ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಮಳೆಯ ನಡುವೆಯೇ ಬಿರುಸಿನ ಮತದಾನ

ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ: 6,325 ಪದವೀಧರರು, 2,869 ಶಿಕ್ಷಕರಿಂದ ಹಕ್ಕು ಚಲಾವಣೆ
Last Updated 9 ಜೂನ್ 2018, 10:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆಯಿತು. ಪದವೀಧರ ಕ್ಷೇತ್ರದಲ್ಲಿ ಶೇ 71.97 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ 85.95 ಮತದಾನವಾಗಿದೆ.

ಪದವೀಧರ ಕ್ಷೇತ್ರದ 8,788 ಮತದಾರರ ಪೈಕಿ 6,325 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದ 3,338 ಮತದಾರರ ಪೈಕಿ 2,869 ಮಂದಿ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 12 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 8 ಮತಕೇಂದ್ರ ತೆರೆಯಲಾಗಿತ್ತು, ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಜಿಟಿಜಿಟಿ ಮಳೆಯ ನಡುವೆಯೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ನಡೆಯಿತು. ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ, ಶಾಸಕ ಸಿ.ಟಿ.ರವಿ ಮೊದಲಾದವರು ಹಕ್ಕು ಚಲಾಯಿಸಿದರು.

ಬೆಳಿಗ್ಗೆ 8.30ರ ನಂತರ ಮತದಾನ ಚುರಕುಗೊಂಡಿತು. ಮತದಾರರು ಸರದಿಯಲ್ಲಿ ಕಾದು ಹಕ್ಕು ಚಲಾಯಿಸಿದರು. ಮತದಾರರು ಭಾವಚಿತ್ರ ಇರುವ ಗುರುತಿನ ಚೀಟಿಗಳನ್ನ ತೋರಿಸಿ ಹಕ್ಕು ಚಲಾಯಿಸಿದರು.
ಮತ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರು, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಇದ್ದರು. ಮತ ಕೇಂದ್ರದಲ್ಲಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಕಾಲೇಜು ಮುಂಭಾಗದ ದ್ವಿಪಥ ಮಾರ್ಗದ ಒಂದು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

‘ಮತದಾನ ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ನಡೆದಿದೆ. ಮೈಸೂರಿಗೆ ಒಯ್ಯಲಾಗುತ್ತದೆ. ಮೈಸೂ ರಿನಲ್ಲಿ ಮತ ಎಣಿಕೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನೈರುತ್ಯ ಕ್ಷೇತ್ರವು ಆರು ಜಿಲ್ಲೆಗಳ ವ್ಯಾಪ್ತಿಒಳಗೊಂಡಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ (ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳು ಮಾತ್ರ) ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಜೂನ್‌ 12ರಂದು ಮತ ಎಣಿಕೆ ನಡೆಯಲಿದೆ. 15ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಕೊಪ್ಪ: ಶೇ 78.22ರಷ್ಟು ಮತದಾನ

ಕೊಪ್ಪ: ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆ ತಾಲ್ಲೂಕು ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಎರಡೂ ಕ್ಷೇತ್ರಗಳ ಒಟ್ಟು 978 ಮತದಾರರ ಪೈಕಿ 765 ಮಂದಿ ಮತ ಚಲಾಯಿಸಿದ್ದು, ಶೇ 78.22 ರಷ್ಟು ಮತದಾನವಾಗಿದೆ.

ಪದವೀಧರರ ಕ್ಷೇತ್ರದ ಒಟ್ಟು 700 ಮತದಾರರಲ್ಲಿ 541 ಮಂದಿ ಮತ ಚಲಾಯಿಸಿದ್ದು, ಶೇ 77.29 ರಷ್ಟು ಮತದಾನವಾಗಿದೆ. ಚುನಾವಣಾ ಧಿಕಾರಿಯಾಗಿ ಶೃಂಗೇರಿಯ ಸಿಡಿಪಿಒ ಉಮೇಶ್ ಕಾರ್ಯ ನಿರ್ವಹಿಸಿದರು.

ಶಿಕ್ಷಕರ ಕ್ಷೇತ್ರದ ಒಟ್ಟು 278 ಮತದಾರರಲ್ಲಿ 224 ಮಂದಿ ಮತ ಚಲಾಯಿಸಿದ್ದು, ಶೇ 77.29 ರಷ್ಟು ಮತದಾನವಾಗಿದೆ. ಚುನಾವಣಾ ಧಿಕಾರಿಯಾಗಿ ನ.ರಾ.ಪುರದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗೌತಮ್ ಕಾರ್ಯ ನಿರ್ವಹಿಸಿದರು.

ತಾಲ್ಲೂಕು ಕೇಂದ್ರ ಕೊಪ್ಪದ ಬಾಳಗಡಿಯ ಮಿನಿ ವಿಧಾನಸೌಧದ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಕೊಠಡಿಗಳಲ್ಲೂ ಮತದಾನಕ್ಕೆ ಎರಡು ಕೌಂಟರ್ ಅಳವಡಿಸಲಾಗಿತ್ತು. ಮತದಾನ ಪ್ರಕ್ರಿಯೆಯ ಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಚುರುಕಿನಿಂದ ನಡೆದ ಮತದಾನ ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಸಾಗಿತ್ತು. ಮಿನಿ ವಿಧಾನಸೌಧ ಕಟ್ಟಡದ ಹೊರಗೆ ಬೆಳಗ್ಗಿನಿಂದಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತದಾರರನ್ನು ಓಲೈಸುವ ಕೊನೆ ಹಂತದ ಪ್ರಯತ್ನದಲ್ಲಿ ತೊಡಗಿದ್ದರು.

ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಜಿ. ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಬಿಜೆಪಿ ಘಟಕದ ಅಧ್ಯಕ್ಷ ಜಿ.ಎಸ್. ಮಹಾಬಲ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಭಂಡಿಗಡಿ ದಿವಾಕರ್ ಭಟ್, ತಾಲ್ಲೂಕು ಕಾರ್ಯಾಧ್ಯಕ್ಷ ಎಚ್.ಎಸ್. ಕಳಸಪ್ಪ ಇನ್ನಿತರ ಮುಖಂಡರು ಭೇಟಿ ನೀಡಿ ಮತಯಾಚನೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು.

ಮುಖಂಡರಿಂದ ಮತಯಾಚನೆ

ತರೀಕೆರೆ: ಇಲ್ಲಿ ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿತ್ತು. ತಾಲ್ಲೂಕು ಆಡಳಿತವು ಮೂರು ಮತಗಟ್ಟೆಗಳನ್ನು ತೆರೆಯುವ ಮೂಲಕ ಮತದಾನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿತು. ಒಟ್ಟು ನಾಲ್ವರು ಅಧಿಕಾರಿಗಳ ತಂಡ ಒಂದು ಮತಗಟ್ಟೆಯನ್ನು ನಿರ್ವಹಿಸಿತು. ಎಲ್ಲ ಪಕ್ಷಗಳ ಮುಖಂಡರು ಮಳೆಯನ್ನು ಲೆಕ್ಕಿಸದೆ ತಮ್ಮ ಅಭ್ಯರ್ಥಿಯ ಪರ ಮತ ಕೇಳುತ್ತಿದ್ದರು.

ಶಾಸಕ ಡಿ.ಎಸ್.ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರ ಮತ ಯಾಚಿಸುತ್ತಿದ್ದರು.

ಕಾಂಗ್ರೆಸ್ ಪಕ್ಷದ ಪರವಾಗಿ ಎಸ್.ಎಂ.ನಾಗರಾಜ್ ಕೆ.ಆರ್‌. ಧ್ರುವಕುಮಾರ್, ಟಿ.ಎಸ್.ಧರ್ಮರಾಜು, ಟಿ.ಎಸ್.ರಮೇಶ್, ಪದ್ಮ ರಾಜು, ಬಿ.ಬಿ.ರವಿಕುಮಾರ್ ಮತಯಾಚನೆಯಲ್ಲಿ ನಿರತರಾಗಿದ್ದರು.

ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡರ ಜೊತೆಯಲ್ಲಿ ಮುಖಂಡರಾದ ಎಂ. ನರೇಂದ್ರ, ಪಾಂಡುರಾವ್ ಜಾಧವ್, ಮಂಜುನಾಥ್ ಇದ್ದರು.

ಮಾಜಿ ಶಾಸಕ ಎಸ್.ಎಂ. ನಾಗರಾಜು, ಜಿ.ಎಚ್. ಶ್ರೀನಿ ವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಎಂ.ಎ.ಡಿ.
ಬಿ.ಮಾಜಿ ಅಧ್ಯಕ್ಷ ಎನ್. ಮಂಜುನಾಥ್ ಮತ ಚಲಾಯಿ ಸಿದರು. ಇಲ್ಲಿನ ಮತಗಟ್ಟೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಶೇ 71, ಶಿಕ್ಷಕರ ಕ್ಷೇತ್ರದಲ್ಲಿ ಶೇ 92ರಷ್ಟು ಮತದಾನವಾಗಿದೆ.

ಶೇ.92 ಮತದಾನ

ಮೂಡಿಗೆರೆ ವರದಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ, ಮುಂಜಾನೆಯೇ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡಿದರು.

672 ಮತದಾರರಿರುವ ಪದವೀಧರ ಕ್ಷೇತ್ರದಲ್ಲಿ 306 ಪುರುಷ ಮತದಾರರು, 175 ಮಹಿಳಾ ಮತದಾರರು ಸೇರಿದಂತೆ ಒಟ್ಟು 481 ಮತದಾರರು ಹಕ್ಕು ಚಲಾಯಿಸುವ ಮೂಲಕ ಶೇ 71 ಮತದಾನವಾದರೆ, 315 ಮತದಾರರಿರುವ ಶಿಕ್ಷಕರ ಕ್ಷೇತ್ರದಲ್ಲಿ 178 ಪುರುಷ ಮತದಾರರು ಹಾಗೂ 113 ಮಹಿಳಾ ಮತದಾರರು ಸೇರಿದಂತೆ ಒಟ್ಟು 219 ಮತದಾರರು ಹಕ್ಕು ಚಲಾಯಿಸುವ ಮೂಲಕ ಶೇ 92 ರಷ್ಟು ಮತದಾನವಾಯಿತು.

ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಹುಡುಕಿ ಮತಗಟ್ಟೆಗೆ ಕರೆದು ತರುತ್ತಿದ್ದ ದೃಶ್ಯ ಕಂಡು ಬಂತು. ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ತಮ್ಮ ಬೆಂಬಲಿಗರೊಂದಿಗೆ ಬಂದು ಹಕ್ಕು ಚಲಾಯಿಸಿದರು. ವಿವಿಧ ಪಕ್ಷಗಳ ಕಾರ್ಯಕರ್ತರು ಸಂಜೆವರೆಗೂ ಮತಗಟ್ಟೆ ಸಮೀಪದಲ್ಲಿಯೇ ಬೀಡುಬಿಟ್ಟು, ಮತದಾನಕ್ಕಾಗಿ ಮತಗಟ್ಟೆಗೆ ಬರುತ್ತಿದ್ದ ಮತದಾರರಿಗೆ ತಮ್ಮ ಅಭ್ಯರ್ಥಿಗೇ ಮತ ಹಾಕುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡು ಬಂತು.

ಶಾಂತಿಯುತ ಮತದಾನ

ಶೃಂಗೇರಿ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮತದಾನ ನಡೆಯಿತು. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 133 ಮತದಾರರಿದ್ದು 127 ಮತಗಳು ಚಲಾವಣೆಗೊಂಡಿತ್ತು. ‌ಪದವೀಧರ ಕ್ಷೇತ್ರದಲ್ಲಿ ಒಟ್ಟು 267 ಮತಗಳಿದ್ದು, ಅದರಲ್ಲಿ 219 ಮತಗಳು ಚಲಾವಣೆಗೊಂಡಿವೆ. ಮತದಾನವು ಶಾಂತಿಯುತವಾಗಿ ನಡೆದಿದ್ದು, ಚುನಾವಣಾಧಿಕಾರಿಯಾಗಿ ಹೇಮಲತಾ ಅವರು ಕಾರ್ಯನಿರ್ವಹಿಸಿದರು.

ಉತ್ಸಾಹದ ಮತದಾನ

ನರಸಿಂಹರಾಜಪುರ: ಇಲ್ಲಿನ ಮಿನಿವಿ ಧಾನಸೌಧ ಕಂದಾಯ ವಿಭಾಗದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ, ಸಭಾಂಗಣದಲ್ಲಿ ಪದವೀಧರ ಕ್ಷೇತ್ರಕ್ಕೆ ಮತಗಟ್ಟೆ ಸ್ಥಾಪಿಸಲಾಗಿತ್ತು.

ಪದವೀಧರ ಕ್ಷೇತ್ರದ ಒಟ್ಟು 502 ಮತದಾರರಲ್ಲಿ 404 ಜನ ಮತಚಲಾಯಿಸಿ (ಶೇ 80.47) ರಷ್ಟು ಮತದಾನವಾಯಿತು. 303 ಪುರುಷ ಮತದಾರರಲ್ಲಿ 256 ಜನ, 199 ಮಹಿಳಾ ಮತದಾರರಲ್ಲಿ 146 ಜನ ಮತ ಚಲಾಯಿಸಿದರು. ಶಿಕ್ಷಕರ ಕ್ಷೇತ್ರದ ಒಟ್ಟು 121 ಮತದಾರರಲ್ಲಿ 106 ಮತದಾರರು ಮತ ಚಲಾಯಿಸಿ (ಶೇ 87.60)ರಷ್ಟು ಮತದಾನವಾಯಿತು. 76 ಪುರುಷ ಮತದಾರರಲ್ಲಿ 71 ಜನ, 45 ಮಹಿಳಾ ಮತದಾರರಲ್ಲಿ 35 ಜನ ಮತ ಚಲಾಯಿಸಿದರು. ಶುಕ್ರವಾರ ಬೆಳಿಗ್ಗೆಯಿಂದಲೇ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಮತದಾನದ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮಳೆ ಸ್ಪಲ್ಪ ಬಿಡುವು ನೀಡಿದ್ದರಿಂದ ಮತದಾನದ ಪ್ರಮಾಣ ಹೆಚ್ಚಾಯಿತು.

ಕಡೂರು: ವಿಧಾನ ಪರಿಷತ್ ಚುನಾವಣೆಗಾಗಿ ಕಡೂರಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ 65 ಮತ್ತು ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 86 ರಷ್ಟು ಮತದಾನವಾಗಿದೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 2,386 ಮತದಾರರಿದ್ದು, 1,576 ಮತದಾರರು ಮತ ಚಲಾಯಿಸಿದ್ದಾರೆ. 1,168 ಪುರುಷ ಹಾಗೂ 408 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 848 ಮತದಾರರಲ್ಲಿ 737 ಜನರು ಮತ ಚಲಾಯಿಸಿದ್ದಾರೆ. 576 ಪುರುಷರು ಹಾಗೂ 161 ಮಹಿಳೆಯರು ಮತ ಚಲಾಯಿಸಿದ್ದು ಒಟ್ಟಾರೆಯಾಗಿ ಶೇ 86 ಮತದಾನವಾಗಿದೆ.

ಬೆಳಿಗ್ಗಿನಿಂದಲೂ ನಿರಂತರವಾಗಿ ಮಂದಗತಿಯಲ್ಲಿ ಸುರಿದ ಮಳೆ ಮತದಾನಕ್ಕೆ ಅಡ್ಡಿಯಾಯಿತು. ಗ್ರಾಮಾಂತರ ಪ್ರದೇಶಗಳಿಂದ ಬರಬೇಕಿದ್ದ ಮತದಾರರು ಮಳೆಯಿಂದ ತೊಂದರೆ ಅನುಭವಿಸಿದರು. ಮೊದಲು ಮಂದಗತಿಯಲ್ಲಿ ಸಾಗಿದ ಮತದಾನ ನಂತರದಲ್ಲಿ ರಾಜಕೀಯ ಪಕ್ಷಗಳು ವಾಹನದ ವ್ಯವಸ್ಥೆ ಮಾಡಿ ಮತದಾರರನ್ನು ಕರೆ ತಂದದ್ದರಿಂದ ಮತದಾನ ಚುರುಕುಗೊಂಡಿತು.

ಶಾಸಕ ಕೆ.ಎಸ್.ಪ್ರಕಾಶ್(ಬೆಳ್ಳಿ) ಕಡೂರಿನ ತಾಲ್ಲೂಕು ಪಂಚಾಯಿತಿ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್, ಕೆ.ಎಸ್.ಆನಂದ್, ಕೆ.ಎಂ.ವಿನಾಯಕ, ಕೆ.ಆರ್.ಮಹೇಶ್ ಒಡೆಯರ್, ವಕ್ತಾರ ಚಂದ್ರಮೌಳಿ ಮುಂತಾದ ಪ್ರಮುಖರು ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT