನಕ್ಕೆ ತಕ್ಕ ಬೆಲೆ ಈವರೆಗೆ ಅವರಿಗೆ ಪಕ್ಷದಲ್ಲಿ ದೊರೆತಿಲ್ಲ ಎನ್ನುವ ಬೇಸರ ಅವರ ಬೆಂಬಲಿಗರು, ಆಪ್ತರಲ್ಲಿ ಆಕ್ರೋಶ ಮಡುಗಟ್ಟಿತ್ತು. ಬುಧವಾರದಿಂದ ಅದು ಸಂತಸದ ಹೊನಲಾಗಿ ಬದಲಾಗಿದೆ.

ಶಿವಶಂಕರರೆಡ್ಡಿ ಅವರಿಗೆ ಸೆಡ್ಡು ಹೊಡೆದು ಹೈಕಮಾಂಡ್ ಮಟ್ಟದಲ್ಲಿ ವಿ.ಮುನಿಯಪ್ಪ ಮತ್ತು ಸುಧಾಕರ್ ಅವರು ತಮ್ಮದೇ ಆದ ತಂತ್ರಗಾರಿಕೆ ಮೂಲಕ ‘ಲಾಬಿ’ ನಡೆಸಿದ್ದರು. ಆದರೆ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರನ್ನು ಅಧಿಕಾರದಿಂದ ದೂರವಿಡುವ ನಿರ್ಧಾರ ತಳೆದ ಪರಿಣಾಮ ಈ ಇಬ್ಬರು ನಾಯಕರಿಗೆ ಹಿನ್ನಡೆಯಾಯಿತು ಎಂದು ಸದ್ಯ ವಿಶ್ಲೇಷಿಸಲಾಗುತ್ತಿದೆ.

ಇವರ ನಡುವೆಯೇ ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು ಸಹ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡು, ನಮ್ಮ ವರಿಷ್ಠ ನಾಯಕನೇ ಮುಖ್ಯಮಂತ್ರಿಯಾಗಿರುವ ಕಾರಣ ನನ್ನ ಮೇಲೆ ಕೃಪಾಕಟಾಕ್ಷ ತೋರಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸುತ್ತ ಬಂದಿದ್ದರು. ಇದೀಗ ಅವರು ಸಹ ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದವರಿಗೆ ಸಚಿವ ಸ್ಥಾನ ಇಲ್ಲ ಎಂಬ ಜೆಡಿಎಸ್ ವರಿಷ್ಠರ ನಿರ್ಧಾರ ಕೂಡ ಸಿ.ಆರ್.ಮನೋಹರ್ ಆಸೆಗೆ ತಣ್ಣೀರು ಎರಚಿದೆ. ಹೀಗಾಗಿ ಅವರು ಸಹ ತಮ್ಮ ‘ಆಪ್ತಮಿತ್ರ’ನ ಬಗ್ಗೆ ಆಪ್ತರ ಬಳಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದಿದೆ.

ಅಧಿಕಾರ ಇಲ್ಲದಾಗ ಬಾಚಿ ತಬ್ಬುವ ವರಿಷ್ಠರು: ಅಸಮಾಧಾನ
ಜೆಡಿಎಸ್ ವರಿಷ್ಠರು ಸಚಿವ ಸ್ಥಾನಕ್ಕೆ ಜಿಲ್ಲಾವಾರು, ಜಾತಿವಾರು ಪರಿಗಣಿಸುತ್ತೇವೆ ಎಂದಿದ್ದರು. ಹಾಗೆ ನೋಡಿದರೆ ನನಗೂ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಅಧಿಕಾರ ಇಲ್ಲದಿರುವ ಸಂದರ್ಭದಲ್ಲಿ ಬಾಚಿ ತಬ್ಬಿಕೊಳ್ಳುವ, ಅಧಿಕಾರ ಬಂದಾಗ ಮುಖ ಕೂಡ ನೋಡದಂತಹ ವರಿಷ್ಠರ ಮನಸ್ಥಿತಿ ಬಹಳ ನೋವು ತಂದಿದೆ. ಖಂಡಿತ ಅಸಮಾಧಾನವಾಗಿದೆ.

ನಾನು ಕಳೆದ ಹತ್ತು ವರ್ಷಗಳಿಂದ ಪಕ್ಷ ಮತ್ತು ನಾಯಕರಿಗೆ ನಿಷ್ಠನಾಗಿ ಕೆಲಸ ಮಾಡಿರುವೆ. ಯಾವುದೇ ಸಂದರ್ಭದಲ್ಲಿ ವರಿಷ್ಠರಿಂದ ಏನನ್ನೂ ನಿರೀಕ್ಷೆ ಮಾಡಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಸುಮಾರು ನಾಲ್ಕು ಲಕ್ಷ ಮತಗಳು ಬಂದಿವೆ. ಆದರೆ ವರಿಷ್ಠರಿಗೆ ಪಕ್ಷ ಸಂಘಟನೆ ಇಚ್ಛಾಶಕ್ತಿ, ದೂರದೃಷ್ಟಿ ಇಲ್ಲ ಎನಿಸುತ್ತಿದೆ. ಸೂಕ್ತ ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುತ್ತೇನೆ’ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತಿಳಿಸಿದರು.

‘ಕುಮಾರಸ್ವಾಮಿಗಿಂತ ಸಮರ್ಥ’
ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತಲೂ ಸಮರ್ಥ ಇದ್ದೇನೆ. ಆದರೆ ಕುಮಾರಸ್ವಾಮಿಗೆ ಅವರಪ್ಪ ದೇವೇಗೌಡ ಇದ್ದಾರೆ. ಪ್ರಿಯಾಂಕ್ ಖರ್ಗೆಗೆ ಅವರಪ್ಪ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಆದರೆ ನಾನೊಬ್ಬ ರೈತ, ಮೇಷ್ಟ್ರ ಮಗನಾದ್ದರಿಂದ ನಾವು ಏಣಿ ಹತ್ತಿಕೊಂಡು ಹೋಗಬೇಕು. ಅವರೆಲ್ಲ ವಿಮಾನದಲ್ಲಿ ಹೋಗುತ್ತಾರೆ. ಖಂಡಿತ ಬೇಸರವಾಗಿದೆ.

ನಾವು ರಾಜಕಾರಣಕ್ಕೆ ಬಂದಿರುವುದು ಕೇವಲ ಶಾಸಕರಾಗಿ ಉಳಿಯಲು ಅಲ್ಲ. ಈ ರಾಜ್ಯದ ಬಗ್ಗೆ ನನ್ನ ಬದ್ಧತೆ ಬಹಳ ದೂರದೃಷ್ಟಿಯಿಂದ ಕೂಡಿದೆ. ರಾಜ್ಯಕ್ಕೆ ನಾನು ಹೇಗೆಲ್ಲ ಕೆಲಸ ಮಾಡಬಹುದು ಎಂದು ರಾಜ್ಯ ನಾಯಕರು ಮನಗಂಡು ಕೂಡ ನನಗೆ ಸ್ಥಾನ ತಪ್ಪಿದ್ದು ತೀವ್ರ ನೋವಾಗಿದೆ ಎಂದು ಶಾಸಕ ಡಾ. ಕೆ. ಸುಧಾಕರ್ ಹೇಳಿದರು.

*
ಕಾಂಗ್ರೆಸ್‌ನಲ್ಲಿ ಸಚಿವನಾಗಲು ತಂದೆ, ಅಜ್ಜ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಯಾವ ರೀತಿ ಇರಬೇಕೆಂದು ವಿಚಾರ ಮಾಡುತ್ತಿರುವೆ.
-ಡಾ.ಕೆ. ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT