ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರಾಬಟ್ಟೆಯಾದ ಅಲೆಮಾರಿ ಕುಟುಂಬಗಳ ಬದುಕು

ಚಿಕ್ಕನಾಯಕನಹಳ್ಳಿ: ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಇರುವ ಗುಡಿಸಲುಗಳು
Last Updated 9 ಜೂನ್ 2018, 7:22 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ 6ನೇ ವಾರ್ಡ್ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ವಾಸವಾಗಿರುವ 25 ಅಲೆಮಾರಿ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. ಒಂದೂವರೆ ತಿಂಗಳಿನಿಂದ ಗಾಳಿಗೆ ಹಾರುವ ಗುಡಿಸಲುಗಳ ಸೂರು ಸರಿಮಾಡುವುದು ಹಾಗೂ ಒಳನುಗ್ಗುವ ಮಳೆ ನೀರನ್ನು ಹೊರ ಹಾಕುವುದೇ ನಿತ್ಯದ ಕಾಯಕವಾಗಿದೆ.

‘ಮಳೆ ಜೋರಾದಾಗ ಪಟ್ಟಣದ ಸರ್ಕಾರಿ ಕಟ್ಟಡ, ಅಂಗಡಿ ಮುಂಗಟ್ಟು ಹಾಗೂ ನಿರ್ಮಾಣದ ಹಂತದಲ್ಲಿರುವ ಕಟ್ಟಡಗಳಲ್ಲಿ ಆಶ್ರಯ ಪಡೆಯುತ್ತೇವೆ. ಬೆಳಿಗ್ಗೆ ಹೇಗೋ ದಿನ ದೂಡುತ್ತೇವೆ. ಆದರೆ, ಮಳೆ ರಾತ್ರಿಗಳು ನಮಗೆ ನರಕ ಸೃಷ್ಟಿಸುತ್ತಿವೆ’ ಎಂದು ಸುಡುಗಾಡು ಸಿದ್ಧ ಅಲೆಮಾರಿಗಳು ಕಷ್ಟ ಬಿಚ್ಚಿಡುತ್ತಾರೆ.

ಬುಧವಾರ ಸಂಜೆ ಸುರಿದ ಮಳೆಗೆ ಗುಡಿಸಲುಗಳ ಮುಂದೆ ನೀರು ನಿಂತಿದೆ. ಗುಡಿಸಲುಗಳಿಂದ ಹೊರ ಬರಲು ಪರದಾಡುವ ಪರಿಸ್ಥಿತಿ ಇದೆ. ನಿಂತ ನೀರು ಕೊಳೆಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ ತುಂತುರು ಹನಿ ಬೀಳುತ್ತಿದ್ದು, ಗುಡಿಸಲುಗಳು ಸೋರುತ್ತಿವೆ. ಗುಡಿಸಲುಗಳ ಒಳಗಿನ ನೀರನ್ನು ಹೊರಹಾಕಲು ಸದಸ್ಯರೆಲ್ಲರೂ ಪರದಾಡಿದ ದೃಶ್ಯ ಶುಕ್ರವಾರ ಪೂರ ಕಂಡು ಬಂತು.

ಸುಡುಗಾಡು ಸಿದ್ಧರ ಮಹಿಳೆ ನರಸಮ್ಮ,‘ಗುಂಡು ತೋಪಿನಿಂದ 10 ಹುಡುಗರು ಅಂಗನವಾಡಿಗೆ ಹಾಗೂ 8 ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಮಳೆಯ ಕಾರಣದಿಂದಾಗಿ ಯಾರೊಬ್ಬರೂ ಶಾಲೆಗೆ ಹೋಗಲಾಗಿಲ್ಲ. ಪುಸ್ತಕಗಳು ನೆನೆದು ಹೋಗಿವೆ. ರಾತ್ರಿ ಪೂರ ಕತ್ತಲಲ್ಲಿ ಜಾಗರಣೆ ಕೂರುವ ಸ್ಥಿತಿ ಎದುರಾಗಿದೆ. ಸಣ್ಣ ಪುಟ್ಟ ವ್ಯಾಪಾರದಿಂದಲೇ ನಮ್ಮ ಬದುಕು ಸಾಗಬೇಕಿದೆ. ಮಳೆಗಾಲ ಪ್ರಾರಂಭವಾದಾಗಿನಿಂದ ನಮ್ಮ ವ್ಯಾಪರ ನಿಂತು ಹೋಗಿದೆ. ಬಟ್ಟೆ ಬರೆ ನೀರು ಪಾಲಾಗಿವೆ. ಸಣ್ಣ ಮಕ್ಕಳು ಬಾಣಂತಿಯರು ಪರದಾಡುವಂತಾಗಿದೆ. ಗರಿ ಬಿಟ್ಟು ಗುಡಿಸಲು ಸರಿ ಮಾಡಿಕೊಳ್ಳೋಣ ಎಂದರೆ ಹೊಸ ಸೋಗೆ ಗರಿ ಸಿಗುತ್ತಿಲ್ಲ. ಯಾರು ನಮಗೊಂದು ಸೂರು ಕೊಟ್ಟು ಈ ನರಕದಿಂದ ಮುಕ್ತಿಗೊಳಿಸುತ್ತಾರೋ ಅವರನ್ನೇ ದೇವರು ಅಂದ್ಕೋತೀವಿ’ ಎಂದು ಹೇಳುವಾಗ ಅವರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು.

ಹುಣಸೆ ಮರ ತೆರವುಗೊಳಿಸಿ

ಸುಡುಗಾಡು ಸಿದ್ಧದರು ವಾಸ ಇರುವ ಜಾಗದಲ್ಲೇ 200 ವರ್ಷ ಹಳೆಯದಾದ ದೊಡ್ಡ ಹುಣಸೆ ಮರ ಇದೆ. ಮರ ತುಂಬಾ ಹಳೆಯದಾಗಿದ್ದು, ಕೊಂಬೆಗಳು ಮುರಿದು ಬೀಳುತ್ತಿವೆ. ಬೇರುಗಳು ಭೂಮಿಯಿಂದ ಹೊರಗೆ ಚಾಚಿಕೊಂಡಿದ್ದು, ಬಲ ಕಳೆದುಕೊಳ್ಳುತ್ತಿವೆ. ಒಂದು ವೇಳೆ ಮರ ಬುಡಮೇಲಾದರೆ ಗುಡಿಸಲುಗಳ ಮೇಲೆ ಬೀಳೂತ್ತದೆ. ಹಾಗೇನಾದರೂ ಆದರೆ ಅಪಾರ ಪ್ರಾಣ ಹಾನಿ ಸಂಭವಿಸುತ್ತದೆ. ತಕ್ಷಣ ಮರವನ್ನು ತೆರವುಗೊಳಿಸಿ ನಮ್ಮ ಪ್ರಾಣ ಉಳಿಸಿ ಎಂದು ಸುಡುಗಾಡು ಸಿದ್ಧರು ಮನವಿ ಮಾಡಿಕೊಂಡರು.

ಪುನರ್ವಸತಿ ಕಲ್ಪಿಸಿ

ಕಳೆದ 30 ವರ್ಷಗಳಿಂದ ತಲೆ ಮೇಲೆ ಸೂರು ಹೊಂದುವ ಕನಸ ಹೊತ್ತು ಕಾಯುತ್ತಿದ್ದೇವೆ. ನಮ್ಮ ಪರಿಸ್ಥಿತಿ ಒಂದಿಷ್ಟೂ ಸುಧಾರಿಸಿಲ್ಲ. ಮತದಾನದ ಚೀಟಿ, ರೇಷನ್ ಕಾರ್ಡ್, ಆಧಾರ್ ನಂಬರ್‌ಗಳನ್ನು ಹೋರಾಡಿಯೇ ಪಡೆದಿದ್ದೇವೆ.

ನಿರಂತರ ಹೋರಾಟದಿಂದಾಗಿ ನಮಗೆ ಪುನರ್ವಸತಿ ಕಲ್ಪಿಸಲು ದಬ್ಬೆಘಟ್ಟ ಸರ್ವೇ ನಂ: 122ರಲ್ಲಿ 2.5 ಎಕರೆ ಜಮೀನನ್ನು ಗುರುತಿಸಿ ಹಿಂದಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸುಡುಗಾಡು ಸಿದ್ಧರಿಗಾಗಿ ಈಗ ಗುರುತಿಸಿರುವ ಜಾಗದಲ್ಲಿ ಕಲ್ಲು ಮಲ್ಟಿ ಇದೆ. ಅಲ್ಲಿಗೆ ಹೋಗಲು ಯಾವುದೇ ದಾರಿ ಇಲ್ಲ. ಸ್ಥಳೀಯ ಪುರಸಭೆ ಅಧಿಕಾರಿಗಳು ಜಾಗ ಸಮತಟ್ಟು ಮಾಡಿಕೊಡಬೇಕು. ನೂತನ ಶಾಸಕರು ಈ ಕುರಿತು ನಿಗಾ ವಹಿಸಿ ನಮ್ಮ ನರಕದ ಜೀವನಕ್ಕೆ ಇತಿಶ್ರೀ ಹಾಡಬೇಕು‌
ವೆಂಕಟೇಶಯ್ಯ, ಸುಡುಗಾಡು ಸಿದ್ಧರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT