ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಕೊರಳಿಗೆ ದುಡಿಮೆಯ ನೊಗ…

Last Updated 11 ಜೂನ್ 2018, 20:07 IST
ಅಕ್ಷರ ಗಾತ್ರ

ದಶಕದ ಹಿಂದೆ ಒಂದು ಬೆಳಿಗ್ಗೆ ಸುಮಾರು ಒಂಬತ್ತು, ಹತ್ತು ವರ್ಷದ ಹೆಣ್ಣುಮಗುವೊಂದು ಬಸ್ಸಿನಲ್ಲಿ ತನ್ನ ಪುಟ್ಟ ಚೀಲ ಹಿಡಿದು ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿತ್ತು.

ವಿಚಾರಿಸಿದಾಗ ತಿಳಿದದ್ದು, ಆ ಮಗು ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ, ಮಾಲೀಕರು ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೇ ಹೇಗೋ ತಪ್ಪಿಸಿಕೊಂಡು ಬಸ್ಸು ಹತ್ತಿ ತನ್ನೂರಿಗೆ ಹೊರಟಿತ್ತು. ತಾನು ಪಟ್ಟ ಹಿಂಸೆಯನ್ನು ಆ ಮಗು ಹೇಳುತ್ತಲೇ ಇತ್ತು. ಆಫೀಸಿಗೆ ಹೊರಟಿದ್ದ ನನಗೂ ಏನು ಮಾಡಬೇಕೆಂದು ತೋಚದೇ ಡ್ರೈವರ್‌ ಕೈಗೆ ಇನ್ನೂರು ರೂಪಾಯಿ ಕೊಟ್ಟು, ‘ಅವಳನ್ನು ಸುರಕ್ಷಿತವಾಗಿ ಬಸ್ಸು ಅಥವಾ ರೈಲಿನಲ್ಲಿ ಕೂರಿಸಪ್ಪಾ’ ಎಂದು ಹೇಳಿ ಕರ್ತವ್ಯ ಮುಗಿಯಿತೆಂಬಂತೆ ಇಳಿದುಹೋಗಿದ್ದೆ.

ಈಗಲೂ ನೆನಪಾದರೆ ಹೊಟ್ಟೆಯಲ್ಲಿ ಮುಳ್ಳಾಡಿಸಿದಂತಾಗುತ್ತದೆ. ಆ ಮಗು ಮನೆ ತಲುಪಿತೋ ಇಲ್ಲ ದುಷ್ಟರ ಕೈಗೆ ಸಿಲುಕಿ ಬಲಿಯಾಯಿತೋ ಗೊತ್ತಿಲ್ಲ. ಅಪರಾಧಿ ಭಾವ ಮಾತ್ರ ಈಗಲೂ ಅಸ್ವಸ್ಥಗೊಳಿಸಿಬಿಡುತ್ತದೆ.

ಆರು ವರ್ಷದ ಮಗನನ್ನು ಬಿಟ್ಟು ಬರುವ ಮನೆಗೆಲಸದ ಹೀರಾ, ಝೋಪಡಿಯಿಂದ ಮೊಬೈಲ್ ಕಳುವಾಯಿತೆಂದು ಹಳಿಯುತ್ತ ‘ಅಕ್ಕಪಕ್ಕದ ದೊಡ್ದ ವಯಸ್ಸಿನ ಮಕ್ಕಳೇ ಕದಿಯುವುದು; ಬೀಡಿ, ಗುಟಕಾ ತಿಂದುಕೊಂಡು ಇಡೀ ದಿನ ಬೇಕಾರ್ ಅಲೆಯುತ್ತಾರೆ’ ಎಂದು ಹೇಳುತ್ತಿದ್ದಳು. ‘ನಿನ್ನ ಮಗನನ್ನು ಶಾಲೆಗೆ ಕಳಿಸು’ ಅಂದರೆ, ‘ಯಾವ ಮಕ್ಕಳೂ ಶಾಲೆಗೆ ಹೋಗುವುದಿಲ್ಲ, ಈ ಚಿಕ್ಕ ಹುಡುಗನನ್ನು ಹೇಗೆ ಕಳಿಸಲಿ’ ಎನ್ನುತ್ತಾಳೆ.

  ಬೇರೆ ಮಕ್ಕಳೇಕೆ ಹೋಗುವುದಿಲ್ಲವೆಂದರೆ ಅವರ ಅಪ್ಪ- ಅಮ್ಮಂದಿರೂ ಮನೆಗೆಲಸಕ್ಕೆ ಹೋಗ್ತಾರೆ, ಕೆಲವರ ತಂದೆ ಎಲ್ಲಿದ್ದಾನೋ ಗೊತ್ತಿಲ್ಲ, ಝೋಪಡಿಗಳಲ್ಲಿ ಸಂಜೆತನಕ ಮಕ್ಕಳೇ ಇರುತ್ತವೆ. ಗೇಯುವುದೊಂದೇ ನಮ್ಮ ನಸೀಬಲ್ಲಿರುವಾಗ, ಎಲ್ಲರ ಮಕ್ಕಳೂ ಮುಂದೆ ದುಡಿದೇ ತಿನ್ನಬೇಕಾಗಿರುವಾಗ ಶಾಲೆ ಕಲಿತರೇನು ಬಿಟ್ಟರೇನು? ಎಂದವಳ ಮಾತುಗಳೇ ಕೊರೆಯುತ್ತಿವೆ.

ಜೂನ್ 12 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ‘ಮಕ್ಕಳು ದೇವರ ಸ್ವರೂಪ, ಮಕ್ಕಳೇ ದೇಶದ ಭವಿಷ್ಯ’ವೆನ್ನುವ ಮಾತುಗಳೆಲ್ಲವೂ ಅರ್ಥಹೀನವೆನಿಸುತ್ತವೆ. ಬೂಟು ಪಾಲಿಷ್‌ ಮಾಡುವ, ಡಾಭಾಗಳಲ್ಲಿ ಪಾತ್ರೆ ತೊಳೆಯುವ, ಕಸ ಗುಡಿಸುವ, ಬಸ್ಸುಗಳಲ್ಲಿ ಹೆಲ್ಪರ್ ಆಗಿ ದುಡಿವ, ಪ್ಲಾಸ್ಟಿಕ್– ಕಬ್ಬಿಣ, ಚಿಂದಿ ಆರಿಸುವ, ಗ್ಯಾರೇಜುಗಳಲ್ಲಿ ದುಡಿವ, ಕೂದಲು ಕೆದರಿದ, ಮಸಿ ಬಟ್ಟೆಯ, ಕೈ ಕಾಲು ಮೈಯೆಲ್ಲ ಜಿಡ್ಡಾಗಿಸಿಕೊಂಡ ಪುಟ್ಟ ಪುಟ್ಟ ಮಕ್ಕಳ ಚಹರೆಗಳು ಕಣ್ಣೆದುರಿಗೆ ನಿಂತು ಕಾಡುತ್ತವೆ. ಕಲಿಯಬೇಕಾದ ಮಕ್ಕಳ ಕೊರಳು ದುಡಿಮೆಯ ನೊಗ ಹೊತ್ತಿದೆ!

ದೆಹಲಿಯ ಹೊರವಲಯದಲ್ಲಿ ಬರುವ ನೋಯಿಡಾ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ಗಳು ನೇಪಾಳ ಮತ್ತು ಬಂಗ್ಲಾದೇಶಿ ನಿರಾಶ್ರಿತ ಕೂಲಿ ಕಾರ್ಮಿಕರಿಂದ ತುಂಬಿಹೋಗಿವೆ. ಗಾರ್ಮೆಂಟ್‌ನಿಂದ ಹಿಡಿದು ಎಲೆಕ್ಟ್ರಾನಿಕ್, ವಿದ್ಯುತ್ ಉಪಕರಣ ತಯಾರಿಸುವ ಲಘು ಉದ್ಯೋಗದ ನೂರಾರು ಕಾರ್ಖಾನೆಗಳಿವೆಯಿಲ್ಲಿ. ನೋಯಿಡಾದ ಔದ್ಯೋಗಿಕ ಪ್ರದೇಶಗಳಿಗೆ ಹತ್ತಿರವಿರುವ ಗ್ರಾಮ– ಬಡಾವಣೆ, ಗಲ್ಲಿ–ಮೊಹಲ್ಲಾಗಳಲ್ಲಿ ಜನರು ಕೋಳಿ ಹಿಂಡಿನಂತೆ ಜುಗ್ಗಿ ಜೋಪಡಿಗಳಲ್ಲಿ ವಾಸಿಸುತ್ತಾರೆ.

ಬೆಳ್ಳಂ ಬೆಳಗ್ಗೆ ಎಂಟರಿಂದ ಒಂಬತ್ತರ ತನಕ ಎಲ್ಲಿ ನೋಡಿದರಲ್ಲಿ ಇರುವೆಗಳ ಗುಂಪು ಗೂಡಿನಿಂದ ಹೊರಟಂತೆ ಕೆಲಸಕ್ಕೆ ಓಡುತ್ತಿರುತ್ತಾರೆ. ಚಿರಾಗ್ ದಿಲ್ಲಿ, ನೆಹರೂ ಪ್ಲೇಸ್ ಚೌಕಗಳಲ್ಲಿ, ಸೇತುವೆಯ ಕೆಳಗೆ ಪ್ಲಂಬರ್, ಪೇಂಟರ್, ಬಡಗಿ, ಗಾರೆಕೆಲಸ ಮುಂತಾದ ದಿನಗೂಲಿಗಾಗಿ ಕಾದು ಕುಳಿತ ಕಾರ್ಮಿಕರ ಗುಂಪೇ ನೆರೆದಿರುತ್ತದೆ. ದೊಡ್ಡ ದೊಡ್ಡ ಜನ ಕಾರಿನಲ್ಲಿ ಬಂದು ಚೌಕಾಶಿ ಮಾಡಿ ತಮ್ಮ ಬಂಗಲೆಗಳ ಕೆಲಸಕ್ಕೆ ಕರೆದೊಯ್ದರೆ ಅಂದಿನ ಚಿಂತೆ ಕಳೆದಂತೆ!

ಇನ್ನೂ ಕೆಲವರು ಸೈಕಲ್ ರಿಕ್ಷಾ ನಡೆಸುವುದು, ಹತ್ತಿರದ ಅಪಾರ್ಟ್‌ಮೆಂಟುಗಳಲ್ಲಿ ಕಸ ಗುಡಿಸುವುದು, ತೋಟಗಳಿಗೆ ನೀರುಣಿಸುವುದು, ಗೋದಾಮು, ಮಂಡಿಗಳಲ್ಲಿ ಭಾರ ಹೊರುವುದು, ಕೈಗಾಡಿಗಳಲ್ಲಿ ಸಾಮಾನು ಹೊತ್ತು ಅಂಗಡಿಗಳಿಗೆ ಸಾಗಿಸುವುದು... ಇತ್ಯಾದಿ ಕೆಲಸಗಳನ್ನು ಹುಡುಕಿಕೊಂಡರೆ, ಹೆಂಗಸರು ಅಡುಗೆ ಮಾಡುವುದು, ಕಸ ಮುಸುರೆ ನೆಲವೊರೆಸುವ ಮನೆಗೆಲಸಗಳನ್ನು ಹುಡುಕಿಕೊಳ್ಳುತ್ತಾರೆ. ತಮ್ಮೊಂದಿಗೆ ತಮ್ಮ ಮಕ್ಕಳನ್ನೂ ಮನೆಗೆಲಸಕ್ಕೆ ನೂಕುತ್ತಾರೆ. ಎಳೆಯ ಮಕ್ಕಳನ್ನು ನೋಡಿಕೊಳ್ಳುವ  ಬಾಲಿಕೆಯರು ಸುಲಭವಾಗಿ ಲೈಂಗಿಕ ದೌರ್ಜನ್ಯ, ಶೋಷಣೆಗಳಿಗೆ ಬಲಿಯಾಗುತ್ತಾರೆ.

ಕಡು ಬಡತನ, ಶಿಕ್ಷಣ ಸೌಲಭ್ಯದ ಕೊರತೆ, ಕುಟುಂಬದ ದುರ್ಬಲ ಅರ್ಥಿಕ ಪರಿಸ್ಥಿತಿ, ಪಾಲಕರ ಅಜ್ಞಾನ ಹಾಗೂ ಮಕ್ಕಳ ಬಗೆಗಿನ ಅನಾಸ್ಥೆ... ಎಲ್ಲವೂ ಹೂವಿನಂತೆ ಅರಳಬೇಕಾದ ಈ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿವೆ. ತಂದೆ ತಾಯಿಯರ ನಿರಾಸಕ್ತಿ, ಪ್ರೀತಿ ಕಾಣದ ಮಕ್ಕಳು ಮನೆಯಿಂದ ಓಡಿಹೋಗುವ ದುಸ್ಸಾಹಸಕ್ಕೆ ಕೈಹಾಕುತ್ತಾರೆ, ಹೊಟ್ಟೆಪಾಡಿಗಾಗಿ ಬಾಲಕಾರ್ಮಿಕರಾಗುವ ಅನಿವಾರ್ಯಕ್ಕೆ ಬಲಿಯಾದರೆ, ಹೆಚ್ಚಿನ ಪಾಲು ಬಾಲಕಾರ್ಮಿಕರು ದುಶ್ಚಟ, ಸಹವಾಸದೋಷದಿಂದಾಗಿ ಅಪರಾಧ ಚಟುವಟಿಕೆಗಳಿಗೆ ಇಳಿದು ಕಾನೂನಿನ ಜೊತೆ ಸಂಘರ್ಷಕ್ಕೆ ಸಿಲುಕುತ್ತಾರೆ. ಸುಂದರವಾದ ಬಾಲ್ಯದಿಂದ ವಂಚಿತರಾಗುತ್ತಾರೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕು ರಕ್ಷಣೆ ಹೋರಾಟಗಾರ, ‘ಬಚಪನ್ ಬಚಾವೋ’ ಆಂದೋಲನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ಕೈಲಾಶ್ ಸತ್ಯಾರ್ಥಿ ಅವರ ಹೊಸ ಕೃತಿ  ‘ಎವ್ವೆರಿ ಚೈಲ್ಡ್ ಮ್ಯಾಟರ್ಸ್ ’ (Every Child Matters) ಇತ್ತೀಚೆಗೆ ಬಿಡುಗಡೆಯಾಯ್ತು. ಕೃತಿಯನ್ನು ಅನಾವರಣಗೊಳಿಸಿದ  ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ರಂಜನ್ ಗೊಗೋಯ್, ‘ಬಾಲ ಕಾರ್ಮಿಕ ಕಾಯ್ದೆ– 2016’ರ ತಿದ್ದುಪಡಿಯ ಅಸಮರ್ಪಕತೆಯತ್ತ ಗಮನ ಸೆಳೆಯುತ್ತಾರೆ. 

2016ರ ತಿದ್ದುಪಡಿಯು ಒಂದು ಕಡೆ ಶಿಕ್ಷಣ ಹಕ್ಕು ಕಾಯ್ದೆ ಅನುಸಾರ, 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತುನೀಡುತ್ತದೆ, ಇನ್ನೊಂದೆಡೆ ಬಾಲಕಾರ್ಮಿಕ ಕಾಯ್ದೆಯಲ್ಲಿ (0– 14 ವರ್ಷದೊಳಗಿನ ಮಕ್ಕಳು) ‘ಕುಟುಂಬ ಅಥವಾ ಕುಟುಂಬ ಉದ್ಯಮಗಳಲ್ಲಿ’ ಕೈಗೂಡಿಸಿದರೇನೂ ತಪ್ಪಿಲ್ಲ ಎಂದು ಬಾಲ ಕಾರ್ಮಿಕ ಪದ್ಧತಿಯನ್ನು ಅಸ್ಪಷ್ಟವಾಗಿ ವ್ಯಾಖ್ಯಾನಿಸುವುದರ ಮೂಲಕ ಸಮಾಜವನ್ನು ತಪ್ಪುದಾರಿಗೆಳೆಯುತ್ತದೆ. ಕೈಲಾಶ್ ಸತ್ಯಾರ್ಥಿ ಅವರೂ, ‘ಈ ಹೊಸ ಕಾಯ್ದೆ, ಮಕ್ಕಳ ಶೋಷಣೆ ಹಾಗೂ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ’ ಎನ್ನುತ್ತಾರೆ.

ಜನಪ್ರಿಯ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ತನ್ನ ಕುಟುಂಬದ ಸಾಲ, ಬಡತನದ ಬಾಧೆಯಿಂದಾಗಿ ತನ್ನ 12ನೇ ವಯಸ್ಸಿನಲ್ಲಿ ಹತ್ತು ಗಂಟೆಗಳ ಕಾಲ ದುಡಿಯುತ್ತಿದ್ದ. ಷೂ ಪಾಲಿಷ್‌‌ನ ಜಾಡಿಗಳ ಮೇಲೆ ಹೆಸರಿನ ಪಟ್ಟಿಗಳನ್ನು ಅಂಟಿಸುವುದಕ್ಕಾಗಿ ಆತ ವಾರವೊಂದಕ್ಕೆ ಆರು ಷಿಲಿಂಗ್‌ಗಳನ್ನು ಸಂಪಾದಿಸುತ್ತಿದ್ದ. ಬಡತನವೇ ಮಕ್ಕಳ ಶೋಷಣೆಯ ಮೂಲ ಕಾರಣವೆಂಬುದಕ್ಕೆ ಈ ಇತಿಹಾಸವೂ ಬೆರಳು ತೋರುತ್ತದೆ.

ಯುನಿಸೆಫ್‍ನ ಒಂದು ಅಂದಾಜಿನ ಪ್ರಕಾರ, 6 ವರ್ಷದಿಂದ 14 ವರ್ಷದೊಳಗಿನ ಬಾಲಕಾರ್ಮಿಕರು ವಿಶ್ವದಲ್ಲಿ ಸುಮಾರು 20 ಕೋಟಿಗಿಂತ ಹೆಚ್ಚು. ಅದರಲ್ಲಿ ಸುಮಾರು ಅರ್ಥದಷ್ಟು ಏಷ್ಯಾಖಂಡದಲ್ಲೇ ಇದ್ದಾರೆಂದು ಸಮೀಕ್ಷೆ ಹೇಳುತ್ತದೆ. ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ ಹತ್ತು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಸಾಯುತ್ತಾರೆ. 7 ಕೋಟಿ ಮಕ್ಕಳು ಶಾಲೆಯ ಮುಖವನ್ನೇ ಕಂಡಿರುವುದಿಲ್ಲ. ಸರಿ ಸುಮಾರು 15 ಕೋಟಿ ಮಕ್ಕಳು ಪ್ರಾಥಮಿಕ ಹಂತದಲ್ಲೇ ಶಾಲೆಯನ್ನು ಬಿಡಬೇಕಾದ ದಾರಿದ್ರ್ಯದಲ್ಲಿದ್ದಾರೆ.

ಸಾವಿರಾರು ಮಕ್ಕಳು ನಾಪತ್ತೆಯಾಗಿ, ಅಕ್ರಮ ಸಾಗಾಣಿಕೆ ಜಾಲಕ್ಕೆ ಸಿಲುಕಿ ವಿಕೃತ ಕಾಮುಕರಿಗೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಸುಮಾರು 1.13 ಕೋಟಿ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. 5 ಲಕ್ಷ ಮಕ್ಕಳು ಶಾಲೆಯನ್ನೇ ಕಾಣುವುದಿಲ್ಲ. ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕಿಂತ ಅತೀ ಹೆಚ್ಚಿನ ಸಂಖ್ಯೆಯ ಬಾಲಕಾರ್ಮಿಕರು ಉತ್ತರಪ್ರದೇಶದಲ್ಲಿದ್ದಾರೆ. ಇಂಥ ಮಕ್ಕಳು ಶಿಕ್ಷಣ ಹಾಗೂ ಪೋಷಕಾಂಶದ ಕೊರತೆಯಿಂದಲೂ ಬಾಧಿತರಾಗಿದ್ದಾರೆ.

ನಮ್ಮ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲಾಗಿದ್ದು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಹಚ್ಚುವ ಮಾಲೀಕರಿಗೆ ಮೂರು ತಿಂಗಳಿಂದ ಆರು ತಿಂಗಳ ಜೈಲುಶಿಕ್ಷೆ ಹಾಗೂ ₹ 10 ಸಾವಿರದಿಂದ 20 ಸಾವಿರದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MNREGA) ಯೋಜನೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಬಾಲಕಾರ್ಮಿಕ ಪಿಡುಗು ಇತರ ಪ್ರಾಂತ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿದೆಯೆಂದು ಸತ್ಯಾರ್ಥಿ ಅಭಿಪ್ರಾಯಪಡುತ್ತಾರೆ.

ಸರ್ಕಾರ MNREGA ಯೋಜನೆಗೆ 2017- 2018ನೇ ಸಾಲಿನಲ್ಲಿ ಸುಮಾರು ₹ 51,600 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ. ನಮ್ಮ ಸಂವಿಧಾನದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 3(1) ಅನ್ವಯ ಆರರಿಂದ ಹದಿನಾಲ್ಕು ವರ್ಷದೊಳಗಿನ  ಪ್ರತಿಯೊಂದು ಮಗುವೂ ಉಚಿತ ಮತ್ತು ಕಡ್ದಾಯ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದೆ.

ಸರ್ವ ಶಿಕ್ಷಣ ಅಭಿಯಾನ, ಮಿಡ್ ಡೇ ಮೀಲ್ ಮುಂತಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಲ್ಲಿ  ಶಿಕ್ಷಣ ವಂಚಿತ, ಬಾಲಕಾರ್ಮಿಕತೆಯಲ್ಲಿ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಅಸಂಖ್ಯಾತ ಮಕ್ಕಳ ಭವಿಷ್ಯ ಉಜ್ವಲಗೊಂಡೀತು ಅನ್ನುವಲ್ಲಿ ಸಂಶಯವಿಲ್ಲವೆನ್ನುತ್ತಾರೆ ಸತ್ಯಾರ್ಥಿ.

ಒಬ್ಬ ಚಹಾ ಮಾರುತ್ತಿದ್ದ ಹುಡುಗ ಇಂದು ದೇಶದ ಪ್ರಧಾನಿಯಾದದ್ದನ್ನ ದೊಡ್ಡದಾಗಿ ಹೇಳಿಕೊಳ್ಳುವ ಹೊತ್ತಿನಲ್ಲಿ ಈ ಮಣ್ಣಿನ ಯಾವ ಮಗುವೂ ಬಾಲಕಾರ್ಮಿಕತೆಯ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ಸರ್ಕಾರದ ಮುಂದಿದೆ. ನೆಲ್ಸನ್ ಮಂಡೇಲಾ ಹೇಳುವಂತೆ ‘ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಅತಿ ಪ್ರಬಲ ಅಸ್ತ್ರವೆಂದರೆ ಶಿಕ್ಷಣ’.

ಭಾಗ್ಯವಂತರ ಮಕ್ಕಳಿಗಷ್ಟೇ ದೊರೆಯುವ ಶಿಕ್ಷಣ ದೇಶದ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕೂ ಹೌದು. ಬಾಲಕಾರ್ಮಿಕತೆ ಒಂದು ಸಾಮಾಜಿಕ ಪಿಡುಗು. ಸ್ವಚ್ಚ ಭಾರತ, ಡಿಜಿಟಲ್ ಇಂಡಿಯಾದ ಬಿಳಿ ಆನೆಯ ಜೊತೆಗೆ ಸರ್ವ ಶಿಕ್ಷಣ ಅಭಿಯಾನವನ್ನು ಆಮೂಲಾಗ್ರವಾಗಿ ಸರಿಯಾದ ಅರ್ಥದಲ್ಲಿ ಮುನ್ನಡೆಸಬೇಕಾದ ಅಗತ್ಯವಿದೆ ಈ ಹೊತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT