ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ ನಿಲ್ದಾಣ ಸೇವೆಗೆ ಸಜ್ಜು

ನಿಲ್ದಾಣಕ್ಕೆ ಅಂತಿಮ ಸ್ಪರ್ಶ; 15 ದಿನದಲ್ಲಿ ಬಸ್‌ ಸಂಚಾರ ಸಾಧ್ಯತೆ
Last Updated 11 ಜೂನ್ 2018, 10:28 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ರೇಸ್‌ ಕೋರ್ಸ್ ರಸ್ತೆಯಲ್ಲಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಬಸ್ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ.

ಬಸ್‌ ಬರುವ ಮಾರ್ಗದ ಸರ್ವೆ ನಡೆಸಿರುವ ಪೊಲೀಸ್‌ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆಯ ಜತೆಗೆ ಚರ್ಚಿಸಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಜೂನ್‌ ಅಂತ್ಯಕ್ಕೆ ಇಲ್ಲಿಂದ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಲಿವೆ. ಈ ಹಿಂದೆ ನಗರ ಹೃದಯ ಭಾಗದ ನಿಲ್ದಾಣದಿಂದ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಪ್ರವಾಸಿಗರು ಹಾಗೂ ಜಿಲ್ಲೆಯ ಸಾರ್ವಜನಿಕರು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದರು. ಅದಕ್ಕೀಗ ಮುಕ್ತಿ ಸಿಗಲಿದೆ.

ಅಂದಾಜು ₹5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್‌. ಸೀತಾರಾಂ ಅವರು ವಿಧಾನಸಭೆ ಚುನಾವಣೆಗೂ ಮೊದಲೇ ತರಾತುರಿಯಲ್ಲಿ ನಿಲ್ದಾಣಕ್ಕೆ ಚಾಲನೆ ಕೊಟ್ಟಿದ್ದರು. ಅರೆಬರೆ ಕಾಮಗಾರಿ ನಡೆದಿದ್ದ ಕಾರಣಕ್ಕೆ ಸಾರ್ವಜನಿಕ ಉಪಯೋಗಕ್ಕೆ ಇನ್ನೂ ಇದನ್ನು ನೀಡಿರಲಿಲ್ಲ. ಮುಂಗಾರು ಮಳೆ ಚುರುಕು ಪಡೆದ ಬೆನ್ನಲ್ಲೇ ಕಾಮಗಾರಿಯೂ ಮುಕ್ತಾಯದ ಹಂತಕ್ಕೆ ತಲುಪಿದೆ.

‘ಶೌಚಾಲಯ, ಮಳಿಗೆ, ಕಾಂಪೌಂಡ್ ನಿರ್ಮಾಣ ಕಾಮಗಾರಿಗಳೂ ಬಹುತೇಕ ಮುಗಿದಿವೆ. ಎಲ್ಲಾ ಕಾಮಗಾರಿ ಪೂರೈಸಿ ಬಸ್‌ ಸಂಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಗರಸಭೆ ಪೌರಯುಕ್ತೆ ಬಿ. ಶುಭಾ ತಿಳಿಸಿದ್ದಾರೆ.

ನಿಲ್ದಾಣದ ಮಧ್ಯಭಾಗದಿಂದ ನಿರ್ಮಾಣಗೊಂಡಿರುವ ತಂಗುದಾಣದ ಎರಡು ಕಡೆಗಳಲ್ಲಿ ತಲಾ 10ರಂತೆ ಒಟ್ಟು 20 ಖಾಸಗಿ ಬಸ್‌ಗಳಿಗೆ ಏಕಕಾಲಕ್ಕೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಮುಂಭಾಗದ ಮೂಲಕ ಬಸ್‌ಗಳು ಹೊರಬರಲು ಮತ್ತು ಇಂದಿರಾ ಕ್ಯಾಂಟೀನ್ ಪಕ್ಕದ ಇನ್ನೊಂದು ಮಾರ್ಗ ದಿಂದ ಒಳ ಪ್ರವೇಶಿಸಲು ಪ್ರವೇಶ ದ್ವಾರ ನಿರ್ಮಿಸಲಾಗಿದೆ. ನೂತನ ನಿಲ್ದಾಣದ ಮೇಲಂತಸ್ತಿನಲ್ಲಿ ಎಂಟು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಬೇಕಾದ ವಿದ್ಯುತ್ ಸಂಪರ್ಕಗಳನ್ನು ಕೂಡ ಅಳವಡಿಸಲಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಇನ್ನೊಂದೆಡೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನೂತನ ನಿಲ್ದಾಣದಿಂದ ಬಸ್‌ಗಳ ಸಂಚಾರದ ರೂಪುರೇಷೆ ಸಿದ್ಧಪಡಿಸಲಾಗಿದೆ. ಜನರಲ್‌ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್‌ ಮೂಲಕ ರೇಸ್‌ ಕೋರ್ಸ್‌ ರಸ್ತೆಯ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಬಂದು ಸೇರಲಿವೆ. ನಿಲ್ದಾಣದಿಂದ ಹೊರಡುವ ಬಸ್‌ಗಳು ಪ್ರೆಸ್‌ಕ್ಲಬ್‌, ಕಾಲೇಜು ರಸ್ತೆ, ಕೊಹಿನೂರು ರಸ್ತೆಯ ಮೂಲಕ ಹೊರ ಹೋಗಲು ನಕ್ಷೆ ತಯಾರು ಮಾಡಲಾಗಿದೆ.

ಸಭೆ ನಡೆಸಲು ನಿರ್ಧಾರ
‘ಬಸ್‌ ಆರಂಭಕ್ಕೂ ಮುನ್ನ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರಿಗೆ ಪ್ರಾಧಿಕಾರ, ಸಾರ್ವಜನಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಬಸ್ ಮಾಲೀಕರ ಜಂಟಿ ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾವುದೇ ಆಕ್ಷೇಪಕ್ಕೂ ಅವಕಾಶವಿಲ್ಲದಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನರಿಗೆ ಒಳಿತಾಗಬೇಕು ಅಷ್ಟೆ’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ವಿಕಾಸ್‌ ಬಿ. ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT