ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಿನಾ ಕೂರಿಗೆ ಮುಗಿಲು ಮುಟ್ಟಾವು ಸೆಡ್ಡೆ...

Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಎ.ಎಂ. ಸೋಮಶೇಖರಯ್ಯ

ಮುಂಗಾರು ಹಂಗಾಮು ಆರಂಭವಾಗಿ, ಕೃತಿಕೆ, ರೋಹಿಣಿ ಮಳೆ ಮುಗಿಯುತ್ತಿದ್ದಂತೆ, ಬಯಲು ಸೀಮೆ ರೈತರು ಬಿತ್ತನೆಗೆ ಅಣಿಯಾಗುತ್ತಾರೆ. ಅಟ್ಟದ ಮೇಲಿದ್ದ ಕೂರಿಗೆ, ಕುಂಟೆ, ಹಲಗೆ, ನೇಗಿಲು ಕೆಳಗಿಳಿಸಿ ಶುಚಿಗೊಳಿಸಿ ಬಿತ್ತನೆಗೆ ಸಿದ್ಧಗೊಳಿಸುತ್ತಾರೆ. ಸಾಮಾನ್ಯವಾಗಿ ಬಿತ್ತನೆಗೆ ಮುನ್ನ ಪರಿಕರಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸುವುದು ಸಂಪ್ರದಾಯ. ಆದರೆ, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಶಿವಪುರಗೊಲ್ಲರಹಟ್ಟಿಯಲ್ಲಿ ಕೂರಿಗೆಗೆ ಸೀರೆ ಉಡಿಸಿ ಅಲಂಕರಿಸಿ, ಉಡಿ ತುಂಬುವಂತಹ ಆಚರಣೆಯೊಂದು ಚಾಲ್ತಿಯಲ್ಲಿದೆ. ಕಾಡು ಗೊಲ್ಲರು ಅಥವಾ ಹಟ್ಟಿ ಗೊಲ್ಲರು ಈ ಸಂಪ್ರದಾಯವನ್ನು ಇನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ.

ಬಿತ್ತನೆಗೆ ಸಿದ್ಧಗೊಳ್ಳುವ ಕೂರಿಗೆ, ಕುಂಟೆಗಳಿಗೆ ಮೊದಲು ಸುಣ್ಣ ಮತ್ತು ಜಾಜಿನಿಂದ ಸಿಂಗರಿಸುತ್ತಾರೆ. ನಂತರ ಮನೆ ಮುಂದೆ ಕರಿ ಕಂಬಳಿ ಗದ್ದುಗೆ ಹಾಕಿ ಅದರ ಮೇಲೆ ಕೂರಿಗೆ ಹಾಗೂ ಪಕ್ಕದಲ್ಲಿ ಕುಂಟೆ ಮತ್ತು ಬಿತ್ತನೆ ಬೀಜಗಳನ್ನು ಇಡುತ್ತಾರೆ. ಕೂರಿಗಿಗೆ ಅಳವಡಿಸಿರುವ ಕೊಳವೆಗಳಿಗೆ (ತಲವುಗೆ ಅಥವಾ ಬಿತ್ತನೆ ಕೊಳವೆಗಳು) ಮನೆಯ ಮಹಿಳೆಯರು ಹೊಸ ಸೀರೆ ಉಡಿಸಿ, ಬೀಜಗಳ ಉಡಿ ಕಟ್ಟುತ್ತಾರೆ. ಸೀರೆ ಉಡಿಸಿದ ಕೊಳವೆಗಳಿಗೆ ಬೆಣ್ಣೆ ಹಚ್ಚುತ್ತಾರೆ.

ಬಿತ್ತನೆಗೆ ಬಳಸುವ ಒಂದು ಹಿಡಿಯಷ್ಟು ಬೀಜಗಳನ್ನು ಕಂಬಳಿ ಮೇಲೆ ಮೂರು ಸಣ್ಣ ರಾಶಿಗಳಾಗಿ ಹಾಕುತ್ತಾರೆ. ನಂತರ ರಾಶಿ ಪೂಜೆ ಮಾಡುತ್ತಾರೆ. ಪೂಜೆ ಮಾಡಿದ ಕೂರಿಗೆಯನ್ನು, ಗಂಡಸರು ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಇವರ ಹಿಂದೆ ಮಹಿಳೆಯರು ಬಿತ್ತನೆ ಬೀಜಗಳನ್ನು ಹೊತ್ತುಕೊಂಡು ಹೋಗುವ ಸಂಪ್ರದಾಯವಿದೆ.

ಗ್ರಾಮದ ಯಾವುದೇ ಭಾಗದಲ್ಲಿ ಮನೆ ಇದ್ದರೂ, ಕೂರಿಗೆ ಹೊತ್ತುಕೊಂಡವರು ಊರ ಅಗಸಿ ಬಾಗಿಲನ್ನು ದಾಟಿಯೇ ಮುಂದೆ ಸಾಗಬೇಕು. ಇದೇ ಸಂದರ್ಭದಲ್ಲಿ ಜುಂಜಪ್ಪ ಹಾಗೂ ರಾಮ ಲಕ್ಷ್ಮಣ ದೇವಸ್ಥಾನ ಸೇರಿದಂತೆ ಗ್ರಾಮದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿಕೊಂಡು ಬರುತ್ತಾರೆ.

ಹೊಲದಲ್ಲಿ ಕೂರಿಗೆ ಹೂಡಿ, 5 ಸುತ್ತು ಬಿತ್ತಿದ ನಂತರ, ಕೂರಿಗೆ, ಎತ್ತುಗಳು ಸೇರಿದಂತೆ ಬಿತ್ತನೆಗೆ ಬಳಸುವ ಎಲ್ಲಾ ಪರಿಕರಗಳನ್ನು ಪೂಜಿಸಲಾಗುತ್ತದೆ. ಈ ವೇಳೆ ಕೂರಿಗೆಗೆ ಉಡಿಸಿದ್ದ ಹೊಸ ಸೀರೆಯನ್ನು ಮನೆಯ ಮಗಳು ಉಟ್ಟುಕೊಂಡು, ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿದ ಮೂರು ದಿನಗಳವರೆಗೆ ಈ ಸೀರೆಯನ್ನು ತೆಗೆಯುವಂತಿಲ್ಲ.

‘ಉಳುಮೆ ಮಾಡುವ ಹೊಲವನ್ನು ಭೂದೇವಿ ಎಂದು ಪೂಜಿಸುತ್ತೇವೆ. ಬಿತ್ತನೆ ಕೂರಿಗೆಯೂ ನಮಗೆ ಅನ್ನ ನೀಡುವ ದೇವರು. ಪೂರ್ವಜರ ಕಾಲದಿಂದಲೂ ಕೂರಿಗೆಗೆ ಸಿಂಗಾರ ಮಾಡಿ, ಸೀರೆ ಉಡಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ರೀತಿ ಪೂಜೆ ಸಲ್ಲಿಸಿ, ಬಿತ್ತನೆ ಮಾಡಿದರೆ ಸಮೃದ್ಧ ಫಸಲು ಸಿಗುತ್ತದೆ ಎಂಬುದು ನಂಬಿಕೆ’ ಎಂದು ಹಟ್ಟಿಯ ಗೌಡ್ರು ಮಲ್ಲಪ್ಪ ಕೂರಿಗೆ ಪೂಜೆಯ ಸಂಪ್ರದಾಯದ ಬಗ್ಗೆ ಮಾಹಿತಿ ನೀಡುತ್ತಾರೆ.

‘ಕೂರಿಗೆ ಪೂಜೆ ಕುರಿತು ಅಷ್ಟಾಗಿ ತಿಳಿದಿಲ್ಲ. ಆದರೆ ನಮ್ಮ ನೆನಪಿದ್ದಾಗಿನಿಂದಲೂ ಈ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಅದನ್ನು ಈಗಲೂ ನಾವು ಮುಂದುವರಿಸುತ್ತಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವರು ದೂರದ ಹೊಲಗಳಿಗೆ ಕೂರಿಗೆ ಹೊತ್ತುಕೊಂಡು ಹೋಗಲಾರದೆ ಈ ಪದ್ದತಿ ಕೈಬಿಟ್ಟಿದ್ದಾರೆ’ ಎಂದು 80 ರ ಹರೆಯದ ಕರಿಯಜ್ಜಿ ಕೂರಿಗೆ ಸಂಪ್ರದಾಯ ಕೈಬಿಟ್ಟಿರುವುದರ ಹಿಂದಿನ ಕಾರಣ ಹೇಳುತ್ತಾರೆ.

ಮುಂಗಾರು ವೇಳೆ ಕೂರಿಗೆ ಪೂಜೆಯ ಸಂಪ್ರದಾಯ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆ ಈಗಲೂ ಚಾಲ್ತಿಯಲ್ಲಿದೆ. ತುಮಕೂರು ಜಿಲ್ಲೆಯ ಸಿರಾ ಭಾಗದ ಗೊಲ್ಲರ ಹಟ್ಟಿಗಳಲ್ಲೂ ಚಾಲ್ತಿಯಲ್ಲಿತ್ತು ಎಂದು ನೆನಪಿಸಿಕೊಳ್ಳುವ ಸಿರಾ ತಾಲ್ಲೂಕಿನ ದೊಡ್ಡಬಾಣಗೆರೆಯ 90ರ ಹರೆಯದ ಮಾರಕ್ಕ, ಕೂರಿಗೆ ಪೂಜೆ ವೇಳೆ ಹಾಡುತ್ತಿದ್ದ ಈ ಕೆಳಗಿನ ಸಾಲುಗಳನ್ನು ಈಗಲೂ ಗುನುಗುತ್ತಾರೆ.

ಎಂಟೆತ್ತು ಎಂಟಾಳು ಎಂಟು ಕೂರಿಗೆ ದಾಳು ಭಂಟನಾ ತಂಗಿ ಗಿರಿಜಮ್ಮ || ಬಿತ್ತಿದಾ ಹೊಲ ಎಂಟಕು ನೂರಾಗಿ ಬೆಳೆಯಾಲಿ

****

ಮುತ್ತಿನಾ ಕೂರಿಗೆ ಮುಗಿಲು ಮುಟ್ಟಾವು ಸೆಡ್ಡೆ ಮುಕ್ಕಣ್ಣಾನೆಂಬ ಎರಡೆತ್ತು || ಕಟ್ಟಿಕ್ಕೊಂಡುಮುತ್ತು ಬಿತ್ಯಾರೋ ದಿಳ್ಳಿ ಹೊಲಕ್ಕೆಲ್ಲ.
(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT