ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆಯ ಸಿದ್ಧತೆಯಲ್ಲಿ ರೈತರು

ತರೀಕೆರೆಯಲ್ಲಿ ಹದವಾದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ
Last Updated 9 ಜೂನ್ 2018, 10:19 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕಿನಲ್ಲಿ ಮೂರು ವರ್ಷಗಳ ಕಾಲ ಸತತ ಬರಕಂಡು ಸೊರಗಿದ್ದ ರೈತರು, ಈಗ ಆಗಾಗ್ಗೆ ದಟ್ಟವಾಗಿ ಬೀಳುತ್ತಿರುವ ಹದವಾದ ಮಳೆಯಿಂದಾಗಿ ಹರ್ಷದಲ್ಲಿ ಮಿಂದೇಳುತ್ತಿದ್ದಾರೆ..

ಈ ಹಿಂದೆ ನಿಗದಿತ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗದೇ, ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದ ಪ್ರಹಾರಕ್ಕೆ ತಾಲ್ಲೂಕಿನ ರೈತರು ತತ್ತರಿಸಿ ಹೋಗಿದ್ದರು. ಈಗ ಮಳೆಯಾಗುತ್ತಿರುವುದರಿಂದ ಕಳೆದ ತಿಂಗಳಿನಿಂದ ಬೆಳೆ ಬೆಳೆಯಲು ಸನ್ನದನಾಗಿದ್ದು, ಒಟ್ಟಾರೆ ಕೃಷಿ ಚಟುವಟಿಕೆಗಳು ತಣ್ಣನೇ ಗರಿಗೆದರುತ್ತಿವೆ. ಮಳೆ ಸತತವಾಗಿ ಸುರಿಯದೇ ಸ್ವಲ್ಪ ಬಿಡುವು ಕೊಟ್ಟರೆ ಉತ್ತಮ ಕೃಷಿ ಬೆಳೆಯಬಹುದು ಎಂಬುದು ರೈತರ ಅಭಿಮತವಾಗಿದೆ.

ತಾಲ್ಲೂಕಿನ ರೈತರು ಅಡಿಕೆ ಬೆಳೆಯನ್ನು ಹೆಚ್ಚಾಗಿ ನಂಬಿಕೊಂಡಿದ್ದರು ಸಹ ಮಳೆಯಾಧಾರಿತ ಕೃಷಿ ಚಟುವಟಿಕೆಯನ್ನು ಮರೆತಿಲ್ಲ. ಕಾಲ ಕಾಲಕ್ಕೆ ಆಯಾ ಮಳೆಯನ್ನು ಆಧರಿಸಿ, ಭೌಗೋಳಿಕ ಗುಣದ ಆಧಾರದ ಮೇಲೆ ಕೃಷಿ ಚಟುವಟಿಕೆಯನ್ನು ನಡೆಸುವುದರಲ್ಲಿ ಹಿಂದೆ ಬಿದ್ದಿಲ್ಲ.

ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿನವರೆಗೆ ವಾಡಿಕೆ ಮಳೆಯ ಪ್ರಮಾಣವು 146 ಮೀ.ಮೀ. ಆದರೆ ಈ ಸಾರಿ 309 ಮೀ.ಮೀ. ಮಳೆಯಾಗಿದ್ದು ರೈತನಲ್ಲಿ ಭರವಸೆ ಮೂಡಿಸಿದೆ. ಶಿವನಿ ಹೋಬಳಿಯಲ್ಲಿ 333 ಮೀ.ಮೀ. (ವಾಡಿಕೆ ಮಳೆ 125 ಮೀ.ಮೀ.), ಅಜ್ಜಂಪುರದಲ್ಲಿ 299 ಮೀ.ಮೀ. (ವಾಡಿಕೆ ಮಳೆ 131 ಮೀ.ಮೀ.), ‌

ಕಸಬಾದಲ್ಲಿ 301ಮೀ.ಮೀ. (ವಾಡಿಕೆ ಮಳೆ 156 ಮೀ.ಮೀ.), ಅಮೃತಾಪುರ ಹೋಬಳಿಯಲ್ಲಿ 340ಮೀ.ಮೀ (ವಾಡಿಕೆ ಮಳೆ 156ಮೀ.ಮೀ.) ಮಳೆಯಾಗಿದೆ.

ಈ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯಗಳಾದ ಶೆಂಗಾ, ತೊಗರಿ, ಹಲಸಂದೆ, ಉದ್ದು ಹಾಗೂ ಮುಸುಕಿನ ಜೋಳವನ್ನು ಎಲ್ಲಾ ಹೋಬಳಿಗಳಲ್ಲಿಯೂ ಬೆಳೆಯಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಸಕ್ತ ವರ್ಷ ಏಕದಳ ಧಾನ್ಯಗಳನ್ನು 31,800 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯಗಳನ್ನು 4,000 ಹೆಕ್ಟೇರ್ ಪ್ರದೇಶದಲ್ಲಿ, ಎಣ್ಣೆಕಾಳುಗಳನ್ನು 5,200 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಯನ್ನು 1,200 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 42,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.

ಈಗಾಗಲೇ ಮುಸುಕಿನ ಜೋಳ 350 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯ 75 ಹೆಕ್ಟೇರ್ ಪ್ರದೇಶದಲ್ಲಿ, ನೆಲಗಡಲೆ 500 ಹೆಕ್ಟೇರ್ ಪ್ರದೇಶದಲ್ಲಿ, ಕಬ್ಬು ಮತ್ತು ಹತ್ತಿ 875 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯನ್ನು ಮಾಡಲಾಗಿದೆ. ಉಳಿದಂತೆ ಶಿವನಿ ಹಾಗೂ ಅಜ್ಜಂಪುರದಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೇರಳವಾಗಿ ಬೆಳೆಯಲಾಗುವ ಈರುಳ್ಳಿ ಬೀಜ ಬಿತ್ತನೆಯು ನಡೆಯುತ್ತಿದೆ.

ಕೃಷಿ ಇಲಾಖೆಯು ಸಹ ಕೃಷಿ ಚಟುವಟಿಕೆಗೆ ಸಂಬಂಧಿತ ಸಹಕಾರವನ್ನು ರೈತರಿಗೆ ನೀಡುತ್ತಿದ್ದು, ರೈತ ಸಂಪರ್ಕ ಕೇಂದ್ರದ ಮೂಲಕ ಎಲ್ಲ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 50ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 75ರ ಪ್ರಮಾಣದಲ್ಲಿ ಈ ಸೌಲಭ್ಯ ಸಿಗಲಿದೆ. ಲಘು ಪೋಷಕಾಂಶ, ಸ್ಪ್ರೇಯರ್ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ.

ರೈತರಿಗೆ ಗುಣಮಟ್ಟದ ಬೀಜಗಳನ್ನು ಇಲಾಖೆ ವಿತರಿಸಲಿ. ಬೀಜ ನೀಡಿ ಪಡೆದ ಹಣಕ್ಕೆ ರಸೀದಿ ನೀಡಿದರೆ ಬೆಳೆ ಕೈಕೊಟ್ಟ ಪಕ್ಷದಲ್ಲಿ ಪರಿಹಾರ ಪಡೆಯಬಹುದು. ಈ ಬಗ್ಗೆ ಇಲಾಖೆ ಗಮನಿಸಲಿ.
- ಕೆ.ಎಲ್.ನಾಗರಾಜ್, ಪ್ರಗತಿಪರ ರೈತ

ದಾದಾಪೀರ್, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT