ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ; ಆಕ್ರೋಶಗೊಂಡ ಜನತೆ

ನಾಗರಿಕರ ಓಡಾಟಕ್ಕೆ ಕೆಲವೆಡೆ ನಿತ್ಯ ಪರದಾಟ
Last Updated 12 ಜೂನ್ 2018, 11:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೂಲಸೌಕರ್ಯಕ್ಕೆ ಸಂಬಂಧಿಸಿದ ಕೆಲ ಕಾಮಗಾರಿಗಳು ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣಗೊಂಡಿದ್ದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತಿತ್ತು. ಆದರೆ, ಮುಂಗಾರು ಪ್ರಾರಂಭವಾದರೂ ಮುಗಿಸದೇ ವಿಳಂಬ ಮಾಡುತ್ತಿರುವ ಕಾರಣ ಕೆಲವೆಡೆ ಜನರು ಆಕ್ರೋಶಗೊಂಡಿದ್ದಾರೆ...

ಸರ್ಕಾರದ ವಿವಿಧ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲ ರಸ್ತೆ, ಒಳಚರಂಡಿ, ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುತ್ತಿಲ್ಲ. ಇದರಿಂದಾಗಿ ಕೆಲವೆಡೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದ್ದು, ಮತ್ತೊಂದೆಡೆ ನಾಗರಿಕರು ಮನೆಯಿಂದ ತಮ್ಮ ವಾಹನ ಹೊರಗೆ ತೆಗೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲ್‌ಐಸಿ ಕಚೇರಿ ಸಮೀಪ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇಷ್ಟು ಹೊತ್ತಿಗೆ ಅದು ಪೂರ್ಣಗೊಳ್ಳಬೇಕಿತ್ತು. ಕೆಲ ಕಾರಣದಿಂದಾಗಿ ವಿಳಂಬವಾಗುತ್ತಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಚಳ್ಳಕೆರೆ ಟೋಲ್‌ಗೇಟ್‌ವರೆಗೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಈ ಮಾರ್ಗದ ರಸ್ತೆ ದಾಟುವಷ್ಟರಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

ಅನುದಾನ ಯಾವುದೇ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರಲಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನ
ಗೊಳಿಸಬೇಕಾದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ. ಆದರೆ, ಇಲ್ಲಿ ನೋಡಿದರೆ ಜನತೆಗೆ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಿವರಾಜ್.

ರಸ್ತೆ, ಒಳಚರಂಡಿ ಹೈರಾಣಾದ ಜನತೆ: ಜೆಸಿಆರ್ ನಾಲ್ಕನೇ ತಿರುವಿನಲ್ಲಿ ವರ್ಷದ ಹಿಂದೆಯೇ ಒಳಚರಂಡಿ ಕಾಮಗಾರಿಗಾಗಿ
ರಸ್ತೆ ಅಗೆಯಲಾಗಿತ್ತು. ಅದನ್ನು ದುರಸ್ತಿ ಪಡಿಸಲು ಈಗ ಮತ್ತೊಮ್ಮೆ ಅಗೆಯಲಾಗಿದೆ. ಹದಿನೈದು ದಿನದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಮನೆಗಳಿಂದ ಹೊರಬರಲು ನಾಗರಿಕರು  ನಿತ್ಯ ಪರದಾಡುವ ದುಃಸ್ಥಿತಿಯಿದೆ. ಇನ್ನೂ ಕೆಲವೆಡೆ ಇದೇ ರೀತಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಯೂ ಈ ರೀತಿಯ ಪರಿಸ್ಥಿತಿ ಇದೆ. ಒಟ್ಟಾರೆ ಅವ್ಯವಸ್ಥೆಯ ಆಗರವಾಗಿದೆ ಎನ್ನುತ್ತಾರೆ  ಬೈಕ್‌ ಸವಾರ ದೇವರಾಜ್‌ . ‘ವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ಮಾಡುವುದನ್ನು ಬಿಟ್ಟು ಒತ್ತಡ ಹೇರುವವರ ಮನೆಗಳ ಮುಂದೆ ಕಾಮಗಾರಿ ಆರಂಭಿಸುತ್ತಾರೆ. ಅದನ್ನು ಕೂಡ ಪೂರ್ಣಗೊಳಿಸುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಫಣಿರಾಜ್.

ಪೆಟ್ಟಾದರೆ ಯಾರು ಹೊಣೆ ?

ಕಾಮಗಾರಿ ವೇಳೆ ಜೆಸಿಬಿಯಿಂದ ರಸ್ತೆ ಅಗೆಯುವಾಗ  ವಿದ್ಯುತ್ ಮತ್ತು ಕೇಬಲ್ ನೆಟ್‌ವರ್ಕ್ ತಂತಿಗಳು ಕಡಿದು ಹೋಗಿವೆ. ಇದೇ ರೀತಿ ಎರಡ್ಮೂರು ಬಾರಿ ತೊಂದರೆಯಾಗಿದ್ದು, ಸ್ವಂತ ಖರ್ಚಿನಲ್ಲಿ ದುರಸ್ತಿ ಪಡಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ಕಾಮಗಾರಿ ಕೈಗೊಂಡು ಹಾಗೇ ಬಿಟ್ಟು ಹೋದರೆ,  ನೀರು ತುಂಬಿಕೊಳ್ಳುವ ಗುಂಡಿಯಲ್ಲಿ ಪಾದಚಾರಿಗಳು ಬೀಳುವ ಅಪಾಯ ಹೆಚ್ಚಿರುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ - ಗೃಹಿಣಿ ಜಮುನಾ.

ಈಚೆಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಒಳಚರಂಡಿಗೆ ಸಂಬಂಧಿಸಿದಂತೆ ಮನೆ ಮನೆ ಪೈಪ್‌ಲೈನ್ ಸಂಪರ್ಕ ತ್ವರಿತವಾಗಿ ಕಲ್ಪಿಸಿದ ನಂತರ ರಸ್ತೆ ದುರಸ್ತಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ನಾಗರಿಕರೊಬ್ಬರು ತಿಳಿಸಿದರು.

ಎಲ್ಲೆಲ್ಲಿ ಹದಗೆಟ್ಟ ರಸ್ತೆಗಳಿದ್ದಾವೋ ಅಲ್ಲೆಲ್ಲಾ ಆದಷ್ಟೂ ಬೇಗ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ, ನಾಗರಿಕರಿಗೆ ಅನುಕೂಲ ಮಾಡಿಕೊಡಲಿ
- ಡಾ.ಸಂತೋಷ್, ದಂತ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT