ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗೇನಹಳ್ಳಿ ಶಾಲೆಯಲ್ಲಿ ಹಸಿರು ಶೃಂಗಾರ !

ದಾನಿಗಳ ನೆರವಿನಿಂದ ಸರ್ಕಾರಿ ಶಾಲೆ ಅಭಿವೃದ್ಧಿ, ದಾರ್ಶನಿಕರು, ಪ್ರಾಣಿಗಳ ಪ್ರತಿಕೃತಿ
Last Updated 9 ಜೂನ್ 2018, 10:33 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಸುತ್ತಲೂ ಹಸಿರು ಹೊದಿಕೆ. ಅಲ್ಲಲ್ಲಿ ಕಾಡು ಪ್ರಾಣಿಗಳು, ದಾರ್ಶನಿಕರ ಪ್ರತಿಕೃತಿಗಳು. ಇಡೀ ಪ್ರದೇಶದಲ್ಲಿ ಬೆಳೆದು ನಿಂತಿರುವ ವೈವಿಧ್ಯಮಯ ಮರ, ಗಿಡಗಳು. ಮರಗಳಲ್ಲಿ ಪಕ್ಷಿಗಳ ಕಲರವ, ಮಲೆನಾಡನ್ನೂ ನಾಚಿಸುವ ವಾತಾವರಣ. ಪ್ರಶಾಂತತೆಯ ಮಧ್ಯ ನಲಿಯುವ ಮಕ್ಕಳು…’ -ಇದು ತಾಲ್ಲೂಕಿನ ಗಡಿ ಭಾಗದಲ್ಲಿರುವ ರಾಮಗಿರಿ ಹೋಬಳಿಯ ಸಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬರುವ ದೃಶ್ಯಗಳು.

ಮೂಲ ಸೌಲಭ್ಯಗಳ ಕೊರತೆ, ಶಿಕ್ಷಕರ ಕೊರತೆ, ಶಾಲೆಯ ವಾತಾವರಣ ಆಕರ್ಷಕವಾಗಿ ಇಲ್ಲದೆ ಇರುವುದರಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲೊಂದು ಸರ್ಕಾರಿ ಶಾಲೆ ಸುಂದರ ಪರಿಸರದ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದೆ.

ರಾಮಗಿರಿಯಿಂದ ಶಿವನಿ ಮಾರ್ಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ರಸ್ತೆಯ ಪಕ್ಕದಲ್ಲೇ ಇರುವ ಈ ಸರ್ಕಾರಿ ಶಾಲೆ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಇಲ್ಲಿನ ಶಿಕ್ಷಕರು ಶ್ರಮವಹಿಸಿ ದಾನಿಗಳ ನೆರವಿನಿಂದ ಶಾಲೆಯನ್ನು ಅಭಿವೃದ್ಧಿ ಮಾಡಿದ್ದಾರೆ.

ಶಾಲೆಯ ಆವರಣದಲ್ಲಿ ಅಡಿಕೆ, ತೆಂಗು, ತೇಗ, ಹಲಸು, ಮಾವು, ನಿಂಬೆ, ಅಕೇಶಿಯಾ, ಬಿದಿರು, ಗಂಧ, ಅಶೋಕ, ಕಾಡು ಬಾದಾಮಿ ಮತ್ತಿತರ ಮರಗಳಿವೆ. ಶಾಲೆಯ ಆವರಣದಲ್ಲಿ ಕಾಡು ಪ್ರಾಣಿಗಳಾದ ಹುಲಿ, ಜಿಂಕೆ, ಆನೆ, ಡೈನೋಸಾರ್‌, ಮಹಾನ್ ದಾರ್ಶನಿಕ ಬಸವಣ್ಣ, ಶಿವನ ಪ್ರತಿಕೃತಿಗಳಿವೆ. ಶಾಲೆಯ ಕಾಂಪೌಂಡ್ ಮತ್ತು ಉದ್ಯಾನದಲ್ಲಿ ಪರಿಸರ ಉಳಿಸುವ ಸೂಕ್ತಿಗಳನ್ನು ಬರೆಸಲಾಗಿದೆ.

‘ನಾನು 13 ವರ್ಷಗಳಿಂದ ಈ ಶಾಲೆಯಲ್ಲಿ ಇದ್ದೇನೆ. ಈ ಶಾಲೆಗೆ ಬಂದಾಗ ಶಾಲೆ ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ. ಶಾಲೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಯೋಚಿಸಿದಾಗ ಕೆಲವರು ’ಸಾರ್ ಇಲ್ಲಿ ನಿಮಗೆ ಯಾರೂ ಸಹಕಾರ ನೀಡುವುದಿಲ್ಲ. ಸುಮ್ಮನೆ ಪಾಠ ಮಾಡಿಕೊಂಡು ಹೋಗಿ. ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ತಲೆ ಕೆಡಿಸಿಕೊಳ್ಳಬೇಡಿ’ ಎಂದು ಹೇಳಿದರು. ಆದರೂ ನಾನು ಎದೆಗುಂದದೆ ಜನರ ಮನವೊಲಿಸಲು ಮುಂದಾದೆ’ ಎನ್ನುತ್ತಾರೆ ಇಲ್ಲಿನ ಬಡ್ತಿ ಮುಖ್ಯಶಿಕ್ಷಕ ಜಿ. ರೇವಣ್ಣ.

‘ಒಂದಿಬ್ಬರು ನನ್ನ ಬಲಕ್ಕೆ ನಿಂತರು. ಮಕ್ಕಳ ಆಕರ್ಷಣೆಗೆ ಶಾಲಾ ಆವರಣದಲ್ಲಿ ನಾನೇ ₹10 ಸಾವಿರ ಖರ್ಚು ಮಾಡಿ ಪ್ರಾಣಿಯೊಂದರ ಪ್ರತಿಕೃತಿ ನಿರ್ಮಿಸಿದೆ. ಆಗ ಗ್ರಾಮಸ್ಥರೊಬ್ಬರು ಇನ್ನೊಂದು ಪ್ರತಿಕೃತಿ ನಿರ್ಮಿಸಲು ಧನಸಹಾಯ ಮಾಡಿದರು. ಪ್ರತಿಕೃತಿಯ ಕೆಳಗೆ ದಾನಿಗಳ ಹೆಸರು ಬರೆಸಿದೆ. ಇದರಿಂದ ಪ್ರೇರಣೆಗೊಂಡ ಅನೇಕರು ಶಾಲೆಗೆ ದೇಣಿಗೆ ನೀಡಲು ಮುಂದಾದರು. ನೋಡ ನೋಡುತ್ತಿದ್ದಂತೆಯೇ ಶಾಲೆಯ ವಾತಾವರಣವೇ ಬದಲಾಯಿತು’ ಎನ್ನುತ್ತಾರೆ ಅವರು.

‘ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಇದೆ. ಸಹ ಶಿಕ್ಷಕರಾದ ಜಿ.ಎಂ. ಚಂದ್ರಶೇಖರಪ್ಪ, ಎಂ. ಸುರೇಶ್, ಎಂ.ಎನ್. ಗಿರೀಶ್ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ರುದ್ರಸ್ವಾಮಿ ಹಾಗೂ ಗ್ರಾಮಸ್ಥರು ಶಾಲಾಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದು ಸ್ಮರಿಸುತ್ತಾರೆ ಜಿ. ರೇವಣ್ಣ.

ಮುಖ್ಯಶಿಕ್ಷಕ ರೇವಣ್ಣ ಅವರ ಸಂಪರ್ಕಕ್ಕೆ ಮೊಬೈಲ್-99003 66563

ದಾನಿಗಳಿಂದ ₹2 ಲಕ್ಷ ಕೊಡುಗೆ !

ಗ್ರಾಮದವರೂ ಸೇರಿ ಸುತ್ತಲಿನ ಹಳ್ಳಿಗಳ ದಾನಿಗಳು ಶಾಲೆಯ ಅಭಿವೃದ್ಧಿಗೆ ಸುಮಾರು ₹2 ಲಕ್ಷವನ್ನು  ಕೊಡುಗೆಯಾಗಿ ನೀಡಿದ್ದಾರೆ. ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಉದ್ಯಾನದಲ್ಲಿ ಸಿಮೆಂಟ್ ಬೆಂಚ್‌ಗಳನ್ನು ಇಡಲಾಗಿದೆ. ಶಾಲೆಯಲ್ಲಿ ಕೊಳವೆಬಾವಿ ಇದ್ದು, ಉದ್ಯಾನಕ್ಕೆ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು. ಬೇಸಿಗೆಯಲ್ಲೂ ನೀರು ಹಾಯಿಸಿ ಮರಗಿಡಗಳನ್ನು ಪೋಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT