ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರದಲ್ಲಿ ಕಲೆಯರಳಿಸುವ ಭಾಗ್ಯಶ್ರೀ

Last Updated 10 ಜೂನ್ 2018, 9:10 IST
ಅಕ್ಷರ ಗಾತ್ರ

ಜನರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡು ದೊಡ್ಡ ದೊಡ್ಡ ಸಾಧನೆ ಮಾಡಿದವರನ್ನು ನಾವು ನೋಡಿದ್ದೇವೆ. ಕಲಾವಿದರು ಯಾವ ಕ್ಷೇತ್ರದಲ್ಲೇ ಆದರೂ ಸಾಧನೆ ಮಾಡಬಹುದು. ಕಲೆಯೂ ಹಾಗೆ. ಅದು ಎಲ್ಲರಿಗೂ ಒಲಿಯುವುದು ಕಷ್ಟ, ಒಲಿದರು ಅದು ಕೆಲವರಿಗೆ ಬದುಕು ಕೂಡ ನೀಡುವುದಿಲ್ಲ. ಒಮ್ಮೆ ಆ ಕಲೆಯನ್ನು ಒಲಿಸಿಕೊಂಡರೆ ಅದೇ ಕಲೆಯಿಂದ ಬದುಕು ಕಟ್ಟಿಕೊಳ್ಳಲೂ ಸಾಧ್ಯ. ಅಂಥವರ ಸಾಲಿನಲ್ಲಿ ಭಾಗ್ಯಶ್ರೀ ಸತೀಶ ಅಕ್ಕಿ ಒಬ್ಬರಾಗಿದ್ದಾರೆ. ಕರಕುಶಲ ಕಲೆಯಲ್ಲಿ ಪಳಗಿರುವ ಭಾಗ್ಯಶ್ರೀ ಸಾವಿರ ಜನ ಮಹಿಳೆಯರಿಗೆ ಕಸೂತಿ ಕಲೆಯ ತರಬೇತಿಯನ್ನು ನೀಡಿದ್ದಾರೆ. ಸಾಕಷ್ಟು ಜನ ಮಹಿಳೆಯರ ಬದುಕನ್ನು ಕಟ್ಟಿಕೊಡಲು ಭಾಗ್ಯಶ್ರೀ ಮಾರ್ಗದರ್ಶಕರಾಗಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಸಂಘಸಂಸ್ಥೆ ವತಿಯಿಂದ ನಡೆಯುವಂತಹ ದೊಡ್ಡ ದೊಡ್ಡ ಪ್ರದರ್ಶನ ಮೇಳಗಳು, ಕಸೂತಿ ಕಲೆ ಮತ್ತು ಸಿರಿಧಾನ್ಯದ ಮಾಹಿತಿ ಪಡೆದ ಭಾಗ್ಯಶ್ರೀ ಅದನ್ನೇ ತಮ್ಮ ಜೀವನಕ್ಕೂ ದಾರಿಯಾಗಿಸಿಕೊಂಡರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಸಿಲ್ತೀಬಾವಿಯರು. ಹಾಲಿ ಬೆಲಹೊಂಗಲದಲ್ಲಿ ವಾಸವಿದ್ದಾರೆ. ಇವರು ವಾರದಲ್ಲಿ ಎರಡು ದಿನ ಧಾರವಾಡದ ರಾಯಾಪುರದ ಜ್ಞಾನ ವಿಕಾಸ ಕೇಂದ್ರದಲ್ಲಿ ಕಸೂತಿ ತರಬೇತಿ ನೀಡುತ್ತಿದ್ದಾರೆ. ನೂರಾರು ಮಹಿಳೆಯವರಿಗೆ ಮಾರ್ಗದರ್ಶಕಿ
ಯಾಗಿದ್ದಾರೆ. ಇವರು ಧರ್ಮಸ್ಥಳದ ಸಂಘಸಂಸ್ಥೆಯಲ್ಲಿ ಕಸೂತಿ ಟೀಚರ್ ಆಗಿ ತರಬೇತಿ ನೀಡುತ್ತಾರೆ.

ಸುಮಾರು ಒಂಬತ್ತು ಸಾವಿರಕ್ಕೂ ಹೆಚ್ಚು ಜನ ಮಹಿಳೆಯರಿಗೆ ಕಸೂತಿ ಕಲೆಯ ಬಗ್ಗೆ ತರಬೇತಿ ನೀಡಿ ಮಹಿಳೆಯರನ್ನು ಸ್ವಾವಲಂಬನೆಯನ್ನಾಗಿ ಮಾಡಿದ್ದಾರೆ. ಮೊದಲಿಗೆ ಕೇವಲ 11 ಜನರ ಸಂಘ ಮಾಡಿಕೊಂಡು ಅದರಲ್ಲಿ ಬಡ ಹೆಣ್ಣು ಮಕ್ಕಳು, ವಿಧವೆಯರು, ಅನಾಥರು, ಅಂಗವಿಕಲರಿಗೆ ತರಬೇತಿ ನೀಡಿದರು. ನಂತರದ ದಿನದಲ್ಲಿ ಇವರ ಕಲೆ ಕಂಡು ಸರ್ಕಾರ ಮತ್ತು ಎನ್‌ಜಿಒ ಸಂಸ್ಥೆಗಳಲ್ಲಿ ಉಚಿತ ತರಬೇತಿ ಮಾಡಿದ ಇವರಿಗೆ ಸರ್ಕಾರದಿಂದ ಮತ್ತು ಎನ್‌ಜಿಒ ದಿಂದ ಅನೇಕ ಪ್ರಶಸ್ತಿಗಳು ಸಂದಿವೆ.

ಸಿರಿಧಾನ್ಯದ ಆಹಾರದ ಬಗ್ಗೆ ಭಾಗ್ಯಶ್ರೀ ಅವರು ಸುಮಾರು ಐವತ್ತು ರೀತಿಯ ಅಡುಗೆ ಮಾಡುವ ಕಲೆ ಇವರಿಗೆ ಸಿದ್ದಿಸಿದೆ. ಅದರ ಬಗ್ಗೆ ಜನರಿಗೆ ಪೂರಕವಾದ ಮಾಹಿತಿ ನೀಡುತ್ತಾರೆ. ಹೆಚ್ಚಾಗಿ ಈ ಸಿರಿಧಾನ್ಯವನ್ನು ಸರ್ಕಾರದ ವತಿಯಿಂದ ನಡೆಸುವ ಮೇಳಗಳಲ್ಲಿ ಪ್ರದರ್ಶನ
ಮಾಡುತ್ತಾರೆ. ಮತ್ತು ಅನೇಕ ಬಗೆಯ ಕಾಳುಗಳ ಉಪಯೋಗ, ಮಾಡುವ ವಿಧಾನ, ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಲಾಭಗಳ ಬಗ್ಗೆ ಹೇಳುತ್ತಾರೆ. ಒಂದು ನವಣೆ ಕಾಳಿನಲ್ಲಿ, ಒಂದು ಮೊಟ್ಟೆಯ ಶಕ್ತಿ ಇದೆಯಂತೆ. ಇದರಿಂದ ನಿತ್ಯದ ಆಹಾರದಲ್ಲಿ ನಾವು ಹೆಚ್ಚಾಗಿ ಸಿರಿಧಾನ್ಯದ ಉಪಯೋಗ ಮಾಡಬೇಕು ಎಂದು ಸಲಹೆ ನೀಡುತ್ತಾರೆ.

ಕೈಯಿಂದ ಅಥವಾ ಸೂಜಿಯಿಂದ ಮಾಡುವ ಯಾವುದೇ ಕಲೆಗೂ ಕಸೂತಿ ಕಲೆ ಎನ್ನುತ್ತೇವೆ. ಹಳೆಯದರಲ್ಲಿ ಹೊಸತನ್ನು ಮಾಡುವ ಕುಶಲತೆ ಬೆಳೆಸಿಕೊಂಡಿರು ಭಾಗ್ಯಶ್ರೀ ಉಲನ್‌ ದಾರದಿಂದ ಬಾಗಿಲು ಪರದೆ, ಕಮಾನ ಪರದೆ, ವೈರ್‌ನಿಂದ ಚಕ್ಕಡಿ, ಕಾರ್ತಿಕ ಬುಟ್ಟಿ, ಕಿವಿಯಲ್ಲಿನ ಹೂವು, ನೆಲೆ, ಗಣಪತಿ ಮೂರ್ತಿ, ಹೂವಿನ ಕುಂಡ, ತೊಟ್ಟಿಲು, ಬ್ಯಾಗ್ ಪರ್ಸ್, ಆಕಾಶ ಬುಟ್ಟಿ, ಕೃಷ್ಣನ ಗಡಿಗೆ, ಟಿಫಿನ್‌ ಬ್ಯಾಗ್, ಬ್ಯಾಸ್ಕೆಟ್, ವೆನಿಟಿ ಬ್ಯಾಗ್, ಸ್ಪಂಜದಿಂದ ತಯಾರಿಸಿ ಗೊಂಬೆ, ಹೂವು, ಐಸ್ ಕಡಿಯಿಂದ ಹೂವಿನ ಕುಂಡಲಿ ತಯಾರಿಸುತ್ತಾರೆ. ಜೊತೆಗೆ ಟೇಲರಿಂಗ್‌ನಲ್ಲಿ ಇಂದಿಗೆ ಫ್ಯಾಷನ್‌ಅನ್ನು ಅಳವಡಿಸಿಕೊಂಡಿದ್ದಾರೆ. ಚೂಡಿದಾರ, ಡ್ರೆಸ್‌, ಎಲ್ಲ ರೀತಿಯ ಪುರುಷರ ಬಟ್ಟೆಗಳನ್ನು ಮತ್ತು ಸಣ್ಣ ಮಕ್ಕಳ ಬಟ್ಟೆಗಳನ್ನು ಹೊಲಿಯುತ್ತಾರೆ.

ತಮ್ಮಲ್ಲಿ ತರಬೇತಿ ಪಡೆದು ಕರಕುಶಲ ವಸ್ತುಗಳನ್ನು ತಯಾರಿಸುವ ಮಹಿಳೆಯರಿಗೆ ಅಗತ್ಯ ಮಾರುಕಟ್ಟೆಯನ್ನು ಒದಗಿಸುತ್ತಿರುವುದು ಭಾಗ್ಯಶ್ರೀ ಅವರ ಗಮನಾರ್ಹ ಕಾರ್ಯ. ಮನೆಯಲ್ಲಿ ಸಿಗುವ ಬಿಡುವಿನ ಸಮಯವನ್ನು ಕಸೂತಿ ಕೆಲಸಕ್ಕೆ ವಿನಿಯೋಗಿಸಿದರೆ ತಮ್ಮ ಖರ್ಚು, ಮಕ್ಕಳ ಖರ್ಚಿಗೂ ಆರ್ಥಿಕ ಸ್ವಾವಲಂಬನೆಯನ್ನು ನೀಡಲಿದೆ. ಎನ್ನುತ್ತಾರೆ ಭಾಗ್ಯಶ್ರೀ.

ಮೈಲಾರಿ ಪಟಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT