ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಒ ಕಚೇರಿಗೂ ಬೇಕು ಕಾಯಕಲ್ಪ!

ಕುಸಿಯುವ ಭೀತಿಯಲ್ಲಿ ಗ್ರಾಮೀಣ ಕಚೇರಿ ಕಟ್ಟಡ
Last Updated 4 ಅಕ್ಟೋಬರ್ 2018, 11:31 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಭೀತಿಯಲ್ಲಿದೆ.

ಹಲವೆಡೆ ಸರ್ಕಾರಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿಗಳ ಕಟ್ಟಡಗಳಾದರೂ ಸರಿಯಾಗಿವೆಯೇ ಎಂದು ಗಮನಿಸಿದರೆ, ಅವು ಕೂಡ ದುಃಸ್ಥಿತಿಯಲ್ಲಿರುವುದು ಕಂಡುಬರುತ್ತಿದೆ. ಕಾಯಕಲ್ಪಕ್ಕೆ ಕಾಯುತ್ತಿವೆ.

ಚವಾಟ್ ಗಲ್ಲಿಯ ಮಾಡರ್ನ್ ಮರಾಠಿ ಗಂಡು ಮಕ್ಕಳ ಶಾಲೆ ಆವರಣದಲ್ಲಿರುವ ಗ್ರಾಮೀಣ ವಲಯದ ಬಿಒಒ ಕಚೇರಿ ಕಟ್ಟಡವಿದೆ. ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯೂ ಇಲ್ಲಿದೆ. ಅನೇಕ ವರ್ಷಗಳಿಂದಲೂ ಕಟ್ಟಡ ದುರಸ್ಥಿಗೆ ಅಥವಾ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಅಲ್ಲಿರುವ ಎಲ್ಲರೂ ಆತಂಕದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಿಂದ ಕೂಗಳತೆ ದೂರದಲ್ಲಿರುವ, ಈ ಕೊಠಡಿಗೆ ದುರಸ್ತಿಯ ಭಾಗ್ಯ ಸಿಕ್ಕಿಲ್ಲ.

ಅಲ್ಲಲ್ಲಿ ಬಿರುಕು:ಕಟ್ಟಡದ ಹೊರಾವರಣದ ತುಂಬೆಲ್ಲಾ ಪಾಚಿ ಕಟ್ಟಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲಲ್ಲಿ ಗೋಡೆಗಳ ಮೇಲಿನ ಸಿಮೆಂಟ್ ಪದರ ಹಾಗೂ ಚಾವಣಿಯ ಸಿಮೆಂಟ್ ಆಗಾಗ ಕಳಚಿ ಬೀಳುತ್ತಿರುತ್ತದೆ. ಕಿಟಕಿ ಗಾಜುಗಳು ಒಡೆದಿವೆ.

‘ಚಾವಣಿಯ ಸಿಮೆಂಟ್ ಆಗಾಗ ಕಳಚಿ ಬೀಳುತ್ತಿದೆ. ಒಂದೆರಡು ಬಾರಿ ನಮ್ಮ ಪಕ್ಕದಲ್ಲೇ ಬಿದ್ದಿದೆ. ಸ್ವಲ್ಪದರಲ್ಲೇ ನಾವು ಪಾರಾಗಿದ್ದೇವೆ. ಇದರಿಂದಾಗಿ ಭಯದಲ್ಲೇ ಕಾರ್ಯನಿರ್ವಹಿಸುವಂತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿ ಅಳಲು ತೋಡಿಕೊಂಡರು. ‘ಸದ್ಯ ಈ ಮಳೆಗಾಲದಲ್ಲಿ ಯಾವುದೇ ಅನಾಹುತವಾಗಲಿಲ್ಲ’ ಎಂದು ನಿಟ್ಟುಸಿರು ಬಿಟ್ಟರು.

ನಿವೇಶನದ ಭರವಸೆ:‘ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು ನಿಜ. ಎಂಟು ವರ್ಷಗಳಿಂದ ಇದೇ ಕಟ್ಟಡದಲ್ಲಿ ಕಚೇರಿ ಇದೆ. ಇದು ಮಾಡರ್ನ್ ಮರಾಠಿ ಗಂಡು ಮಕ್ಕಳ ಶಾಲೆ ನಂ. 5ಕ್ಕೆ ಸೇರಿರುವ ಕಟ್ಟಡವಾದ್ದರಿಂದ ಕೆಡವಿ ಹೊಸದಾಗಿ ಕಟ್ಟಲು ಆಗುತ್ತಿಲ್ಲ. ದುರಸ್ತಿಯೂ ಸಾಧ್ಯವಾಗುತ್ತಿಲ್ಲ. ನಿವೇಶನ ಸಿಗುವ ಭರವಸೆ ಇದ್ದು, ಅಲ್ಲಿ ಹೊಸದಾಗಿ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಬಿಇಒ ಲೀಲಾವತಿ ಎಸ್. ಹಿರೇಮಠ ಪ್ರತಿಕ್ರಿಯಿಸಿದರು.

ಕಳೆದ ಚಳಿಗಾಲದ ಅಧಿವೇಶನದ ಸಂದರ್ಭ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೂ ಕಟ್ಟಡದ ದುಸ್ಥಿತಿಯ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಪ್ರಾದೇಶಿಕ ಆಯುಕ್ತರ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಶೀಘ್ರವೇ ಏಳು ಗುಂಟೆ ನಿವೇಶನ ದೊರೆಯುವ ವಿಶ್ವಾಸವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT