ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್‌ ಸಿದ್ಧ

6 ತಿಂಗಳ ಹಿಂದೆಯೇ ಕಟ್ಟಡ ಪೂರ್ಣ, ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವುದೊಂದೇ ಬಾಕಿ
Last Updated 8 ಅಕ್ಟೋಬರ್ 2018, 5:16 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಹಾಸ್ಟೆಲ್‌ ಸಿದ್ಧವಾಗಿದೆ. ಇದನ್ನು ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ವಹಿಸಿದ ಬಳಿಕ, ವಾಸ್ತವ್ಯಕ್ಕೆ ನೀಡಲು ಉದ್ದೇಶಿಸಲಾಗಿದೆ.

ಹಿಂದಿನ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌.ಆಂಜನೇಯ ಅವರು ರಾಜ್ಯದ ಎಲ್ಲ ಐಟಿಐ ಕಾಲೇಜು ವಿದ್ಯಾರ್ಥಿಗಳಿಗಾಗಿ ಇಂಥ ಹಾಸ್ಟೆಲ್‌ ಮಂಜೂರು ಮಾಡಿದ್ದರು. ಕಟ್ಟಡ ಪೂರ್ಣಗೊಳ್ಳುವ ಸಮಯಕ್ಕೆ ಸರ್ಕಾರ ಬದಲಾದ್ದರಿಂದ ಇದರ ಬಳಕೆ ವಿಳಂಬವಾಗಿದೆ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಡನ್‌ ಹುದ್ದೆ ಇಲ್ಲದ ಕಾರಣ ಇದನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವುದು ಅನಿವಾರ್ಯ. ಹಸ್ತಾಂತರ ಪ್ರಕ್ರಿಯೆ ಆಯುಕ್ತರ ಕೈಯಲ್ಲಿದೆ. ಹೀಗಾಗಿ, ವಿದ್ಯಾರ್ಥಿಗಳು ಇನ್ನೂ ಎರಡು ತಿಂಗಳು ಕಾಯಬೇಕು.

ಐಟಿಐ ಕಾಲೇಜಿನಿಂದ ಕೂಗಳತೆ ದೂರದಲ್ಲೇ ಕಟ್ಟಡ ನಿರ್ಮಿಸಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ವಾಸ್ತವ್ಯಕ್ಕೆ 10 ದೊಡ್ಡ ಕೋಣೆಗಳು, 1 ಮೇಲ್ವಿಚಾರಕರ ಕೊಠಡಿ, 1 ಕಂಪ್ಯೂಟರ್‌ ಕೊಠಡಿ, 1 ಸ್ಟೋರ್‌ ರೂಂ ಹೀಗೆ ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಅಡುಗೆಮನೆಯಲ್ಲಿ ಕೆಲಸಕ್ಕೆ ಅನುಕೂಲವಾಗುವಂತೆ ಕಟ್ಟೆಗಳನ್ನು ಕಟ್ಟಲಾಗಿದೆ. ಊಟದತಟ್ಟೆ ವಿತರಿಸಲು ಕೌಂಟರ್‌, ಆಹಾರ ಸಾಮಗ್ರಿ ಹಾಗೂ ಸಿದ್ಧವಾದ ಅಡುಗೆ ಇಟ್ಟುಕೊಳ್ಳಲು ಜಾಗ ಗುರುತಿಸಲಾಗಿದೆ. ವಿಶಾಲವಾದ ಊಟದ ಕೋಣೆ ಇದ್ದು, 100 ಜನ ಏಕಕಾಲಕ್ಕೆ ಕುಳಿತು ಊಟ ಮಾಡಬಹುದು. ಕಲ್ಲಿನಿಂದಲೇ ಕುರ್ಚಿ ಹಾಗೂ ಡೈನಿಂಗ್‌ ಟೇಬಲ್‌ಗಳನ್ನು ನಿರ್ಮಿಸಲಾಗಿದೆ.

3 ಬಾತ್‌ರೂಮ್‌, 5 ಶೌಚಾಲಯ, 4 ಮೂತ್ರಾಲಯ, 9 ಬಟ್ಟೆ ತೊಳೆಯುವ ಕಟ್ಟೆ ನಿರ್ಮಿಸಲಾಗಿದೆ.ಬೋರ್‌ವೆಲ್‌ಗೆ ಮೋಟಾರ್‌ ಅಳವಡಿಸಿದ್ದು, ಎಲ್ಲೆಡೆ ನೀರು ಸರಬರಾಜು ಆಗುತ್ತಿದೆ. ವಿದ್ಯುತ್‌ ಸಂಪರ್ಕ ಕಾಮಗಾರಿ ಮುಗಿದಿದ್ದು, ಪ್ರತಿ ಕೋಣೆಗೂ ಫ್ಯಾನ್‌, ಬಲ್ಬ್‌, ಸ್ವಿಚ್‌ಗಳನ್ನು ಹೆಚ್ಚುವರಿಯಾಗೇ ಅಳವಡಿಸಲಾಗಿದೆ.

ವರಾಂಡದಲ್ಲಿ ವಿದ್ಯಾರ್ಥಿಗಳ ವಿಹಾರಕ್ಕೆ, ಹರಟೆಗೆ ಜಾಗವಿದೆ. ಒಳಭಾಗದಲ್ಲೇ ಒಂದು ವೇದಿಕೆ ಕೂಡ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಕ್ಕೂ ಅನುಕೂಲ ಕಲ್ಪಿಸಲಾಗಿದೆ.

**
ಕಳೆದ ವರ್ಷದ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಅದರ ಸ್ವರೂಪ, ಕೋಣೆಗಳ ಸಾಮರ್ಥ್ಯ ಎಷ್ಟಿರಬೇಕು, ಹೇಗಿರಬೇಕು ಎಂದು ಕೈಗಾರಿಕಾ ತರಬೇತಿ ಸಂಸ್ಥೆಯೇ ರೂಪುರೇಶೆ ನೀಡಿದೆ

ಭೀಮರಾವ, ಯೋಜನಾ ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ

**
ಕಟ್ಟಡ ಸಿದ್ಧವಾದ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಇದನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಚರ್ಚೆ ಸರ್ಕಾರದ ಮಟ್ಟದಲ್ಲಿದೆ. ಆದೇಶ ಬಂದಾಕ್ಷಣ ಹಸ್ತಾಂತರಿಸಲಾಗುವುದು
ಎಸ್‌.ಎನ್‌.ಪಂಚಾಳ, ಪ್ರಾಚಾರ್ಯ, ಐಟಿಐ

**

ವಾಸ್ತವ್ಯಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡಲಾಗಿದೆ. ಮಲಗುವ ಕಾಟ್‌ಗಳು ಮಂಜೂರಾಗಿದ್ದು, ಇನ್ನಷ್ಟೇ ಬರಬೇಕಿದೆ. ಬಳಿಕ ಎಷ್ಟು ವಿದ್ಯಾರ್ಥಿಗಳು ಇರಬೇಕು ಎಂದು ನಿರ್ಧರಿಸಲಾಗುವುದು
ಧತ್ತಾತ್ರಿ ಎಸ್‌. ಹಂದರಕಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಅಧಿಕಾರಿ

**
ಇನ್ನೂ ಬಾಡಿಗೆ ಕಟ್ಟಡದಲ್ಲೇ ವಾಸ್ತವ್ಯ

ಐಟಿಐ ಕಾಲೇಜಿನಲ್ಲಿ ಪ್ರಸಕ್ತ ವರ್ಷ 200ಕ್ಕೂ ಹೆಚ್ಚು ಚಿದ್ಯಾರ್ಥಿಗಳು ಇದ್ದಾರೆ. ಸದ್ಯ ಬೇರೆಬೇರೆ ಕಡೆ ಬಾಡಿಗೆ ಕಟ್ಟಡಗಳಲ್ಲೇ ಅವರಿಗೆ ಅನುಕೂಲ ಕಲ್ಪಿಸಲಾಗಿದೆ. ಹೊಸ ಕಟ್ಟಡದಲ್ಲಿ 50 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಮತಿ ಇದೆ. ಉಳಿದವರಿಗೆ ಬಾಡಿಗೆ ಕಟ್ಟಡವೇ ಗತಿ.

**
ಹೆಚ್ಚುವರಿ ವಿದ್ಯಾರ್ಥಿಗಳು ಇನ್ನೂ ಅತಂತ್ರ

ಕೋಣೆಗಳು ದೊಡ್ಡದಾದ್ದರಿಂದ 8ರಿಂದ 10 ವಿದ್ಯಾರ್ಥಿಗಳು ವಾಸ ಮಾಡಬಹುದು. ಆದರೆ, ವಸತಿನಿಲಯಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರವೇಶವನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಸಡಿಲಿಸುವಂತೆ ರಾಜ್ಯದೆಲ್ಲೆಡೆ ಹೋರಾಟ ನಡೆದೇ ಇದೆ. ಸದ್ಯದವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಹೆಚ್ಚುವರಿ ವಿದ್ಯಾರ್ಥಿಗಳ ಸ್ಥಿತಿ ಇನ್ನೂ ಅತಂತ್ರ.

**
ವರಾಂಡದಲ್ಲಿ ಛತ್‌ ನಿರ್ಮಾಣ ಅಗತ್ಯ

ಕಟ್ಟಡದ ಒಳಗೆ ಗಾಳಿ– ಬೆಳಕು ಸರಿಯಾಗಿ ಬರುವಂತೆ ವರಾಂಡ ಬಿಡಲಾಗಿದೆ. ಇದರ ನಾಲ್ಕೂ ದಿಕ್ಕಿಗೆ ಕೋಣೆಗಳಿವೆ. ಮಧ್ಯದ ನೆಲಕ್ಕೆ ಟೈಲ್ಸ್‌ ಹಾಕಲಾಗಿದೆ. ಆದರೆ, ಮಳೆನೀರಿನಿಂದ ಈ ನೆಲಹಾಸು ಕೆಡುವ ಸಾಧ್ಯತೆ ಹೆಚ್ಚು. ಅಲ್ಲದೇ, ಬೇಸಿಗೆಯಲ್ಲಿ ಪ್ರಖರವಾದ ಬಿಸಲು ವಿದ್ಯಾರ್ಥಿಗಳನ್ನು ಬಾಧಿಸಲಿದೆ. ಇದೆಲ್ಲದರಿಂದ ಪಾರಾಗಲು ವರಾಂಡಕ್ಕೆ ಒಂದು ಛತ್‌ ನಿರ್ಮಾಣ ಮಾಡುವುದು ಸೂಕ್ತ ಎಂಬುದು ಐಟಿಐ ಕಾಲೇಜು ಪ್ರಾಚಾರ್ಯ ಎಸ್‌.ಎನ್‌.ಪಂಚಾಳ ಅವರ ಉಪಾಯ.

ಸದ್ಯಕ್ಕೆ ₹ 11 ಲಕ್ಷ ಅನುದಾನ ಉಳಿದಿದ್ದು, ಅದರಲ್ಲೇ ಈ ಕೆಲಸ ಮಾಡುವಂತೆ ನಿರ್ಮಿತಿ ಕೇಂದ್ರದ ಗಮನಕ್ಕೆ ತಂದಿದ್ದಾರೆ ಅವರು. ಮಳೆ– ಗಾಳಿ– ಬಿಸಿಲಿನಿಂದ ರಕ್ಷಣೆ ಮಾತ್ರವಲ್ಲ; ಅಲ್ಲಿ ಕುಳಿತು ಓದಲು, ಆಟವಾಡಲೂ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT