ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಪರಿಸರದಿಂದ ನೆಮ್ಮದಿಯ ಬದುಕು

ಹಸಿರು ಕಡೂರು ಕಾರ್ಯಕ್ರಮದಲ್ಲಿ ಎಸ್‌ಪಿ ಚೆನ್ನಯ್ಯ ಅಭಿಮತ
Last Updated 12 ಜೂನ್ 2018, 11:09 IST
ಅಕ್ಷರ ಗಾತ್ರ

ಕಡೂರು: ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಮತ್ತು ಎಸ್‌ಪಿ ಚೆನ್ನಯ್ಯ ಇಲ್ಲಿ ಅಭಿಪ್ರಾಯಪಟ್ಟರು.

ಕಡೂರಿನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆ, ಜೇಸಿಐ, ಲಯನ್ಸ್, ರೋಟರಿ ಕ್ಲಬ್, ಕಡೂರು ಪುರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಹಸಿರು ಕಡೂರು ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಿಡ ಮರಗಳಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸಮೃದ್ಧ ಗಾಳಿ ಬೆಳಕು ದೊರೆಯುತ್ತದೆ. ಮಾನವನ ಜೀವನ ಆರೋಗ್ಯಕರವಾಗಿರುತ್ತದೆ. ಅದು ಮುಂದುವರೆಯಬೇಕಾದರೆ ನಮ್ಮ ಪಟ್ಟಣ ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಮರಗಿಡಗಳು ಇರಲೇಬೇಕು. ಕಡೂರು ಪಟ್ಟಣವನ್ನು ಹಸಿರಾಗಿಸಲು ವಿವಿಧ ಸಂಘ ಸಂಸ್ಥೆಗಳು ಆಸಕ್ತಿ ತೋರಿಸಿರುವುದು ಶ್ಲಾಘನೀಯ. ಅವರೊಂದಿಗೆ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳೂ ಕೈಜೋಡಿಸಿದ್ದಾರೆ. ಸ್ವಚ್ಛ ಮತ್ತು ಹಸಿರು ಕಡೂರು ಕಲ್ಪನೆಯಲ್ಲಿ ಇದು ಮಹತ್ವದಹೆಜ್ಜೆ ಎಂದರು.

ಜೇಸಿಐ ಸೋಮೇಶ್ ಶಿವಮೊಗ್ಗ ಮಾತನಾಡಿ, ಕಡೂರು ಜೇಸಿಐ ಕ್ಲಬ್ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸದಾ ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತರಾಗಿದ್ದೇವೆ. ಕಡೂರು ಪಟ್ಟಣವು ಸದಾ ಹಸಿರಾಗಿ ಆರೋಗ್ಯಕರ ವಾತಾವರಣ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸೇವಾಸಂಸ್ಥೆಗಳು ಸಹಯೋಗ ನೀಡಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ನಾಗರಿಕರೂ ಗಿಡ ಮರಗಳನ್ನು ಬೆಳೆಸುವುದಲ್ಲದೆ ಪರಿಸರ ಸಂರಕ್ಷಣೆಯನ್ನು ಆದ್ಯ ಕರ್ತವ್ಯ ಎಂದು ಭಾವಿಸಬೇಕಿದೆ ಎಂದರು.

ವಲಯ ಅರಣ್ಯಾಧಿಕಾರಿ ಮೋಹನ್ ಮಾತನಾಡಿ, ಗಿಡಮರಗಳನ್ನು ನೆಟ್ಟರಷ್ಟೇಸಾಲದು. ಅವುಗಳ ಪೋಷಣೆಯೂ ಬಹಳ ಮುಖ್ಯ. ಹಾಗಾಗಿ ಗಿಡ ನೆಡುವುದರ ಜೊತೆಗೆ ಪೋಷಣೆಯ ಕಾರ್ಯವನ್ನೂ ಮಾಡಬೇಕಿದೆ. ಅರಣ್ಯ ಇಲಾಖೆಯಿಂದ ಗಿಡಗಳ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕ ಸಹಕಾರ ಅತ್ಯಗತ್ಯ ಎಂದರು.

ಕಡೂರು ಪುರಸಭಾಧ್ಯಕ್ಷ ಮಾದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ್, ಪುರಸಭಾ ಸದಸ್ಯರಾದ ಎನ್.ಬಷೀರ್ ಸಾಬ್, ಸೋಮಶೇಖರ್, ಜೇಸಿಐ ಉಪಾಧ್ಯಕ್ಷೆ ಎಂ.ಕೆ.ಮಂಜುಳಾ, ಜೇಸಿರೇಟ್ಸ್ ಅಧ್ಯಕ್ಷೆ ರಾಜೇಶ್ವರಿ, ಶೋಭಾ, ತೇಜಸ್ವಿನಿ, ಶಿಲ್ಪಾ, ಶಿವು, ಮಧುಸೂದನ್, ಸಿಂಧು, ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮದ್ ಆಲಿ, ರೋಟರಿ ಅಧ್ಯಕ್ಷ ಶ್ರೀನಿವಾಸ್, ಶಿವಾನಂದಯ್ಯ, ಡಾ. ಸುರೇಂದ್ರನಾಥ್,
ರಂಗರಾವ್, ಕೃಷ್ಣಮೂರ್ತಿ. ಪಿ.ಶಿವಕುಮಾರ್, ಪುರಸಭೆ ಆರೋಗ್ಯಾಧಿಕಾರಿ ಹರೀಶ್, ಶಿವರತನ್ ಸಂಚೇತಿ, ಪೊಲೀಸ್ ತರಬೇತಿ ಶಾಲೆಯ ಸೋಮೇಶ್ ಇದ್ದರು.

ಸ್ಮರಣಿಕೆ ನೀಡಿ ಗೌರವ

ಜೆಸಿಐ ಸುಮಾರು 100 ಬ್ಲಾಕ್ ಪ್ಯಾಂಥರ್ ಗಿಡಗಳ ವ್ಯವಸ್ಥೆ ಮಾಡಿತ್ತು. ಅರಣ್ಯ ಇಲಾಖೆ 600 ಹೊಂಗೆ ಮತ್ತಿತರ ನೆರಳು ನೀಡುವ ಗಿಡಗಳನ್ನು ನೀಡಿತ್ತು. ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿದ ನಂತರ ಕಡೂರು ಪಟ್ಟಣ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದ ಡಿವೈಡರ್‌ಗಳು ಹಾಗೂ ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕ ಮತ್ತು ಅಂಬೇಡ್ಕರ್ ಕ್ರೀಡಾಂಗಣವೂ ಸೇರಿದಂತೆ ಒಟ್ಟು 1,100ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಲಯನ್ಸ್ ಕ್ಲಬ್‌ನ ನರೇಂದ್ರನಾಥ್ 500ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಪಿ ಚೆನ್ನಯ್ಯ ಅವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT