ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಕಲಿಕೆಯ ‘ಡೀಪ್ ಫೋಕಸ್’

ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಪ್ರಯತ್ನ
Last Updated 13 ಜೂನ್ 2018, 10:27 IST
ಅಕ್ಷರ ಗಾತ್ರ

ತುಮಕೂರು: ಸಿನಿಮಾಗಳಲ್ಲಿ ನಟಿಸುವ ಕಲೆಯನ್ನು ಅಕಾಡೆಮಿಕ್ ಆಗಿ ಕಲಿಸಲು ನಗರದಲ್ಲಿ ‘ಡೀಪ್ ಫೋಕಸ್’ ಹೆಸರಿನ ಕಲಾ ಶಾಲೆ ಆರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ. ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಇದರ ನೇತೃತ್ವ ವಹಿಸಿದ್ದಾರೆ.

ಸಿನಿಮಾ ಅಭಿನಯ ಕಲಿಕೆಗೆ ಬೆಂಗಳೂರಿನತ್ತ ಮುಖ ಮಾಡಬೇಕಾಗಿತ್ತು. ಆದರೆ ಈ ಶಾಲೆಯ ಆರಂಭದಿಂದ ನಗರ, ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಿನಿಮಾ ಕಲಿಕೆಯ ಆಸಕ್ತರಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಸಾಂಸ್ಕೃತಿಕವಾಗಿ ರಾಜ್ಯ ಭೂಪಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜಿಲ್ಲೆಗೆ ಇದು ಮತ್ತೊಂದು ಗರಿಮೆ ಎನ್ನುವಂತೆ ಆಗಲಿದೆ.

ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು ತುಮಕೂರಿನ ಎಸ್‌ಐಟಿ ಮುಖ್ಯ ರಸ್ತೆಯಲ್ಲಿ ಜುಲೈ ಕೊನೆಯಲ್ಲಿ ತರಗತಿಗಳು ಆರಂಭವಾಗಲಿವೆ. ಪುಣೆಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ (ಎಫ್‌ಟಿಐಐ) ಮಾದರಿಯಲ್ಲಿ ‘ಡೀಪ್ ಫೋಕಸ್’ ಅಭಿವೃದ್ಧಿಪಡಿಸುವ ಆಶಯ ಮತ್ತು ಕನಸು ಹೊನ್ನವಳ್ಳಿ ಅವರದ್ದು. ಅವರ ಈ ಪ್ರಯತ್ನಕ್ಕೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಿರ್ದೇಶಕರು, ತಂತ್ರಜ್ಞರು ಸಹಕಾರ ಸಹ ನೀಡಿದ್ದಾರೆ. ಇಲ್ಲಿ ಸಿನಿಮಾ ಪಾಠ ಮಾಡಲು ಕೆಲವು ನಿರ್ದೇಶಕರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ.

ಇಲ್ಲಿ ನಾಲ್ಕು ತಿಂಗಳು ಕಲಿಕೆಗೆ ಅವಕಾಶ ಇರುತ್ತದೆ. ವರ್ಷಕ್ಕೆ ಮೂರು ತಂಡಗಳು ಹೊರಹೋಗಲಿವೆ. ಪ್ರತಿ ತಂಡದಲ್ಲಿ 20 ವಿದ್ಯಾರ್ಥಿಗಳನ್ನು ಮಾತ್ರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮಾಹಿತಿಗೆ ಮೊಬೈಲ್ 9606546903 ಸಂಪರ್ಕಿಸಬಹುದು.

ಒಂದೇ ಸೂರಿನಡಿ ಕಲಿಕೆ

‘ಇಲ್ಲಿ ಅಕಾಡೆಮಿಕ್ ಆಗಿ ಸಿನಿಮಾ ಕಲಿಸಲಾಗುತ್ತದೆ. ಛಾಯಾಗ್ರಹಣ, ಸಂಕಲನ, ಶಬ್ದಗ್ರಹಣ, ಡಬ್ಬಿಂಗ್– ಹೀಗೆ ತಾಂತ್ರಿಕ ಕಲಿಕೆಯ ಉಪಕರಣಗಳೂ ಇರಲಿವೆ. ಕೇವಲ ಮೂರು ನಾಲ್ಕು ಗಂಟೆ ಪಾಠ ಹೇಳಿಕೊಡುವುದಕ್ಕಿಂತ ದಿನಪೂರ್ತಿ ತರಗತಿಗಳನ್ನು ನಡೆಸಲಾಗುತ್ತದೆ’ ಎನ್ನುವರು ನಟರಾಜ ಹೊನ್ನವಳ್ಳಿ.

‘ಕಲಿಕೆಗೆ ಬರುವವರ ಸಂಸ್ಕೃತಿ, ಭಾಷೆಗಳನ್ನು ಗಮನಿಸಿ ಕಲಿಸಲಾಗುವುದು. ಒಬ್ಬರದ್ದು ಒಂದು ಭಾಷೆ, ಮತ್ತೊಬ್ಬರದ್ದು ಒಂದು ಭಾಷೆ ಇರುತ್ತದೆ. ಆ ಭಾಷೆ ಮತ್ತು ಭಿನ್ನ ಸಂಸ್ಕೃತಿಯೇ ಅವರಿಗೆ ಒಂದು ಶಕ್ತಿ. ಈ ಶಕ್ತಿಯನ್ನು ಇಲ್ಲಿ ಮತ್ತಷ್ಟು ಕಡೆಯಲಾಗುತ್ತದೆ’ ಎಂದು ವಿವರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT