ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯವಾಸಿಗಳ ಸಂಕಷ್ಟ ಪರಿಹಾರಕ್ಕೆ ಆದ್ಯತೆ

ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸಲು ಪ್ರಥಮ ಆದ್ಯತೆ: ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿಕೆ
Last Updated 15 ಜೂನ್ 2018, 10:02 IST
ಅಕ್ಷರ ಗಾತ್ರ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ವೈದ್ಯೆಯಾಗಿದ್ದ ಅಂಜಲಿ ನಿಂಬಾಳ್ಕರ, ಮೊದಲ ಬಾರಿ ಖಾನಾಪುರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇವರ ಪತಿ ಹೇಮಂತ್‌ ನಿಂಬಾಳ್ಕರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬೆಳಗಾವಿಗೆ ಬಂದಾಗ ಅವರೊಂದಿಗೆ ಬಂದ ಅಂಜಲಿ, ಖಾನಾಪುರ ದಲ್ಲಿ ನೆಲೆನಿಂತರು. ಅಂಜಲಿತಾಯಿ ಫೌಂಡೇಷನ್‌ ರಚಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.

ಹಳ್ಳಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿದರು. ಶಾಲೆಗೆ ಹೋಗುವ ಮಕ್ಕಳಿಗೆ ಪಠ್ಯ ಪುಸ್ತಕ, ಬ್ಯಾಗ್‌ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸಿದರು. ಖಾನಾಪುರ ಕ್ಷೇತ್ರವು ಪಶ್ಚಿಮ ಘಟ್ಟ ವ್ಯಾಪ್ತಿ ಹೊಂದಿದ್ದು, ಹಲವೆಡೆ ಅರಣ್ಯವಾಸಿಗಳಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಬೇಕು ಹಾಗೂ ಇವರ ಜೀವನ ಸುಧಾರಿಸಲು ಕ್ರಮಕೈಗೊಳ್ಳಬೇಕು ಎನ್ನುವ ಉಮೇದು ಹೊಂದಿದ್ದಾರೆ. ‘ಪ್ರಜಾವಾಣಿ’ ನಡೆಸಿದ ಸಂದರ್ಶನದಲ್ಲಿ ತಮ್ಮ ಮನದಾಳದ ಇಂಗಿತವನ್ನು ಹೊರಹಾಕಿದ್ದಾರೆ.

ನೀವು ಕಂಡು ಕೊಂಡಂತೆ ಕ್ಷೇತ್ರದಲ್ಲಿ ಪ್ರಮುಖ ಸಮಸ್ಯೆಗಳು ಏನಿವೆ?

ಸಮರ್ಪಕ ರಸ್ತೆಗಳಿಲ್ಲ. ಮುಖ್ಯ ವಾಗಿ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳು ತೀರಾ ಹಾಳಾಗಿವೆ. ಇವುಗಳನ್ನು ಸರಿಪಡಿಸಬೇಕಾಗಿದೆ. ಹಲವು ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಲ್ಲ. ಇನ್ನು ಕೆಲವು ಕಡೆ ಇವೆ, ಆದರೆ ಅವುಗಳಿಗೆ ಮೂಲಸೌಕರ್ಯಗಳಿಲ್ಲ. ಕಟ್ಟಡಗಳು ಹಾಳಾಗಿದ್ದು, ಈಗಲೋ, ಆಗಲೋ ಬೀಳುವಂತಾಗಿದೆ. ಶೌಚಾಲಯಗಳಿಲ್ಲ. ಕುಡಿಯುವ ನೀರಿನ ಕೊರತೆ ಇದೆ. ಇದನ್ನೆಲ್ಲ ನಿವಾರಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಮಾಡುತ್ತೇನೆ.

ನಿಮ್ಮ ಕ್ಷೇತ್ರವು ಪಶ್ಚಿಮ ಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿದೆ. ಹಲವು ಹಳ್ಳಿಗಳು ಈ ವ್ಯಾಪ್ತಿಯಡಿ ಬರುತ್ತದೆ. ಇಲ್ಲಿರುವ ಅರಣ್ಯವಾಸಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ಬೇಡಿಕೆ ಒಂದೆಡೆಯಾದರೆ, ಇನ್ನೊಂದೆಡೆ, ಕಸ್ತೂರಿ ರಂಗನ್‌ ವರದಿ ಶಿಫಾರಸ್ಸಿನಂತೆ ಅರಣ್ಯ ವಾಸಿಗಳನ್ನು ನಾಡಿನಿಂದ ಹೊರಗೆ ತರಬೇಕಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಹೌದು, ನನ್ನ ಕ್ಷೇತ್ರದ ಹಲವು ಹಳ್ಳಿಗಳು ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಗ್ರಾಮಸ್ಥರಲ್ಲದೇ, ಹಲವು ಬುಡಕಟ್ಟು ಜನಾಂಗ
ದವರು ವಾಸವಾಗಿದ್ದಾರೆ. ನನ್ನ ಮೊದಲ ಆದ್ಯತೆ ಇಲ್ಲಿ ವಾಸವಿರುವ ಜನರಿಗೆ ಮೂಲ ಸೌಕರ್ಯ ಒದಗಿಸುವುದು. ಅವರಿಗೆ ಸೌರ ವಿದ್ಯುತ್‌ ಪೂರೈಸುವುದು, ಶಿಕ್ಷಣ ನೀಡುವುದು, ಆರೋಗ್ಯ ಸೇವೆ ಒದಗಿಸುವುದಾಗಿದೆ. ಯಾರು ಮುಖ್ಯವಾಹಿನಿಗೆ ಬರಲು ಇಷ್ಟಪಡುತ್ತಾರೆಯೋ ಅಂತಹವರಿಗೆ ಪುನರ್‌ ವಸತಿ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡುತ್ತೇನೆ. ತಳೆವಾಡಿ ಗ್ರಾಮದ ಕೆಲವರು ಈಗಾಗಲೇ ನಾಡಿನತ್ತ

ಬರಲು ಒಪ್ಪಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಯವರ ಜೊತೆ ಚರ್ಚಿಸಿ, ಇವರಿಗೆ ನಗರ ಪ್ರದೇಶಗಳಲ್ಲಿ ಉಚಿತ ಭೂಮಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಕೆಲವು ಪ್ರದೇಶಗಳಲ್ಲಿ ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಇನ್ನುಳಿದ ಕೆಲವರ ಹಕ್ಕುಪತ್ರ ಬಾಕಿ ಇದೆ. ಇವು ಇನ್ನೂ ಅಧಿಕಾರಿಗಳ ಮಟ್ಟದಲ್ಲಿ ಬಾಕಿ ಇದ್ದು, ಆದಷ್ಟು ಬೇಗ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

ಸ್ಥಳೀಯ ಯುವಕರಿಗೆ ಉದ್ಯೋಗಾ ವಕಾಶ ಸೃಷ್ಟಿಗೆ ಏನು ಮಾಡುತ್ತೀರಿ?

ಇತ್ತೀಚೆಗೆ ನಮ್ಮ ಖಾಸಗಿ ಒಡೆತನದಲ್ಲಿ ಸಕ್ಕರೆ ಕಾರ್ಖಾನೆ ಯನ್ನು ಪ್ರಾರಂಭಿಸಲಾಗಿದೆ. ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗ
ಗಳನ್ನು ನೀಡಿದ್ದೇವೆ. ತಾಲ್ಲೂಕಿನಲ್ಲಿ ದಟ್ಟವಾದ ಅರಣ್ಯವಿದ್ದು, ಇದನ್ನು ಬಳಸಿಕೊಂಡು ಇಕೊ–ಟೂರಿಸಂ ಯೋಜನೆಗಳನ್ನು ಅನುಷ್ಠಾನ
ಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇಕೊ–ಟೂರಿಸಂ ಅನುಷ್ಠಾನಗೊಂಡರೆ ಸ್ಥಳೀಯವಾಗಿ ಸಾಕಷ್ಟು ಉದ್ಯೋಗಾವಕಾಶ
ಗಳು ಸೃಷ್ಟಿಯಾಗುತ್ತವೆ.

ತಾಲ್ಲೂಕಿನಲ್ಲಿ ಕೇವಲ ಎರಡು ಪೊಲೀಸ್‌ ಠಾಣೆಗಳಿವೆ. ಇವುಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಿರಾ?

ಹೌದು, ಖಾನಾಪುರ ಹಾಗೂ ನಂದಗಡದಲ್ಲಿ ಮಾತ್ರ ಪೊಲೀಸ್‌ ಠಾಣೆಗಳಿವೆ. ಜಾಂಬೋಟಿಯಲ್ಲಿ ಕೇವಲ ಔಟ್‌ಪೋಸ್ಟ್‌ ಇದೆ. ಪೂರ್ಣಪ್ರಮಾಣದ ಪೊಲೀಸ್‌ ಠಾಣೆಯಾಗಿ ಮಾರ್ಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಪೊಲೀಸ್‌, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆಯೂ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT