ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ,ಕಡೂರಿನಲ್ಲಿ ವರ್ಷಧಾರೆ; ಜನಜೀವನ ಅಸ್ತವ್ಯಸ್ತ

ದಿನವಿಡೀ ಸುರಿದ ಮೃಗಶಿರ ಮಳೆ; ಮೈದುಂಬಿ ಹರಿದ ಜಲಪಾತಗಳು, ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ
Last Updated 9 ಜೂನ್ 2018, 10:22 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಗುರುವಾರ ರಾತ್ರಿಯಿಂದಲೇ ಪ್ರಾರಂಭವಾದ ಮಳೆ ಶುಕ್ರವಾರ ತಡರಾತ್ರಿಯವರೆಗೂ ಎಡೆಬಿಡದೇ ಸುರಿದಿದ್ದರಿಂದ ಜನರು ಮನೆಯಿಂದ ಹೊರಗೆ ಹೊರಡಲಾಗದೇ ಪರದಾಡು ವಂತಾಗಿತ್ತು.

ಕೊಟ್ಟಿಗೆಹಾರ, ಬಣಕಲ್‌, ಚಾರ್ಮಾ ಡಿಘಾಟಿ, ಬಾಳೂರು, ನಿಡುವಾಳೆ, ಕೂವೆ, ಭೈರಾಪುರ, ದೇವರುಂದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳ ವಾಗಿದ್ದು, ಹೇಮಾವತಿ, ಭದ್ರಾನದಿ, ಊರುಬಗೆನದಿ, ಜಪಾವತಿ, ಚಿಕ್ಕಳ್ಳ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನಮಟ್ಟ ಹೆಚ್ಚಳವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭತ್ತದ ಗದ್ದೆಗಳೆಲ್ಲವೂ ಜಲಾವೃತ್ತವಾಗಿದ್ದು, ನೋಡಲು ಕಣ್ಣಿಗೆ ಹಬ್ಬ ಉಂಟುಮಾಡಿದೆ.

ಮಳೆಯ ನಡುವೆಯೇ ವಿದ್ಯಾರ್ಥಿಗಳು ಕೊಡೆಯ ಆಶ್ರಯದಲ್ಲಿ ಶಾಲೆಗಳಿಗೆ ತೆರಳಿದ್ದು, ಸಂಜೆ ಶಾಲೆ ಬಿಡುವ ವೇಳೆಗೂ ಧಾರಾಕಾರ ಮಳೆ ಸುರಿದಿದ್ದರಿಂದ, ವಿದ್ಯಾರ್ಥಿಗಳು ಕೊಡೆಯ ಆಶ್ರಯವಿದ್ದರೂ ನೆನೆದು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಮಳೆಯೊಂದಿಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಚಾ ರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಪದೇ ಪದೇ ಸಂಚಾರ ಸ್ಥಗಿತವಾಗುತ್ತಿದೆ. ಗುರುವಾರದಿಂದಲೇ ಮಳೆ ಬಿರುಸು ಪಡೆದುಕೊಂಡಿರುವುದರಿಂದ ತರ ಕಾರಿ ಕಟಾವು ಕುಂಠಿತವಾಗಿದ್ದು, ಶುಕ್ರವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ತರಕಾರಿಯಿಲ್ಲದೇ ಗ್ರಾಹಕರು ಪರದಾಡುತ್ತಿದ್ದರು. ಮಳೆಯಿಂದಾಗಿ ಸಂತೆಯಲ್ಲಿ ಅಂಗಡಿಗಳ ಪ್ರಮಾಣವೂ ಕಡಿಮೆಯಿದ್ದು, ತರಕಾರಿ, ದಿನಸಿ ಬೆಲೆಗಳು ಗಗನಕ್ಕೇರಿದ್ದವು.

ಮಳೆಯಿಂದ ಬೇಲೂರು ಸಮೀಪ ಗೆಂಡೇಹಳ್ಳಿ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಶುಕ್ರವಾರ ಮುಂಜಾನೆ ಕೆಲಹೊತ್ತು ಬೇಲೂರು ಮೂಡಿಗೆರೆ ಸಂಪರ್ಕ ಸ್ಥಗಿತವಾಗಿದ್ದು, ವಾಹನಗಳು ಗೋಣಿಬೀಡು, ಚೀಕನಹಳ್ಳಿ ಮಾರ್ಗವಾಗಿ ಬೇಲೂರಿಗೆ ತೆರಳಿದವು.

ಕಳೆದ ನಾಲ್ಕು ವರ್ಷಗಳ ನಂತರ ನಿರಂತರವಾಗಿ ಸುರಿಯುತ್ತಿರುವ ಮಳೆಯು ರೈತ ಪಾಳಯದಲ್ಲಿ ಹರ್ಷ ಮೂಡಿಸಿದ್ದು, ಮಳೆಯ ನಡುವೆಯೇ ಭತ್ತದ ಗದ್ದೆಗಳಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ..

ಕಳಸದಲ್ಲಿ ಬಿರುಸಿನ ಮಳೆ

ಕಳಸ: ಹೋಬಳಿಯಾದ್ಯಂತ ಶುಕ್ರವಾರ ಭಾರಿ ಮಳೆ ಸುರಿದಿದೆ. ಬೆಳಿಗ್ಗಿನಿಂದಲೇ ಸತತವಾಗಿ ಸುರಿದ ಮಳೆಯು ಮಳೆಗಾಲದ ಆರಂಭದ ಖಚಿತತೆ ಮೂಡಿಸಿತು.

ಕೆಲ ದಿನಗಳಿಂದಲೂ ಆಗಾಗ್ಗೆ ಮಳೆ ಸುರಿಯುತ್ತಿದ್ದರೂ ಬೆಳಿಗ್ಗಿನಿಂದಲೇ ಮಳೆ ಹಿಡಿದಿದ್ದು ಶುಕ್ರವಾರವೇ. ಬಿರುಸಾದ ಗಾಳಿ ಮತ್ತು ಗುಡುಗಿನ ಜತೆ ಸುರಿದ ಮಳೆಗೆ ಶಾಲಾ ಮಕ್ಕಳು ಶಾಲೆಗೆ ತಲುಪಲು ಸಾಹಸ ಪಡಬೇಕಾಯಿತು. ತೋಟಗಳಲ್ಲಿ ಕೆಲ ಕಾರ್ಮಿಕರು ರಜೆ ಮಾಡಿದ್ದರು.

ಹಳ್ಳ, ಕೆರೆಗಳಲ್ಲೆಲ್ಲಾ ಕೆಂಪನೆಯ ನೀರು ತುಂಬಿಕೊಂಡಿತು. ಭದ್ರಾ ನದಿಯು ಕೆಂಬಣ್ಣದಿಂದ ತನ್ನ ಸ್ವರೂಪ ಬದಲಿಸಿಕೊಳ್ಳಲಾರಂಭಿಸಿತು. ಬೇಸಿ ಗೆಯ ಮಟ್ಟಕ್ಕಿಂತ ಭದ್ರೆಯಲ್ಲಿ ಈಗಿನ ನೀರಿನ ಹರಿವು 3 ಅಡಿಯಷ್ಟು ಏರಿದೆ.

ಮಳೆಗಾಲ ಭರ್ಜರಿಯಾಗಿಯೇ ಆರಂಭವಾದ ಬಗ್ಗೆ ಕೃಷಿಕ ವಲಯದಲ್ಲಿ ಸಂತಸ ಮೂಡಿದೆ. ಎರಡು ವರ್ಷಗಳ ಮಳೆ ಕೊರತೆಯ ನಂತರ ಈ ವರ್ಷ ವಾಡಿಕೆ ಮಳೆ ಸುರಿಯಬಹುದು ಎಂಬ ಆಶಾವಾದ ಜನರಲ್ಲಿದೆ. ಅದಕ್ಕೆ ತಕ್ಕಂತೆ ಈಗಾಗಲೇ ಕಳಸದಲ್ಲಿ 20 ಇಂಚು ಮಳೆ ಆಗಿದೆ. ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಈ ಪ್ರಮಾಣ ಈಗಲೇ ದುಪ್ಪಟ್ಟು ಆಗಿದೆ.

ಕಡೂರು: ದಿನವಿಡೀ ಸುರಿದ ಮಳೆ

ಕಡೂರು: ಮೃಗಶಿರೆ ಮಳೆ ತಾಲ್ಲೂಕಿ ನಾದ್ಯಂತ ದಿನವಿಡೀ ಸುರಿಯಿತು. ಕಡೂರು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಂದಗತಿಯಿಂದ ಸುರಿದ ಜಿಟಿ ಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಶುಕ್ರವಾರ ಬೆಳಗಿನಿಂದಲೇ ಮಳೆ ಆರಂಭವಾದಾಗ ಗ್ರಾಮಾಂತರ ಪ್ರದೇಶದ ಜನರು ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಯಿತು. ಈರುಳ್ಳಿ ಕಳೆ ಕೂಲಿ ಕೆಲಸಕ್ಕೆ ಹೋಗು ವವರು ಮನೆಯಲ್ಲಿಯೇ ಉಳಿದರೆ ಟೊಮ್ಯಾಟೋ ಕೊಯ್ಲು ಮಾಡಲು ರೈತರು ತೊಂದರೆ ಅನುಭವಿಸಿದರು. ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಪರದಾಡಿದರು.

ಮತಿಘಟ್ಟ, ಕುಪ್ಪಾಳು, ಕೆರೆಸಂತೆ, ತಂಗಲಿ, ಮಲ್ಲೇಶ್ವರ, ಮಚ್ಚೇರಿ, ಮಲ್ಲಿದೇವಿಹಳ್ಳಿ, ಸೂರಾಪುರ , ಯಗಟಿ, ಚಿಕ್ಕಬಾಸೂರು, ಎಂ.ಕೋಡಿಹಳ್ಳಿ, ಎಮ್ಮೆದೊಡ್ಡಿ, ಸಖರಾಯಪಟ್ಟಣ, ವೈ.ಮಲ್ಲಾಪುರ ಮುಂತಾದೆಡೆಗಳಲ್ಲಿ ಮಳೆ ಶುಕ್ರವಾರವಿಡೀ ಸುರಿದಿದೆ. ಆದರೆ, ಕಡೂರು ತಾಲ್ಲೂಕಿನ ಎರಡು ಪ್ರಮುಖ ನದಿಗಳಾದ ವೇದಾ ಮತ್ತು ಆವತಿ ನದಿಗಳಲ್ಲಿ ನೀರು ಹರಿಯಲಾರಂಭಿಸಿಲ್ಲ. ಹಲವೆಡೆ ಚೆಕ್ ಡ್ಯಾಂ ಗಳಲ್ಲಿ ಹೊಲಗಳಿಂದ ಹೊರ ಹರಿದ ನೀರು ಶೇಖರಣೆಗೊಂಡು ಅರ್ಧಕ್ಕೂ ಹೆಚ್ಚು ನೀರು ತುಂಬಿರುವುದು ಮತ್ತು ಹಲವು ಕೆರೆಗಳಲ್ಲಿ ನೀರು ತುಂಬಲಾರಂಭಿಸಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ತಾಲ್ಲೂಕಿನ ಜೀವನಾಡಿಯಾದ ಮಧಗದಕೆರೆಗೆ ನೀರು ಹರಿದು ಬರಲಾರಂಭಿಸಿದೆ. ಸಂಪೂರ್ಣ ಬತ್ತಿ ಹೋಗಿದ್ದ ಇನ್ನೊಂದು ಪ್ರಮುಖ ಕೆರೆಯಾದ ಕೆರೆಸಂತೆಯ ವಿಷ್ಣು ಸಮುದ್ರಕೆರೆಯಲ್ಲಿ ಅಲ್ಪಪ್ರಮಾಣದಲ್ಲಿ ಹಲವು ಗುಂಡಿಗಳು ತುಂಬಿರುವುದು ಕಂಡುಬಂದಿದೆ. ಮಲ್ಲೇಶ್ವರದಿಂದ ಯಗಟಿಗೆ ಹೋಗುವ ದಾರಿಯಲ್ಲಿ ಕಲ್ಲಾಪುರ, ಬಿಳುವಾಲ ಮುಂತಾದ ಗ್ರಾಮಗಳಲ್ಲಿ ತೆಂಗಿನ ತೋಟಗಳಲ್ಲಿ 2 ಅಡುಗೂ ಹೆಚ್ಚು ನೀರು ನಿಂತಿರುವುದು ಕಂಡುಬಂದಿತು.

ಕಡೂರು ಪಟ್ಟಣದಲ್ಲಿ ಪ್ರತೀ ಮಳೆಗಾಲದಲ್ಲಿ ಮೆಸ್ಕಾಂ ಕಚೇರಿ ಮುಂದೆ ಸಂಪೂರ್ಣ ನೀರು ತುಂಬಿ ಕೆರೆಯಂತಾಗುತ್ತಿತ್ತು. ಆದರೆ, ಕಳೆದ ಬೇಸಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಡಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಈ ಬಾರಿ ಅಲ್ಲಿ ನೀರು ನಿಲ್ಲದೆ ಸುಗಮ ಸಂಚಾರಕ್ಕೆ ಅನುವಾಗಿದೆ.

ಬೀರೂರಿನಲ್ಲಿ ಮಳೆ

ಬೀರೂರು: ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗಿನ ಜಾವದಿಂದಲೂ ಉತ್ತಮ ಮಳೆ ಸುರಿಯುತ್ತಿದ್ದು ಕೃಷಿಕರಲ್ಲಿ ಸಂತಸ ಮೂಡಿಸಿದರೆ, ವಾತಾವರಣವನ್ನು ತಂಪಾಗಿಸಿದೆ.

ಬೀರೂರು ಭಾಗದಲ್ಲಿ ರೈತರು ಬಿತ್ತನೆ ಮಾಡಿರುವ ಈರುಳ್ಳಿ, ಶೇಂಗಾ, ಮೆಕ್ಕೆಜೋಳಗಳು ಮೊಳಕೆಯೊಡೆದಿದ್ದು ರೈತಾಪಿವರ್ಗದ ಹರ್ಷಕ್ಕೆ ಕಾರಣ ವಾಗಿದೆ.

ಎಮ್ಮೆದೊಡ್ಡಿ ಭಾಗದಲ್ಲಿಯೂ ಉತ್ತಮ ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಜೀವನಾಡಿ ಮದಗದಕೆರೆಗೆ ನೀರು ಹರಿದು ಬರುತ್ತಿರುವುದಾಗಿ ತಿಳಿದುಬಂದಿದ್ದು, ಕೆರೆಯ ತೂಬನ್ನು ದುರಸ್ತಿಗೆಂದು ತೆರೆದಿರುವುದರಿಂದ ನೀರು ಸಂಗ್ರಹವಾಗಿರಲಿಲ್ಲ, ವಿಷಯ ತಿಳಿದ ಶಾಸಕ ಬೆಳ್ಳಿಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ, ತೂಬಿಗೆ ಮರಳು ಸುರಿಸಿ ತಾತ್ಕಾಲಿಕ ನೀರು ಸಂಗ್ರಹಕ್ಕೆ ಸೂಚಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ನಸುಕಿನಿಂದಲೇ ಜಿಟಿಜಿಟಿ ಮಳೆ ಸುರಿಯಯಿತು. ಬಾಬಾಬುಡನ್‌ ಗಿರಿ, ಮುಳ್ಳಯ್ಯನಗಿರಿ ಭಾಗದಲ್ಲಿ ಮಳೆಯಾಗಿದ್ದು, ಗಿರಿಶ್ರೇಣಿಯಲ್ಲಿ ಹಳ್ಳಗಳು, ಜಲಪಾತಗಳು ಮೈದುಂಬಿಕೊಂಡಿವೆ.

ಬೆಳಿಗ್ಗೆಯಿಂದ ಸಂಜೆವರೆಗೂ ಮೋಡಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನ ಕೊಂಚ ಬಿಡುವು ನೀಡಿದ್ದ ಮಳೆ ನಂತರ ಬಿಟ್ಟುಬಿಟ್ಟು ಸುರಿಯಿತು.

ಆಲ್ದೂರಿನಲ್ಲಿ 27.5 ಮಿ.ಮೀ, ಹಿರೇಕೊಳಲೆಯಲ್ಲಿ 14 ಮಿ.ಮೀ, ಬೀಕನಹಳ್ಳಿಯಲ್ಲಿ 9.5 ಮಿ.ಮೀ, ಚಿಕ್ಕಮಗಳೂರಿನಲ್ಲಿ 8.5 ಮಿ.ಮೀ ಮಳೆಯಾಗಿದೆ. ಕೆಲವೆಡೆ ಕೆರೆಗಳಿಗೆ ನೀರಾಗಿದೆ.

ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿಯ ಕೃಷಿ ಬೀಜೋತ್ಪಾದನ ಕೇಂದ್ರದಲ್ಲಿರುವ ಐದು ಹುಲ್ಲಿನ ಬಣವೆಗಳು ಮಳೆ ನೀರಿನಿಂದ ಹಾಳಾಗುತ್ತಿದ್ದು, ಕೃಷಿ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ರೈತ ಮುಖಂಡರುಶುಕ್ರವಾರ ಕೃಷಿ ಬೀಜೋತ್ಪಾದನ ಕೇಂದ್ರಕ್ಕೆ ಭೇಟಿ ನೀಡಿದಾಗ, ಬಣವೆಗಳು ಮಳೆಗೆ ತೋಯ್ದು ಗೊಬ್ಬರದಂತಾಗಿತ್ತು. ಕೂಡಲೇ ಅಧಿಕಾರಿಗಳು ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದ ರಾಸುಗಳಿಗೆ ನೀಡಬೇಕು, ಇಲ್ಲವೇ ರೈತರಿಗೆ ಹರಾಜು ಹಾಕಿ ವಿತರಿಸಬೇಕು. ಸುಮಾರು ಐದು ಬಣವೆಗಳಲ್ಲಿನ ಸುಗ್ಗಿ ಕಾಲದಿಂದಲೂ ಜಮಾ ಮಾಡಿರುವ 30 ಲೋಡ್‌ಗಳಿಗೂ ಮಿಗಿಲಾದಷ್ಟು ಮೇವು ಸಂಗ್ರಹವಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಬರಗಾಲದ ಸಂದರ್ಭದಲ್ಲಿ ಗೋಶಾಲೆಗಾಗಿ ಮೇವನ್ನು ಮೀಸಲಿಟ್ಟಿದ್ದು, ಬಳಕೆಯಾಗದ ಕಾರಣ ಮಳೆಯಲ್ಲಿ ತೋಯ್ದಿದೆ ಎಂದು ಬೀಜೋತ್ಪದನಾ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.ರಾಜು, ಶಿವಕುಮಾರ್, ವಿನೋದ್, ದೃವಕುಮಾರ್, ನವೀನ, ಚೇತನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT