ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ನಾಯಕತ್ವ: ಬೇಕಿದೆ ಹೊಸ ಮಾದರಿ

Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಕಳೆದ ತಿಂಗಳು ಮೇ 24ರಂದು ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಹೆಚ್ಚಿನ ಗಮನ ಸೆಳೆದುಕೊಂಡವರಲ್ಲಿ ಮೂವರು ಮಹಿಳೆಯರು ಮುಖ್ಯರು.

ಮಾಯಾವತಿ, ಮಮತಾ ಬ್ಯಾನರ್ಜಿ ಹಾಗೂ ಸೋನಿಯಾ ಗಾಂಧಿ ಅವರ ಉಪಸ್ಥಿತಿ ರಾಷ್ಟ್ರಮಟ್ಟದಲ್ಲಿ ನೀಡಿದ ಸಂದೇಶ ಮಹತ್ವದ್ದು.

ರಾಷ್ಟ್ರದ ಉದ್ದಗಲಕ್ಕೆ ಪಸರಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದ ಬಿಜೆಪಿಯ ಅಲೆಗೆ ತಡೆ ಒಡ್ಡಲು ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಒಗ್ಗೂಡುವಿಕೆಯ ಚಾಲಕಶಕ್ತಿಗಳಾಗಿ ಈ ಮಹಿಳೆಯರು ಎದ್ದುಕಂಡಿದ್ದು ಆ ದಿನದ ವಿಶೇಷವಾಗಿತ್ತು. ಆಲಿಂಗನ, ಕೈಕುಲುವಿಕೆಗಳಲ್ಲಿ ಆತ್ಮೀಯತೆ ಪ್ರದರ್ಶಿಸುತ್ತಾ ಪ್ರತಿಪಕ್ಷಗಳ ಶಕ್ತಿಕೇಂದ್ರಗಳಾಗಿ ಕಂಡುಬಂದ ಈ ಮಹಿಳೆಯರು 2019ರ ಲೋಕಸಭೆ ಚುನಾವಣೆಗಳಲ್ಲಿ ಹೊಸ ರಾಜಕೀಯ ಸಮೀಕರಣಗಳನ್ನು ಹುಟ್ಟುಹಾಕಬಲ್ಲರೇ ಎಂಬಂತಹ ಚರ್ಚೆಗಳಿಗೆ ನಾಂದಿ ಹಾಡಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ಈ ಬಗೆಯ ಉನ್ನತ ಅಧಿಕಾರ ಸ್ಥಾನಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರೂ ಮುಖ್ಯವಾಹಿನಿಯ ರಾಜಕೀಯ ಆಡಳಿತದಲ್ಲಿ ಮಹಿಳೆಗೆ ಸಿಗಬೇಕಾದಷ್ಟು ಅವಕಾಶಗಳು ಸಿಗದಿರುವುದು ಮುಂದುವರಿಯುತ್ತಲೇ ಇದೆ. ಹೀಗಾಗಿಯೇ ಮುಖ್ಯಮಂತ್ರಿ ಅಧಿಕಾರ ಸ್ವೀಕಾರದ ನಂತರ ಎರಡು ವಾರಗಳ ಕಾಲ ಅಳೆದೂ ಸುರಿದೂ ನಡೆದ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಥಾಪ್ರಕಾರ ಒಬ್ಬ ಮಹಿಳೆಗೆ ಅವಕಾಶ ಸಿಕ್ಕಿದೆ.

ಸಚಿವ ಸಂಪುಟದಲ್ಲಿ ಹೆಸರಿಗೊಬ್ಬರು ಮಹಿಳೆಗೆ ಅವಕಾಶ ನೀಡಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ವಹಿಸಿ ಕೈತೊಳೆದುಕೊಳ್ಳುವುದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನ. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. 25 ಸಚಿವರ ಪೈಕಿ ಏಕೈಕ ಮಹಿಳೆಯಾಗಿರುವ ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡಲಾಗಿದೆ.

ಜೊತೆಗೆ ವಿಶೇಷ ಚೇತನರು, ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಣೆಯೂ ಸೇರಿದೆ. ಜಯಮಾಲಾ ಅವರು ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿರುವಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರ ವಿಸ್ತೃತವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಜನಸಂಖ್ಯೆಯಲ್ಲಿ ಸರಿಸುಮಾರು ಶೇ 50
ರಷ್ಟಿರುವ ಮಹಿಳೆಯರು, ಶೇ 20–30ರಷ್ಟಿರುವ ಮಕ್ಕಳು ಹಾಗೂ ಕನಿಷ್ಠ ಶೇ 10ರಷ್ಟಾದರೂ ಇರುವ ವಿಶೇಷ ಚೇತನರು ಮತ್ತು ಹಿರಿಯನಾಗರಿಕರನ್ನು ಈ ಖಾತೆ ಒಳಗೊಳ್ಳುತ್ತದೆ ಎಂಬಂಥ ಜಯಮಾಲಾ ಅವರ ಮಾತುಗಳೂ ಮಾರ್ಮಿಕವಾದದ್ದು.

ಕರ್ನಾಟಕದಲ್ಲಿ 1952ರಲ್ಲಿ ಮೊದಲ ವಿಧಾನಸಭೆ ರಚನೆಯಾದಾಗಲಿಂದ ಈವರೆಗೆ ಸಚಿವೆಯರಾಗಿ ಕಾರ್ಯನಿರ್ವಹಿಸಿರುವ ಮಹಿಳೆಯರ ಸಂಖ್ಯೆ 30ರ ಆಸು‍ಪಾಸಿನಲ್ಲಿದೆ. ಹೆಚ್ಚಿನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಹಾಗೂ ಕನ್ನಡ, ಸಂಸ್ಕೃತಿ ಖಾತೆಯನ್ನೇ ನಿರ್ವಹಿಸಿದ್ದಾರೆ. ಮಹಿಳೆಯರೆಂದರೆ ಕೇವಲ ಪಾಲಕರು ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವವರು ಎಂಬಂಥ ಯಥಾಸ್ಥಿತಿ ಪರಿಕಲ್ಪನೆಗಳನ್ನೇ ಇವು ಪೋಷಿಸುತ್ತವಲ್ಲವೇ? ಎಂಬ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಕಳೆದ ದಶಕದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವಿದ್ಯುತ್‌ನಂತಹ ಖಾತೆಗಳನ್ನು ನಿರ್ವಹಿಸಿದ ಶೋಭಾ ಕರಂದ್ಲಾಜೆ ಮಾತ್ರ ಈ ಯಥಾಸ್ಥಿತಿವಾದದ ಪೋಷಣೆಗೆ ಹೊರತಾದವರು ಎಂಬುದನ್ನಿಲ್ಲಿ ಸ್ಮರಿಸಬೇಕು.

1999ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಗರಿಷ್ಠ ಸಂಖ್ಯೆಯ ಸಚಿವೆಯರಿದ್ದರು ಎಂಬುದನ್ನೂ ನಾವು ನೆನಪಿಸಿಕೊಳ್ಳಬಹುದು. ಆಗ ಮೋಟಮ್ಮ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ರಾಣಿ ಸತೀಶ್‌ಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ, ಸುಮಾ ವಸಂತ್‌ಗೆ ಮುಜರಾಯಿ ಖಾತೆ ಹಾಗೂ ನಫೀಸ್ ಫಾಜಲ್ ಅವರಿಗೆ ಮೊದಲು ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನು ನೀಡಲಾಗಿತ್ತು.

ರಾಜ್ಯದಲ್ಲಿ ಮತ್ತೆ ಯಾರ ಅಧಿಕಾರ ಅವಧಿಯಲ್ಲೂ ಯಾವಾಗಲೂ ನಾಲ್ವರು ಸಚಿವೆಯರು ಸಂಪುಟದಲ್ಲಿ ಒಟ್ಟಿಗೆ ಇದ್ದದ್ದೇ ಇಲ್ಲ.

ಗ್ರೇಸ್ ಟಕ್ಕರ್ ಅವರು ಕರ್ನಾಟಕದಲ್ಲಿ ಸಚಿವ ಹುದ್ದೆ ಪಡೆದುಕೊಂಡ ಮೊದಲ ಮಹಿಳೆ ಎಂಬುದನ್ನೂ ನಾವಿಲ್ಲಿ ಸ್ಮರಿಸಬೇಕು. 1957ರಲ್ಲಿ ಎಸ್‌. ನಿಜಲಿಂಗಪ್ಪ ಅವರ ಸಂಪುಟದಲ್ಲಿ ಅವರು ಶಿಕ್ಷಣ ಖಾತೆ ಉಪಸಚಿವೆಯಾಗಿದ್ದರು.

ನಂತರ ಲೀಲಾತಾಯಿ ವೆಂಕಟೇಶ ಮಾಗಡಿ ಅವರು 1958ರಲ್ಲಿ ಬಿ.ಡಿ. ಜತ್ತಿಯವರು ಮುಖ್ಯಮಂತ್ರಿ ಆಗಿದ್ದಾಗ ಖಾದಿ ಗ್ರಾಮೋದ್ಯೋಗ, ಕೈಮಗ್ಗ ಹಾಗೂ ಸಣ್ಣ ಕೈಗಾರಿಕೆಗಳ ಉಪ ಸಚಿವೆ ಆಗಿದ್ದರು. ಯಶೋಧರಾ ದಾಸಪ್ಪ ಅವರು 1962ರಲ್ಲಿ ಸಮಾಜ ಕಲ್ಯಾಣ ಖಾತೆ ಕ್ಯಾಬಿನೆಟ್ ದರ್ಜೆ ಸಚಿವೆ ಆಗಿದ್ದರು. ಎಪ್ಪತ್ತರ ದಶಕದಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೆ.ಎಸ್. ನಾಗರತ್ನಮ್ಮ ಅವರದು. ಹಾಗೆಯೇ ಸುಮತಿ ಮಡಿಮನ್ ಅವರು 1979ರಲ್ಲಿ ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಆ ಹುದ್ದೆಗೆ ತಕ್ಕಂತೆ ದಕ್ಷತೆ ಯಿಂದ ಕಾರ್ಯನಿರ್ವಹಿಸಿದವರು.

1980ರಲ್ಲಿ ಅವರು ನಿಧನರಾಗುವ ಕೆಲವೇ ತಿಂಗಳ ಮುಂಚೆ ವಿಧಾನಸಭೆ ಸಭಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಎಂ.ಆರ್. ಲಕ್ಷ್ಮಮ್ಮ ಮತ್ತು ರಾಣಿ ಸತೀಶ್ ಅವರು ವಿಧಾನಪರಿಷತ್ತಿನ ಉಪಸಭಾಪತಿಗಳಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಸವರಾಜೇಶ್ವರಿ ಅವರು ವಿಧಾನಪರಿಷತ್ತಿನ ಸಭಾಪತಿಗಳಾಗಿ ಸದನದ ಕಾರ್ಯಕಲಾಪಗಳನ್ನು ನಡೆಸಿಕೊಟ್ಟಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಈಗ ಜಯಮಾಲಾ ಅವರಿಗೆ ವಿಧಾನಪರಿಷತ್ತಿನ ಸಭಾ ನಾಯಕಿಯಾಗುತ್ತಿರುವ (ಲೀಡರ್ ಆಫ್ ದಿ ಹೌಸ್) ಮೊದಲ ಮಹಿಳೆ ಎಂಬ ಹೆಗ್ಗಳಿಕೆ. ಮತ್ತೊಂದು ಪುರುಷಕೋಟೆಗೆ ಲಗ್ಗೆ ಎಂದು ಹೇಳಬಹುದು.

ಹೀಗೆ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಗೆ ಸಿಕ್ಕ ಸಾಂಕೇತಿಕ ಪ್ರಾತಿನಿಧ್ಯಕ್ಕಷ್ಟೇ ತೃ‍ಪ್ತಿಗೊಳ್ಳಬೇಕಾಗಿರುವ ಸಂದರ್ಭದಲ್ಲಿ ಸ್ಪೇನ್‌ನಲ್ಲಿ ಮೊದಲ ಸ್ತ್ರೀವಾದಿ ಸರ್ಕಾರ ಅಸ್ತಿತ್ವಕ್ಕೆ ಬಂದಂತಹ ವಿದ್ಯಮಾನ ವರದಿಯಾಯಿತು. ಇದು ಜಗತ್ತಿನ ರಾಜಕೀಯ ಇತಿಹಾಸಲ್ಲೇ ಹೊಸದೊಂದು ಬೆಳವಣಿಗೆ. ಈ ತಿಂಗಳ ಆರಂಭದಲ್ಲಿ ಅಸ್ತಿತ್ವಕ್ಕೆ ಬಂದ ಪೆಡ್ರೊ ಸಾಂಚೆಝ್ ನೇತೃತ್ವದ ಸಚಿವ ಸಂಪುಟದಲ್ಲಿ ಶೇ 64.7ರಷ್ಟು ಮಹಿಳಾ ಪ್ರಾತಿನಿಧ್ಯವಿದೆ.

ಸಂಪುಟದಲ್ಲಿರುವ 17 ಸಚಿವರ ಪೈಕಿ 11 ಮಂದಿ ಮಹಿಳೆಯರು. ರಕ್ಷಣೆ, ಆರ್ಥಿಕ ವ್ಯವಹಾರ, ಹಣಕಾಸು, ಶಿಕ್ಷಣದಂತಹ ಪ್ರಮುಖ ಖಾತೆಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಇಷ್ಟೊಂದು ಪ್ರಮಾಣದ ಮಹಿಳಾ ಸಚಿವರಿರುವುದು ಸ್ಪ್ಯಾನಿಷ್ ಹಾಗೂ ಯುರೋಪಿಯನ್ ಇತಿಹಾಸದಲ್ಲಿ ಇದೇ ಮೊದಲು. ತಮ್ಮ ಸರ್ಕಾರವನ್ನು ಸ್ತ್ರೀವಾದಿ, ಪ್ರಗತಿಪರ ಹಾಗೂ ಯುರೋಪ್ ಪರ ಎಂದು ಸಾಂಚೆಝ್ ವ್ಯಾಖ್ಯಾನಿಸಿಕೊಂಡಿದ್ದಾರೆ.

‘ಸಮಾಜದಲ್ಲಿ ನಾವು ಬಯಸುವ  ಅತ್ಯುತ್ತಮವಾದದ್ದರ ಪ್ರತಿಬಿಂಬ ಇದು’ ಎಂದೂ ತಮ್ಮನ್ನು ತಾವು ಸ್ತ್ರೀವಾದಿ ಎಂದು ಕರೆದುಕೊಂಡಿರುವ ಹೊಸ ಪ್ರಧಾನಿ ಬಣ್ಣಿಸಿದ್ದಾರೆ. ಈ ವರ್ಷ ಮಾರ್ಚ್‌ 8ರಂದು ವೇತನ ಅಸಮಾನತೆ ಹಾಗೂ ಲಿಂಗತ್ವ ಹಿಂಸೆ ವಿರುದ್ಧ 50 ಲಕ್ಷ ಮಹಿಳೆಯರು ರಾಷ್ಟ್ರದಾದ್ಯಂತ ಸ್ತ್ರೀವಾದಿ ಮುಷ್ಕರ ನಡೆಸಿದ್ದರು. ಸ್ಪೇನ್‌ನಲ್ಲಿ ಅಂದು ಉದಯವಾದ ಬದಲಾವಣೆಯ ನಿಷ್ಠ ಪ್ರತಿಬಿಂಬವಾಗಿದೆ ತಮ್ಮ ಸಂಪುಟ ಎಂದೂ ಸಾಂಚೆಝ್ ಹೇಳಿಕೊಂಡಿದ್ದಾರೆ.

ಶೇ 50ರಷ್ಟು ಸಚಿವರು ಮಹಿಳೆಯರಾಗಿರುವ ಸರ್ಕಾರಗಳು ಜಗತ್ತಿನಲ್ಲಿ ಸದ್ಯಕ್ಕೆ ಇರುವುದು ಬೆರಳೆಣಿಕೆಯ ರಾಷ್ಟ್ರಗಳಲ್ಲಿ ಮಾತ್ರ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾದ ಮೊದಲ ಲಿಂಗತ್ವ ಸಮತೋಲಿತ ಸಂಪುಟ ರಚಿಸಿದ್ದರು. ‘ಸಚಿವ ಸಂಪುಟದ ಅರ್ಧದಷ್ಟು ಸದಸ್ಯರು ಮಹಿಳೆಯರೇ ಆಗಿದ್ದಾರೆ ಏಕೆ’ ಎಂದು ಜಸ್ಟಿನ್‌ಗೆ ಪ್ರಶ್ನೆ ಕೇಳಿದಾಗ, ‘ಏಕೆಂದರೆ ಇದು 2015’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ನಂತರ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಾಗ 22 ಸಚಿವ ಹುದ್ದೆಗಳಲ್ಲಿ 11 ಮಂದಿ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು. ರಕ್ಷಣೆ, ಕಾರ್ಮಿಕ ಹಾಗೂ ಆರೋಗ್ಯದಂತಹ ಪ್ರಮುಖ ಖಾತೆಗಳನ್ನೂ ನೀಡಲಾಗಿತ್ತು.

ರಾಜಕೀಯ ಆಡಳಿತದ ಅಧಿಕಾರ ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಒಳಗೊಳ್ಳುವ ಈ ಬೆಳವಣಿಗೆ ಹೆಣ್ಣುಮಕ್ಕಳಿಗೆ ನೀಡುವ ಸಂದೇಶ ಸಶಕ್ತವಾದದ್ದು. ನಮ್ಮ ರಾಷ್ಟ್ರದಸ್ಥಿತಿ ನೋಡಿ. ಸಂಸತ್ ಹಾಗೂ ಶಾಸನಸಭೆಗಳಲ್ಲೇ ಮಹಿಳೆಯರ ಪ್ರಾತಿನಿಧ್ಯ ಕೆಳಮಟ್ಟದಲ್ಲಿದೆ. ಇನ್ನು ಸಚಿವ ಸಂಪುಟಗಳಲ್ಲಿ ಸಾಂಕೇತಿಕ ಪ್ರಾತಿನಿಧ್ಯಕ್ಕಷ್ಟೇ ಮಹಿಳೆ ಸೀಮಿತಗೊಳ್ಳುವುದು ಮುಂದುವರಿದಿದೆ. 1953ರ ಸೆಪ್ಟೆಂಬರ್ 20ರಂದು ರಾಜ್ಯ ಮುಖ್ಯಮಂತ್ರಿಗಳಿಗೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪತ್ರ ಬರೆದು ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚು ಅವಕಾಶ ಸೃಷ್ಟಿಸದೇ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ನೆಹರೂ ಅವರ ಪತ್ರದ ಅ ಅಂಶಗಳು ಈಗಲೂ ಪ್ರಸ್ತುತ. ಅವರು ಬರೆದಿದ್ದ ಮಾತುಗಳಿವು: ‘ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಒತ್ತಿ ಹೇಳಿದ್ದೆ. ಈ ನನ್ನ ಪ್ರಯತ್ನಗಳ ನಡುವೆಯೂ ತೀರಾ ಕಡಿಮೆ ಸಂಖ್ಯೆಯ ಮಹಿಳೆಯರನ್ನು ಅಭ್ಯರ್ಥಿಗಳಾಗಿಸಲಾಗಿದೆ. ಕೆಲವೇ ಮಂದಿ ಚುನಾಯಿತರಾಗಿದ್ದಾರೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರು ಕಾರ್ಯ ನಿರ್ವಹಿಸುತ್ತಿಲ್ಲ... ಮಹಿಳೆಯರಿಗೆ ಪೂರ್ಣ ಪ್ರಮಾಣದ ಅವಕಾಶಗಳನ್ನು ನೀಡದಿದ್ದಲ್ಲಿ ರಾಷ್ಟ್ರ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ.

ಅವರಿಗೆ ಈ ಅವಕಾಶಗಳನ್ನು ನಾವು ನೀಡದಿದ್ದಲ್ಲಿ ನಾವು ಅರ್ಧದಷ್ಟು ಮತದಾರರನ್ನು ಕಡೆಗಣಿಸಿದಂತೆ. ಇದು ಅವಿವೇಕದ ಪರಮಾವಧಿ’. ಈ ಮಾತುಗಳನ್ನು ನೆಹರೂ ಅವರು ಹೇಳಿ 65 ವರ್ಷಗಳು ಕಳೆದಿದ್ದರೂ ಮತ್ತೆ ಇವೇ ಮಾತುಗಳನ್ನೇ ಹೇಳಬೇಕಾದ ಸನ್ನಿವೇಶವೇ ಇರುವುದು ವಿಷಾದನೀಯ. ಹೀಗಾಗಿ  ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಸುಧಾರಿಸಬೇಕಾದರೆ ಮೀಸಲಾತಿ ನೀಡುವುದಷ್ಟೇ ಪರಿಹಾರ. ಮೀಸಲು ಮಸೂದೆ ಕಾಯಿದೆಯಾಗಿ ಸಾಕಾರವಾದರೆ ಕರ್ನಾಟಕದಲ್ಲಿ 84 ಶಾಸಕಿಯರಿರುತ್ತಾರೆ ಎಂದು ಕಳೆದ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ  ರ‍್ಯಾಲಿಯಲ್ಲಿ ಆ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಲೆಕ್ಕನೀಡಿದ್ದರು.

ಮಹಿಳಾ ಮೀಸಲು ಮಸೂದೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ ಆಗ ಅವರು ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು. ಅಷ್ಟೇ ಅಲ್ಲ, ಮಹಿಳಾ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಬೇಕು ಎಂಬ ಸಲಹೆಯನ್ನೂ ದೇವೇಗೌಡರು ನೀಡಿದ್ದು ವರದಿಯಾಗಿತ್ತು. ಆದರೆ ಇವೆಲ್ಲಾ ಮಹಿಳಾ ಮತದಾರರನ್ನು ಒಲಿಸಿಕೊಳ್ಳುವ ತಂತ್ರಗಳಷ್ಟೇ ಎಂಬುದು ಮಹಿಳೆಯರಿಗೆ ಎಂದೋ ಮನದಟ್ಟಾಗಿ ಹೋಗಿದೆ.

ಜೆಡಿಎಸ್‌ನಿಂದ ಒಬ್ಬ ಮಹಿಳೆಯೂ ಈ ಬಾರಿ ಶಾಸಕಿಯಾಗಿಲ್ಲ ಎಂಬುದು ವಿಪರ್ಯಾಸ. ಇನ್ನು ಜೆಡಿಎಸ್– ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಗೆ ಪ್ರಾಶಸ್ತ್ಯ ಸಿಗುವುದು ಸಾಧ್ಯವಿದೆಯೇ? ಬಂಧುಗಳು ಹಾಗೂ ಕುಲಬಾಂಧವರಿಗೆ ಯಾವುದೇ ಭಿಡೆ ಇಲ್ಲದೆ ಸಂಪುಟದಲ್ಲಿ ಹೆಚ್ಚಿನ ಸ್ಥಾನಗಳನ್ನು ಹಂಚಿಕೊಂಡಿದ್ದನ್ನು ಜನರು ನೋಡಿದ್ದಾರೆ. ಅಧಿಕಾರ ರಾಜಕಾರಣದ ಅಕರಾಳ ವಿಕರಾಳ ಆಯಾಮಗಳು ಅನಾವರಣಗೊಂಡಿವೆ.

ಇಂತಹ ಸಂದರ್ಭದಲ್ಲಿ ರಾಜಕೀಯ ಆಡಳಿತದ ಆದರ್ಶಗಳು ನಮ್ಮ ರಾಜಕಾರಣಿಗಳಿಗೆ ನೆನಪಾಗುವುದು ಸಾಧ್ಯವೇ? 1948ರಲ್ಲಿ ಅಂಗೀಕೃತವಾದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಯುಡಿಎಚ್ಆರ್), ಮಹಿಳೆಯ ರಾಜಕೀಯ ಹಕ್ಕನ್ನು ಗುರುತಿಸಿದೆ ಎಂಬ ವಿಚಾರವಾದರೂ ನಮ್ಮ ರಾಜಕಾರಣಿಗಳ ಅರಿವಿನ ಪರಿಧಿಗೆ ನಿಲುಕುವುದೇ?

ಈ ನಡುವೆಯೂ ವಿಶ್ವದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು, ಆಡಳಿತರಂಗದಲ್ಲಿ ಮಹಿಳೆಯರಿಗೆ ಹೊಸ ರೆಕ್ಕೆ ನೀಡುವಂತಹದ್ದು ಎಂಬುದಷ್ಟೇ ಸಂಭ್ರಮದ ಸಂಗತಿ. ಕವಯಿತ್ರಿಯೂ ಆಗಿರುವ ಈಕ್ವೆಡಾರ್ ವಿದೇಶಾಂಗ ಸಚಿವೆ ಮರಿಯಾ ಫರ್ನಾಂಡ ಎಸ್ಪಿನೋಸ ಗಾರ್ಸೆಸ್ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಕಳೆದ ವಾರ ಚುನಾಯಿತರಾಗಿದ್ದಾರೆ. ಕಳೆದ 73 ವರ್ಷಗಳಲ್ಲಿ ಈ ಸ್ಥಾನಕ್ಕೆ ಆಯ್ಕೆಯಾದ ನಾಲ್ಕನೇ ಮಹಿಳೆ ಅವರು.

‘ರಾಜಕೀಯದಲ್ಲಿ ಸಕ್ರಿಯರಾಗಿರುವ, ಪುರುಷ ಪ್ರಧಾನ ರಾಜಕೀಯ ಮತ್ತು ಮಾಧ್ಯಮಗಳ ದಾಳಿ ಎದುರಿಸುವ ಮಹಿಳೆಯರಿಗೆ ನನ್ನ ಆಯ್ಕೆ ಅರ್ಪಣೆ’ ಎಂದು ಮರಿಯಾ ಹೇಳಿರುವುದು ಎಷ್ಟು ಅರ್ಥಪೂರ್ಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT