ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ; ಹಕ್ಕುಪತ್ರ ವಿತರಣೆಗೆ ಆದ್ಯತೆ

ಜನ ಸ್ಪಂದನೆ ‘ಗ್ರಾಮ ವಾಸ್ತವ್ಯ’ಕ್ಕೆ ನಿರ್ಧಾರ
Last Updated 11 ಜೂನ್ 2018, 9:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದ ಶೃಂಗೇರಿ ಕ್ಷೇತ್ರವು ಕೊಪ್ಪ, ಎನ್.ಆರ್‌.ಪುರ, ಶೃಂಗೇರಿ ತಾಲ್ಲೂಕು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿ ಒಳಗೊಂಡಿದೆ. ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕಾರ್ಯಸೂಚಿ ಹಾಕಿಕೊಂಡಿದ್ದಾರೆ. ಆದ್ಯತೆ, ಗುರಿ, ಕಾರ್ಯ
ಯೋಜನೆಗಳ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ನಿಮ್ಮ ಆದ್ಯತೆಗಳೇನು?

ಶಾಲೆ–ಕಾಲೇಜುಗಳಲ್ಲಿ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡುತ್ತೇನೆ. ಪ್ರಯೋಗಾಲಯ, ಗ್ರಂಥಾಲಯಗಳ ಸುಧಾರಣೆಗೆ ಆದ್ಯತೆ ನೀಡುತ್ತೇನೆ. ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆಗೆ ಮುತುವರ್ಜಿ ವಹಿಸುತ್ತೇನೆ. ಬಾಳೆಹೊನ್ನೂರು ಮತ್ತು ಕೊಪ್ಪದ ಆಸ್ಪತ್ರೆಗಳನ್ನು
ಮೇಲ್ದರ್ಜೆಗೇರಿಸುವ ಚಿಂತನೆ ಇದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತುನೀಡುತ್ತೇನೆ. ಸ್ವಚ್ಛತೆ ನಿಟ್ಟಿನಲ್ಲಿ ಶ್ರಮದಾನ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ. ರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕುತ್ತೇನೆ. ವಿದ್ಯುತ್‌ ಕಂಬ ಅಳವಡಿಸಿರುವ ಮಾರ್ಗದ ಆಸುಪಾಸಿನ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವ ಕೆಲಸ ಆಗಬೇಕಿದೆ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮಾತನಾಡುತ್ತೇನೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಾರ್ಗೋಪಾಯಗಳು...

ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ತುಂಗಾ ಮತ್ತು ಭದ್ರಾ ನದಿ ಮೂಲಗಳನ್ನು ಬಳಸಿಕೊಳ್ಳುವ ಕುರಿತುಗಮನ ಹರಿಸುತ್ತೇನೆ. ಎಲ್ಲೆಲ್ಲಿ ಸಮಸ್ಯೆಇದೆ ಎಂಬುದನ್ನು ತಿಳಿದು ಈ ಮೂಲಗಳಿಂದ ನೀರು ಹರಿಸಲು ಯೋಜನೆ ಸಿದ್ಧಪಡಿಸಿ ಕಾರ್ಯಗತಗೊಳಿಸಲು ಕ್ರಮ ವಹಿಸುತ್ತೇನೆ. ಅಂತರ್ಜಲವೃದ್ಧಿಗೆ ಪೂರಕವಾಗಿ ಕೆರೆಗಳ ಹೂಳು ಎತ್ತಿಸುವ ಯೋಚನೆ ಇದೆ. ಶೃಂಗೇರಿ ಮತ್ತು ಕೊಪ್ಪ ಪಟ್ಟಣದ ಕೊಳಚೆ ನೀರು ಹೊಳೆಗೆ ಸೇರುತ್ತಿದ್ದು, ಇದನ್ನು ತಪ್ಪಿಸಲು ಶುದ್ಧೀಕರಣ ಘಟಕ ಸ್ಥಾಪಿಸುವ ಚಿಂತನೆ ಇದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪರೇಷೆಗಳು ಏನಿವೆ?

ಯಾತ್ರಿ ನಿವಾಸ್‌ ಸುಧಾರಣೆಗೆ ಆದ್ಯ ಗಮನ ಹರಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್‌ ಮೊದಲಾದ ಮೂಲಸೌಕರ್ಯಗಳಿಗೆ ಒತ್ತು ನೀಡುತ್ತೇನೆ.

ಕಾಫಿ ಸಂಶೋಧನಾ ಕೇಂದ್ರ ಅಭಿವೃದ್ಧಿ, ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸುವ ಕ್ರಮಗಳು...

ಮಲೆನಾಡು ಭಾಗದಲ್ಲಿ ಹಳದಿ ಎಲೆ ರೋಗವು ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಫಿ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಅಭಿವೃದ್ಧಿಪಡಿಸಲು ಗಮನ ನೀಡುತ್ತೇನೆ. ಪೆಪ್ಪರ್‌ ಪಾರ್ಕ್‌ ಸ್ಥಾಪನೆಗೆ ಜಾಗ ಒದಗಿಸುವ ನಿಟ್ಟಿನಲ್ಲಿ ಕಂದಾಯ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತೇನೆ. ಮಾನವ– ವನ್ಯಜೀವಿ ಸಂಘರ್ಷ ನಿಯಂತ್ರಣ ನಿಟ್ಟಿನಲ್ಲಿ ಆನೆ ಕಾರಿಡಾರ್‌, ಸೋಲಾರ್‌ ತಂತಿ, ರೈಲ್ವೆ ಕಂಬಿ ಬೇಲಿ ಅಳವಡಿಕೆಗೆ ಕ್ರಮ ವಹಿಸಲಾಗುವುದು.

ಜನ ಸ್ಪಂದನೆ ಕಾರ್ಯಕ್ರಮಗಳು...

ಮೂರೂ ತಾಲ್ಲೂಕುಗಳಿಗೆ ವಾರದಲ್ಲಿ ತಲಾ ಒಂದು ದಿನ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಜನರು ನಮ್ಮ ಮನೆಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಇದೆ. ‘ಗ್ರಾಮ ವಾಸ್ತವ್ಯ’ ಮಾಡಲು ನಿರ್ಧರಿಸಿದ್ದೇನೆ. ‘94ಸಿ’, ‘94ಸಿಸಿ’ನಡಿ ಹಕ್ಕು ಪತ್ರ, ಫಾರಂ ನಂ 50, 53 ಅಡಿ ಹಕ್ಕುಪತ್ರ ವಿತರಣೆಗೆ ಪ್ರಾಶಸ್ತ್ಯ ನೀಡುತ್ತೇನೆ. ಹಕ್ಕುಪತ್ರ ನೀಡಿದರೆ ವಸತಿ ರಹಿತರಿಗೆ ನಿವೇಶನ, ವಸತಿ ಪಡೆಯಲು ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT