ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿ, ನಿವೇಶನ ಒದಗಿಸಲು ಆದ್ಯತೆ

ಶಾಸಕ ಎಂ.ಪಿ.ಕುಮಾರಸ್ವಾಮಿ ಅಭಿಮತ
Last Updated 12 ಜೂನ್ 2018, 11:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಕ್ಷೇತ್ರ ಮಲೆನಾಡಿನ ಸೊಬಗು, ಕಂಪನ್ನು ಒಳಗೊಂಡಿದೆ. ಜಿಲ್ಲೆಯ ಏಕೈಕ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರ ಇದು. ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಳ–ಅಗಲ, ಸಮಸ್ಯೆಗಳನ್ನು ಅರಿತಿದ್ದಾರೆ. ಅಭಿವೃದ್ಧಿ ನಿಟ್ಟಿನಲ್ಲಿ ತಮ್ಮ ಕಾರ್ಯಸೂಚಿ, ಆದ್ಯತೆ, ಗುರಿಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಆದ್ಯತೆಗಳು, ರೂಪುರೇಷೆಗಳೇನು?
ಗ್ರಾಮೀಣ ಪ್ರದೇಶಗಳ ರಸ್ತೆಗಳ ಬಹಳಷ್ಟು ಹದಗೆಟ್ಟಿವೆ. ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಶಿಶಿಲ–ಭೈರಾಪುರ ರಸ್ತೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ‘ಭಾರತ್‌ ಮಾಲ’ ರಸ್ತೆ ಸಂಪರ್ಕ ಯೋಜನೆಯಡಿ ₹ 7 ಸಾವಿರ ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಶೀಘ್ರದಲ್ಲಿ ಅನುಷ್ಠಾನವಾಗಲಿದೆ. ನಿವೇಶನರಹಿತರ ಸಂಖ್ಯೆ ಹೆಚ್ಚು ಇದ್ದು, ನಿವೇಶನ ಒದಗಿಸಲು ಗಮನ ಹರಿಸುತ್ತೇನೆ. ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿ ಘೋಷಣೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಗಮನಹರಿಸಿ ಆ ಪ್ರದೇಶಗಳಲ್ಲಿ ರಸ್ತೆ, ಸೇತುವೆ, ಮೂಲಸೌಕರ್ಯ ಒದಗಿಸಲು ಕ್ರಮ ವಹಿಸುತ್ತೇನೆ. ಸಮುದಾಯ ಭವನ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಆದ್ಯತೆ ನೀಡುತ್ತೇನೆ. ‘94ಸಿ’, ‘94ಸಿಸಿ’ನಡಿ ಹಕ್ಕು ಪತ್ರ, ಫಾರಂ ನಂ 50, 53 ಅಡಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸುತ್ತೇನೆ.

 ಒತ್ತುವರಿ ಸಮಸ್ಯೆ, ಮಾನವ– ವನ್ಯಜೀವಿ ಸಂಘರ್ಷ ನಿಯಂತ್ರಣ ಪರಿಹಾರೋಪಾಯಗಳೇನು?
ಆನೆ ಕಾರಿಡಾರ್‌ ನಿರ್ಮಾಣ, ಆನೆಗಳ ಸ್ಥಳಾಂತರಕ್ಕೆ ಗಮನ ಹರಿಸುತ್ತೇನೆ. ಸಂಘರ್ಷದಲ್ಲಿ ಬೆಳೆಗಾರರು, ಕೃಷಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳೆ ನಾಶದಿಂದ ರೈತರಿಗೆ ನಷ್ಟವಾಗಿದೆ. ಈ ಸಮಸ್ಯೆ ಪರಿಹರಿಸುವುದಕ್ಕೆ ಆದ್ಯ ಗಮನ ಹರಿಸುತ್ತೇನೆ. ಒತ್ತುವರಿ ಸಮಸ್ಯೆ ಪರಿಹರಿಸಲು ಯತ್ನ ಮಾಡುತ್ತೇನೆ. ಈ ಸಮಸ್ಯೆ ಪರಿಹರಿಸಲು ಬಹಳಷ್ಟು ತೊಡಕುಗಳ ಇವೆ. ಸಾಧಕಬಾಧಕಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇನೆ.

 ಕಾಫಿ ತೋಟ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಏನು ಕ್ರಮ ವಹಿಸುವೀರಿ?
ಕಾಫಿ ತೋಟ ಕಾರ್ಮಿಕರಿಗೆ (ಕೂಲಿ ಲೈನ್‌) ನಿವೇಶನ ಒದಗಿಸುವ ಯೋಚನೆ ಇದೆ. ಈ ಕಾರ್ಮಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಅವರ ಮಕ್ಕಳಿಗೆ ಶಿಕ್ಷಣ ಒದಗಿಸುವುದರ ಕಡೆಗೆ ಗಮನ ಹರಿಸುತ್ತೇನೆ. ಅವರಿಗೆ ಸವಲತ್ತುಗಳನ್ನು ತಲುಪಿಸುವುದಕ್ಕೆ ಆದ್ಯತೆ ನೀಡುತ್ತೇನೆ.

ತೋಟಗಾರಿಕೆ ವಿದ್ಯಾಲಯ ಮೇಲ್ದರ್ಜೇಗೇರಿಸುವುದು, ಕಳಸ ತಾಲ್ಲೂಕು ಘೋಷಣೆ....ತೋಟಗಾರಿಕೆ ವಿದ್ಯಾಲಯವನ್ನು ಮೇಲ್ದರ್ಜೆರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಶಿಕ್ಷಣ ತಜ್ಞರು, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತೇನೆ.
ಕಳಸ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವಾಗಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದ್ದು, ಈಡೇರಿಸಲು ಪ್ರಯತ್ನ ಮಾಡುತ್ತೇನೆ.

ಶಿಕ್ಷಣ ಸಂಸ್ಥೆ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪರೇಷೆಗಳು ಏನಿವೆ?
ಶಿಕ್ಷಣಕ್ಕಾಗಿ ಬಹಳಷ್ಟು ವಿದ್ಯಾರ್ಥಿಗಳು ಮಂಗಳೂರಿಗೆ ಹೋಗುತ್ತಾರೆ. ಕ್ಷೇತ್ರದಲ್ಲಿ ಐಟಿಐ, ಡಿಪ್ಲೊಮಾ ಕಾಲೇಜು ಆರಂಭಿಸಲು ಪ್ರಯತ್ನ ಮಾಡುತ್ತೇನೆ. ಬೆಟ್ಟದ ಭೈರವೇಶ್ವರ, ಬಲ್ಲಾಳರಾಯನದುರ್ಗ, ಹೊರನಾಡು ಮೊದಲಾದ ಪ್ರವಾಸಿ ತಾಣಗಳಿಗೆ ಸಂಪರ್ಕ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಒತ್ತು ನೀಡುತ್ತೇನೆ. ಪ್ರವಾಸಿಗಳ ಪ್ಲಾಸ್ಟಿಕ್‌ ಬಳಸದಂತೆ ಕ್ರಮ ವಹಿಸುತ್ತೇನೆ. ಪ್ರವಾಸಿ ತಾಣಗಳಲ್ಲಿ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಗಮನ ಹರಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ‘ಕಾಫಿ ಟೆಕ್‌’ ಪಾರ್ಕ್‌ ಸ್ಥಾಪಿಸುವ ನಿಟ್ಟಿನಲ್ಲಿ ಒತ್ತಡ ಹೇರುತ್ತೇನೆ.

ಜನ ಸ್ಪಂದನೆ ಕಾರ್ಯಕ್ರಮಗಳು...
ಜನರೊಟ್ಟಿಗೇ ಸದಾ ಇರುತ್ತೇನೆ. ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ತಾಲ್ಲೂಕು ಕೇಂದ್ರದಲ್ಲಿ ನಮ್ಮ ಕಚೇರಿ ಇದೆ. ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಬಹುದು. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT