ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗ್ರಹ ಭೂಮಿಯನ್ನು ನುಂಗಬಹುದೇ?

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ನಭೋಮಂಡಲದಲ್ಲಿ ನಮ್ಮ ಸೂರ್ಯನಂತಹ ಕೋಟ್ಯಂತರ ಸೂರ್ಯರು, ಅವುಗಳನ್ನು ಅನುಸರಿಸಿ ಪರಿಭ್ರಮಿಸುವ ಅನೇಕ ಗ್ರಹಗಳು ಅದೆಷ್ಟೋ ಇವೆ, ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯ. ಏನೆಲ್ಲಾ ಚರ್ಚೆ, ವಾಗ್ವಾದ, ವಿಶ್ಲೇಷಣೆಗಳ ನಂತರ ಈ ವಿಷಯವನ್ನುವಿಜ್ಞಾನಿಗಳು ಒಪ್ಪಿದ್ದಾರೆ.

ಒಂದೊಂದು ಸೂರ್ಯನ ಸುತ್ತ ಮತ್ತು ಸಮೀಪದಲ್ಲಿ ಭಾರೀ ಗ್ರಹಗಳು, ಅತಿ ಹೆಚ್ಚು ವೇಗದಲ್ಲಿ ಸುತ್ತುತ್ತಿರುತ್ತವೆ ಎಂಬುದನ್ನು ನಂಬಿದ್ದಾರೆ. ಈಗ ಹೊಸದೊಂದು ಪ್ರಶ್ನೆ ಇಲ್ಲಿ ಉದ್ಭವವಾಗಿದೆ. ಅದೇನೆಂದರೆ ಆ ಸೌರಮಂಡಲಗಳಲ್ಲಿ ಭೂಮಿಯಂತಹ ಮಧ್ಯಮ ಗಾತ್ರದ ಗ್ರಹಗಳು ಇಲ್ಲವೇ? ಅಥವಾ ಅವುಗಳನ್ನೆಲ್ಲಾ ಯಾವುದಾದರೊಂದು ದೊಡ್ಡ ಗ್ರಹ ನುಂಗಿ ಬಿಟ್ಟಿತೇ? ನಮ್ಮ ಸೌರವ್ಯೂಹದಲ್ಲೂ ಹಾಗೆ ಆಗಬಹುದೇ? ಎಂಬುದು ಖಗೋಳ ವಿಜ್ಞಾನಿಗಳ ಆತಂಕ.

ನಮ್ಮ ಸೌರಮಂಡಲದಲ್ಲಿ 500 ಕೋಟಿ ವರ್ಷಗಳ ಹಿಂದೆ ಸೂರ್ಯ ಇರಲಿಲ್ಲ. ತನ್ನಷ್ಟಕ್ಕೆ ತಾನೇ ಗಿರ್ರೆಂದು ಗಿರಕಿ ಹೊಡೆಯುವ ಒಂದು ತೇಜೋಚಕ್ರ ಇತ್ತು. ಅದು ಬರೀ ಹೊಳೆಯುವ ಮೋಡ ಮತ್ತು ಅನಿಲದ ಚಕ್ರವಾಗಿತ್ತು. ಬಾಹ್ಯಾಕಾಶ ನಿಯಮಗಳ ಪ್ರಕಾರ, ಹೀಗೆ ತಿರುಗುವ ಚಕ್ರದ ಕೇಂದ್ರದಲ್ಲಿ ವೇಗ ಹೆಚ್ಚಿ ಅದರತ್ತಲೇ ಹೊಳೆಯುವ ದ್ರವ್ಯಗಳೆಲ್ಲ ಸೆಳೆತಗೊಂಡು ಚಕ್ರದ ಕೇಂದ್ರ ದಟ್ಟವಾಗುತ್ತಾ ಹೋಯಿತು.

ಒತ್ತಡ ತೀರಾ ಹೆಚ್ಚಿದಾಗ ಜಲಜನಕದ ಪರಮಾಣುಗಳು ಬೆಸುಗೆಯಾಗಿ ಹೀಲಿಯಂ ಆಗುತ್ತಾ ಭಾರೀ ಪ್ರಮಾಣದ ಶಕ್ತಿಯನ್ನೂ, ಬೆಳಕನ್ನೂ ಹೊರಹೊಮ್ಮಿಸ ತೊಡಗಿದವು. ಆಗ ಸೂರ್ಯ ಜನಿಸಿದ.

ಹೊರಗಡೆ ತೆಳುವಾಗಿ, ಚದುರಿದ ಅನಿಲ ಮೋಡಗಳ ದುರ್ಬಲ ಚಕ್ರ ಕ್ರಮೇಣ ಅಂಡಾಕಾರದ ಹಗ್ಗ, ಹುರಿಗಳಾಗಿ, ಅವೇ ಉಂಡೆ ಉಂಡೆಗಳಾಗಿ ಗ್ರಹಗಳಾದವು. ಸ್ವಲ್ಪ ತಡವಾಗಿ ಉಂಡೆಗಟ್ಟಿದ ಕಣಗಳು ಉಪಗ್ರಹಗಳಾದವು.

ಈ ನಡುವೆ ಸೂರ್ಯನಿಂದ ಸೌರಗಾಳಿ ಚಿಮ್ಮತೊಡಗಿತು. ಅಳಿದುಳಿದ ಅನಿಲ, ದೂಳು ಇತರೆ ಕಣಗಳು ದೂರ ದೂರ ತಳ್ಳುತ್ತಾ ಹೋದವು. ಗ್ರಹ-ಉಪಗ್ರಹಗಳನ್ನು ದೂರ ತಳ್ಳಲು ಸಾಧ್ಯವಾಗಿಲ್ಲ. ಅದು ನಮ್ಮ ಅದೃಷ್ಟವೇ ಇರಬೇಕು.

ಈ ಕಣಗಳು ದೂರ ದೂರದ ಗ್ರಹಗಳ ಹತ್ತಿರ ಬಂದಂತೆಲ್ಲಾ, ಗುರು, ಶನಿ, ಯುರೇನಸ್‌ಗಳು ಅವನ್ನೆಲ್ಲಾ ಕಬಳಿಸಿ ದೈತ್ಯಗಾತ್ರಕ್ಕೆ ಬೆಳೆಯುತ್ತಾ ಹೋದವು. ಬೆಳೆದಂತೆಲ್ಲಾ ಕುಟುಂಬದಿಂದ ದೂರ ಸರಿಯಬೇಕು ತಾನೇ? ಆದರೆ ಕೆಲವು ಸೂರ್ಯನ ಸಮೀಪ ಬಂದದ್ದು ಹೇಗೆ? ಎಂಬುದೇ ಜಿಜ್ಞಾಸೆ.

ಒಂದು ವಾದದ ಪ್ರಕಾರ ಆ ಭಾರೀ ಗ್ರಹ ತನ್ನ ಸೂರ್ಯನತ್ತ ಬರುತ್ತಾ ಇನ್ನೇನು ಅದರ ಉದರಕ್ಕೆ ಹೊಕ್ಕೆ ಬಿಟ್ಟಿತು ಎನ್ನುವಾಗ, ಸೂರ್ಯನ ಪರಿಭ್ರಮಣ ಶಕ್ತಿ ಆ ಗ್ರಹವನ್ನು ದೂರ ಚಿಮ್ಮಿಸಲು ಯತ್ನಿಸಿದೆ. ಹೀಗೆ ಆಕರ್ಷಣ ಮತ್ತು ವಿಕರ್ಷಣ ಎರಡೂ ಸಮತೋಲನಕ್ಕೆ ಬಂದಿದ್ದರಿಂದ ಗ್ರಹ ಅಲ್ಲೇ ಶಾಶ್ವತವಾಗಿ ಒಂದು ಅಂತರದಲ್ಲಿ ಸುತ್ತುತ್ತಿದೆಯಂತೆ.

ನಮ್ಮ ಗುರುಗ್ರಹವೂ ಹೀಗೆ ಬೆಳೆಯುತ್ತಾ ಹೋಗಿ, ಕೊನೆಯಲ್ಲಿ ಸೂರ್ಯನ ಸೆಳೆತಕ್ಕೆ ಸಿಕ್ಕರೆ? ಹಾಗೆ ಸಾಗಿ ಬರುವಾಗ ಮಂಗಳ, ಭೂಮಿ,ಮತ್ತು ಶುಕ್ರರನ್ನೂ ಗುಳುಂ ಮಾಡಿಬಿಟ್ಟರೆ? ಚಿಂತೆಯಿಲ್ಲ, ಗುರುಗ್ರಹ ಆ ರೀತಿ ಗ್ರಹಗಳಿಗೆ, ಸೂರ್ಯನಿಗೆ ಡಿಕ್ಕಿ ಹೊಡೆದರೆ ಆಗ ಚಿಮ್ಮುವ ದೂಳಿನಿಂದ ಹೊಸ ಭೂಗ್ರಹಗಳು, ಗುರುವಿಂತಹ ಹೊಸ ಗ್ರಹಗಳು ಹುಟ್ಟುತ್ತವೆ ಎನ್ನುತ್ತಾರೆ ಖಗೋಳ ವಿಜ್ಞಾನಿಗಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT