ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಕಲ್ಯಾಣಿಗೆ ಕೊನೆಗೂ ಕಾಯಕಲ್ಪ

ಹನುಮಸಾಗರ: ಶುಚಿತ್ವ ಕಾರ್ಯದಿಂದ ಈಡೇರಿತು ಗ್ರಾಮಸ್ಥರ ಬಹುದಿನಗಳ ಬೇಡಿಕೆ
Last Updated 10 ಜೂನ್ 2018, 13:43 IST
ಅಕ್ಷರ ಗಾತ್ರ

ಹನುಮಸಾಗರ: ಐತಿಹಾಸಿಕ ಕಲ್ಯಾಣಿ ಕೊನೆಗೂ ಮರುಜೀವ ಪಡೆದಿದೆ. ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ತೊಟ್ಟಿಯಾಗಿದ್ದ ಕಲ್ಯಾಣಿಯು ಈಗ ಸ್ವಚ್ಛ ಪರಿಸರದಿಂದ ಕಂಗೊಳಿಸುತ್ತಿದೆ. ಇದರಿಂದ ಜನರಲ್ಲಿ ಸಂತಸ ಮೂಡಿದೆ.

ಅನಾದಿ ಕಾಲದಿಂದಲೂ ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಐತಿಹಾಸಿಕ ಕಲ್ಯಾಣಿಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿತ್ತು. ಸತ್ತ ಪ್ರಾಣಿಗಳನ್ನು, ಮನೆಯ ಕಸವನ್ನು ಎಸೆಯುವ ತಾಣವಾಗಿತ್ತು. ಈಗ ಇಡೀ ಸ್ಥಳವು ಸಂಪೂರ್ಣ ಬದಲಾಗಿದೆ. ಯಾರೇ ಭೇಟಿ ನೀಡಿದರೂ ಮನಸ್ಸಿಗೆ ಖುಷಿ ಕೊಡುತ್ತದೆ.

ಇದಕ್ಕೆ ಕಾರಣ: ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಮತ್ತು ಜೈಮಾತಾಜಿ ಯುವಕ ಸಂಘದ ಸದಸ್ಯರ ಎರಡು ತಿಂಗಳ ನಿರಂತರ ಶ್ರಮಧಾನ.

ಹನುಮಸಾಗರ ಗ್ರಾಮದಲ್ಲಿ ಓಣಿಗೊಂದರಂತೆ ಕಲಾತ್ಮಕ ಕಲ್ಯಾಣಿ ಮತ್ತು ಕೊಳವೆಬಾವಿಗಳಿವೆ. ತಂಗಮ್ಮಳಬಾವಿ, ಗುಡ್ಡದಬಾವಿ, ಅನುಪಕ್ಕನಬಾವಿ, ವಿಭೂತಿಯವರ ಬಾವಿ, ಆಶ್ರೀತರಬಾವಿ, ಹುನುಗುಂದವರ ಬಾವಿ, ಎಣ್ಣಿಯವರಬಾವಿ, ಮೇಹರವಾಡೆಬಾವಿ, ಪಾಟೀಲಬಾವಿ, ದಿಡ್ಡಿಬಾವಿ, ಮಠದಬಾವಿ, ಮನ್‌ಸಾಬನಬಾವಿ, ಗಾಣಿಗೇರಬಾವಿ, ಹಾಲಬಾವಿ, ಗಡಿಗೆಬಾವಿಗಳಿವೆಉ. ಆದರೆ  ಸದ್ಯ ಇವ್ಯಾವೂ ಇಲ್ಲಿನ ಸಹ ಜನರ ದಾಹ ತಣಿಸುವುದಿಲ್ಲ.

‘ಈ ಕಲ್ಯಾಣಿ ಸ್ವಚ್ಛ ಮಾಡುವುದಷ್ಟೆ ನಮ್ಮ ಉದ್ದೇಶವಲ್ಲ. ಮತ್ತೆ ನೀರು ತರಿಸುವುದು ಮುಖ್ಯ ಗುರಿ. ನೂರಾರು ವರ್ಷಗಳ ಹಿಂದೆ ಜನರು ಇಲ್ಲಿಯದ್ದೇ ನೀರು ಕುಡಿಯುತ್ತಿದ್ದರು. ಎಂದಿಗೂ ಬತ್ತುತ್ತಿರಲಿಲ್ಲ. ಆದರೆ ಈಗ ಅನಾಥ ಸ್ಥಿತಿಯಲ್ಲಿರುವ ಕಾರಣ ತುಂಬಾ ಬೇಸರವಾಯಿತು. ಅದಕ್ಕಾಗಿಯೇ ಸ್ವಚ್ಛತಾ ಕಾರ್ಯ ಕೈಗೆ‌ತ್ತಿಕೊಂಡೆವು’ ಎಂದು ಸಂಘಟನೆಯ ಸದಸ್ಯ ವಿಶ್ವನಾಥ ನಿಡಗುಂದಿಮಠ ತಿಳಿಸಿದರು.

‘ಈ ಕಲ್ಯಾಣಿಯನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಸ್ನಾನ ಮಾಡಲು ಹಾಸುಬಂಡೆಯಿದೆ. ಆವರಣದಲ್ಲಿ ನಿಲ್ಲಲು ಮತ್ತು ಕೂರಲು ಸ್ಥಳಾವಕಾಶ ಇದೆ. ಅಡುಗೆ ಮಾಡಿಕೊಳ್ಳಲು ಸೌಲಭ್ಯವಿದೆ. ವಿಶ್ರಾಂತಿಗೆ ಪುಟ್ಟ ಕೋಣೆಗಳಿವೆ. ಇವುಗಳಿಗೆ ಕಾಯಕಲ್ಪ ದೊರೆತರೆ, ಎಲ್ಲರಿಗೂ ಪ್ರಯೋಜನವಾಗುತ್ತದೆ’ ಎಂದು ವಿವರಿಸಿದರು.

ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಕಲ್ಯಾಣಿಯಲ್ಲಿ ತುಂಬಿಸಲು ಮತ್ತು ಶಿಥಿಲ ಕಟ್ಟಡವನ್ನು ದುರಸ್ಥಿಗೊಳಿಸಲು ಎರಡೂ ಸಂಘಟನೆಗಳ ಸದಸ್ಯರು ಪಣತೊಟ್ಟಿದ್ದಾರೆ. ಭವಿಷ್ಯದಲ್ಲಿ ಲಕ್ಷ ದೀಪೋತ್ಸವ ಆಯೋಜಿಸುವ ಮತ್ತು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅವರು ಚಿಂತನೆ ನಡೆಸಿದ್ದಾರೆ.

‘ಕಲ್ಯಾಣಿಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಸರ್ಕಾರವಲ್ಲದೇ ಸಾರ್ವಜನಿಕರು ಸಹ ಶ್ರಮಿಸಬೇಕು. ಅವು ಪಾಳು ಬೀಳದಂತೆ ನೋಡಿಕೊಳ್ಳಬೇಕು. ಸಂಘಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಆಲೋಚಿಸಬೇಕು’ ಎಂದು ಸಂಘಟನೆಯ ಸದಸ್ಯ  ಎಂದು ಶಿವು ಸಂಗಮದ ತಿಳಿಸಿದರು.

ಸಂಘಟನೆಯ ಸದಸ್ಯರಾದ ರಮೇಶ ಬಡಿಗೇರ, ವಿಶ್ವನಾಥ ನಿಡಗುಂದಿಮಠ, ಶಿವು ಸಂಗಮದ, ಶರಣಪ್ಪ ಬೋದೂರ, ಚಲುವಪ್ಪ, ವೀರೇಶ ಈಳಗೇರ, ಮಂಜುನಾಥ ದಿಡ್ಡಿಮನಿ, ಚಂದ್ರ ಬೆಳಗಲ್‌, ಕಳಕಪ್ಪ ಕೊರಡಕೇರಿ, ಮಂಜುನಾಥ ಲಂಗಟದ, ರಾಘವೇಂದ್ರ ಈಳಗೇರ, ಏಕನಾಥ ಮೆದಿಕೇರಿ, ವಿಠಲ್‌ ಸಿಂಗದ, ವಿಶ್ವನಾಥ ಬೇವಿನಮಠ, ಸಂಜಯ್ ಕುಮಾರ, ಮಂಜುನಾಥ ಸೂರ್ವೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಪ್ರಮುಖರು.

ದೇವಾಲಯ ಆವರಣ ಅಲ್ಲದೇ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಸ್ಥಳವನ್ನು ಶುಚಿಯಾಗಿಡುವ ಪ್ರಜ್ಞೆ ಪ್ರತಿಯೊಬ್ಬರು ಹೊಂದಬೇಕು
– ರಮೇಶ ಬಡಿಗೇರ.‌ ಸ್ವಯಂ ಸೇವಕ 

ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT