ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಿರಿಕೊಡ್ಲಿಮಠ

Last Updated 10 ಜೂನ್ 2018, 13:35 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಕೊಡ್ಲಿಪೇಟೆ ಪರಶುರಾಮ ಕ್ಷೇತ್ರ ಎಂದು ಗುರುತಿಸಿಕೊಳ್ಳುವ ಊರು. ಅಂದು ಪರಶುರಾಮ ಕ್ಷತ್ರಿಯರ ವಿರುದ್ಧ ಸಮರ ಸಾರಿ ಕೊಡಲಿ ಬೀಸಿ ಎಸೆದಾಗ ಚೂರುಗಳು ಬಿದ್ದ ಸ್ಥಳಗಳೇ ಕೊಡ್ಲಿಪೇಟೆ, ದೊಡ್ಡಕೊಡ್ಲಿ, ಕಿರಿಕೊಡ್ಲಿ ಎಂದಾಗಿದೆ. ಈ ಕಿರಿಕೊಡ್ಲಿಮಠವು ತನ್ನದೇ ಆದ ಐತಿಹ್ಯ ಹೊಂದಿದೆ’.

ಇವು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅವರು ಆಡಿದ ಮಾತುಗಳು. ಅಂದು ದಟ್ಟಾರಣ್ಯದಲ್ಲಿ ಕೈ ಹಂಚಿನ ಬಿದಿರು ಗಳಗಳಿಂದ ಕಟ್ಟಿದ್ದ ಕಿರಿಕೊಡ್ಲಿಮಠ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಶ್ರೀಗುರುಸಿದ್ಧಸ್ವಾಮಿ ವಿದ್ಯಾಪೀಠವಾಗಿ ಪ್ರಸಿದ್ಧಿ ಪಡೆದಿದೆ.

ಐತಿಹ್ಯ: ಕಿರಿಕೊಡ್ಲಿಮಠ ಲಿಂಗೈಕ ಉರಿಬಸವ ಸ್ವಾಮೀಜಿಯ ಅಧ್ಯಕ್ಷತೆಯಲ್ಲಿ ಕೊಡಗಿನ ರಾಜರ ಜಹಗೀರನ್ನು ಹೊಂದಿ ವೈಭವಯುತವಾಗಿದ್ದು ಜನಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಅನ್ನದಾಸೋಹ ಹಾಗೂ ಜ್ಞಾನ ದಾಸೋಹದ ತವರೂರಾಗಿ ಕೊಡ್ಲಿಪೇಟೆ ಭಾಗದ ಭಕ್ತರಲ್ಲಿ ಬಹಳ ಖ್ಯಾತಿ ಪಡೆದಿತ್ತು. ತದನಂತರದಲ್ಲಿ ಮಠಕ್ಕೆ ಅನೇಕ ಮಹಾಸ್ವಾಮಿಗಳು ಆಗಿಹೋಗಿದ್ದು ಭಕ್ತರ ಪ್ರೀತಿಗೆ ಪಾತ್ರವಾಗುತ್ತಲೇ ಬಂದಿದ್ದರು. ಆದರೆ, ಈ ಭಾಗದ ಪಾಳೇಗಾರರ ಕಾಲದಲ್ಲಿದ್ದ ಮಹಾಂತಸ್ವಾಮಿಗೂ ಪಾಳೇಗಾರರಿಗೂ ವೈಮನಸ್ಸು ಉಂಟಾಗಿ ದೂರು ನೀಡಲು, ರಾಜರು ಮಠಕ್ಕೆ ನೀಡಿದ್ದ ಜಹಗೀರು ಭೂಮಿಯನ್ನು ಹಿಂದಕ್ಕೆ ಪಡೆದು ಮಠದ ಆಸ್ತಿ ಇಲ್ಲವಾಯಿತು. ಇದನ್ನು ತಿಳಿದ ಮಠದ ಸುತ್ತಮುತ್ತ ಇರುವ ಭಕ್ತವೃಂದ 63 ಹಳ್ಳಿಯ ಜನರನ್ನು ಸೇರಿಸಿ ಪಾಳೇಗಾರರಿಂದ ದೂರೀಕರಿಸಲ್ಪಟ್ಟ ಮಠದ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಿರ್ಧರಿಸಿತು.

ಅಂದಿನಿಂದ ಕಿರಿಕೊಡ್ಲಿಮಠ ಭಕ್ತರ ಅಧೀನ ಮಠವಾಗಿ ನೆಲೆಯೂರಿತು.1937ರಲ್ಲಿ ಸಿದ್ಧಗಂಗಾ ಶ್ರೀಗಳ ಕೃಪಾಶೀರ್ವಾದದೊಂದಿಗೆ ಗುರುಸಿದ್ಧಸ್ವಾಮಿಯವರನ್ನು ಮಠದ ಅಧ್ಯಕ್ಷರನ್ನಾಗಿ ನೇಮಿಸಿತು. ಇವರ ಅವಧಿಯಲ್ಲೂ ಅನೇಕ ಅಭಿವೃದ್ಧಿ ಕೆಲಸಗಳು ನಡೆದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. 1976ರಲ್ಲಿ ಪ್ರವಾಸಕ್ಕೆ ತೆರಳಿದ್ದ ಸ್ವಾಮೀಜಿ ಆಕಸ್ಮಿಕವಾಗಿ ಲಿಂಗೈಕ್ಯರಾದರು.

ನಂತರ 1983ರಲ್ಲಿ ಸಿದ್ಧಗಂಗಾ ಶ್ರೀಗಳ ಸಮ್ಮುಖದಲ್ಲಿ ಮಠದ ಅಧ್ಯಕ್ಷರಾಗಿ, 10ನೇ ಸ್ವಾಮೀಜಿಯಾಗಿ ಕೊಡಗಿನ ಶಿರಂಗಾಲ ಗ್ರಾಮದ ಕಾಳಿಂಗಪ್ಪ–ಸುಶೀಲಮ್ಮ ದಂಪತಿಯ ಏಕೈಕ ಪುತ್ರ 16ರ ಹರೆಯದ ಸದಾಶಿವ ಅವರನ್ನು ನೇಮಿಸಲಾಯಿತು.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಅಧ್ಯಯನ ಪೂರೈಸಿದ್ದ ಸದಾಶಿವ ಸ್ವಾಮೀಜಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಕಿರಿಕೊಡ್ಲಿಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಜಹಗೀರು ಕಳೆದುಕೊಂಡ ಮಠ ಹೆಚ್ಚಿನ ಆಸ್ತಿ ಇಲ್ಲವಾದರೂ ಅಂದಿನಿಂದ ಇಂದಿನವರೆಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಬಸವ ಜಯಂತಿ, ಲಿಂಗೈಕ್ಯ ಗುರುಗಳ ಸಂಸ್ಮರಣೆ, ಶಿವದೀಕ್ಷಾ ಸಂಸ್ಕಾರ, ಮಾಸಿಕ ತತ್ವ ಚಿಂತನಾಗೋಷ್ಠಿ, ಶಿವಾನುಭವ, ಹೊಂಗಿರಣ, ಬಡ ಮಕ್ಕಳಿಗೆ ಊಟ, ವಸತಿ ಸೌಕರ್ಯ ಒದಗಿಸಿದೆ.

ಕಿರಿಕೊಡ್ಲಿಮಠದ ಆಸ್ತಿ ಎಂದರೆ 7 ಎಕರೆ ಕಾಫಿ ತೋಟ ಹಾಗೂ 5 ಎಕರೆ ಗದ್ದೆ ಇದ್ದು, ಮಠದ ಖರ್ಚು–ವೆಚ್ಚದೊಂದಿಗೆ ಅಭಿವೃದ್ಧಿಗೆ ವಿನಿಯೋಗವಾಗುತ್ತಿದೆ. ಕೊಡ್ಲಿಪೇಟೆಯ ಮಹಡಿಮನೆ ಮಹಾಂತಪ್ಪ–ರುದ್ರಮ್ಮ ದಂಪತಿ ದಾನವಾಗಿ ನೀಡಿದ 2 ಎಕರೆ ಪ್ರದೇಶದಲ್ಲಿ ಗುರು ಸಿದ್ಧಸ್ವಾಮಿಗಳ ಹೆಸರಿನಲ್ಲಿ 2004ರಲ್ಲಿ ಡಾ.ಶಿವಕುಮಾರಸ್ವಾಮಿಗಳ ಸಾನಿಧ್ಯದಲ್ಲಿ ವಿದ್ಯಾಪೀಠ ಸ್ಥಾಪನೆಯಾಗಿದೆ. ಪಕ್ಕದಲ್ಲೇ ಪ್ರಾರ್ಥನಾ ಮಂದಿರದೊಂದಿಗೆ ಮಂಜುನಾಥ ಸ್ವಾಮಿ ದೇವಾಲಯ ನಿರ್ಮಾಣವಾಗಿದ್ದು ನಿತ್ಯ ಪೂಜೆ ಪುನಸ್ಕಾರ ನೆರವೇರುತ್ತಿದೆ.

ಪೂರ್ವ ಪ್ರಾಥಮಿಕ ಶಾಲೆಯಿಂದ ಆರಂಭವಾದ ವಿದ್ಯಾಪೀಠ ಹಂತಹಂತವಾಗಿ ಬೆಳೆದು ಪ್ರಸ್ತುತ ಪದವಿ ಪೂರ್ವ ಕಾಲೇಜಾಗಿದೆ. 700 ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರಲ್ಲಿ ಶೇ 35ರಷ್ಟು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ಉತ್ತಮ ಉಪನ್ಯಾಸಕರು ಹಾಗೂ ಶಿಕ್ಷಕರಿದ್ದಾರೆ. ಪ್ರತಿವರ್ಷ ಉತ್ತಮ ಫಲಿತಾಂಶ ದೊರೆಯುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ 7 ವರ್ಷಗಳಿಂದ ಶೇ 100 ಫಲಿತಾಂಶ ದೊರೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲೂ ಶೇ 100 ಫಲಿತಾಂಶ ಲಭಿಸಿದೆ. ಕೊಡ್ಲಿಪೇಟೆ ಹೋಬಳಿಯಲ್ಲಿ ಕಿರಿಕೊಡ್ಲಿಮಠ ವಿದ್ಯಾಕೇಂದ್ರವಾಗಿ ಬೆಳೆಯುತ್ತಾ ತನ್ಮೂಲಕ ಅಭಿವೃದ್ಧಿ ಸಾಧಿಸುತ್ತಿದೆ.

–ಶ.ಗ.ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT