ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯನ್ನು ಆಮದು ಮಾಡಿಕೊಳ್ಳುವಂತೆ ಇದ್ದಿದ್ದರೆ?!

Last Updated 10 ಜೂನ್ 2018, 19:41 IST
ಅಕ್ಷರ ಗಾತ್ರ

ಭಾರತವು ಬುಲೆಟ್ ರೈಲು ಯೋಜನೆಯ ಅನುಷ್ಠಾನದ ಹಂತವನ್ನು ಆರಂಭಿಸಿದೆ. ಮುಂಬೈ- ಅಹಮದಾಬಾದ್‌ ಮಾರ್ಗದಲ್ಲಿ ಜಮೀನು ಸ್ವಾಧೀನಕ್ಕೆ ಸಮಸ್ಯೆಗಳು ಎದುರಾಗಿವೆ ಎನ್ನುವ ವರದಿಗಳು ಇವೆ. ಇವೆಲ್ಲವೂ ಸರಿಹೋಗುತ್ತವೆ ಎಂದು ಆಶಿಸೋಣ. ಈ ರೈಲು ಯೋಜನೆಯು ನಿಜವಾಗಿಯೂ ಶೀಘ್ರದಲ್ಲೇ ಆರಂಭವಾಗುತ್ತದೆ ಎನ್ನುವ ನಂಬಿಕೆಯ ಆಧಾರದಲ್ಲಿ ಇದನ್ನು ಬರೆದಿದ್ದೇನೆ.

ಇಷ್ಟೊಂದು ದೊಡ್ಡ ಪ್ರಮಾಣದ ಯೋಜನೆಯ ಅನುಷ್ಠಾನದಲ್ಲಿ ಕೆಲವು ಅಡೆತಡೆಗಳು ಎದುರಾಗುತ್ತವೆ. ಆದರೆ, ಅಡೆತಡೆಗಳೆಲ್ಲ ಸಣ್ಣವು ಎಂದು ಆಶಿಸೋಣ. ಎಲ್ಲವೂ ಸರಿಯಾಗಿ ಆದರೆ, ವಿದೇಶಿ ನೆರವು ಮತ್ತು ತಂತ್ರಜ್ಞಾನ ಹೊಂದಿರುವ ಬುಲೆಟ್ ರೈಲು ಸಂಚಾರ ನಡೆಸುವುದನ್ನು ನಾವು ಇನ್ನು ಕೆಲವು ವರ್ಷಗಳಲ್ಲಿ ಕಾಣಬಹುದು. ಜಪಾನ್‌ನಲ್ಲಿ ಐವತ್ತು ವರ್ಷಗಳಿಂದ ಬುಲೆಟ್ ರೈಲುಗಳು ಓಡಾಡುತ್ತಿವೆ.

ಅಲ್ಲಿ ಬುಲೆಟ್ ರೈಲು ಸಂಪರ್ಕ ಜಾಲ ಇಡೀ ದೇಶವನ್ನು ಆವರಿಸಿದೆ. ಜಪಾನ್‌ನ ಈಶಾನ್ಯ ದಿಕ್ಕಿನ ಮೂಲೆಯಲ್ಲಿ ಇರುವ ಹೊಕ್ಕಾಯ್ಡೊ ರಾಜ್ಯಕ್ಕೆ ಕೂಡ ಎರಡು ವರ್ಷಗಳ ಹಿಂದೆ ಬುಲೆಟ್ ರೈಲು ಸಂಪರ್ಕ ಕಲ್ಪಿಸಲಾಯಿತು. ಇದನ್ನು ಸಾಧ್ಯವಾಗಿಸುವ ಮೊದಲು ಸಮುದ್ರದ ಅಡಿ ಒಂದು ಸುರಂಗಮಾರ್ಗ ನಿರ್ಮಿಸಲಾಯಿತು.

ವಿಶ್ವದಲ್ಲಿ ಅತ್ಯಂತ ಮುಂದುವರಿದ ಸಮಾಜವಿರುವ ಏಕೈಕ ದೇಶ ಜಪಾನ್ ಎಂಬುದು ನನ್ನ ಅಭಿಪ್ರಾಯ (ನಾನು ಆ ದೇಶಕ್ಕೆ ಎರಡು ಬಾರಿ ದೀರ್ಘ ಅವಧಿಗೆ ಭೇಟಿ ನೀಡಿದ್ದೇನೆ). ಜಪಾನ್ ದೇಶವು ಯುರೋಪಿಗಿಂತಲೂ ಮುಂದುವರಿದಿದೆ, ಚೀನಾಗಿಂತಲೂ ಬಹಳ ಮುಂದುವರಿದಿದೆ ಎಂಬುದರಲ್ಲಿ ಅನುಮಾನ ಇಲ್ಲ.

'ಮುಂದುವರಿದಿದೆ' ಎಂದು ನಾನು ಜಪಾನ್‌ ಬಗ್ಗೆ ಹೇಳಿರುವುದರ ಅರ್ಥ 'ಅಲ್ಲಿನ ಜನ ಅತ್ಯಂತ ಮುಂದುವರಿದವರು' ಎಂಬುದು. ಜನ ಮುಂದುವರಿದಿರುವ ಕಾರಣಕ್ಕಾಗಿ ಅಲ್ಲಿನ ತಂತ್ರಜ್ಞಾನ ಕೂಡ ಬಹಳ ಆಧುನಿಕವಾಗಿದೆ. ತಂತ್ರಜ್ಞಾನ ಮುಂದಿರುವ ಕಾರಣಕ್ಕಾಗಿ ಜನ ಮುಂದುವರಿದದ್ದಲ್ಲ. ಹಾಗೆಯೇ, ಜಪಾನ್ ದೇಶ ಮುಂದುವರಿದಿರುವುದು ಅಲ್ಲಿನ ಜನ ಆಕರ್ಷಕ ಗ್ಯಾಜೆಟ್‌ಗಳನ್ನು ಬಳಸುತ್ತಾರೆ ಎಂಬ ಕಾರಣಕ್ಕೂ ಅಲ್ಲ.

ಜಪಾನ್‌ ದೇಶದವರು ಮುಂದುವರಿದಿರುವುದಕ್ಕೆ ಕಾರಣ ಇಂಗ್ಲಿಷ್‌ನಲ್ಲಿ ವ್ಯವಹಾರ ನಡೆಸುವುದಂತೂ ಖಂಡಿತ ಅಲ್ಲ. ವಾಸ್ತವ ಏನೆಂದರೆ, ಜಪಾನ್‌ನಲ್ಲಿ ಇಂಗ್ಲಿಷ್‌ ಮಾತನಾಡುವವರು ಬಹುಮಟ್ಟಿಗೆ ಎಲ್ಲಿಯೂ ಕಾಣುವುದಿಲ್ಲ ಎಂಬುದು ಅಲ್ಲಿಗೆ ಭೇಟಿ ನೀಡಿದವರಿಗೆ ಗೊತ್ತಿರುತ್ತದೆ. ಆದರೆ, ಅಲ್ಲಿನ ಜನ ಆಧುನಿಕರಾಗಿರುವ ಕಾರಣ ಜಪಾನ್‌ ದೇಶಕ್ಕೆ ಭೇಟಿ ನೀಡಿದವರಿಗೆ ಕಠಿಣ ಅನುಭವವೇನೂ ಆಗುವುದಿಲ್ಲ.

ಜಪಾನೀಯರ ಆಧುನಿಕತೆಯು ಅವರ ಸಂಸ್ಕೃತಿಯಲ್ಲಿ ಕಾಣಿಸುತ್ತದೆ. ಪ್ರವಾಸಿಗರಿಗೆ ಸುತ್ತಾಟ ನಡೆಸಲು ಜಗತ್ತಿನಲ್ಲಿ ಅತ್ಯಂತ ಆರಾಮದ ದೇಶ ಜಪಾನ್. ಇದಕ್ಕೆ ಕಾರಣ ಜಪಾನೀಯರು ವಿನ್ಯಾಸದಲ್ಲಿ ಅತ್ಯುತ್ಕೃಷ್ಟವಾದುದನ್ನು ಸಾಧಿಸುವುದಕ್ಕೆ ಗಮನ ನೀಡುವುದು.

ಈ ಮಾತಿಗೆ ನಾನು ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಜಪಾನಿನಲ್ಲಿ ಕೈತೊಳೆಯಲು ಬಳಸುವ ಹಲವಾರು ಬೇಸಿನ್‌ಗಳು ಶೌಚಾಲಯದ ಫ್ಲಷ್‌ ಟ್ಯಾಂಕ್‌ ಆಗಿಯೂ ಕೆಲಸ ಮಾಡುತ್ತವೆ. ಅಂದರೆ, ಜನ ಕೈತೊಳೆದ ನಂತರ ವ್ಯರ್ಥವಾಗುವ ನೀರು ಶೌಚಾಲಯದ ಫ್ಲಷ್‌ ಟ್ಯಾಂಕ್‌ನಲ್ಲಿ ತುಂಬಿಕೊಳ್ಳುವಂತೆ ಮಾಡಲಾಗಿರುತ್ತದೆ.

ಇದು ಬಹಳ ಸರಳವಾದ ಆಲೋಚನೆ. ಇದು ಶೌಚಾಲಯದಲ್ಲಿ ಬಳಕೆಯಾಗುವ ನೀರಿನ ಪ್ರಮಾಣದಲ್ಲಿ ಅಂದಾಜು ಶೇಕಡ 30ರಷ್ಟರಿಂದ 40ರಷ್ಟನ್ನು ಉಳಿಸುತ್ತದೆ. ಆದರೆ, ಇಂಥದ್ದೊಂದು ಆಲೋಚನೆಯನ್ನು ಕಾರ್ಯರೂಪಕ್ಕೆ ತಂದ ಬೇರೆ ಸಮಾಜದ ಬಗ್ಗೆ ನನಗೆ ಗೊತ್ತಿಲ್ಲ.

ಜಪಾನಿನ ಬುಲೆಟ್‌ ರೈಲುಗಳಲ್ಲಿ ನೀವು ಕುಳಿತುಕೊಳ್ಳುವ ಜಾಗದ ಎದುರಿನಲ್ಲಿ, ಅಂದರೆ ನಿಮ್ಮ ಮುಂದೆ ಕುಳಿತವರ ಶಿರ ಭಾಗದ ಹಿಂಬದಿಯಲ್ಲಿ ಒಂದು ಚಿಕ್ಕ ಜಾಗ ಇರುತ್ತದೆ. ಅಲ್ಲಿ ನೀವು ನಿಮ್ಮ ಪ್ರಯಾಣದ ಟಿಕೆಟ್ ಇರಿಸಬೇಕು. ನೀವು ಪ್ರಯಾಣದ ವೇಳೆ ನಿದ್ರೆ ಮಾಡುತ್ತಿರುವ ಸಮಯದಲ್ಲಿ ಟಿಕೆಟ್ ಪರಿಶೀಲನೆ ಮಾಡುವವ ಬಂದರೆ, ಆತ ನಿಮ್ಮನ್ನು ನಿದ್ರೆಯಿಂದ ಎಬ್ಬಿಸಬೇಕಾಗಿಲ್ಲ. ಪ್ರಯಾಣಿಕರ ನಿದ್ರೆಯನ್ನು ಹಾಗೂ ಟಿಕೆಟ್ ಪರಿಶೀಲನೆ ನಡೆಸುವವರ ಸಮಯವನ್ನು ಗೌರವಿಸುವ ತಾರ್ಕಿಕ ಹಾಗೂ ಕಡಿಮೆ ಖರ್ಚಿನ ಆಲೋಚನೆ ಇದು.

ರೈಲಿನಲ್ಲಿ ಒಬ್ಬರ ಮುಖ ಒಬ್ಬರು ನೋಡುವಂತೆ ಕುಳಿತುಕೊಳ್ಳಲು ಕುರ್ಚಿಗಳನ್ನು ತಿರುಗಿಸಿಕೊಳ್ಳಬಹುದು. ಅಂದರೆ, ಆರು ಜನ ಸದಸ್ಯರ ಒಂದು ಕುಟುಂಬ ರೈಲಿನಲ್ಲಿ ಪ್ರಯಾಣಿಸುತ್ತಿದೆ ಎಂದಾದರೆ ಒಂದು ಸಾಲಿನಲ್ಲಿ ಇರುವ ಮೂರು ಕುರ್ಚಿಗಳನ್ನು ತಿರುಗಿಸಿಕೊಂಡು ಆರೂ ಜನ ಒಬ್ಬರ ಮುಖ ಒಬ್ಬರು ನೋಡುವಂತೆ ಕುಳಿತುಕೊಳ್ಳಬಹುದು. ಇದು ಕೂಡ ಸರಳವಾದ ಆಲೋಚನೆ.

ನಾನು ಜಗತ್ತಿನ ಹಲವು ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಈ ಮಟ್ಟಿನ ವಿನ್ಯಾಸ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಬೇರೆಲ್ಲೂ ಕಂಡಿಲ್ಲ. ಉತ್ಪನ್ನಗಳನ್ನು, ಕೆಲವು ಪ್ರಕ್ರಿಯೆಗಳನ್ನು ಸುಧಾರಿಸುವ ಹೊಸ ಹಾಗೂ ಸರಳ ಮಾರ್ಗಗಳನ್ನು ಜಪಾನಿನ ಜನ ನಿರಂತರವಾಗಿ ಹುಡುಕುತ್ತ ಇರುತ್ತಾರೆ. ಜಪಾನಿನ ಜನರಲ್ಲಿ ಇರುವ ಈ ಧೋರಣೆಯನ್ನು ಅಮೆರಿಕದ ತಜ್ಞರೊಬ್ಬರು ಆಮದು ಮಾಡಿಕೊಂಡರು ಎನ್ನಲಾಗುತ್ತದೆ.

ಈ ಮಾತು ನಂಬುವುದು ನನಗಂತೂ ಕಷ್ಟ. ಡೆಮಿಂಗ್ ಎನ್ನುವ ವ್ಯಕ್ತಿಯೊಬ್ಬ ಜಪಾನಿಗೆ ಬಂದು, ಅಲ್ಲಿನ ಕೈಗಾರಿಕೆಗಳಿಗೆ ಕೆಲವು ತಂತ್ರಗಳನ್ನು ಹೇಳಿಕೊಡಲು ಮುಂದಾಗಿದ್ದ ಎನ್ನುವುದನ್ನು ನಾನು ಅನುಮಾನಿಸುವುದಿಲ್ಲ. ಆದರೆ, 'ಕೈಜೆನ್' (ಸುಧಾರಣೆ ತರುವ ಪ್ರಕ್ರಿಯೆಗೆ ಇರುವ ಜಪಾನೀ ಹೆಸರು) ಸಂಸ್ಕೃತಿ ಜಪಾನಿನಲ್ಲಿ ಅದಾಗಲೇ ಇತ್ತು.

ಜಪಾನಿನ ಆಡಳಿತಗಾರರು 165 ವರ್ಷಗಳ ಹಿಂದಿನವರೆಗೆ ಆ ದೇಶವನ್ನು ಹೊರ ಜಗತ್ತಿನ ಸಂಪರ್ಕಕ್ಕೆ ತೆರೆದಿರಲಿಲ್ಲ. ಅದಕ್ಕೂ ಕೆಲವು ವರ್ಷಗಳ ಮೊದಲೇ ಜಪಾನ್‌ ದೇಶವು ಏಷ್ಯಾದ ಮಾನದಂಡಗಳ ಅನುಸಾರ ಸಮೃದ್ಧ ರಾಷ್ಟ್ರ ಆಗಿತ್ತು. ಆ ದೇಶ ತನಗೆ ಬೇಕಿರುವುದಕ್ಕಿಂತ ಹೆಚ್ಚು ಭತ್ತ ಬೆಳೆದುಕೊಳ್ಳುತ್ತಿತ್ತು (ಅದಕ್ಕೂ ಮೊದಲು ಭಾರತದಿಂದ ಭತ್ತ ಆಮದು ಮಾಡಿಕೊಂಡಿತ್ತು). ಆದರೆ, ಜಪಾನ್‌ ಪ್ರಗತಿ ನಾಗಾಲೋಟಕ್ಕೆ ತಿರುಗಿದ್ದು ಕಳೆದ ಒಂದು ಶತಮಾನದ ಅವಧಿಯಲ್ಲಿ.

ಜಗತ್ತಿನಲ್ಲಿ ಬುಲೆಟ್ ರೈಲಿನಲ್ಲಿ ಪ್ರಯಾಣ ಮಾಡುವವರಲ್ಲಿ ಶೇಕಡ 50ರಷ್ಟಕ್ಕಿಂತ ಹೆಚ್ಚಿನವರು ಜಪಾನೀಯರು. ಹೀಗಿದ್ದರೂ, ಐವತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಬುಲೆಟ್ ರೈಲಿನ ಕಾರಣಕ್ಕಾಗಿ ಒಬ್ಬನೇ ಒಬ್ಬ ವ್ಯಕ್ತಿ ಸಾವನ್ನಪ್ಪಿಲ್ಲ. ಅಂದರೆ, ಕೋಟ್ಯಂತರ ಜನ ಇದನ್ನು ಬಳಕೆ ಮಾಡುತ್ತಿದ್ದರೂ ಬುಲೆಟ್ ರೈಲು ಅಪಘಾತದಲ್ಲಿ ಒಬ್ಬನೇ ಒಬ್ಬ ಸತ್ತಿಲ್ಲ. ಇದು ಪವಾಡ ಅಥವಾ ಅದೃಷ್ಟದ ಕಾರಣದಿಂದಾಗಿ ಸಾಧ್ಯವಾಗಿದ್ದಲ್ಲ. ನಿರಂತರವಾದ ಪ್ರಯತ್ನ, ಎಚ್ಚರಿಕೆ ಹಾಗೂ ಬೌದ್ಧಿಕ ಶ್ರಮವನ್ನು ಬಳಸಿರುವುದಕ್ಕೆ ದೊರೆತ ಫಲ ಇದು.

ಬುಲೆಟ್ ರೈಲು ಎಂಬುದೇ ಆಧುನಿಕತೆ ಅಲ್ಲ. ಬುಲೆಟ್ ರೈಲು ಎಂಬುದು ಆಧುನಿಕತೆಯ ಒಂದು ಉತ್ಪನ್ನ ಮಾತ್ರ. 'ಆಧುನಿಕತೆ'ಯನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿದ್ದರೆ ಚೆನ್ನಾಗಿತ್ತು. ಆದರೆ ಅದನ್ನು ಬಾಟಲಿಯೊಂದರಲ್ಲಿ ತುಂಬಿಸಿ, ಅಲ್ಲಿಂದ ಇಲ್ಲಿಗೆ ತರಿಸಿಕೊಳ್ಳಲು ಆಗುವುದಿಲ್ಲ. ನಮ್ಮಲ್ಲಿ ಸಾಂಸ್ಕೃತಿಕವಾಗಿ ಲಭ್ಯವಿರುವ ಸಲಕರಣೆಗಳನ್ನು ಬಳಸಿಕೊಂಡು ಆಧುನಿಕತೆಯನ್ನು ನಮ್ಮಲೇ ಸೃಷ್ಟಿಸಿಕೊಳ್ಳಬೇಕು.

ಅವು ನಮ್ಮಲ್ಲಿ ಇಲ್ಲ ಎಂದಾದರೆ, ಅವುಗಳನ್ನು ನಮ್ಮದಾಗಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ದಾರಿ ಹುಡುಕಿಕೊಳ್ಳಬೇಕು. ನಾನು ಇಲ್ಲಿ ಯಾವ ಸರ್ಕಾರವನ್ನೂ ಟೀಕಿಸುತ್ತಿಲ್ಲ. ಕೆಲವು ಆಟಿಕೆಗಳನ್ನು ತರಿಸಿಕೊಂಡ ಮಾತ್ರಕ್ಕೆ ನಾವು ಆಧುನಿಕ ರಾಷ್ಟ್ರವಾಗಿಬಿಡುತ್ತೇವೆ ಎಂದು ನಂಬಿರುವಂತಿದೆ ನಾವು.

ನಾವು ಆಧುನಿಕ ರಾಷ್ಟ್ರವಾಗಬೇಕು ಎಂದಾದರೆ ಸಮಾಜ ಬದಲಾಗಬೇಕು. ಸಮಾಜವನ್ನು ಬದಲಾಯಿಸುವುದು ಸಲಹೆಗಾರನದ್ದೋ, ಸರ್ಕಾರದ್ದೋ ಕೆಲಸ ಅಲ್ಲ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT