ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಹಾಡುಗಳಿಗೆ ಧ್ವನಿಯಾದ ಮರಿಸ್ವಾಮಿ

ವೃತ್ತಿಯಲ್ಲಿ ಆಟೊ ಚಾಲಕ, ಪ್ರವೃತಿಯಲ್ಲಿ ಜನಪದ ಗಾಯಕ
Last Updated 2 ಅಕ್ಟೋಬರ್ 2018, 14:24 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಇವರು ವೃತ್ತಿಯಲ್ಲಿ ಆಟೊ ಚಾಲಕ. ಪ್ರವೃತ್ತಿ ಜನಪದ ಹಾಡುಗಳ ಗಾಯನ. ಆಟೊ ಓಡಿಸುವ ಕಾಯಕದೊಂದಿಗೆ 15ಕ್ಕೂ ಹೆಚ್ಚು ವರ್ಷಗಳಿಂದ ಜನಪದ ಹಾಡು, ಭಕ್ತಿಗೀತೆಗಳಿಗೆ ಧ್ವನಿಯಾಗಿರುವ ಇವರ ಹೆಸರು ಮರಿಸ್ವಾಮಿ.

ತಂದೆಯಿಂದ ಬಳುವಳಿಯಾಗಿ ಬಂದ ಗಾಯನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಗ್ರಾಮದಲ್ಲಿ ಒಂದು ತಂಡವನ್ನೂ ಅವರು ಕಟ್ಟಿದ್ದಾರೆ.

ತಾಲ್ಲೂಕಿನ ಬೇಗೂರು ಹೋಬಳಿಯ ರಾಘವಾಪುರ ಗ್ರಾಮದ ಮರಿಸ್ವಾಮಿ ಅವರು ಜೀವನೋಪಯಕ್ಕಾಗಿ ಆಟೊ ಓಡಿಸುವುದರ ಜೊತೆಗೆ ಧ್ವನಿವರ್ಧಕಗಳನ್ನೂ ಬಾಡಿಗೆಗೆ ಕೊಡುತ್ತಾರೆ. ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಅವರು ಹೆಚ್ಚು ಚಿರಪರಿಚಿತವಾಗಿರುವುದು ಗಾಯನದ ಮೂಲಕ. ಅದರಲ್ಲೂ ಜನಪದ ಹಾಡುಗಳ ಗಾಯನ ಇವರಿಗೆ ಸಲೀಸು. ಮಹದೇಶ್ವರ, ಸಿದ್ದಪ್ಪಾಜಿ ಮಹಿಮೆಗಳ ಹಾಡುಗಳು ಇವರ ಕಂಠದಿಂದ ಸುಶ್ರಾವ್ಯವಾಗಿ ಹೊಮ್ಮುತ್ತವೆ. ಮಾತ್ರವಲ್ಲದೇ, ಭಕ್ತಿಗೀತೆ, ಶೋಕದ ಗೀತೆಗಳಿಗೂ ಮರಿಸ್ವಾಮಿ ದನಿಯಾಗುತ್ತಾರೆ.

ಗಣೇಶ ಉತ್ಸವದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮರಿಸ್ವಾಮಿ ಹಾಗೂ ಅವರ ತಂಡ ಹಲವು ಪ್ರದರ್ಶನಗಳನ್ನು ನೀಡಿದೆ.

ವ್ಯಕ್ತಿಯೊಬ್ಬರು ಮೃತಪಟ್ಟ ನಂತರ 11ನೇ ದಿನ ನಡೆಯುವ ತಿಥಿ ಕಾರ್ಯದಲ್ಲಿ ಗಾಯನ ಕಾರ್ಯಕ್ರಮ ಏರ್ಪಡಿಸುವ ಸಂಪ್ರದಾಯ ಈ ಭಾಗದ ಕೆಲವು ಸಮುದಾಯಗಳಲ್ಲಿದೆ. ಈ ಕಾರ್ಯಕ್ರಮಗಳಲ್ಲಿ ಹಾಡುವುದಕ್ಕಾಗಿ ಜನರುಮರಿಸ್ವಾಮಿ ಅವರನ್ನೇ ಹುಡುಕುತ್ತಾರೆ.‘ಈ ಕಾರ್ಯಕ್ರಮಗಳಿಂದಲೇ ನಾನು ಈ ಭಾಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದೇನೆ’ ಎಂದು ಮರಿಸ್ವಾಮಿ ವಿನೀತರಾಗಿ ಹೇಳಿದರು.

ತಂದೆಯಿಂದ ಬಂದ ಬಳುವಳಿ: ಮರಿಸ್ವಾಮಿ ಅವರ ತಂದೆ ಶಿಕ್ಷಕರಾಗಿದ್ದರು. ಜನಪದ ಕಲೆಗಳ ಪ್ರೇಮಿಯಾಗಿದ್ದರು. ಗ್ರಾಮದಲ್ಲಿ ಯುವಕರಿಗೆ ಮತ್ತು ಮಕ್ಕಳಿಗೆ ನಾಟಕ ಹೇಳಿಕೊಡುವುದು, ತಮಲ, ಹಾರ್ಮೋನಿಯಂ ನುಡಿಸುವುದನ್ನು ಹೇಳಿಕೊಡುತ್ತಿದ್ದರು. ಗ್ರಾಮದ ದೇವಸ್ಥಾನದಲ್ಲಿ ಭಜನೆಯನ್ನೂ ಮಾಡುತ್ತಿದ್ದರು.

‘ತಂದೆಯ ಗಾಯನವನ್ನು ಕೇಳುತ್ತಾ ನಾನೂ ಹಾಡುಗಾರನಾಗಬೇಕು ಎಂಬ ಆಸೆ ಬಾಲ್ಯದಲ್ಲೇ ಮೂಡಿತ್ತು. ಅದರಂತೆ 10ನೇ ತರಗತಿಯಲ್ಲಿ ಶಾಲೆಯನ್ನು ಬಿಟ್ಟು, ಗಾಯನದತ್ತ ಹೊರಳಿದೆ. ಹಾಡುಗಾರಿಕೆಯಲ್ಲಿ ಆಸಕ್ತಿ ತೋರುವವರಿಗೆ ಕಲಿಸುತ್ತಿದ್ದೇನೆ. ಜೀವನೋಪಾಯಕ್ಕಾಗಿ ಆಟೊ ಓಡಿಸುವುದು ಮತ್ತು ಧ್ವನಿವರ್ಧಕಗಳನ್ನು ಬಾಡಿಗೆಗೆ ಕೊಡುತ್ತೇನೆ’ ಎಂದು ಮರಿಸ್ವಾಮಿ ತಮ್ಮ ಪ್ರವೃತ್ತಿ ಮತ್ತು ವೃತ್ತಿಯನ್ನು ವಿವರಿಸಿದರು.

ಐದಾರು ಮಂದಿಯ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುವ ಮರಿಸ್ವಾಮಿ, ದೇವಾಲಯಗಳಲ್ಲಿ ಭಜನೆ ಮಾಡುವಾಗ ಆಸಕ್ತಿ ಇರುವವರು ಹಾಡುತ್ತೇವೆ ಎಂದು ಮುಂದಾಗ ಅವರಿಗೂ ಅವಕಾಶ ಮಾಡಿಕೊಡುತ್ತಾರೆ.

‘ಇಂದಿನ ಯುವಕರಿಗೆ ಹಿಂದಿನವರಂತೆ ಜನಪದ ಕಲೆಗಳ ಮೇಲೆ ಅಷ್ಟಾಗಿ ಆಸಕ್ತಿ ಇಲ್ಲ. ಆಸಕ್ತಿ ಇದ್ದವರಿಗೆ ಜನಪದ ವಾದ್ಯಗಳನ್ನು ನುಡಿಸುವುದು ಮತ್ತು ಹಾಡುವುದನ್ನು ಕಲಿಸುತ್ತೇವೆ’ ಎಂದು ಹೇಳಿದರು.

ಜನಪದ ಹಾಡುಗಳನ್ನು ಪಸರಿಸುವ ಕಾಯಕದಲ್ಲಿ ಮರಿಸ್ವಾಮಿ ಅವರೊಂದಿಗೆ ನಂಜುಂಡಸ್ವಾಮಿ, ಸೋಮಣ್ಣ, ಸಿದ್ದರಾಜು ಮತ್ತು ಶಿವಣ್ಣ ಅವರು ಕೈಜೋಡಿಸಿದ್ದಾರೆ.

ಜನಪದ ಹಾಡುಗಳು ಯಾವುದಕ್ಕೂ ಕಡಿಮೆ ಇಲ್ಲ

ಜನಪದ ಹಾಡುಗಳು ಯಾವ ಸಿನಿಮಾ ಹಾಡುಗಳಿಗಿಂತಲೂ ಕಡಿಮೆ ಇಲ್ಲ. ಅವು ಎಲ್ಲರನ್ನೂ ಆಕರ್ಷಿಸುತ್ತವೆ. ಅವುಗಳನ್ನು ಪಸರಿಸುವ ಕೆಲಸ ಆಗಬೇಕು. ಇಂದಿನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಅಂತರ್ಜಾಲದ ಬಳಕೆಯಿಂದ ದೇಶೀತ‌ನ ನಶಿಸುತ್ತಿದೆ. ಯುವ ಜನರು ಮಣ್ಣಿನ ಸೊಗಡನ್ನು ಬಿಡಬಾರದು. ಅವುಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಆಗ ಮಾತ್ರ ನಮ್ಮ ಗ್ರಾಮೀಣ ಸೊಗಡು ಸದಾ ಹಸಿರಾಗಿರುತ್ತದೆ ಎಂದು ಮರಿಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT